ಮಂಗಳವಾರ, ಆಗಸ್ಟ್ 3, 2021
27 °C

ಆನ್‌ಲೈನ್ ತರಗತಿಗೆ ಮಿತಿ: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಶಾಲಾ ವಿದ್ಯಾರ್ಥಿಗಳ ಆನ್‌ಲೈನ್‌ ತರಗತಿಗಳ ಅವಧಿಗೆ ಮಿತಿ ಹೇರಿ, ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಮಾರ್ಗಸೂಚಿಯನ್ನು ಹೊರಡಿಸಿದೆ.

ಆನ್‌ಲೈನ್ ತರಗತಿಗಳ ಕಾರಣ ವಿದ್ಯಾರ್ಥಿಗಳು ಹೆಚ್ಚು ಅವಧಿ ಮೊಬೈಲ್‌/ಕಂಪ್ಯೂಟರ್‌ ಮುಂದೆ ಕಳೆಯುವಂತಾಗಿದೆ ಎಂದು ದೂರಿ, ಹಲವು ಪೋಷಕರು ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಪೋಷಕರ ಸಂಘಟನೆಗಳೂ ಸಚಿವಾಲಯಕ್ಕೆ ಪತ್ರ ಬರೆದಿದ್ದವು. ಇದನ್ನು ಗಂಭಿರವಾಗಿ ಪರಿಗಣಿಸಿದ ಸಚಿವಾಲಯವು ಆನ್‌ಲೈನ್‌ ತರಗತಿ ನಡೆಸಲು ಮಾರ್ಗಸೂಚಿಯನ್ನು ಹೊರಡಿಸಿದೆ. ಈ ಮಾರ್ಗಸೂಚಿಗೆ ‘ಪ್ರಗ್ಯಾತ’ ಎಂದು ಹೆಸರಿಟ್ಟಿದೆ.

‘ಕೋವಿಡ್–19ರ ಕಾರಣದಿಂದ ದೇಶದಾದ್ಯಂತ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ಸುಮಾರು 24 ಕೋಟಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗಿದೆ. ಶಾಲೆಗಳನ್ನು ಇನ್ನಷ್ಟು ದಿನ ಮುಚ್ಚಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಹೀಗಾಗಿ ಶಾಲೆಗಳು ಈವರೆಗಿನ ಪಾಠಮಾಡುವ ಮತ್ತು ಕಲಿಕೆಯ ವಿಧಾನವನ್ನು ಬದಲಿಸಿಕೊಳ್ಳಬೇಕಿದೆ. ಶಾಲೆಯಲ್ಲಿ ಶಿಕ್ಷಣ ಮತ್ತು ಮನೆಯಲ್ಲಿ ಶಿಕ್ಷಣ ಎಂಬ ಮಿಶ್ರ ಸ್ವರೂಪದ ಕಲಿಕಾ ವಿಧಾನವನ್ನು ರೂಢಿಸಿಕೊಳ್ಳಬೇಕಿದೆ. ಗುಣಮುಟ್ಟದ ಶಿಕ್ಷಣ ನೀಡಬೇಕಿದೆ’ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.

‘ಶಾಲೆಗಳಲ್ಲಿ ಇರುವಂತೆ ಮುಖಾಮುಖಿ ತರಗತಿಯನ್ನು ಇಂಟರ್‌ನೆಟ್‌ನಲ್ಲಿ ರೂಪಿಸುವುದು ಆನ್‌ಲೈನ್ ಶಿಕ್ಷಣದ ಉದ್ದೇಶವಲ್ಲ. ವಿದ್ಯಾರ್ಥಿಗಳು ಎಲ್ಲೇ ಇದ್ದರೂ ಸ್ವತಂತ್ರವಾಗಿ ಕಲಿಯುವುದನ್ನು ರೂಢಿಸುವುದಕ್ಕೆ ಆನ್‌ಲೈನ್ ಶಿಕ್ಷಣ ಅವಕಾಶಮಾಡಿಕೊಡಬೇಕು. ವಿದ್ಯಾರ್ಥಿಗಳು ದೀರ್ಘಕಾಲ ಗ್ಯಾಜೆಟ್‌ಗಳ ಎದುರು ಕೂರುವುದರಿಂದ ಅವರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಶಾಲೆಗಳು ಇದನ್ನು ಗಮನದಲ್ಲಿ ಇರಿಸಿಕೊಂಡು ಆನ್‌ಲೈನ್ ತರಗತಿಯ ಸ್ವರೂಪ ಮತ್ತು ವೇಳಾಪಟ್ಟಿಯನ್ನು ರೂಪಿಸಬೇಕು’ ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಮಾರ್ಗಸೂಚಿಗಳು...
* ಪೂರ್ವ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಆನ್‌ಲೈನ್‌ ತರಗತಿಯ ಅವಧಿ ದಿನವೊಂದರಲ್ಲಿ 30 ನಿಮಿಷ ಮೀರಬಾರದು
* 1–8ನೇ ತರಗತಿಯ ಮಕ್ಕಳಿಗೆ ದಿನವೊಂದರಲ್ಲಿ 45 ನಿಮಿಷದ ಎರಡು ತರಗತಿಗಳನ್ನಷ್ಟೇ ನಡೆಸಬೇಕು
* 9–12ನೇ ತರಗತಿಯ ವಿದ್ಯಾರ್ಥಿಗಳಿಗೆ ದಿನವೊಂದರಲ್ಲಿ 30–45 ನಿಮಿಷದ ಮೂರು ತರಗತಿಗಳನ್ನಷ್ಟೇ ನಡೆಸಬೇಕು
* ಆನ್‌ಲೈನ್ ಶಿಕ್ಷಣಕ್ಕೆ ಬೇಕಿರುವ ಮೂಲಸೌಕರ್ಯವನ್ನು ಎಷ್ಟು ವಿದ್ಯಾರ್ಥಿಗಳು ಹೊಂದಿದ್ದಾರೆ ಎಂಬುದರ ಬಗ್ಗೆ ಶಾಲೆಗಳೇ ಅನೌಪಚಾರಿಕ ಸಮೀಕ್ಷೆ ನಡೆಸಬೇಕು
* ಶಿಕ್ಷಕರು ದಿನದಲ್ಲಿ 6–8 ಗಂಟೆ ಆನ್‌ಲೈನ್ ತರಗತಿ ನಡೆಸುವಂತೆ ಶಾಲೆಗಳು ಒತ್ತಡ ಹೇರಬಾರದು
* ಪ್ರತಿ ಶಿಕ್ಷಕರು 2–3 ತಾಸು ಮಾತ್ರ ಆನ್‌ಲೈನ ತರಗತಿ ನಡೆಸಬೇಕು. ಉಳಿದಂತೆ ಆನ್‌ಲೈನ್ ಕಲಿಕೆಯ ವಿವಿಧ ಸಾಧ್ಯತೆಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಬೇಕು
* ಪಠ್ಯಕ್ರಮವನ್ನು ಆನ್‌ಲೈನ್‌ ತರಗತಿಯಲ್ಲೇ ಪೂರ್ಣಗೊಳಿಸಲು ಆತುರ ಪಡಬೇಡಿ. ಮಕ್ಕಳ ಕಲಿಕೆಯನ್ನು ಕೇಂದ್ರೀಕರಿಸಿ
* ವಿದ್ಯಾರ್ಥಿಗಳ ವಯಸ್ಸು, ಕಲಿಕೆಯ ಮಟ್ಟ, ಅವರಲ್ಲಿ ಲಭ್ಯವಿರುವ ಸಂಪನ್ಮೂಲವನ್ನು ಆಧರಿಸಿ ಬೋಧನೆಯ ವಿಧಾನವನ್ನು ರೂಪಿಸಿಕೊಳ್ಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು