ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭಯದಿಂದ ಅಂತ್ಯಕ್ರಿಯೆಗೆ ವಿರೋಧ: ಮಗುವಿನ ಮೃತದೇಹ ಕಾಲುವೆಗೆ ಎಸೆದ ತಂದೆ

Last Updated 19 ಜುಲೈ 2020, 16:36 IST
ಅಕ್ಷರ ಗಾತ್ರ

ಹೈದರಾಬಾದ್‌: ಕೊರೊನಾ ಸೋಂಕು ತಗುಲಿರಬಹುದು ಎಂಬ ಶಂಕೆಯಿಂದ ಗ್ರಾಮಸ್ಥರು ಅಂತ್ಯಕ್ರಿಯೆಗೆ ವಿರೋಧಿಸಿದ ಕಾರಣ,ಜನಿಸುವ ಮುನ್ನವೇ ಮೃತಪಟ್ಟಿದ್ದ ಹೆಣ್ಣುಮಗುವಿನ ಶವವನ್ನು ತಂದೆಯೇ ನೀರಿನ ಕಾಲುವೆಯಲ್ಲಿ ಎಸೆದ ಹೃದಯ ವಿದ್ರಾವಕ ಘಟನೆ ಆಂಧ್ರಪ್ರದೇಶ ಕರ್ನೂಲು ಜಿಲ್ಲೆಯಲ್ಲಿ ನಡೆದಿದೆ.

ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಕರ್ನೂಲು–ಕಡಪ ನೀರಾವರಿ ಕಾಲುವೆಯಲ್ಲಿ ಮಗುವಿನ ಮೃತದೇಹ ನೋಡಿದ ದಾರಿಹೋಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು, ಮಗುವಿನ ಪಾಲಕರನ್ನು ಪತ್ತೆ ಹಚ್ಚಿದ್ದಾರೆ. ನಂತರ, ಮಗುವನ್ನು ಗ್ರಾಮಕ್ಕೆ ಒಯ್ದು ಅಂತ್ಯಕ್ರಿಯೆ ನಡೆಸುವಂತೆ ಪಾಲಕರನ್ನು ಮನವೊಲಿಸಿದ್ದಾರೆ.

ಜಿಲ್ಲೆಯ ಸಿರಿವೆಲ್ಲಾ ಮಂಡಲದ ಕೋಟಪಾಡು ಗ್ರಾಮದ ಶಂಷೀರ್‌ ಶಾ ಅಲಿ ಎಂಬುವವರು ಗರ್ಭಿಣಿ ಪತ್ನಿ ಮದರ್‌ಬೀ ಅವರನ್ನು ಶುಕ್ರವಾರ ನಂದ್ಯಾಲದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗು ಗರ್ಭದಲ್ಲಿಯೇ ಮೃತಪಟ್ಟಿದ್ದ ಕಾರಣ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಅದನ್ನು ಹೊರ ತೆಗೆದಿದ್ದಾರೆ.

‘ಮಗುವಿನ ಅಂತ್ಯಕ್ರಿಯೆ ನಡೆಸದಂತೆ ಗ್ರಾಮಸ್ಥರು ನನಗೆ ಪ್ರತಿರೋಧ ಒಡ್ಡಿದರು. ಜೋರಾಗಿ ಮಳೆ ಬೀಳುತ್ತಿತ್ತು. ಹೀಗಾಗಿ ಬೇರೆ ದಾರಿ ಕಾಣದೇ ಹಸುಳೆಯ ಮೃತದೇಹವನ್ನು ಕಾಲುವೆಯಲ್ಲಿ ಎಸೆದೆ ಎಂಬುದಾಗಿ ಅಲಿ ತಿಳಿಸಿದ್ದಾರೆ’ ಎಂದು ನಂದ್ಯಾಲ ತಾಲ್ಲೂಕು ಇನ್‌ಸ್ಟೆಪಕ್ಟರ್‌ ದಿವಾಕರ್‌ ರೆಡ್ಡಿ ವಿವರಿಸಿದರು.

‘ಮಗುವಿಗೆ ಕೊರೊನಾ ಸೋಂಕು ಇತ್ತು ಎಂಬುದನ್ನು ವೈದ್ಯರು ದೃಢಪಡಿಸಿಲ್ಲ. ಆದರೆ, ನಂದ್ಯಾಲದಲ್ಲಿ ಸಕ್ರಿಯ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚು ಇರುವ ಕಾರಣ ಗ್ರಾಮಸ್ಥರು ಭಯದಿಂದ ಈ ರೀತಿ ಪ್ರತಿರೋಧ ಒಡ್ಡಿರಬಹುದು’ ಎಂದು ರೆಡ್ಡಿ ಹೇಳಿದರು.

‘ಅಲಿ ಕೂಲಿಕಾರ್ಮಿಕ. ಸಣ್ಣ ಆದಾಯ ಹೊಂದಿರುವ ಆತ, ಕಾಯಿಲೆಯಿಂದ ಬಳಲುತ್ತಿರುವ ಪತ್ನಿಯ ಆರೈಕೆ ಮಾಡಬೇಕಿದೆ. ಮಗುವನ್ನು ಕಳೆದುಕೊಂಡು ಅತೀವ ದುಃಖದಲ್ಲಿದ್ದಾನೆ. ಹೀಗಾಗಿ ಆತನ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ’ ಎಂದೂ ರೆಡ್ಡಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT