ಗುರುವಾರ , ಜುಲೈ 29, 2021
23 °C
ಅಮೆರಿಕ, ಫ್ರಾನ್ಸ್‌, ಜರ್ಮನಿಯಿಂದ ಹಾರಾಟ: ಬ್ರಿಟನ್‌ ಜತೆಗೂ ಮಾತುಕತೆ

ಒಪ್ಪಂದದ ವಿಮಾನಯಾನ ನಾಳೆಯಿಂದ: ಅಮೆರಿಕ, ಜರ್ಮನಿ, ಫ್ರಾನ್ಸ್‌ನಿಂದ ಹಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಅಮೆರಿಕ, ಫ್ರಾನ್ಸ್‌ ಮತ್ತು ಜರ್ಮನಿಯ ಜತೆಗೆ ಭಾರತವು ಮಾಡಿಕೊಂಡ ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ಶುಕ್ರವಾರದಿಂದ ಆರಂಭವಾಗಲಿದೆ. 

ಅಮೆರಿಕ–ಭಾರತ ನಡುವೆ ಯುನೈಟೆಡ್‌ ಏರ್‌ಲೈನ್ಸ್‌ ಇದೇ 17ರಿಂದ 31ರ ಅವಧಿಯಲ್ಲಿ 18 ಹಾರಾಟಗಳನ್ನು ನಡೆಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ತಿಳಿಸಿದ್ದಾರೆ.

ಫ್ರಾನ್ಸ್‌ ಜತೆಗೆ ಆಗಿರುವ ಒಪ್ಪಂದದಂತೆ, ಏರ್‌ ಫ್ರಾನ್ಸ್‌ 28 ಯಾನಗಳನ್ನು ನಿರ್ವಹಿಸಲಿದೆ. ಪ್ಯಾರಿಸ್‌ನಿಂದ ದೆಹಲಿ, ಮುಂಬೈ ಮತ್ತು ಬೆಂಗಳೂರಿಗೆ ಇದೇ 18ರಿಂದ ಆಗಸ್ಟ್‌ 1ರ ನಡುವೆ ಈ ಹಾರಾಟ ನಡೆಯಲಿದೆ. ನಾಗರಿಕ ವಿಮಾನ ಯಾನ ಕ್ಷೇತ್ರವು ಕೋವಿಡ್‌ಪೂರ್ವ ಸ್ಥಿತಿಗೆ ತಲುಪಬೇಕಿದ್ದರೆ ಇಂತಹ ಒಪ್ಪಂದ ಆಧಾರಿತ ವಿಮಾನಯಾನವೇ ದಾರಿ ಎಂದು ಪುರಿ‌ ಅವರು ಅಭಿಪ್ರಾಯಪಟ್ಟಿದ್ದಾರೆ. 

ಜರ್ಮನಿಯ ಲುಫ್ತಾನ್ಸಾ ಸಂಸ್ಥೆ ಕೂಡ ವಿಮಾನ ಹಾರಾಟ ಆರಂಭಿಸಲಿದೆ. ಇದೇ ರೀತಿಯ ಒಪ್ಪಂದ ಮಾಡಿಕೊಳ್ಳಲು ಬ್ರಿಟನ್‌ ಜತೆಗೂ ಮಾತುಕತೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. 

ಮೂರು ತತ್ವಗಳ ಆಧಾರದಲ್ಲಿ ‘ಒಪ್ಪಂದದ ವಿಮಾನಯಾನ’ಕ್ಕೆ ಒಪ್ಪಿಗೆ ನೀಡಲಾಗುತ್ತಿದೆ. ಸಾಕಷ್ಟು ಬೇಡಿಕೆ ಇರಬೇಕು, ಆಯಾ ದೇಶಗಳು ಪ್ರಯಾಣಿಕರ ವಿಮಾನಯಾನಕ್ಕೆ ಅನುಮತಿ ನೀಡಬೇಕು ಮತ್ತು ವಿಮಾನ ಹಾರಾಟಕ್ಕೆ ವಿಮಾನಯಾನ ಸಂಸ್ಥೆಗಳು ಸಮ್ಮತಿಸಬೇಕು ಎಂಬುದೇ ಈ ತತ್ವಗಳು. 

ವಿವಿಧ ದೇಶಗಳಲ್ಲಿ ಸಿಲುಕಿಕೊಂಡಿದ್ದ ಭಾರತೀಯರನ್ನು ಕರೆತರಲು ‘ವಂದೇ ಭಾರತ ಅಭಿಯಾನ’ವನ್ನು ಆರಂಭಿಸಲಾಗಿತ್ತು. ಆದರೆ, ಈ ಕಾರ್ಯಾಚರಣೆ ಬಗ್ಗೆ ಅಮೆರಿಕ ಆಕ್ಷೇಪ ವ್ಯಕ್ತಪಡಿಸಿತ್ತು. ಸಿಲುಕಿಕೊಂಡಿರುವ ಪ್ರಜೆಗಳನ್ನು ಟಿಕೆಟ್‌ ಶುಲ್ಕ ಪಡೆದುಕೊಂಡು ವಾಪಸ್‌ ಕರೆಸಿಕೊಳ್ಳುವುದು ‘ತಾರತಮ್ಯದ ನಡೆ’ ಎಂದು ಅಮೆರಿಕ ಆರೋಪಿಸಿತ್ತು. ಹಾಗಾಗಿ, ‘ಒಪ್ಪಂದದ ವಿಮಾನಯಾನ’ದ ಪರಿಕಲ್ಪನೆಯು ಜಾರಿಗೆ ಬಂದಿದೆ. 

ಪ್ರತಿ ದಿನದ ದೇಶೀಯ ವಿಮಾನ ಪ್ರಯಾಣಿಕರ ಸಂಖ್ಯೆಯು ಇದೇ 15ರ ಹೊತ್ತಿಗೆ ಒಂದು ಲಕ್ಷಕ್ಕೆ ಏರಬಹುದು ಎಂಬ ನಿರೀಕ್ಷೆ ಇತ್ತು. ಈ ತಿಂಗಳ ಕೊನೆಯ ಹೊತ್ತಿಗಾದರೂ ಅದು ಸಾಧ್ಯವಾಗಬಹುದು ಎಂದು ಪುರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು