ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಅಕ್ರಮ ವರ್ಗಾವಣೆ: ಜಿವಿಕೆ ಗ್ರೂಪ್‌ ವಿರುದ್ಧ ಇಡಿ ಪ್ರಕರಣ

Last Updated 7 ಜುಲೈ 2020, 12:42 IST
ಅಕ್ಷರ ಗಾತ್ರ

ನವದೆಹಲಿ: ‘ಮುಂಬೈ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿ. (ಎಂಎಐಎಲ್‌) ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ₹ 705 ಕೋಟಿ ಮೊತ್ತದ ಅಕ್ರಮಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು ಜಿವಿಕೆ ಗ್ರೂಪ್‌, ಎಂಎಐಎಲ್‌ ಹಾಗೂ ಇತರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಆರೋಪದಡಿ ದೂರು ದಾಖಲಿಸಿದೆ’ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಈ ಸಂಸ್ಥೆಗಳ ವಿರುದ್ಧ ಸಿಬಿಐ ಕೂಡ ಈಚೆಗೆ ಎಫ್‌ಐಆರ್‌ ದಾಖಲಿಸಿತ್ತು. ಖಾಸಗಿ ಉದ್ದೇಶಕ್ಕಾಗಿ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆಯೇ ಎಂಬ ಬಗ್ಗೆ ಜಾರಿ ನಿರ್ದೇಶನಾಲಯವು ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿವಿಕೆ ಹೋಲ್ಡಿಂಗ್ಸ್‌ ಲಿ. ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ಗಳ ಜಂಟಿ ಸಹಭಾಗಿತ್ವದ ಎಂಐಎಎಲ್‌ನಲ್ಲಿ, ಆದಾಯವನ್ನು ಕಡಿಮೆ ಹಾಗೂ ವೆಚ್ಚಗಳನ್ನು ಹೆಚ್ಚಾಗಿ ತೋರಿಸಿ, ₹ 705 ಕೋಟಿ ನಿಧಿಯನ್ನು ಖಾಸಗಿ ಸಂಸ್ಥೆ ಮತ್ತು ಇತರ ಹೂಡಿಕೆದಾರರಿಗೆ ವರ್ಗಾವಣೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಈ ವಿಚಾರವಾಗಿ ಎಂಐಎಎಲ್‌ನ ನಿರ್ದೇಶಕ ಗುಣಮತಿ, ಅವರ ಪುತ್ರ ಹಾಗೂ ಆಡಳಿತ ನಿರ್ದೇಶಕ ಜಿ.ವಿ. ಸಂಜಯ್‌ ರೆಡ್ಡಿ, ವಿಮಾನನಿಲ್ದಾಣ ಪ್ರಾಧಿಕಾರದ ಕೆಲವು ಅಧಿಕಾರಿಗಳು ಹಾಗೂ ಇತರ ಒಂಬತ್ತು ಕಂಪನಿಗಳ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಮುಂಬೈ ವಿಮಾನ ನಿಲ್ದಾಣವನ್ನು ಉನ್ನತೀಕರಣಗೊಳಿಸುವುದು ಹಾಗೂ ನಿರ್ವಹಣೆಯ ಉದ್ದೇಶದಿಂದ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರವು 2006ರ ಏಪ್ರಿಲ್‌ 4ರಂದು ಎಂಐಎಎಲ್‌ ಜತೆ ಒಪ್ಪಂದ ಮಾಡಿಕೊಂಡಿತ್ತು.

ಜಿವಿಕೆ ಸಮೂಹವು ತಮ್ಮ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಕೆಲವು ಅಧಿಕಾರಿಗಳ ಜತೆ ಶಾಮೀಲಾಗಿ ಎಂಐಎಎಲ್‌ನ ಹಣವನ್ನು ಬೇರೆಕಡೆಗೆ ವರ್ಗಾಯಿಸಿದೆ ಎಂದು ಸಿಬಿಐ ಕೆಲವು ದಿನಗಳ ಹಿಂದೆ ಆರೋಪಿಸಿತ್ತು. ಈ ಸಂಬಂಧವಾಗಿ ದೂರು ದಾಖಲಿಸಿಕೊಂಡ ನಂತರ ಮುಂಬೈ ಹಾಗೂ ಹೈದರಾಬಾದ್‌ನ ಕೆಲವೆಡೆ ಸಿಬಿಐ ಅಧಿಕಾರಿಗಳು ದಾಳಿಯನ್ನೂ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT