ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update | 11 ಲಕ್ಷ ದಾಟಿದ ಕೋವಿಡ್‌, ಸಾವಿನ ಪ್ರಮಾಣದಲ್ಲಿ ಇಳಿಕೆ

ಸತತ ನಾಲ್ಕನೇ ದಿನವೂ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು
Last Updated 19 ಜುಲೈ 2020, 18:59 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪ್ರಕರಣಗಳ ಏರಿಕೆ ಇನ್ನಷ್ಟು ತ್ವರಿತಗೊಂಡಿದೆ.ರಾಜ್ಯಗಳು ನೀಡಿದ ಮಾಹಿತಿಯನ್ನು ಕಲೆ ಹಾಕಿ ಸುದ್ದಿ ಸಂಸ್ಥೆ
ಪಿಟಿಐ ಪ್ರಕಟಿಸಿದ ಅಂಕಿ ಅಂಶ ಪ್ರಕಾರ, ಭಾನುವಾರ ರಾತ್ರಿ 9 ಗಂಟೆಯ ಹೊತ್ತಿಗೆ ಒಟ್ಟು ಪ್ರಕರಣಗಳ ಸಂಖ್ಯೆಯು 11,14,350ಕ್ಕೆ ಏರಿಕೆಯಾಗಿದೆ.

ಈ ಮಾಹಿತಿ ಪ್ರಕಾರ, ಒಂದು ದಿನದ ಏರಿಕೆಯು 40,537. ಇತ್ತೀಚಿನ ದಿನಗಳಲ್ಲಿ ಒಂದು ಲಕ್ಷ ಹೊಸ ಪ್ರಕರಣಗಳ ಸೇರ್ಪಡೆ ಅವಧಿ ಕಡಿಮೆಯಾಗುತ್ತಾ ಸಾಗಿದೆ. ಪ್ರಕರಣಗಳ ಸಂಖ್ಯೆಯು 8 ಲಕ್ಷದಿಂದ 9 ಲಕ್ಷ ಮತ್ತು 9 ಲಕ್ಷದಿಂದ 10 ಲಕ್ಷಕ್ಕೆ ಏರಲು ತಲಾ ಮೂರು ದಿನಗಳು ಬೇಕಾಗಿದ್ದವು. 10 ಲಕ್ಷದಿಂದ 11 ಲಕ್ಷಕ್ಕೆ ಏರಿಕೆಯಾಗಲು ಎರಡೂವರೆ ದಿನ ತೆಗೆದುಕೊಂಡಿದೆ.

ಭಾನುವಾರ ಬೆಳಗ್ಗೆ 8 ಗಂಟೆವರೆಗಿನ 24 ತಾಸಿನಲ್ಲಿ 38,902 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಕೋವಿಡ್‌ ಬಾಧೆಗೆ ಒಳಗಾದ ಜನರ ಒಟ್ಟು ಸಂಖ್ಯೆ 10,77,618ಕ್ಕೆ ಏರಿದೆ. ಗುಣಮುಖ ಆದವರ ಸಂಖ್ಯೆಯು 6,77,422ಕ್ಕೆ ಹೆಚ್ಚಿದೆ ಎಂದು
ಕೇಂದ್ರ ಆರೋಗ್ಯ ಸಚಿವಾಲಯವು ಹೇಳಿದೆ.

ಸಾವಿನ ಪ್ರಮಾಣ ಇಳಿಕೆ:ಭಾರತದಲ್ಲಿ ಕೋವಿಡ್‌–19ರಿಂದಾಗಿ ಸಾಯುವವರ ಪ್ರಮಾಣ ಶೇ 2.49ರಷ್ಟಕ್ಕೆ ಇಳಿದಿದೆ. ಸಾವಿನ ಪ್ರಮಾಣವು ಅತ್ಯಂತ ಕಡಿಮೆ ಇರುವ ದೇಶಗಳಲ್ಲಿ ಭಾರತವೂ ಒಂದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಆರಂಭವಾಗದ ಕ್ಲಿನಿಕಲ್ ಟ್ರಯಲ್

ಹೈದರಾಬಾದ್‌: ಭಾರತದ ಮೊದಲ ಕೋವಿಡ್‌–19 ಸಂಭಾವ್ಯ ಲಸಿಕೆ‌ ‘ಕೋವ್ಯಾಕ್ಸಿನ್‌’ನ ಕ್ಲಿನಿಕಲ್ ಟ್ರಯಲ್ (ಮನುಷ್ಯನ ಮೇಲೆ ಪ್ರಯೋಗ)‌ ಎಲ್ಲೆಡೆ ಆರಂಭವಾಗಿಲ್ಲ. ಕೋವ್ಯಾಕ್ಸಿನ್‌ನ ಕ್ಲಿನಿಕಲ್ ಟ್ರಯಲ್‌ಗೆ ಗುರುತಿಸಲಾಗಿದ್ದ 12 ಆಸ್ಪತ್ರೆಗಳಲ್ಲಿ,ಪಟ್ನಾ ಏಮ್ಸ್‌ ಮತ್ತು ರೋಹ್ಟಕ್‌ನ ಪಿಜಿಐಎಂಎಸ್‌ನಲ್ಲಿ ಮಾತ್ರ ಪ್ರಯೋಗ ಆರಂಭವಾಗಿದೆ.

ಕ್ಲಿನಿಕಲ್ ಟ್ರಯಲ್ ನಡೆಸಲು ಕೆಲವು ಆಸ್ಪತ್ರೆಗಳಿಗೆ ರಾಜ್ಯ ಸರ್ಕಾರಗಳಿಂದ ಅನುಮತಿ ದೊರೆತಿಲ್ಲ. ಕೆಲವು ಆಸ್ಪತ್ರೆಗಳಿಗೆ ಲಸಿಕೆಯೇ ಪೂರೈಕೆಯಾಗಿಲ್ಲ. ಈ ಟ್ರಯಲ್‌ಗಾಗಿ ಗುರುತಿಸಲಾಗಿದ್ದ ಕರ್ನಾಟಕದ ಆಸ್ಪತ್ರೆಗೆ ಲಸಿಕೆಯೇ ಬಂದಿಲ್ಲ. ‘ನಾವು ಸಿದ್ಧರಿದ್ದೇವೆ. ನಮಗೆ ಲಸಿಕೆ ಮತ್ತು ನಿರ್ದೇಶನಗಳು ದೊರೆತ ನಂತರ ಟ್ರಯಲ್ ಆರಂಭಿಸುತ್ತೇವೆ’ಎಂದು ಬೆಳಗಾವಿಯ ಜೀವನ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾಟೆ ಹೇಳಿದ್ದಾರೆ.

ಹೈದರಾಬಾದ್‌ನ ಭಾರತ್ ಬಯೋಟೆಕ್‌ ಕಂಪನಿಯು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್‌), ಪುಣೆಯ ಭಾರತೀಯ ವೈರಾಣುವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ಈ ಸಂಭಾವ್ಯ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಆಗಸ್ಟ್‌ 15ರಂದು ಈ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಲು ಐಸಿಎಂಆರ್‌ ಗುರಿ ಹಾಕಿಕೊಂಡಿತ್ತು. ಆದರೆ, ಈಗ ಆಗಸ್ಟ್‌ 15ರ ಒಳಗೆ ಮೊದಲ ಹಂತದ ಕ್ಲಿನಿಕಲ್ ಟ್ರಯಲ್‌ನ ದತ್ತಾಂಶಗಳು ಲಭ್ಯವಾಗುವುದೇ ಅನುಮಾನ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸೊಳ್ಳೆಯಿಂದ ಹರಡದು ಕೊರೊನಾ

ಕೋವಿಡ್‌ ರೋಗಕ್ಕೆ ಕಾರಣವಾಗುವ ಕೊರೊನಾ ವೈರಾಣುವು ಸೊಳ್ಳೆಗಳ ಮೂಲಕ ಹರಡುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಇದೇ ಮೊದಲ ಬಾರಿ ದೃಢಪಡಿಸಿದ್ದಾರೆ. ಈ ವೈರಾಣುವು ಸೊಳ್ಳೆಯಿಂದ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯು ಹಿಂದೆಯೇ ಹೇಳಿತ್ತು. ಈಗ, ಅದಕ್ಕೆ ಪುರಾವೆ ದೊರೆತಿದೆ. ಸಾಮಾನ್ಯ ಮತ್ತು ವ್ಯಾಪಕವಾಗಿ ಇರುವ ಮೂರು ರೀತಿಯ ಸೊಳ್ಳೆಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿದೆ. ಸೊಳ್ಳೆಯ ದೇಹದಲ್ಲಿ ಕೊರೊನಾ ವೈರಾಣು ವೃದ್ಧಿ ಆಗಿಲ್ಲ. ಹಾಗಾಗಿ, ರಕ್ತದಲ್ಲಿ ವೈರಾಣು ಇರುವ ವ್ಯಕ್ತಿಗೆ ಕಚ್ಚಿದ ಸೊಳ್ಳೆಯು ಬೇರೊಬ್ಬ ವ್ಯಕ್ತಿಗೆ ಕಚ್ಚಿದರೂ ವೈರಾಣು ವರ್ಗಾವಣೆ ಆಗುವುದಿಲ್ಲ ಎಂದು ಅಮೆರಿಕದ ಕನ್ಸಾಸ್‌ ಸ್ಟೇಟ್‌ ಯುನಿವರ್ಸಿಟಿಯ ಸಂಶೋಧಕರು ಹೇಳಿದ್ದಾರೆ. ಅಧ್ಯಯನ ವರದಿಯು ‘ಸೈಂಟಿಫಿಕ್‌ ರಿಪೋರ್ಟ್ಸ್‌’ ನಿಯತಕಾಲಿಕದಲ್ಲಿ ಪ್ರಕಟವಾಗಿದೆ.

ಮಳೆ, ಚಳಿಗಾಲದಲ್ಲಿ ಹರಡುವಿಕೆ ಹೆಚ್ಚು

ಮುಂಗಾರು ಮಳೆ ತೀವ್ರಗೊಂಡಾಗ ಮತ್ತು ಚಳಿಗಾಲದ ಸಂದರ್ಭದಲ್ಲಿ ಕೋವಿಡ್‌ ಹರಡುವಿಕೆ ಇನ್ನಷ್ಟು ವೇಗ ಪಡೆದುಕೊಳ್ಳಬಹುದು ಎಂದು ಐಐಟಿ ಭುವನೇಶ್ವರ ಮತ್ತು ಏಮ್ಸ್‌ ಜಂಟಿಯಾಗಿ ನಡೆಸಿದ ಸಮೀಕ್ಷೆಯು ಹೇಳಿದೆ.

ಮಳೆಯಿಂದಾಗಿ ವಾತಾವರಣದ ಉಷ್ಣತೆ ಕಡಿಮೆ ಆಗುತ್ತದೆ. ತಂಪಾದ ವಾತಾವರಣವು ಕೋವಿಡ್‌ ಹರಡುವಿಕೆಗೆ ಪೂರಕವಾಗುತ್ತದೆ ಎಂದು ಐಐಟಿ ಭುವನೇಶ್ವರದ ನೆಲ, ಸಾಗರ, ಹವಾಮಾನ ವಿಜ್ಞಾನಗಳ ಸಹಾಯಕ ಪ್ರಾಧ್ಯಾಪಕ ವಿ. ವಿನೋಜ್‌ ನೇತೃತ್ವದಲ್ಲಿ ನಡೆದ ಅಧ್ಯಯನವು ತಿಳಿಸಿದೆ.

ವಾತಾವರಣದ ಬಿಸಿ ಏರಿಕೆಯಾದಂತೆ ವೈರಾಣು ಹರಡುವಿಕೆ ಪ್ರಮಾಣ ಕಡಿಮೆಯಾಗುತ್ತದೆ. ತಾಪಮಾನವು ಒಂದು ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿಕೆಯಾದರೆ ಪ್ರಕರಣಗಳಲ್ಲಿನ ಏರಿಕೆಯ ಪ್ರಮಾಣವು ಶೇ 0.99ರಷ್ಟು ಕಡಿಮೆಯಾಗುತ್ತದೆ. ದ್ವಿಗುಣಗೊಳ್ಳುವ ಅವಧಿಯು 1.13 ದಿನದಷ್ಟು ಹೆಚ್ಚುತ್ತದೆ ಎಂದು ಅಧ್ಯಯನ ವರದಿಯು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT