ಸೋಮವಾರ, ಜುಲೈ 26, 2021
26 °C
ಐಐಟಿ–ಬಾಂಬೆ ವಿಜ್ಞಾನಿಗಳ ಪ್ರತಿಪಾದನೆ* ಈ ವಾದ ತಿರಸ್ಕರಿಸಿದ ವೈಜ್ಞಾನಿಕ ಸಮುದಾಯ

ಕರ್ನಾಟಕ ಹೊರತುಪಡಿಸಿ ಇತರೆಡೆ ಸಾವಿನ ಪ್ರಮಾಣ 2 ತಿಂಗಳ ನಂತರ ಇಳಿಕೆ

ಕಲ್ಯಾಣ ರೇ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಹಾಟ್‌ಸ್ಪಾಟ್‌ ಎಂದು ಗುರುತಿಸಿರುವ ರಾಜ್ಯಗಳ ಪೈಕಿ ಕರ್ನಾಟಕ ಹೊರತುಪಡಿಸಿ, ಇತರೆಡೆ ಕೋವಿಡ್‌ನಿಂದಾಗುವ ಸಾವಿನ ಪ್ರಮಾಣದಲ್ಲಿ ಇನ್ನು ಎರಡರಿಂದ ಎರಡೂವರೆ ತಿಂಗಳಲ್ಲಿ ಇಳಿಕೆ ಕಂಡು ಬರಲಿದೆ ಎಂದು ಐಐಟಿಯ (ಬಾಂಬೆ) ವಿಜ್ಞಾನಿಯೊಬ್ಬರು ಪ್ರತಿಪಾದಿಸಿದ್ದಾರೆ. 

ಈಗಾಗಲೇ ಸಾವಿನ ಪ್ರಮಾಣದಲ್ಲಿ ತೀವ್ರ ಏರಿಕೆ ಕಂಡು ಬಂದಿರುವ ಕರ್ನಾಟಕದಲ್ಲಿ ಇಂತಹ ವಿದ್ಯಮಾನ ಕಂಡು ಬರುವುದು ಕಷ್ಟ ಎಂಬ ಆತಂಕವನ್ನೂ ಅವರು ವ್ಯಕ್ತಪಡಿದ್ದಾರೆ. 

ನೊಬೆಲ್‌ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಮೈಕಲ್‌ ಲೆವಿಟ್‌ ಅವರು ರೂಪಿಸಿರುವ ಗಣಿತ ಮಾದರಿಯನ್ನು ಆಧಾರವಾಗಿಟ್ಟುಕೊಂಡು, ಐಐಟಿ (ಬಾಂಬೆ)ಯ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕ ಭಾಸ್ಕರನ್ ರಾಮನ್‌ ಅವರು ಇಂತಹ ಮುನ್ಸೂಚನೆ ನೀಡಿದ್ದಾರೆ. 

ಆದರೆ, ವಿಜ್ಞಾನಿಗಳ ಮತ್ತೊಂದು ಸಮೂಹ ಲೆವಿಟ್‌ ಮಂಡಿಸಿರುವ ಗಣಿತ ಮಾದರಿ ಹಾಗೂ ಇದನ್ನೇ ಆಧಾರವಾಗಿಟ್ಟುಕೊಂಡು ಸಿದ್ಧಪಡಿಸಿದ ಮುನ್ಸೂಚನೆಯನ್ನು ಒಪ್ಪುವುದಿಲ್ಲ.

‘ಮುಂಬೈನಲ್ಲಿ ಸಾವಿನ ಪ್ರಮಾಣ ಇನ್ನೆರಡು ವಾರಗಳಲ್ಲಿ ಗರಿಷ್ಠ ಮಟ್ಟ ತಲುಪುವುದು. ದೆಹಲಿಯಲ್ಲಿ ಇನ್ನೂ ಎರಡೂವರೆ ತಿಂಗಳ ಕಾಲ ಈ ಪಿಡುಗಿಗೆ ಜನರು ಸಾವನ್ನಪ್ಪುವ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಕಂಡು ಬರುತ್ತದೆ. ಚೆನ್ನೈನಲ್ಲಿ ತಿಂಗಳ ನಂತರ ಕೋವಿಡ್‌ನ ಹಾವಳಿ ಇನ್ನೂ ಹೆಚ್ಚಾಗಲಿದೆ’ ಎಂದು ಭಾಸ್ಕರನ್‌ ಅವರ ಮಾದರಿ ವಿವರಿಸುತ್ತದೆ.

ಈ ಮಾದರಿ ಪ್ರಕಾರ, ಗುಜರಾತ್‌ ಈಗಾಗಲೇ ಇಂತಹ ದುರ್ದಿನಗಳನ್ನು ಅನುಭವಿಸುತ್ತಿದೆ. ಕರ್ನಾಟಕದಲ್ಲಿ ಈಗಷ್ಟೇ ಆರಂಭವಾಗಿದೆ. ಆದರೆ, ಕೇರಳಕ್ಕೆ ಸಂಬಂಧಿಸಿದ ದತ್ತಾಂಶ ಅಲ್ಪಪ್ರಮಾಣದಲ್ಲಿ ಲಭ್ಯ ಇರುವ ಕಾರಣ, ಈ ಮಾದರಿ ಆಧಾರದಲ್ಲಿ ಮುನ್ಸೂಚನೆ ಕಷ್ಟ ಎಂದು ವಿವರಿಸುತ್ತದೆ. 

‘ಲೆವಿಟ್‌ ಅವರು ಪ್ರತಿಪಾದಿಸಿರುವ ಗಣಿತ ಮಾದರಿ ಮೇಲ್ನೋಟಕ್ಕೆ ಬಾಲಿಶ ಎನಿಸಿದರೂ, ಅದ್ಭುತವಾಗಿದೆ.  ಚೀನಾದ ಹುಬೇ ಪ್ರಾಂತ್ಯದಲ್ಲಿನ ದತ್ತಾಂಶವನ್ನು ವಿಶ್ಲೇಷಿಸಿ ಅವರು ಕೊರೊನಾ ಸೋಂಕಿನ ಪ್ರಸರಣದ ತೀವ್ರತೆ ಕುರಿತು ಮಾರ್ಚ್‌–ಏಪ್ರಿಲ್‌ನಲ್ಲಿಯೇ ಮುನ್ಸೂಚನೆ ನೀಡಿದ್ದರು’ ಎಂದೂ ಭಾಸ್ಕರನ್‌ ಹೇಳಿದರು. 

‘ಲೆವಿಟ್‌ ಮಾದರಿ ಭಾರತಕ್ಕೆ ಅನ್ವಯಿಸದು’

ವಿಜ್ಞಾನಿ ಮೈಕಲ್‌ ಲೆವಿಟ್‌ ಮಾದರಿ ಭಾರತದಲ್ಲಿನ ಕೋವಿಡ್‌–19 ವಿದ್ಯಮಾನಕ್ಕೆ ಅನ್ವಯ ಆಗುವುದಿಲ್ಲ’ ಎಂದು ಜರ್ಮನಿಯ ಹೆಲ್ಮ್‌ಹಾಟ್ಜ್‌ ಸೆಂಟರ್‌ ಫಾರ್‌ ಇನ್‌ಫೆಕ್ಷನ್‌ ರಿಸರ್ಚ್‌ನ ವಿಜ್ಞಾನಿ ತನ್ಮಯ್‌ ಮಿತ್ರಾ ಅಭಿಪ್ರಾಯಪಡುತ್ತಾರೆ.

‘ರೋಗ ಪ್ರಸರಣದ ತೀವ್ರತೆ, ಸೋಂಕು ಸ್ಫೋಟಗೊಳ್ಳುವ ಬಗೆ ವಿವರಿಸುವ ಜೈವಿಕ ಗುಣಲಕ್ಷಣಗಳ ಆಧಾರದಲ್ಲಿ ಈ ಮಾದರಿಯನ್ನು ರೂಪಿಸಿಲ್ಲ’ ಎಂದೂ ಹೇಳುತ್ತಾರೆ. 

ಚೆನ್ನೈನ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾಥೆಮ್ಯಾಟಿಕಲ್‌ ಸೈನ್ಸಸ್‌ನ ನಿವೃತ್ತ ಪ್ತಾಧ್ಯಾಪಕ ರಾಮಚಂದ್ರನ್‌ ಶಂಕರ್ ಅವರೂ ಮಿತ್ರಾ ಅವರ ಮಾತಿಗೆ ದನಿಗೂಡಿಸುತ್ತಾರೆ. 

‘ರೋಗ ಪ್ರಸರಣಗೊಳ್ಳುವ ರೀತಿಯ ಆಧಾರವಾಗಿಟ್ಟುಕೊಂಡು ಈ ಮಾದರಿಯನ್ನು ರೂಪಿಸಿಲ್ಲ. ಒಂದು ಅವಧಿಯಲ್ಲಿ ಕೋವಿಡ್‌ನಿಂದಾದ ಸಾವಿನ ಪ್ರಮಾಣವನ್ನು ಮಾತ್ರ ಪರಿಗಣಿಸಲಾಗಿದೆ’ ಎಂದು ರಾಮಚಂದ್ರನ್‌ ಹೇಳುತ್ತಾರೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು