ಬುಧವಾರ, ಜೂನ್ 23, 2021
30 °C

ಮುಂಬೈಗೆ ಮರಳುತ್ತಿರುವ ವಲಸೆ ಕಾರ್ಮಿಕರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಕೊರೊನಾ ಸೋಂಕು ವ್ಯಾಪಕವಾದ ಕಾರಣ ಲಾಕ್‌ಡೌನ್‌ ಜಾರಿಗೊಳಿಸಿದ್ದರಿಂದ ತುತ್ತು ಅನ್ನಕ್ಕೂ ಪರದಾಡಿ, ಮುಂಬೈ ತೊರೆದಿದ್ದ ವಲಸೆ ಕಾರ್ಮಿಕರು ಈಗ ಮತ್ತೆ ಈ ಮಹಾನಗರದತ್ತ ಮುಖ ಮಾಡಿದ್ದಾರೆ.

ಎಷ್ಟೇ ಕಷ್ಟವಾದರೂ ಸರಿ ಒಂದು ಹೊತ್ತು ಅನ್ನ ಸಿಗುತ್ತದಲ್ಲ ಎಂಬ ಕಾರಣ ಕೆಲವರು ತಾವೇ ಇಲ್ಲಿಗೆ ಬರುತ್ತಿದ್ದಾರೆ. ಮತ್ತೊಂದೆಡೆ, ಅರ್ಧಕ್ಕೆ ನಿಂತಿರುವ ತಮ್ಮ ‍ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸುವ ಸಲುವಾಗಿ ಉದ್ಯೋಗದಾತರೇ ಕಾರ್ಮಿಕರನ್ನು ಕರೆದುಕೊಂಡು ಬರುತ್ತಿರುವುದು ಕಂಡು ಬರುತ್ತಿದೆ.

ಬೃಹತ್‌ ಗಾತ್ರದ ಮೂಲಸೌಕರ್ಯ ಯೋಜನೆಗಳನ್ನು ಆರಂಭಿಸಿರುವ ಎಂಜಿನಿಯರಿಂಗ್‌ ಸಂಸ್ಥೆಗಳು, ಕಾರ್ಮಿಕರು ತಮ್ಮ ತವರು ರಾಜ್ಯಗಳಿಗೆ ಹೋದಾಗಿನಿಂದ ತೊಂದರೆ ಅನುಭವಿಸುತ್ತಿವೆ. ಹೀಗಾಗಿ ಛತ್ತೀಸಗಡ, ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಒಡಿಶಾ, ಜಾರ್ಖಂಡ್, ರಾಜಸ್ಥಾನ ಹಾಗೂ ಗುಜರಾತ್‌ನಿಂದ ಕಾರ್ಮಿಕರನ್ನು ಕರೆದುಕೊಂಡು ಬರಲು ಈ ಸಂಸ್ಥೆಗಳು ವ್ಯವಸ್ಥೆ ಮಾಡುತ್ತಿವೆ. 

‘ಕಾರ್ಮಿಕರಿಗೆ ಉದ್ಯೋಗ ಬೇಕು. ಇದಕ್ಕಾಗಿಯೇ ಅವರು ನಗರಕ್ಕೆ ಮರಳುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಈ ಅವಧಿಯಲ್ಲಿ ಕಾರ್ಮಿಕರು ತವರು ರಾಜ್ಯಗಳಿಗೆ ಹೋಗುತ್ತಾರೆ. ಬಿತ್ತನೆ ಕಾರ್ಯ ಇಲ್ಲವೇ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡು ಮತ್ತೆ ಮರಳುವುದು ವಾಡಿಕೆ’ ಎಂದು ಕಾರ್ಮಿಕರ ಗುತ್ತಿಗೆದಾರರೊಬ್ಬರು ಹೇಳಿದರು.  

‘ಕೆಲವರು ರೈಲುಗಳ ಮೂಲಕ ವಾಪಸಾಗುತ್ತಿದ್ದರೆ, ಇನ್ನೂ ಕೆಲವರು ತಾವೇ ವಾಹನಗಳ ವ್ಯವಸ್ಥೆ ಮಾಡಿಕೊಂಡಿದ್ದಾರೆ’ ಎಂದೂ ಹೇಳಿದರು. 

‘ಕೋವಿಡ್‌ ಭಯದಿಂದಾಗಿ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಿದ್ದರು. ಅಲ್ಲಿ ಅವರಿಗೆ ದುಡಿಮೆ ಇಲ್ಲ. ಬದುಕು ಸಾಗಿಸುವುದು ಕಷ್ಟವಾಗಿದೆ. ನರೇಗಾದಡಿ ಸಿಗುವ ಕೂಲಿ ಹಣದಿಂದಲೂ ಕುಟುಂಬ ನಿರ್ವಹಣೆ ಕಷ್ಟ ಎಂಬ ಕಾರಣಕ್ಕೆ ಅವರು ಮಹಾರಾಷ್ಟ್ರ, ಗುಜರಾತ್‌ಗಳಿಗೆ ಮರಳುತ್ತಿದ್ದಾರೆ’ ಎಂದು ಸಿಐಇಎಲ್‌ ಎಚ್‌ಆರ್‌ ಸರ್ವೀಸಸ್‌ ಎಂಬ ಸಂಸ್ಥೆಯ ನಿರ್ದೇಶಕ ಆದಿತ್ಯ ಮಿಶ್ರಾ ವಿವರಿಸುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು