ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನ ಕಳ್ಳಸಾಗಾಣಿಕೆ ಆರೋಪ: ಕೇರಳ ಸಿಎಂ ಪಿಣರಾಯಿ ವಿಜಯನ್ ಕಾರ್ಯದರ್ಶಿ ತಲೆದಂಡ

Last Updated 8 ಜುಲೈ 2020, 9:04 IST
ಅಕ್ಷರ ಗಾತ್ರ

ತಿರುವನಂತಪುರ: ಚಿನ್ನದ ಕಳ್ಳ ಸಾಗಾಣಿಕೆಯಲ್ಲಿ ಅರಬ್‌ ಸಂಯುಕ್ತ ರಾಷ್ಟ್ರಗಳ ದೂತಾವಾಸದ ಮಾಜಿ ಸಿಬ್ಬಂದಿ ಜತೆ ಶಾಮೀಲಾಗಿದ್ದಾರೆ ಎಂಬ ಆರೋಪ ಹೊತ್ತಿರುವ ಕಾರಣಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್‌ ಅವರನ್ನು ಮಂಗಳವಾರ ಅವರ ಹುದ್ದೆಯಿಂದ ತೆರವುಗೊಳಿಸಲಾಗಿದೆ.

‘ಕಳ್ಳಸಾಗಾಣಿಕೆ ನಡೆಸುತ್ತಿದ್ದ ಜಾಲದ ಜತೆಗೆ ಮುಖ್ಯಮಂತ್ರಿ ಕಚೇರಿ ನೇರ ಸಂಪರ್ಕ ಹೊಂದಿದೆ. ಆರೋಪಿ ಸ್ವಪ್ನಾ 2017 ರಿಂದಲೇ ಮುಖ್ಯಮಂತ್ರಿಗೆ ಪರಿಚಿತರು’ ಎಂದು ಬಿಜೆಪಿ ಆರೋಪಿಸಿತ್ತು. ಅದರ ಬೆನ್ನಲ್ಲೇ, ‘ಈ ಕುರಿತು ಸಿಬಿಐ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್‌ ಒತ್ತಾಯಿಸಿತ್ತು. ರಾಜ್ಯದ ವಿವಿಧ ಕಡೆಗಳಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆಗಳೂ ನಡೆದಿವೆ. ಆದರೆ, ವಿರೋಧ ಪಕ್ಷಗಳ ಆರೋಪಗಳನ್ನು ಸೋಮವಾರ ಪಿಣರಾಯಿ ವಿಜಯನ್‌ ತಳ್ಳಿ ಹಾಕಿದ್ದರು. ಮರುದಿನವೇ ಈ ಬೆಳವಣಿಗೆ ನಡೆದಿದೆ.

‘ಶಿವಶಂಕರ್‌ ಅವರನ್ನು ಹುದ್ದೆಯಿಂದ ತೆಗೆಯಲಾಗಿದ್ದು, ಆ ಸ್ಥಾನಕ್ಕೆ ಮೀರ್‌ ಮೊಹಮ್ಮದ್‌ ಅವರನ್ನು ನಿಯೋಜಿಸಲಾಗಿದೆ’ ಎಂದು ಮುಖ್ಯಮಂತ್ರಿ ಕಚೇರಿಯು ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ ಶಿವಶಂಕರ್‌ ಅವರು ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುವರೇ ಎಂಬುದು ಸ್ಪಷ್ಟವಾಗಿಲ್ಲ.

ರಾಜತಾಂತ್ರಿಕ ಸಾಮಾನು ಸರಂಜಾಮುಗಳ ಮೂಲಕ 30 ಕೆ.ಜಿ. ಚಿನ್ನವನ್ನು ಅಕ್ರಮವಾಗಿ ಸಾಗಾಣಿಕೆ ಮಾಡಿದ್ದ ಆರೋಪದ ಮೇಲೆ ತಿರುವನಂತಪುರದಲ್ಲಿರುವ ಯುಎಇ ರಾಯಭಾರ ಕಚೇರಿಯ ಮಾಜಿ ಸಿಬ್ಬಂದಿಯಾದ ಸ್ವಪ್ನಾ ಸುರೇಶ್‌ ಹಾಗೂ ಸರಿತ್‌ ಎಂಬುವರನ್ನು ಕಸ್ಟಮ್ಸ್‌ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

ಶಿವಶಂಕರ್‌ ಅವರು ಈ ಸಿಬ್ಬಂದಿಯ ಜತೆ ಸಂಪರ್ಕದಲ್ಲಿದ್ದರು ಎಂದು ಆರೋಪಿಸಲಾಗಿದೆ. ಕಳ್ಳಸಾಗಾಣಿಕೆ ಆರೋಪದ ಹೊರತಾಗಿಯೂ ಸ್ವಪ್ನಾ ಅವರಿಗೆ ಮಾಹಿತಿ ತಂತ್ರಜ್ಞಾನ ಇಲಾಖೆಯ ಸ್ಪೇಸ್‌ ಪಾರ್ಕ್‌ನಲ್ಲಿ ಕಾರ್ಯಕಾರಿ ವ್ಯವಸ್ಥಾಪಕಿ ಹುದ್ದೆ ನೀಡಲಾಗಿತ್ತು. ಇವರ ವಿರುದ್ಧ ಇನ್ನಷ್ಟು ಆರೋಪಗಳು ಕೇಳಿ ಬಂದಿದ್ದರಿಂದ ಸೋಮವಾರ ಅವರನ್ನು ವಜಾ ಮಾಡಲಾಗಿದೆ. ‘ಸ್ವಪ್ನಾ ಅವರಿಗೆ ಈ ಹುದ್ದೆ ನೀಡಿರುವುದು ನನ್ನ ಗಮನಕ್ಕೆ ಬಂದಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದ್ದರು.

2019ರ ಮಾರ್ಚ್‌ನಿಂದ ಈ ಜಾಲವು ಎಂಟುಬಾರಿ ಚಿನ್ನದ ಕಳ್ಳಸಾಗಾಣಿಕೆ ಮಾಡಿರಬಹುದು ಎಂದು ಕಸ್ಟಮ್ಸ್‌ ಅಧಿಕಾರಿಗಳು ಶಂಕಿಸಿದ್ದಾರೆ. ಸುಮಾರು 24 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಸರಿತ್‌ ಅವರನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ. ಸ್ವಪ್ನಾ ತಲೆಮರೆಸಿಕೊಂಡಿದ್ದಾರೆ. ನಗರದ ಐಷಾರಾಮಿ ಫ್ಲ್ಯಾಟ್‌ ಒಂದರಲ್ಲಿ ಅಧಿಕಾರಿಗಳು ಸೋಮವಾರ ಶೋಧ ನಡೆಸಿದ್ದರು. ಕೃತ್ಯದಲ್ಲಿ ರಾಯಭಾರ ಕಚೇರಿ ಅಧಿಕಾರಿಗಳು ಶಾಮೀಲಾಗಿದ್ದಾರೆಯೇ ಎಂಬ ಬಗ್ಗೆಯೂ ತನಿಖೆ ನಡೆಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT