ಶನಿವಾರ, ಸೆಪ್ಟೆಂಬರ್ 18, 2021
28 °C

ದೆಹಲಿ ಹಿಂಸಾಚಾರ: ತಪ್ಪೊಪ್ಪಿಕೊಂಡ ತಾಹಿರ್ ಹುಸೇನ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ದೆಹಲಿ: ಈಶಾನ್ಯ ದೆಹಲಿಯಲ್ಲಿ ಫೆಬ್ರುವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿರುವುದಾಗಿ ಎಎಪಿಯ ಅಮಾನತುಗೊಂಡಿರುವ ಕೌನ್ಸಿಲರ್ ತಾಹಿರ್ ಹುಸೇನ್ ಒಪ್ಪಿಕೊಂಡಿದ್ದಾರೆ.

ಜನವರಿ 8ರಂದು ಶಾಹೀನ್‌ಭಾಗ್‌ನ ಪಿಎಫ್‌ಐ ಕಚೇರಿಯಲ್ಲಿ ಜೆಎನ್‌ಯು ವಿದ್ಯಾರ್ಥಿ ಉಮರ್ ಖಾಲೀದ್‌ರನ್ನು ಭೇಟಿಯಾಗಿದ್ದಾಗಿಯೂ ಅವರು ತಿಳಿಸಿದ್ದಾರೆ ಎಂಬುದು ದೆಹಲಿ ಪೊಲೀಸರ ತನಿಖಾ ವರದಿಯಿಂದ ತಿಳಿದುಬಂದಿದೆ.

ಎಷ್ಟು ಸಾಧ್ಯವೋ ಅಷ್ಟು ಗಾಜಿನ ಬಾಟಲ್‌ಗಳು, ಆ್ಯಸಿಡ್, ಕಲ್ಲುಗಳನ್ನು ಸಂಗ್ರಹಿಸಿಡುವುದು ಹುಸೇನ್ ಕೆಲಸವಾಗಿತ್ತು. ಹುಸೇನ್ ನಿಕಟವರ್ತಿ ಖಾಲೀದ್ ಸೈಫಿಗೆ ಪ್ರತಿಭಟನೆಗೆ ಜನರನ್ನು ಸೇರಿಸುವ ಹೊಣೆ ವಹಿಸಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

'ಖಾಲೀದ್ ಸೈಫಿ ಹಾಗೂ ಆತನ ಸ್ನೇಹಿತ ಇಶ್ರತ್ ಜಹಾನ್, ಶಾಹೀನ್‌ಭಾಗ್ ಬಳಿಯ ಖುರೇಜಿಯಲ್ಲಿ ಮೊದಲು ಧರಣಿ ಆರಂಭಿಸಿದ್ದರು. ಗಲಭೆಗೆ ಸಂಚು ರೂಪಿಸುವುದಕ್ಕಾಗಿ ಫೆಬ್ರುವರಿ 4ರಂದು ಅಬುಲ್ ಫಜಲ್ ಎನ್‌ಕ್ಲೇವ್‌ನಲ್ಲಿ ಖಾಲಿದ್ ಸೈಫಿಯನ್ನು ಭೇಟಿಯಾಗಿದ್ದೆ. ಆಗ, ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಪ್ರಚೋದಿಸಲು ಸಂಚು ರೂಪಿಸಿದ್ದೆವು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವಂತೆ ಮಾಡಲು ದೊಡ್ಡದಾಗಿ ಏನನ್ನಾದರೂ ಮಾಡಬೇಕು ಎಂದು ಸೈಫಿ ಅಭಿಪ್ರಾಯಪಟ್ಟಿದ್ದ' ಎಂದು ತನಿಖೆ ವೇಳೆ ಹುಸೇನ್ ತಿಳಿಸಿದ್ದಾರೆ.

ತನ್ನ ಮನೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಡೀಸೆಲ್. ಪೆಟ್ರೋಲ್, ಕಲ್ಲು, ಆ್ಯಸಿಡ್ ಸಂಗ್ರಹಿಸಿಟ್ಟಿದ್ದನ್ನು ವಿಚಾರಣೆ ವೇಳೆ ಹುಸೇನ್ ಒಪ್ಪಿದ್ದಾರೆ. ಗಲಭೆ ವೇಳೆ ಉಪಯೋಗಕ್ಕಾಗಿ ತನ್ನ ಪಿಸ್ತೂಲನ್ನೂ ಹುಸೇನ್ ಪೊಲೀಸ್ ಠಾಣೆಯಿಂದ ಮೊದಲೇ ವಾಪಸ್ ಪಡೆದುಕೊಂಡಿದ್ದರು ಎಂದೂ ಪೊಲೀಸರು ತಿಳಿಸಿದ್ದಾರೆ.

'ಫೆಬ್ರುವರಿ 24ರಂದು ನಾವು ಮೊದಲೇ ಹೂಡಿದ್ದ ಸಂಚಿನಂತೆ ಅನೇಕ ಜನರನ್ನು ಮನೆಗೆ ಕರೆದುಕೊಂಡು ಬಂದೆ. ಪೆಟ್ರೋಲ್ ಬಾಂಬ್‌ಗಳನ್ನು, ಕಲ್ಲುಗಳನ್ನು ಹೇಗೆ ತೂರಬೇಕೆಂದು ಅವರಿಗೆ ತಿಳಿಸಿಕೊಡಲಾಯಿತು. ನನ್ನ ಕುಟುಂಬದವರನ್ನು ಮೊದಲೇ ಬೇರೆಡೆಗೆ ಸ್ಥಳಾಂತರಿಸಿದ್ದೆ. 24ರ ರಾತ್ರಿ 1.30ರ ಸುಮಾರಿಗೆ ಕಲ್ಲು ತೂರಾಟ ಆರಂಭಿಸಿದ್ದೆವು' ಎಂದು ವಿಚಾರಣೆ ವೇಳೆ ಹುಸೇನ್ ತಿಳಿಸಿದ್ದಾರೆ.

ದೆಹಲಿ ಪೊಲೀಸರ ಚಾರ್ಜ್‌ಶೀಟ್ ಪ್ರಕಾರ ಹುಸೇನ್, ಗುಪ್ತಚರ ದಳದ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆಯ ಪ್ರಮುಖ ಆರೋಪಿಯೂ ಹೌದು. ಫೆಬ್ರುವರಿ 26ರಂದು ಚಾಂದ್‌ಭಾಗ್‌ನ ಚರಂಡಿಯಲ್ಲಿ ಅಂಕಿತ್ ಶರ್ಮಾ ಮೃತದೇಹ ಪತ್ತೆಯಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು