ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಡಾಖ್ ಬಿಕ್ಕಟ್ಟು: ಹಿಂದೂ ಮಹಾಸಾಗರದಲ್ಲಿ ನೌಕಾಪಡೆ ನಿಯೋಜನೆ ಹೆಚ್ಚಿಸಿದ್ದ ಭಾರತ

ಚೀನಾಕ್ಕೆ ಸ್ಪಷ್ಟ ಸಂದೇಶ ನೀಡಲು ಬಹುಮುಖಿ ಕಾರ್ಯಕ್ರಮ ಅನುಷ್ಠಾನ: ಉನ್ನತ ಮೂಲಗಳ ಮಾಹಿತಿ
Last Updated 29 ಜುಲೈ 2020, 11:41 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಗಡಿ ಬಿಕ್ಕಟ್ಟು ಉಲ್ಬಣಿಸಿದ ಬೆನ್ನಲ್ಲೇ ಆ ದೇಶಕ್ಕೆ ಸ್ಪಷ್ಟ ಸಂದೇಶ ನೀಡುವ ಉದ್ದೇಶದಿಂದ ಭಾರತವು ಹಿಂದೂ ಮಹಾಸಾಗರದಲ್ಲಿ ಮುಂಚೂಣಿ ಸಮರನೌಕೆಗಳು ಹಾಗೂ ಜಲಾಂತರ್ಗಾಮಿಗಳನ್ನು ನಿಯೋಜಿಸಿತ್ತು ಎಂದು ರಕ್ಷಣಾ ಸಚಿವಾಲಯದ ಮೂಲಗಳು ಬುಧವಾರ ತಿಳಿಸಿವೆ.

ಲಡಾಖ್‌ನಲ್ಲಿ ಚೀನಾ ವರ್ತನೆಯನ್ನು ಒಪ್ಪುವುದಿಲ್ಲ ಎಂಬುದನ್ನು ಮನವರಿಕೆ ಮಾಡಲು ಬಹುಮುಖಿ ವಿಧಾನಗಳನ್ನು ಭಾರತ ಅನುಸರಿಸಿತ್ತು. ಸೇನಾಪಡೆ, ವಾಯುಪಡೆ ಹಾಗೂ ನೌಕಾಪಡೆಗಳ ಸನ್ನದ್ಧತೆ, ರಾಜತಾಂತ್ರಿಕ ಮತ್ತು ವಾಣಿಜ್ಯ ಕ್ರಮಗಳನ್ನು ಭಾರತ ತೆಗೆದುಕೊಂಡಿತ್ತು ಎಂದು ಮೂಲಗಳು ತಿಳಿಸಿವೆ.

ಚೀನಾಕ್ಕೆ ಭಾರತದ ಸಂದೇಶವನ್ನು ಅರ್ಥ ಮಾಡಿಸುವ ಉದ್ದೇಶದಿಂದ ಮೂರೂ ಪಡೆಗಳ ಮುಖ್ಯಸ್ಥರು ನಿರಂತರ ಸಂಪರ್ಕದಲ್ಲಿದ್ದು, ಅಗತ್ಯ ಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದ್ದರು. ‘ನಮ್ಮ ಈ ಕ್ರಮಗಳನ್ನು ಚೀನಾ ಗಂಭೀರವಾಗಿ ಪರಿಗಣಿಸಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾರತದ ನೌಕಾಪಡೆ ನಿಯೋಜನೆಗೆ ಚೀನಾದ ಪ್ರತಿಕ್ರಿಯೆ ಹೇಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೂ ಮಹಾಸಾಗರ ಪ್ರದೇಶದಲ್ಲಿ ಚೀನಾ ಹಡಗುಗಳ ನಿಯೋಜನೆ ಗಮನಾರ್ಹ ಮಟ್ಟದಲ್ಲಿ ಹೆಚ್ಚಳವಾಗಿಲ್ಲ ಎಂದಿದ್ದಾರೆ.ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಬೃಹತ್ ಪ್ರಮಾಣದ ನೌಕಾಪಡೆಯನ್ನು ನಿಯೋಜನೆ ಮಾಡಿದ್ದೂ ಇದಕ್ಕೆ ಕಾರಣ ಇರಬಹುದು ಎಂದಿದ್ದಾರೆ. ದಕ್ಷಿಣ ಚೀನಾ ಸಮುದ್ರದ ಬಹುತೇಕ ಪ್ರದೇಶದ ಮೇಲೆ ಚೀನಾ ಹಕ್ಕುಸ್ವಾಮ್ಯ ಸಾಧಿಸುತ್ತಿರುವುದಕ್ಕೆ ಅಮೆರಿಕದ ತೀವ್ರ ಆಕ್ಷೇಪವಿದೆ.

ಭಾರತವು ಇತ್ತೀಚೆಗೆ ಅಮೆರಿಕ, ಫ್ರಾನ್ಸ್, ಜಪಾನ್‌ ಜತೆ ಹಿಂದೂ ಮಹಾಸಾಗರದಲ್ಲಿ ಜಂಟಿ ಸೇನಾ ಕಸರತ್ತು ನಡೆಸಿ, ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT