ಶನಿವಾರ, ಜುಲೈ 31, 2021
25 °C

ಕೊರೊನಾ ವೈರಸ್ ಗಾಳಿಯಿಂದ ಹರಡದು: ವಿಜ್ಞಾನಿ ವಿಶ್ಲೇಷಣೆ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೊರೊನಾ ವೈರಾಣಗಳು ಗಾಳಿಯಿಂದ ಹರಡುವುದಿಲ್ಲ ಎಂದು ಕೇಂದ್ರ ವಿಜ್ಞಾನ ಕೈಗಾರಿಕೆಗಳ ಸಂಶೋಧನಾ ಸಂಸ್ಥೆಯ ಮಹಾ ನಿರ್ದೇಶಕ ಡಾ.ಶೇಖರ್ ಮಂಡೆ ಅಭಿಪ್ರಾಯಪಟ್ಟಿದ್ದಾರೆ. ವಂಶವಾಹಿ (ಡಿಎನ್‌ಎ) ಸಂಶೋಧನೆಯನ್ನೂ ಮಂಡೆ ಅವರು ವಿದ್ವತ್ತು ಹೊಂದಿದ್ದಾರೆ.

ಕೊರೊನಾ ವೈರಾಣುಗಳು ಗಾಳಿಯಲ್ಲಿ ತೇಲಬಲ್ಲವು, ಗಾಳಿಯೊಂದಲೇ ಮತ್ತೊಬ್ಬರನ್ನು ಸೋಂಕಿತರನ್ನಾಗಿ ಮಾಡಬಲ್ಲವು ಎಂಬ ಸಂಶೋಧನಾ ವರದಿಯ ಕುರಿತು ಪ್ರತಿಕ್ರಿಯಿಸಿರುವ ಅವರು, ಕೊರೊನಾ ಸೋಂಕು ಗಾಳಿಯಿಂದ ಹರಡುವುದಿಲ್ಲ ಎಂದು ವಿಶ್ಲೇಷಿಸಿದ್ದಾರೆ.

ಕೊರೊನಾ ಸೋಂಕಿತರು ಸೀನಿದಾಗ ಅಥವಾ ಕೆಮ್ಮಿದಾಗ ಚಿಮ್ಮುವ ದ್ರವಕಣಗಳಲ್ಲಿ ವೈರಾಣುಗಳು ಕೆಲ ಅಡಿಗಳಷ್ಟು ದೂರಕ್ಕೆ ಚಿಮ್ಮಬಹುದು. ಈ ವ್ಯಾಪ್ತಿಯಲ್ಲಿರುವವರನ್ನು ಬಾಧಿಸಬಹುದು. ಆದರೆ ಗಾಳಿಯಲ್ಲಿ ಸ್ವತಂತ್ರವಾಗಿ ತೇಲುವ ಸಾಮರ್ಥ್ಯ ಕೊರೊನಾ ವೈರಾಣುಗಳಿಗೆ ಇಲ್ಲ. ಹೀಗಾಗಿ ಗಾಳಿಯಿಂದ ಸೋಂಕು ಹರಡುವ ಅಪಾಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.


ಡಾ.ಶೇಖರ್ ಮಂಡೆ

ಇದನ್ನೂ ಓದಿ: 'ಗಾಳಿಯಿಂದ ಹರಡುತ್ತಿದೆ ಕೊರೊನಾ ಸೋಂಕು': ಮಾರ್ಗಸೂಚಿ ಬದಲಿಸಲು ವಿಜ್ಞಾನಿಗಳ ಮನವಿ

ಸಿಡುಬು, ಇನ್‌ಫ್ಲುಯೆಂಝಾ, ದಡಾದಂಥ ಕಾಯಿಲೆಗಳನ್ನು ಹೊತ್ತು ತರುವ ಸೂಕ್ಷ್ಮಜೀವಿಗಳು ಗಾಳಿಯಲ್ಲಿ ತೇಲುವ ಸಾಮರ್ಥ್ಯ ಹೊಂದಿವೆ. ಆರೋಗ್ಯವಂತ ವ್ಯಕ್ತಿಯ ಉಸಿರಾಟದ ವೇಳೆ ಅವರ ದೇಹ ಪ್ರವೇಶಿಸಿ ಸೋಂಕು ಹರಡುತ್ತದೆ. ಆದರೆ ಕೊರೊನಾ ಹರಡುವ ವೈರಾಣು ಹಾಗೆ ವರ್ತಿಸುತ್ತಿಲ್ಲ. ಇದು ಗಾಳಿಯಲ್ಲಿ ಕೆಲ ಕಾಲ ತೇಲಬಲ್ಲದು, ಆದರೆ ಕೆಲಹೊತ್ತಿನಲ್ಲಿಯೇ ನೆಲಕ್ಕೆ ಬೀಳುತ್ತದೆ. ಗಾಳಿಯಲ್ಲಿ ಬಹುದೂರ ಪ್ರಯಾಣಿಸಿ ಸೋಂಕು ಹರಡುವ ಸಾಮರ್ಥ್ಯ ಹೊಂದಿಲ್ಲ ಎಂಬ ಡಾ.ಶೇಖರ್ ಮಂಡೆ ಅವರ ಹೇಳಿಕೆಯನ್ನು ಎನ್‌ಡಿಟಿವಿ ಜಾಲತಾಣ ವರದಿ ಮಾಡಿದೆ.

ಗಾಳಿಯಿಂದ ಕೊರೊನಾ ವೈರಸ್ ಸೋಂಕು ಹರಡುತ್ತದೆ ಎಂದು 32 ದೇಶಗಳ 239 ವಿಜ್ಞಾನಿಗಳ ಪ್ರತಿಪಾದನೆಯನ್ನು ಈಚೆಗಷ್ಟೇ 'ನ್ಯೂಯಾರ್ಕ್ ಟೈಮ್ಸ್' ಪ್ರಕಟಿಸಿತ್ತು. ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಈ ಕುರಿತು ಬಹಿರಂಗ ಪತ್ರ ಬರೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು