ಇ–ಕಾಮರ್ಸ್ ಸಂಸ್ಥೆಗಳು ಉತ್ಪನ್ನ ತಯಾರಾದ ದೇಶ ನಮೂದಿಸುವುದು ಕಡ್ಡಾಯ: ಕೇಂದ್ರ

ನವದೆಹಲಿ: ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್‌ನಂಥ ಇ–ಕಾಮರ್ಸ್ ಸಂಸ್ಥೆಗಳು ತಾವು ಮಾರಾಟಮಾಡುವ ವಸ್ತುಗಳು ಯಾವ ದೇಶದಲ್ಲಿ ತಯಾರಾದವುಗಳು ಎಂಬುದನ್ನು ಪ್ರದರ್ಶಿಸುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ಬುಧವಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದೆ.
‘2009ರ ಕಾನೂನು ಮಾಪನಶಾಸ್ತ್ರ ಕಾಯ್ದೆ ಪ್ರಕಾರ, ಇ–ಕಾಮರ್ಸ್ ಸಂಸ್ಥೆಗಳು ಈ ನಿಯಮವನ್ನು ಅನುಸರಿಸುವುದು ಕಡ್ಡಾಯ. ಇದನ್ನು ಜಾರಿ ಮಾಡುವ ಹೊಣೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತದ್ದು’ ಎಂದು ಸರ್ಕಾರವು ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಹಾಗೂ ನ್ಯಾಯಮೂರ್ತಿ ಪ್ರತೀಕ್ ಜಲಾನ್ ಅವರ ಪೀಠಕ್ಕೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹೇಳಿದೆ.
‘ಈ ಕುರಿತು ಎಲ್ಲಾ ಇ–ಕಾಮರ್ಸ್ ಸಂಸ್ಥೆಗಳಿಗೆ ಸೂಚನೆ ಮತ್ತು ನಿರ್ದೇಶನಗಳನ್ನು ನೀಡಲಾಗಿದೆ. ಮಾಪನಶಾಸ್ತ್ರ ನಿಯಮದ ಉಲ್ಲಂಘನೆಯಾದರೆ ಸಂಸ್ಥೆಯ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳುವ ಹೊಣೆ ಆಯಾ ರಾಜ್ಯದ ಮಾಪನಶಾಸ್ತ್ರ ಇಲಾಖೆ ಅಧಿಕಾರಿಗಳದ್ದಾಗಿರುತ್ತದೆ’ ಎಂದು ಸರ್ಕಾರದ ಪರವಾಗಿ ಪ್ರಮಾಣಪತ್ರ ಸಲ್ಲಿಸಿದ ವಕೀಲ ಅಜಯ್ ದಿಗ್ಪಾಲ್ ಹೇಳಿದ್ದಾರೆ.
ವಕೀಲ ಅಮಿತ್ ಶುಕ್ಲಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಉತ್ತರವಾಗಿ ಸರ್ಕಾರವು ಹೈಕೋರ್ಟ್‌ಗೆ ಬುಧವಾರ ಈ ಪ್ರಮಾಣಪತ್ರ ಸಲ್ಲಿಸಿದೆ.
‘2009ರ ಮಾಪನಶಾಸ್ತ್ರ ಕಾಯ್ದೆಯ ನಿಯಮಗಳನ್ನು ಇ–ಕಾಮರ್ಸ್ ಸಂಸ್ಥೆಗಳು ಪಾಲನೆ ಮಾಡುತ್ತಿಲ್ಲ, ಉತ್ಪನ್ನವು ಯಾವ ದೇಶದಲ್ಲಿ ತಯಾರಾದದ್ದು ಎಂಬುದನ್ನು ಅವು ಗ್ರಾಹಕರಿಗೆ ತಿಳಿಸುತ್ತಿಲ್ಲ. ಭಾರತದಲ್ಲೇ ತಯಾರಾದ ವಸ್ತುಗಳನ್ನು ಖರೀದಿಸುವಂತೆ ಕೇಂದ್ರ ಸರ್ಕಾರವು ಜನರಿಗೆ ಕರೆ ನೀಡಿದೆ. ಇಂಥ ಸಂದರ್ಭದಲ್ಲಿ ಉತ್ಪನ್ನ ಎಲ್ಲಿ ತಯಾರಾದದ್ದು ಎಂಬುದನ್ನು ಪ್ರದರ್ಶಿಸುವುದು ಅತಿ ಮುಖ್ಯ’ ಎಂದು ಅಮಿತ್ ಶುಕ್ಲಾ ವಾದಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.