ಭಾನುವಾರ, ಮೇ 16, 2021
22 °C

ಕಾಶ್ಮೀರ ಗಡಿಗೆ ರಾಜನಾಥ್‌ ಭೇಟಿ: ಅಮರನಾಥ ದೇವರ ದರ್ಶನ, ಸೈನಿಕರೊಂದಿಗೆ ಸಂವಾದ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಅಮರನಾಥನ ದರ್ಶನ ಪಡೆದ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಾಸ್ತವ ಗಡಿ ನಿಯಂತ್ರಣ ರೇಖೆಗೆ ಹತ್ತಿರದ ಕೆರನ್‌ ಸೆಕ್ಟರ್‌ನ ಮುಂಚೂಣಿ ಸೇನಾ ನೆಲೆಗೂ ಭೇಟಿ ನೀಡಿದರು.

ಗಡಿಯಲ್ಲಿನ ಪರಿಸ್ಥಿತಿ ಕುರಿತು ಮಾಹಿತಿ ಪಡೆಯಲು ಹಿರಿಯ ಸೇನಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

‘ಎಂತಹ ಪ್ರತಿಕೂಲ ಸನ್ನಿವೇಶ ಎದುರಾದರೂ ದೇಶ ರಕ್ಷಣೆಗೆ ಗಡಿಯಲ್ಲಿ ನಿಂತ ಶೂರ ಹಾಗೂ ಧೈರ್ಯಶಾಲಿ ಸೈನಿಕರ ಕುರಿತು ಹೆಮ್ಮೆ ಎನಿಸುತ್ತದೆ’ ಎಂದು ಸಚಿವರು ಕೊಂಡಾಡಿದರು. ‘ಪಾಕಿಸ್ತಾನದ ಗಡಿಯಲ್ಲಿ ಕಣ್ಗಾವಲನ್ನು ಹೆಚ್ಚಿಸಬೇಕು. ಆ ದೇಶವು ಯಾವುದೇ ದುಸ್ಸಾಹಸಕ್ಕೆ ಕೈಹಾಕಿದರೆ ತಕ್ಕ ಪ್ರತ್ಯುತ್ತರವನ್ನು ನೀಡಬೇಕು’ ಎಂದು ಕಿವಿಮಾತು ಹೇಳಿದರು.

ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌, ಭೂಸೇನಾ ಪಡೆಯ ಮುಖ್ಯಸ್ಥ ಎಂ.ಎಂ. ನರವಣೆ ಅವರೂ ಸಚಿವರ ಜತೆಗಿದ್ದರು. ಹಿಮಾಲಯದ ಈ ಕೇಂದ್ರಾಡಳಿತ ಪ್ರದೇಶಗಳಿಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದ ಸಚಿವರು, ಶುಕ್ರವಾರ ಲೇಹ್‌ಗೆ ಭೇಟಿ ಕೊಟ್ಟಿದ್ದರು.

ಅಮರನಾಥನ ದರ್ಶನ: ರಾಜನಾಥ್‌ ಸಿಂಗ್‌ ಅವರು ಅಮರನಾಥ ಗುಹಾಂತರ ದೇವಾಲಯಕ್ಕೂ ಭೇಟಿನೀಡಿ, ಪ್ರಾರ್ಥನೆ ಸಲ್ಲಿಸಿದರು. ಸುಮಾರು ಒಂದು ಗಂಟೆಯನ್ನು ಅಲ್ಲಿ ಕಳೆದರು.

ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಲು ಉಗ್ರರು ಸಂಚು ನಡೆಸಿರುವ ‘ಖಚಿತ ಮಾಹಿತಿ’ ಸೇನೆಗೆ ಸಿಕ್ಕ ಸಂದರ್ಭದಲ್ಲಿಯೇ ರಕ್ಷಣಾ ಸಚಿವರು ಅಲ್ಲಿಗೆ ಭೇಟಿ ನೀಡಿರುವುದು ಕಾಕತಾಳೀಯವಾಗಿದೆ.

‘ಅಮರನಾಥ ದೇವರ ದರ್ಶನ ಮಾಡಿ, ಪ್ರಾರ್ಥಿಸಿದ ಬಳಿಕ, ಆತನ ಕೃಪೆಯನ್ನು ಪಡೆದ ವಿನೀತಭಾವ ಮೂಡಿದೆ’ ಎಂದು ಟ್ವೀಟ್‌ ಮಾಡಿದ್ದಾರೆ. ಸೈನಿಕರ ಜತೆಗಿನ ಸಂವಾದದ ಚಿತ್ರಗಳನ್ನೂ ಅವರು ಹಂಚಿಕೊಂಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು