ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಮಾತೆಯ ವಿರೋಧಿಗಳು ನಮ್ಮ ಯೋಧರ ತಾಕತ್ತು ನೋಡಿದ್ದಾರೆ: ಲಡಾಖ್‌ನಲ್ಲಿ ಮೋದಿ

Last Updated 3 ಜುಲೈ 2020, 9:32 IST
ಅಕ್ಷರ ಗಾತ್ರ

ಲೇಹ್: ಭಾರತ ಮಾತೆಯ ವಿರೋಧಿಗಳು ನಿಮ್ಮ ತಾಕತ್ತು, ಕೋಪವನ್ನು ನೋಡಿದ್ದಾರೆ ಎಂದು ಲಡಾಖ್‌ನಲ್ಲಿ ಯೋಧರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಗಾಲ್ವನ್‌ ಕಣಿವೆಯಲ್ಲಿ ಭಾರತ–ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡು ವಾರಗಳ ಬಳಿಕ ಅಲ್ಲಿಗೆ ತೆರಳಿ ಪರಿಸ್ಥಿತಿ ಅವಲೋಕಿಸಿದ ಪ್ರಧಾನಿಯವರು ಯೋಧರನ್ನು ಉದ್ದೇಶಿಸಿ ಮಾತನಾಡಿದರು.

‘ನಿಮ್ಮ ಶೌರ್ಯದ ಬಗ್ಗೆ ಎಲ್ಲೆಡೆ ಮಾತನಾಡುತ್ತಿದ್ದಾರೆ. ನಿಮ್ಮ ಸಾಹಸಗಾಥೆ ದೇಶದ ಪ್ರತಿಯೊಂದು ಮನೆಯಲ್ಲಿಯೂ ಪ್ರತಿಧ್ವನಿಸುತ್ತಿದೆ. ಗಾಲ್ವನ್ ಕಣಿವೆಯಲ್ಲಿ ಹುತಾತ್ಮರಾದ ಯೋಧರಿಗೆ ಮತ್ತೊಮ್ಮೆ ಗೌರವ ಸಲ್ಲಿಸುತ್ತಿದ್ದೇನೆ’ ಎಂದು ಮೋದಿ ಹೇಳಿದ್ದಾರೆ.

‘ನಿಮ್ಮ ಧೈರ್ಯ ನೀವಿಂದು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶ ಇರುವುದಕ್ಕಿಂತಲೂ ಎತ್ತರದಲ್ಲಿದೆ. ನೀವು ಮತ್ತು ನಿಮ್ಮ ಸಹಚರರು ತೋರಿದ ಧೈರ್ಯ ಇಡೀ ಜಗತ್ತಿಗೇ ಭಾರತದ ಶಕ್ತಿಯ ಕುರಿತಾದ ಸಂದೇಶ ಸಾರಿದೆ’ ಎಂದು ಮೋದಿ ಹೇಳಿದ್ದಾರೆ.

‘ದುರ್ಬಲರು ಶಾಂತಿ ಪ್ರಕ್ರಿಯೆ ಆರಂಭಿಸಲು ಸಾಧ್ಯವಿಲ್ಲ. ಶಾಂತಿ ಸ್ಥಾಪಿಸಲು ಧೈರ್ಯವೂ ಅಗತ್ಯ. ವಿಶ್ವ ಯುದ್ಧಗಳಿರಲಿ ಅಥವಾ ಶಾಂತಿ ಇರಲಿ; ಅಗತ್ಯ ಎದುರಾದಾಗ ನಮ್ಮ ಧೈರ್ಯವು ಶಾಂತಿ ಸ್ಥಾಪನೆಯಲ್ಲಿ ಜಯ ಸಾಧಿಸಿದ್ದನ್ನು ಜಗತ್ತು ನೋಡಿದೆ. ಮಾನವೀಯತೆಯ ಸುಧಾರಣೆಗಾಗಿ ನಾವು ಕೆಲಸ ಮಾಡಿದ್ದೇವೆ’ ಎಂದು ಮೋದಿ ಹೇಳಿದ್ದಾರೆ.

‘ವಿಸ್ತರಣೆಯ ಕಾಲ ಮುಗಿದಿದೆ. ಇದು ಅಭಿವೃದ್ಧಿಯ ಯುಗ. ಭೂಪ್ರದೇಶ ವಿಸ್ತರಣೆಗೆ ಹೊರಟವರು ಸೋಲನುಭವಿಸಿದ್ದು ಅಥವಾ ವಿರೋಧ ಎದುರಿಸಿ ಓದಿಹೋದುದಕ್ಕೆ ಇತಿಹಾಸ ಸಾಕ್ಷಿಯಾಗಿದೆ’ ಎಂದು ಅವರು ಹೇಳಿದ್ದಾರೆ.

ಮಹಿಳಾ ಯೋಧರನ್ನೂ ನಾನು ನೋಡುತ್ತಿದ್ದೇನೆ. ಯುದ್ಧಭೂಮಿಯಲ್ಲಿ ಇದು ಸ್ಫೂರ್ತಿದಾಯಕ. ಇಂದು ನಾನು ನಿಮ್ಮ ಮಹಿಮೆಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಯೋಧರನ್ನು ಉದ್ದೇಶಿಸಿ ಮೋದಿ ಹೇಳಿದ್ದಾರೆ.

ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಾಡಲಾಗುವ ವೆಚ್ಚವನ್ನು ಮೂರುಪಟ್ಟು ಹೆಚ್ಚಿಸಿದ್ದೇವೆ ಎಂದು ಅವರು ಹೇಳಿದ್ದಾರೆ.

‘ಕೊಳಲೂದುವ ಕೃಷ್ಣನನ್ನು ಪೂಜಿಸುವ ನಾವು ಸುದರ್ಶನ ಚಕ್ರ ಹಿಡಿದ ಕೃಷ್ಣನನ್ನೂ ಆರಾಧಿಸುತ್ತೇವೆ’ ಎನ್ನುವ ಮೂಲಕ ಸ್ನೇಹ ಮತ್ತು ಸಮರ ಎರಡಕ್ಕೂ ಭಾರತ ಸಿದ್ಧವಿದೆ ಎಂಬ ಸಂದೇಶವನ್ನು ಜಗತ್ತಿಗೆ ಮುಖ್ಯವಾಗಿ ಚೀನಾಕ್ಕೆ ಮಾರ್ಮಿಕವಾಗಿ ರವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT