ಭಾನುವಾರ, ಆಗಸ್ಟ್ 1, 2021
27 °C

ಪಂಜಾಬ್‌ನಲ್ಲಿ ನಕಲಿ ಮದ್ಯ ಸೇವನೆ; ಮೃತರ ಸಂಖ್ಯೆ 104ಕ್ಕೆ ಏರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚಂಡೀಗಡ: ಪಂಜಾಬ್‌ನಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟವರ ಸಂಖ್ಯೆ ಭಾನುವಾರ 104ಕ್ಕೆ ಏರಿಕೆಯಾಗಿದೆ.

‘ಹೊಸ ಹದಿನೆಂಟು ಮೃತ ಪ್ರಕರಣಗಳು ತರನ್‌ ತಾರನ್‌ ಜಿಲ್ಲೆಯಲ್ಲಿ ವರದಿಯಾಗಿವೆ. ಈವರೆಗೆ ಈ ಜಿಲ್ಲೆಯಲ್ಲಿ ಎಪ್ಪತ್ತೈದು ಮಂದಿ ಮೃತರಾಗಿದ್ದಾರೆ’ ಎಂದು ಜಿಲ್ಲಾಧಿಕಾರಿ ಕುಲ್ವಂತ್‌ ಸಿಂಗ್‌ ತಿಳಿಸಿದ್ದಾರೆ.

‘ಮೃತರ ಕುಟುಂಬದವರು ಹೇಳಿಕೆ ನೀಡಲು ಹಿಂದೇಟು ಹಾಕುತ್ತಿದ್ದಾರೆ. ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೂ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಪಡೆದ ಮಾಹಿತಿಯಿಂದಾಗಿ ಎಪ್ಪತ್ತೈದು ಮಂದಿ ಮೃತರಾಗಿರುವುದು  ತಿಳಿದುಬಂದಿದೆ. ಕುಟುಂಬಸ್ಥರು ಮೃತರ ಅಂತ್ಯಕ್ರಿಯೆಯನ್ನು ಈಗಾಗಲೇ ನಡೆಸಿದ್ದಾರೆ. ಕುಟುಂಬಸ್ಥರ ಮನವೊಲಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತರನ್‌ ತಾರನ್‌ ಹೊರತುಪಡಿಸಿ ಅಮೃತಸರದಲ್ಲಿ ಹನ್ನೆರಡು, ಬಟಾಲಾದಲ್ಲಿ ಹನ್ನೊಂದು ಮಂದಿ ಮೃತರಾಗಿದ್ದಾರೆ.

ಘಟನೆಗೆ ಪಂಜಾಬ್‌ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷ ರಾಜ್ಯದ ಪಟಿಯಾಲ, ಬರ್ನಾಲಾ, ಪಠಾಣ್‌ಕೋಟ್ ಮತ್ತು ಮೊಗಾ ಸೇರಿದಂತೆ ಹಲವೆಡೆ ಪ್ರತಿಭಟನೆಯನ್ನು ನಡೆಸಿದೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಟ್ವೀಟ್‌ ಮುಖಾಂತರ ಆಗ್ರಹಿಸಿದ್ದಾರೆ.

ಇದನ್ನು ಟೀಕಿಸಿರುವ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌, ‘ಈ ದಾರುಣ ಘಟನೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬೇಡಿ. ನಿಮ್ಮ ಕೆಲಸ ನೀವು ಮಾಡಿ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.    

ಪ್ರಕರಣದ ಕುರಿತು ಈಗಾಗಲೇ ನ್ಯಾಯಾಂಗ‌ ತನಿಖೆ ನಡೆಸುವಂತೆ ಅಮರಿಂದರ್‌ ಸಿಂಗ್‌ ಆದೇಶಿಸಿದ್ದಾರೆ. ಪ್ರಕರಣ ಸಂಬಂಧ, ಈಗಾಗಲೇ ಏಳು ಅಬಕಾರಿ ಮತ್ತು ಆರು ಪೊಲೀಸ್‌ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.  ‌ಮೃತ ವ್ಯಕ್ತಿಗಳ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ ₹ 2 ನೆರವು ಘೋಷಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು