ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದೆಲ್ಲೆಡೆ ಉತ್ತಮ ಮಳೆ: ಕೋವಿಡ್‌ಗೆ ಬೆದರದೆ ನಡೆದಿದೆ ಬಿತ್ತನೆ

ಚುರುಕು ಪಡೆದ ಬೇಸಾಯ ಚಟುವಟಿಕೆ
Last Updated 5 ಜುಲೈ 2020, 16:17 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್ ಬಿಕ್ಕಟ್ಟಿನ ನಡುವೆಯೂ ದೇಶದಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಚುರುಕು ಪಡೆದಿದೆ. ಈವರೆಗೆ 432.97 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಕಾರ್ಯ ಮುಗಿದಿದೆ. ಕಳೆದ ವರ್ಷ ಇದೇ ಸಮಯದಲ್ಲಿ 230 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿತ್ತು. ಅದಕ್ಕೆ ಹೋಲಿಸಿದರೆ ದುಪ್ಪಟ್ಟು ಪ್ರದೇಶದಲ್ಲಿ ಬಿತ್ತನೆ ಆದಂತಾಗಿದೆ.

ಈ ಬಾರಿ ಉತ್ತಮ ಮಳೆ ಸುರಿದಿದ್ದರಿಂದ ಬಿತ್ತನೆ ಪ್ರಮಾಣ ಶೇ 88ರಷ್ಟು ಹೆಚ್ಚಾಗಿದೆ. ಎಣ್ಣೆ ಬೀಜಗಳು ಹಾಗೂ ಬೇಳೆಕಾಳುಗಳು ಈ ಪೈಕಿ ಪ್ರಮುಖವಾಗಿವೆ. ಮುಂಗಾರಿನ ಮುಖ್ಯ ಬೆಳೆ ಭತ್ತ ಹಾಗೂ ಇತರೆ ಬೆಳೆಗಳಾದ ತೊಗರಿಬೇಳೆ, ಸೋಯಾ, ಜೋಳ, ಸಜ್ಜೆ ಈ ವರ್ಷ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿವೆ.

ಈ ಬಾರಿ 16.56 ಲಕ್ಷ ಎಕರೆಯಲ್ಲಿ ತೊಗರಿಬೇಳೆ ಬೆಳೆಯಲಾಗುತ್ತಿದೆ. ಕಳೆದ ವರ್ಷ 2.78 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಯಲಾಗಿತ್ತು. ಸೋಯಾಬೀನ್ ಅನ್ನು ಕಳೆದ ವರ್ಷ 16.43 ಲಕ್ಷ ಎಕರೆಯಲ್ಲಿ ಬೆಳೆಯಲಾಗಿತ್ತು. ಆದರೆ ಈ ವರ್ಷ ದಾಖಲೆಯ 81.81 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ಸಿರಿಧಾನ್ಯಗಳ ಪೈಕಿ ಸಜ್ಜೆ ಬಿತ್ತನೆ ಹೆಚ್ಚಳವಾಗಿದೆ. ಕಳೆದ ವರ್ಷ 7.85 ಲಕ್ಷ ಎಕರೆಯಲ್ಲಿದ್ದ ಸಜ್ಜೆ ಈ ಬಾರಿ 17.90 ಲಕ್ಷ ಎಕರೆಗೆ ವಿಸ್ತರಣೆಯಾಗಿದೆ. ಜೋಳವನ್ನು 4.55 ಲಕ್ಷ ಎಕರೆಯಲ್ಲಿ ಬಿತ್ತಲಾಗಿದೆ. ಭತ್ತವನ್ನು 68.08 ಲಕ್ಷ ಎಕರೆ ಪ್ರದೇಶಕ್ಕೆ (ಕಳೆದ ವರ್ಷ 49.23 ಲಕ್ಷ ಎಕರೆ) ವಿಸ್ತರಿಸಲಾಗಿದೆ.

ಹತ್ತಿಯನ್ನು 91.7 ಲಕ್ಷ ಹೆಕ್ಟೇರ್‌ನಲ್ಲಿ (ಶೇ 100ರಷ್ಟು) ಹಾಗೂ ಮೆಕ್ಕೆಜೋಳವನ್ನು 45.58 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

ರಸಗೊಬ್ಬರ ಮಾರಾಟ ಅಧಿಕ

ರಸಗೊಬ್ಬರಗಳ ಮಾರಾಟದಲ್ಲೂ ಭಾರಿ ಏರಿಕೆ ಕಂಡುಬಂದಿದ್ದು, ಕೋವಿಡ್‌ನಿಂದ ಬೇಸಾಯ ಚಟುವಟಿಕೆಗಳಿಗೆ ಅಡ್ಡಿ ಉಂಟಾಗಿಲ್ಲ. ಏಪ್ರಿಲ್‌ನಿಂದ ಜೂನ್‌ ತಿಂಗಳ ಅವಧಿಯಲ್ಲಿ ದೇಶದಾದ್ಯಂತ‌ ರೈತರು 111.61 ಲಕ್ಷ ಟನ್‌ ರಸಗೊಬ್ಬರ ಖರೀದಿಸಿದ್ದಾರೆ. ಈ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 82.81ರಷ್ಟು ಏರಿಕೆಯಾಗಿದೆ.

ಕೋವಿಡ್‌ ಲಾಕ್‌ಡೌನ್‌ನಿಂದ ಬೇಸಾಯ ಚಟುವಟಿಕೆಗಳಿಗೆ ಕೇಂದ್ರ ಸರ್ಕಾರ ವಿನಾಯಿತಿ ನೀಡಿದ್ದರಿಂದ ಹೆಚ್ಚಿನ ಪ್ರದೇಶವು ಬಿತ್ತನೆಗೆ ಒಳಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT