ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೌಡಿಶೀಟರ್‌ ದುಬೆ ಬಂಧನ, ಮಧ್ಯಪ್ರದೇಶದ ಉಜ್ಜಯನಿಗೆ ತೆರಳಿದ್ದ ಆರೋಪಿ

ಸಮಗ್ರ ತನಿಖೆಗೆ ಒತ್ತಾಯ
Last Updated 10 ಜುಲೈ 2020, 10:11 IST
ಅಕ್ಷರ ಗಾತ್ರ

ಭೋಪಾಲ್‌, ಲಖನೌ: ಎಂಟು ಮಂದಿ ಪೊಲೀಸರನ್ನು ಹತ್ಯೆ ಮಾಡಿ, ಪರಾರಿಯಾಗಿದ್ದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯನ್ನು ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ದೇವಾಲಯವೊಂದರಲ್ಲಿ ಪ್ರಸಾದ ಮತ್ತು ಟಿಕೆಟ್‌ ಖರೀದಿಸಿ ಬರುತ್ತಿದ್ದಾಗ ಈತನನ್ನು ಬಂಧಿಸಲಾಗಿದೆ.

‘ಕಾರಿನಲ್ಲಿ ಮಹಾಕಾಳ ದೇವಾಲಯಕ್ಕೆ ಬಂದಿದ್ದ ದುಬೆಯನ್ನು ಪೊಲೀಸ್‌ ಕಾನ್‌ಸ್ಟೆಬಲ್‌ಒಬ್ಬರು ಮೊದಲು ಗುರುತಿಸಿದರು. ಇತರ ಮೂವರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿ ಆತನನ್ನು ವಿಚಾರಣೆಗೆ ಒಳಪಡಿಸಲಾಯಿತು. ಬಳಿಕ ಬಂಧಿಸಲಾಯಿತು’ ಎಂದು ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ ಮಿಶ್ರಾ ತಿಳಿಸಿದ್ದಾರೆ.

ಆದರೆ, ದೇವಾಲಯದ ಮೂಲಗಳು ವಿಭಿನ್ನ ಮಾಹಿತಿ ನೀಡಿವೆ. ಬೆಳಿಗ್ಗೆ ದೇವಾಲಯದ ಗೇಟ್‌ ಬಳಿ ಬಂದಿದ್ದ ದುಬೆ, ಕೌಂಟರ್‌ನಲ್ಲಿ ₹250 ನೀಡಿ ಟಿಕೆಟ್‌ ಖರೀದಿಸಿದ. ಬಳಿಕ, ಪ್ರಸಾದ ಪಡೆಯಲು ಸಮೀಪದ ಅಂಗಡಿಗೆ ತೆರಳಿದಾಗಮಾಲೀಕ ಆತನನ್ನು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದರು ಎಂದು ತಿಳಿಸಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಮಿಶ್ರಾ, ‘ಇದು ರಹಸ್ಯ ವಿಷಯ, ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ. ಮಧ್ಯಪ್ರದೇಶ ಪೊಲೀಸರ ಬಹುದೊಡ್ಡ ಸಾಧನೆ ಇದಾಗಿದೆ. ಕಾನ್ಪುರ ಘಟನೆ ಬಳಿಕ ಇಲ್ಲಿನ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು’ ಎಂದು ಹೇಳಿದ್ದಾರೆ.

ಮಧ್ಯಪ್ರದೇಶ ಪೊಲೀಸರು ದುಬೆಯನ್ನು ಉತ್ತರ ಪ್ರದೇಶ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮಕ್ಕೆ ದುಬೆಯನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ
ಈತ ದಾಳಿ ನಡೆಸಿದ್ದ. ಈ ದುರ್ಘಟನೆಯಲ್ಲಿ ಡಿವೈಎಸ್‌ಪಿ ಸೇರಿದಂತೆ ಎಂಟು ಪೊಲೀಸರು ಹತ್ಯೆಯಾಗಿದ್ದರು.

ದುಬೆನನ್ನು ಬಂಧಿಸಲು ಮಾಹಿತಿ ನೀಡಿದವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.

ದುಬೆ ವಿರುದ್ಧ ಈವರೆಗೆ 60ಕ್ಕೂ ಹೆಚ್ಚು ಕ್ರಿಮಿನಲ್‌ ಪ್ರಕರಣಗಳು ದಾಖಲಾಗಿದ್ದು, ಕೊಲೆ, ದರೋಡೆ, ಸುಲಿಗೆ, ಅಪಹರಣದಂತಹ ಪ್ರಕರಣಗಳು ಇದರಲ್ಲಿ ಸೇರಿವೆ. 20 ವರ್ಷಗಳ ಹಿಂದೆ ಪೊಲೀಸ್‌ ಠಾಣೆಗೆ ನುಗ್ಗಿ ಬಿಜೆಪಿ ಶಾಸಕರೊಬ್ಬರನ್ನು ಹತ್ಯೆ ಮಾಡಿದ ಆರೋಪ ಎದುರಿಸಿದ್ದ. ಆದರೆ, ಸಾಕ್ಷ್ಯಗಳ ಕೊರತೆಯಿಂದ ಬಿಡುಗಡೆಯಾಗಿದ್ದ.

ಶರಣಾಗತಿಯೇ ಅಥವಾ ಬಂಧನವೇ?

ವಿಕಾಸನನ್ನು ಬಂಧಿಸಲಾಯಿತೇ ಅಥವಾ ಪೊಲೀಸರ ಮುಂದೆ ತಾನೇ ಸ್ವತಃ ಶರಣಾಗತನಾದನೇ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ. ‘ಉತ್ತರ ಪ್ರದೇಶ ಪೊಲೀಸರು ದುಬೆನನ್ನು ಬಂಧಿಸಲು ವಿಫಲರಾಗಿದ್ದಾರೆ. ಹೀಗಾಗಿ, ಈತ ಶರಣಾಗತನಾಗಿದ್ದಾನೆ’ ಎಂದು ಉತ್ತರ ಪ್ರದೇಶದ ಹಿರಿಯ ಐಪಿಎಸ್‌ ಅಧಿಕಾರಿ ಅಮಿತಾಭ್‌ ಠಾಕೂರ್‌ ಹೇಳಿದ್ದಾರೆ.

‘ಇದೊಂದು ಯೋಜಿತ ಶರಣಾಗತಿ. ರೌಡಿಶೀಟರ್‌ನನ್ನು ಸಾವಿನ ದವಡೆಯಿಂದ ರಕ್ಷಿಸಲಾಗಿದೆ’ ಎಂದು ದಾಳಿಯಲ್ಲಿ ಸಾವಿಗೀಡಾದ ಡಿವೈಎಸ್‌ಪಿ ದೇವೇಂದ್ರ ಮಿಶ್ರಾ ಅವರ ಸಂಬಂಧಿ ಕಮಲ್‌ಕಾಂತ್‌ ಮಿಶ್ರಾ ಆರೋಪಿಸಿದ್ದಾರೆ.

‘ಇದೊಂದು ಪ್ರಾಯೋಜಿತ ಶರಣಾಗತಿ ಎಂದು ತೋರುತ್ತದೆ. ಉತ್ತರ ಪ್ರದೇಶ ಪೊಲೀಸರ ಎನ್‌ಕೌಂಟರ್‌ನಿಂದ ತಪ್ಪಿಸಲು ಈ ರೀತಿ ಮಾಡಲಾಗಿದೆ. ನನ್ನ ಮಾಹಿತಿ ಪ್ರಕಾರ ಮಧ್ಯಪ್ರದೇಶದ ಬಿಜೆಪಿಯ ಹಿರಿಯ ನಾಯಕರೊಬ್ಬರ ಪಾತ್ರವೂ ಇದೆ’ ಎಂದು ಕಾಂಗ್ರೆಸ್‌ ನಾಯಕ ದಿಗ್ವಿಜಯ್‌ ಸಿಂಗ್‌ ಟ್ವೀಟ್‌ ಮಾಡಿದ್ದಾರೆ.

ಇಬ್ಬರು ಸಹಚರರ ಹತ್ಯೆ

ದುಬೆಯ ಇಬ್ಬರು ಸಹಚರರನ್ನು ಉತ್ತರ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಹತ್ಯೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಬುಧವಾರ ಫರಿದಾಬಾದ್‌ನಲ್ಲಿ ಬಂಧಿಸಲಾಗಿದ್ದ ಕಾರ್ತಿಕೇಯನನ್ನು ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಕಾನ್ಪುರದ ಪಂಕಿ ಪ್ರದೇಶದಲ್ಲಿ ಪೊಲೀಸ್‌ ವಾಹನ ಪಂಕ್ಚರ್‌ ಆಗಿದ್ದರಿಂದ ನಿಲ್ಲಿಸಲಾಗಿತ್ತು. ಪರಿಸ್ಥಿತಿಯ ಲಾಭ ಪಡೆದು ಪೊಲೀಸರೊಬ್ಬರ ಪಿಸ್ತೂಲ್‌ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ. ಈ ಸಂದರ್ಭದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಆತ ಹತನಾದ. ಇಬ್ಬರು ಸಿಬ್ಬಂದಿಯೂ ಗಾಯಗೊಂಡಿದ್ದಾರೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಪ್ರಶಾಂತ್‌ ಕುಮಾರ್‌ ತಿಳಿಸಿದ್ದಾರೆ.

ಇನ್ನೊಬ್ಬ ಸಹಚರ ಪ್ರವೀಣ್‌ ಅಲಿಯಾಸ್ ಬೌವಾ ದುಬೆಯನ್ನು ಎತವಾಹ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ.

‘ದುಬೆ ಸಮಾಜವಾದಿ ಪಕ್ಷದಲ್ಲಿದ್ದಾನೆ’

‘ವಿಕಾಸ ಈಗ ಬಿಜೆಪಿಯಲ್ಲಿ ಇಲ್ಲ. ಸಮಾಜವಾದಿ ಪಕ್ಷದಲ್ಲಿದ್ದಾನೆ. ಆತನ ವಿರುದ್ಧ ಸೂಕ್ತವಾದ ಕ್ರಮವನ್ನು ಕೈಗೊಳ್ಳಲಿ’ ಎಂದು ಆತನ ತಾಯಿ ಸರಳಾ ದೇವಿ ತಿಳಿಸಿದ್ದಾರೆ. ಆದರೆ, ಸಮಾಜವಾದಿ ಪಕ್ಷ ಈ ಹೇಳಿಕೆಯನ್ನು ತಳ್ಳಿ ಹಾಕಿದೆ. ಆತ ಪಕ್ಷದ ಸದಸ್ಯನಲ್ಲ ಎಂದು ಹೇಳಿದೆ. ಈತನ ಎಲ್ಲ ದೂರವಾಣಿ ಕರೆಗಳನ್ನು ಬಹಿರಂಗಪಡಿಸಬೇಕು ಎಂದು ಒತ್ತಾಯಿಸಿದೆ.

***

ದುಬೆಗೆ ರಕ್ಷಣೆ ನೀಡಲಾಗಿತ್ತೇ ಎಂಬುದು ಗೊತ್ತಾಗಬೇಕಾದರೆ ಸಿಬಿಐ ತನಿಖೆ ನಡೆಸಬೇಕು. ಕಟ್ಟೆಚ್ಚರವಿದ್ದರೂ ಈತ ಉಜ್ಜಯನಿಗೆ ಹೇಗೆ ತಲುಪಿದ?

- ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ

***

ದುಬೆಯನ್ನು ಪೊಲೀಸರು ಬಂಧಿಸಿದರೇ ಅಥವಾ ಆತನೇ ಪೊಲೀಸರ ಮುಂದೆ ಶರಣಾದನೇ ಎಂಬುದನ್ನು ಉತ್ತರಪ್ರದೇಶ ಸರ್ಕಾರ ಸ್ಪಷ್ಟ ಪಡಿಸಬೇಕು

- ಅಖಿಲೇಶ್‌ ಯಾದವ್‌, ಸಮಾಜವಾದಿ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT