ಮಂಗಳವಾರ, ಆಗಸ್ಟ್ 3, 2021
21 °C
₹20 ಲಕ್ಷ ಕೋಟಿ ಪ್ಯಾಕೇಜ್‌ನ ವಿವಿಧ ಯೋಜನೆಗಳಿಗೆ ಕೇಂದ್ರ ಸಂಪುಟ ಒಪ್ಪಿಗೆ

ಕೋವಿಡ್‌ ಆರ್ಥಿಕ ಸಂಕಷ್ಟ ಪರಿಹಾರ: ಬಡವರಿಗೆ ಕಡಿಮೆ ಬಾಡಿಗೆಗೆ ಮನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ನವದೆಹಲಿ: ವಲಸಿಗರು ಮತ್ತು ಬಡವರಿಗೆ ನಗರ ಪ್ರದೇಶಗಳಲ್ಲಿ ಕೈಗೆಟಕುವ ಬಾಡಿಗೆಯಲ್ಲಿ ವಸತಿ ಸೌಲಭ್ಯ ಒದಗಿಸುವ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.

ಕೋವಿಡ್‌ ಪಿಡುಗಿನಿಂದ ಆದ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಸರ್ಕಾರ ಪ್ರಕಟಿಸಿದ್ದ ₹20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ನ ಭಾಗವಾಗಿ ಘೋಷಿಸಿದ್ದ ವಿವಿಧ ಯೋಜನೆಗಳಿಗೂ ಅನುಮೋದನೆ ಕೊಟ್ಟಿದೆ. 

ಕೈಗೆಟಕುವ ಬಾಡಿಗೆಯ ವಸತಿ ಸಂಕೀರ್ಣ (ಎಆರ್‌ಎಚ್‌ಸಿ) ಯೋಜನೆಯು ಪ್ರಧಾನ ಮಂತ್ರಿ ಆವಾಜ್‌ ಯೋಜನೆಯ (ನಗರ) ಭಾಗವಾಗಿದೆ. ಆರಂಭದಲ್ಲಿ ಮೂರು ಲಕ್ಷ ಫಲಾನುಭವಿಗಳಿಗೆ ವಸತಿ ಒದಗಿಸಲಾಗುವುದು. ಇದಕ್ಕೆ ₹600 ಕೋಟಿ ವೆಚ್ಚ ಆಗಲಿದೆ.

ಈ ಯೋಜನೆಯಲ್ಲಿ ಎರಡು ಭಾಗಗಳಿವೆ. ಮೊದಲನೆಯದಾಗಿ, ಸರ್ಕಾರದ ಅನುದಾನದಲ್ಲಿ ನಿರ್ಮಾಣವಾದ ವಸತಿ ಸಂಕೀರ್ಣಗಳು ಖಾಲಿ ಇದ್ದರೆ ಅವುಗಳನ್ನು ಎಆರ್‌ಎಚ್‌ಸಿಗೆ ಬಳಸಿಕೊಳ್ಳಲಾಗುವುದು. 25 ವರ್ಷದ ಗುತ್ತಿಗೆ ಆಧಾರದಲ್ಲಿ ಇಂತಹ ಕಟ್ಟಡಗಳನ್ನು ಪಡೆದುಕೊಳ್ಳಲಾಗುವುದು. ಈ ಕಟ್ಟಡಗಳ ಮಾಲೀಕತ್ವ ಹೊಂದಿರುವ ಸಂಸ್ಥೆಯು (ಮುಖ್ಯವಾಗಿ ನಗರ ಸ್ಥಳೀಯಾಡಳಿತ ಸಂಸ್ಥೆ) ವಸತಿ ಸಂಕೀರ್ಣಕ್ಕೆ ಬೇಕಾದ ಮಾರ್ಪಾಡು ಅಥವಾ ದುರಸ್ತಿಯನ್ನು ಮಾಡಬೇಕು. ನೀರು, ನೈರ್ಮಲ್ಯ, ರಸ್ತೆಯಂತಹ ವ್ಯವಸ್ಥೆಗಳನ್ನೂ ಮಾಡಿಕೊಡಬೇಕು. ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಸರ್ಕಾರವು ಪಾರದರ್ಶಕ ಬಿಡ್‌ ಪ್ರಕ್ರಿಯೆ ಮೂಲಕ ಕಟ್ಟಡಗಳನ್ನು ಆಯ್ಕೆ ಮಾಡಬೇಕು. 25 ವರ್ಷಗಳ ಬಳಿಕ ಕಟ್ಟಡವು ಮಾಲೀಕರ ಕೈಗೆ ವರ್ಗಾವಣೆಯಾಗುತ್ತದೆ. ಆಗ, ಎಆರ್‌ಎಚ್‌ಸಿಗಾಗಿ ಇನ್ನೊಂದು ಅವಧಿಗೆ ನೀಡುವುದು ಅಥವಾ ತಮ್ಮ ಸ್ವಂತಕ್ಕೆ ಬಳಸಿಕೊಳ್ಳಲು ಮೂಲ ಮಾಲೀಕರಿಗೆ ಅವಕಾಶ ಇರುತ್ತದೆ.

ಖಾಸಗಿ ಅಥವಾ ಸರ್ಕಾರಿ ಸಂಸ್ಥೆಗಳು ತಮ್ಮ ಬಳಿ ಇರುವ ಖಾಲಿ ಸ್ಥಳವನ್ನು ಎಆರ್‌ಎಚ್‌ಸಿಗಾಗಿ ಅಭಿವೃದ್ಧಿಪಡಿಸಬಹುದು. ಇದಕ್ಕಾಗಿ ಹಲವು ವಿನಾಯಿತಿಗಳು ದೊರೆ ಯಲಿವೆ. ಶೇ 50ರಷ್ಟು ಹೆಚ್ಚುವರಿ ನಿರ್ಮಾಣ ಪ್ರದೇಶ ಅನುಪಾತ (ಫ್ಲೋರ್‌ ಏರಿಯಾ ರೇಷೊ), ಕಡಿಮೆ ಬಡ್ಡಿ ದರದ ಸಾಲ, ಕೈಗೆಟಕುವ ವಸತಿ ಯೋಜನೆಗಳಿಗೆ ನೀಡಲಾಗುವ ತೆರಿಗೆ ವಿನಾಯಿತಿ ಮುಂತಾದ ಅನುಕೂಲಗಳನ್ನು ನೀಡಲಾಗುವುದು. ಹೀಗೆ ಅಭಿವೃದ್ಧಿಪಡಿಸಲಾದ ಕಟ್ಟಡಗಳನ್ನು ಕೂಡ ಎಆರ್‌ಎಚ್‌ಸಿಗೆ 25 ವರ್ಷಕ್ಕೆ ನೀಡಬೇಕು ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗ್ರಾಮೀಣ ಪ್ರದೇಶಗಳು ಮತ್ತು ಸಣ್ಣ ಪಟ್ಟಣಗಳಿಂದ ಉದ್ಯೋಗ ಅರಸಿ ನಗರಗಳಿಗೆ ಬಂದ ವಲಸಿಗರು ಕೋವಿಡ್‌–19 ಪಿಡುಗಿನ ಕಾರಣ ತಮ್ಮ ತವರೂರಿಗೆ ಮರಳಿದ್ದಾರೆ. ಸಾಮಾನ್ಯವಾಗಿ ಹೀಗೆ ನಗರಗಳಿಗೆ ಬಂದವರು ಬಾಡಿಗೆ ಹಣ ಉಳಿಸುವುದಕ್ಕಾಗಿ ಕೊಳೆಗೇರಿಗಳು, ಅನಧಿಕೃತ ಕಾಲೊನಿಗಳು ಅಥವಾ ನಗರದ ಹೊರವಲಯಗಳಲ್ಲಿ ನೆಲೆಸುತ್ತಾರೆ. ಕೆಲಸದ ಸ್ಥಳಕ್ಕೆ ನಡೆದುಕೊಂಡು ಅಥವಾ ಸೈಕಲ್‌ನಲ್ಲಿ ಹೋಗಲು ಬಹಳಷ್ಟು ಸಮಯವನ್ನು ಅವರು ರಸ್ತೆಯಲ್ಲಿಯೇ ವ್ಯಯ ಮಾಡುತ್ತಾರೆ. ಖರ್ಚು ಕಮ್ಮಿ ಮಾಡುವುದಕ್ಕಾಗಿ ಅವರು ತಮ್ಮ ಜೀವವನ್ನೇ ಅಪಾಯಕ್ಕೆ ಒಡ್ಡಿಕೊಳ್ಳುತ್ತಾರೆ ಎಂದು ಸರ್ಕಾರದ ಹೇಳಿಕೆಯು ವಿವರಿಸಿದೆ.

ತಯಾರಿಕೆ, ಆತಿಥ್ಯ, ಆರೋಗ್ಯ, ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ಮನೆಗೆಲಸದವರು, ನಿರ್ಮಾಣ ಅಥವಾ ಇತರ ಕ್ಷೇತ್ರಗಳ ಕಾರ್ಮಿಕರು, ವಿದ್ಯಾರ್ಥಿಗಳು ಮುಂತಾದವರನ್ನು ಗುರಿಯಾಗಿಸಿ ಎಆರ್‌ಎಚ್‌ಸಿಯನ್ನು ರೂಪಿಸಲಾಗಿದೆ ಎಂದು ಸರ್ಕಾರ ಹೇಳಿದೆ.

₹1 ಲಕ್ಷ ಕೋಟಿಯ ಕೃಷಿ ನಿಧಿ

₹1 ಲಕ್ಷ ಕೋಟಿಯ ಕೃಷಿ ಮೂಲಸೌಕರ್ಯ ನಿಧಿ ಸ್ಥಾಪನೆಗೆ ಅನುಮೋದನೆ. ಕೃಷಿ ಉದ್ಯಮ, ಸ್ಟಾರ್ಟ್‌ಅಪ್‌, ಗೋದಾಮು, ಕೋಲ್ಡ್‌ ಸ್ಟೋರೇಜ್‌, ಕೃಷಿ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕೃಷಿ ಕ್ಷೇತ್ರಕ್ಕೆ ಅನುಕೂಲ ಕಲ್ಪಿಸುವ ಇತರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗೆ ಈ ನಿಧಿ ನೆರವಾಗಲಿದೆ.

ಪಿಎಫ್‌ ಕೊಡುಗೆ ವಿಸ್ತರಣೆ

‌ಉದ್ಯೋಗಿಗಳು ಮತ್ತು ಉದ್ಯೋಗದಾತರು ಭವಿಷ್ಯ ನಿಧಿಗೆ (ಪಿಎಫ್‌) ನೀಡುವ ವಂತಿಗೆಯನ್ನು ಸರ್ಕಾರವೇ ಪಾವತಿಸುವುದನ್ನು ಆಗಸ್ಟ್‌ ತಿಂಗಳವರೆಗೆ ವಿಸ್ತರಿಸುವುದಕ್ಕೆ ಒಪ್ಪಿಗೆ ನೀಡಲಾಗಿದೆ.

ನೂರರವರೆಗೆ ಉದ್ಯೋಗಿಗಳಿರುವ ಮತ್ತು ಅವರ ಪೈಕಿ ಶೇ 90ರಷ್ಟು ಉದ್ಯೋಗಿಗಳ ತಿಂಗಳ ವೇತನ ₹15 ಸಾವಿರಕ್ಕಿಂತ ಕಡಿಮೆ ಇರುವ ಸಂಸ್ಥೆಗಳಿಗೆ ಈ ಕೊಡುಗೆ ಅನ್ವಯವಾಗುತ್ತದೆ. ಮಾರ್ಚ್‌, ಏಪ್ರಿಲ್‌ ಮತ್ತು ಮೇ ತಿಂಗಳಿಗೆ ಈ ಕೊಡುಗೆಯನ್ನು ನೀಡಲಾಗಿತ್ತು. ಅದನ್ನು ಮುಂದಿನ ಮೂರು ತಿಂಗಳಿಗೆ ವಿಸ್ತರಿಸಲಾಗಿದೆ.

ಇನ್ಶೂರೆನ್ಸ್‌ ಕಂಪನಿಗಳಿಗೆ ₹12,450 ಕೋಟಿ

ಸರ್ಕಾರಿ ಸ್ವಾಮ್ಯದ ನ್ಯಾಷನಲ್‌ ಇನ್ಶೂರೆನ್ಸ್‌, ಓರಿಯೆಂಟ್‌ ಇನ್ಶೂರೆನ್ಸ್‌ ಮತ್ತು ಯುನೈಟೆಡ್‌ ಇನ್ಶೂರೆನ್ಸ್‌ ಕಂಪನಿಗಳಿಗೆ ₹12,450 ಕೋಟಿ ಬಂಡವಾಳ ನೀಡಿಕೆಗೆ ಕೇಂದ್ರ ಸಂಪುಟವು ಒಪ್ಪಿಗೆ ನೀಡಿದೆ.

ಅಕ್ಕಿ ನೀಡಿಕೆಗೆ ಅನುಮೋದನೆ

ಬಡ ಕುಟುಂಬಗಳ ಪ್ರತಿ ವ್ಯಕ್ತಿಗೆ ತಿಂಗಳಿಗೆ ಐದು ಕೆ.ಜಿ. ಅಕ್ಕಿ ಅಥವಾ ಗೋಧಿ ಮತ್ತು ಕುಟುಂಬಕ್ಕೆ ಒಂದು ಕೆ.ಜಿ. ಬೇಳೆ ನೀಡುವ ಯೋಜನೆಯನ್ನು ನವೆಂಬರ್‌ವರೆಗೆ ವಿಸ್ತರಿಸುವ ಪ್ರಸ್ತಾವನ್ನು ಸಂಪುಟ ಅನುಮೋದಿಸಿದೆ. ಇದರಿಂದ 81 ಕೋಟಿ ಜನರಿಗೆ ಪ್ರಯೋಜನ ಆಗಲಿದೆ ಎಂದು ಸರ್ಕಾರ ಹೇಳಿದೆ.

ಉಜ್ವಲ: ಅವಧಿ ವಿಸ್ತರಣೆ

ಉಚಿತ ಮೂರು ಅಡುಗೆ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಕೊಡುಗೆಯನ್ನು ಉಜ್ವಲ ಯೋಜನೆಯ ಫಲಾನುಭವಿಗಳು ಸೆಪ್ಟೆಂಬರ್‌ ಕೊನೆಯವರೆಗೂ ಪಡೆದುಕೊಳ್ಳಲು ಸರ್ಕಾರ ಅವಕಾಶ ನೀಡಿದೆ. ಕೋವಿಡ್‌ ಪಿಡುಗು ತಡೆಗೆ ಹೇರಲಾದ ಲಾಕ್‌ಡೌನ್‌ನ ಆರ್ಥಿಕ ಸಂಕಷ್ಟಕ್ಕೆ ಪರಿಹಾರವಾಗಿ ಉಜ್ವಲ ಫಲಾನುಭವಿಗಳಿಗೆ 14.2 ಕೆ.ಜಿಯ ಮೂರು ಎಲ್‌ಪಿಜಿ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡುವುದಾಗಿ ಸರ್ಕಾರವು ಮಾರ್ಚ್‌ನಲ್ಲಿ ಪ್ರಕಟಿಸಿತ್ತು.

ಯೋಜನೆಯ ಮುಖ್ಯ ಫಲಾನುಭವಿಗಳಾದ ಗ್ರಾಮೀಣ ಪ್ರದೇಶದ ಹೆಚ್ಚಿನ ಬಡ ಕುಟುಂಬಗಳು ತಿಂಗಳಿಗೆ ಒಂದು ಸಿಲಿಂಡರ್‌ ಬಳಸುತ್ತಿಲ್ಲ. ಹಾಗಾಗಿ ಸರ್ಕಾರದ ಕೊಡುಗೆಯನ್ನು ಪೂರ್ಣವಾಗಿ ಬಳಸಿಕೊಳ್ಳಲು ಈ ಕುಟುಂಬಗಳಿಗೆ ಸಾಧ್ಯವಾಗಿಲ್ಲ. ಮೂರು ಸಿಲಿಂಡರ್ ಪಡೆದುಕೊಂಡಿಲ್ಲದ ಕುಟುಂಬಗಳು ಅವುಗಳನ್ನು ಸೆಪ್ಟೆಂಬರ್‌ ಕೊನೆಯವರೆಗೆ ಪಡೆದುಕೊಳ್ಳಲು ಈಗ ಅವಕಾಶ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು