ಬುಧವಾರ, ಆಗಸ್ಟ್ 4, 2021
23 °C
ವರ್ಷಕ್ಕೆ ಸರಾಸರಿ 58,000 ಮಂದಿ ಸಾವು

ಭಾರತ | ಹಾವು ಕಡಿತ: 20 ವರ್ಷದಲ್ಲಿ 12 ಲಕ್ಷ ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಲದಲ್ಲಿ ಹಾವು– ಪ್ರಾತಿನಿಧಿಕ ಚಿತ್ರ

ನವದೆಹಲಿ: ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ 12 ಲಕ್ಷ ಜನರು ಹಾವು ಕಚ್ಚಿದ ಪರಿಣಾಮ ಸಾವನ್ನಪ್ಪಿದ್ದಾರೆ. ದೇಶದಲ್ಲಿ ವರ್ಷಕ್ಕೆ ಸರಾಸರಿ 58,000 ಜನರು ಈ ವಿಷಜಂತುವಿನ ಕಡಿತದಿಂದ ಸಾವಿಗೀಡಾಗಿರುವ ಅಂಶ ಇತ್ತೀಚಿನ ಅಧ್ಯಯನದಿಂದ ತಿಳಿದು ಬಂದಿದೆ. 

ಜಗತ್ತಿನಲ್ಲಿ ಹಾವು ಕಚ್ಚಿ ಸಾವನ್ನಪ್ಪುವವರ ಸಂಖ್ಯೆಯೂ ದೊಡ್ಡದು. ಈ ಪೈಕಿ ಅರ್ಧದಷ್ಟು ಮರಣ ಭಾರತದಲ್ಲಿ ಸಂಭವಿಸುತ್ತಿವೆ ಎಂದೂ ಅಧ್ಯಯನ ತಿಳಿಸಿದೆ.

ಶೇ 70ರಷ್ಟು ಸಾವುಗಳು ಕಡಿಮೆ ಎತ್ತರದ ಪ್ರದೇಶಗಳಲ್ಲಿ ಇಂಥ ಸಾವಿನ ಪ್ರಕರಣಗಳು ಹೆಚ್ಚು ವರದಿಯಾಗಿವೆ. ಬಿಹಾರ, ಜಾರ್ಖಂಡ್‌, ಮಧ್ಯಪ್ರದೇಶ, ಒಡಿಶಾ, ಉತ್ತರ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ಸಂಭವಿಸಿವೆ. ಅರ್ಧದಷ್ಟು ಜನರು ಮುಂಗಾರು ಅವಧಿಯಲ್ಲಿಯೇ ಹಾವು ಕಚ್ಚಿ ಮೃತಪಡುತ್ತಾರೆ ಎಂದೂ ಅಧ್ಯಯನದಿಂದ ತಿಳಿದು ಬಂದಿದೆ. 

ಕೊಳಕು ಮಂಡಲ (ರಸೆಲ್ಸ್‌ ವೈಪರ್‌), ಕಟ್ಟಿಗೆ ಹಾವು (ಕ್ರೇಟ್) ಹಾಗೂ ನಾಗರಹಾವು ಕಚ್ಚಿಯೇ ಅಧಿಕ ಜನರು ಸಾವಿಗೀಡಾಗುತ್ತಾರೆ ಎಂದು ಟೊರಂಟೊದ ಸೆಂಟರ್‌ ಫಾರ್‌ ಗ್ಲೋಬಲ್‌ ಹೆಲ್ತ್‌ ರಿಸರ್ಚ್‌ನ ನಿರ್ದೇಶಕ ಪ್ರಭಾತ್‌ ಝಾ ಹೇಳುತ್ತಾರೆ.

‘ಗ್ರಾಮೀಣ ಭಾಗದಲ್ಲಿ ವಾಸಿಸುವವರು ಹಾಗೂ ರೈತರೇ ಹೆಚ್ಚಾಗಿ ಹಾವುಗಳ ಕಡಿತಕ್ಕೆ ಬಲಿಯಾಗುತ್ತಾರೆ. ಈ ವಿಷಯವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ. 2017ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಇಂಥ ಸಾವುಗಳ ಕುರಿತ ಅಧ್ಯಯನ, ಸಾವಿನ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಆದ್ಯತೆ ನೀಡಿತು.

‘ಪ್ರಕೃತಿಯ ಅವಿಭಾಜ್ಯ ಅಂಗವಾಗಿರುವ ಹಾವುಗಳು ನಮ್ಮ ಜೀವಿಪರಿಸರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಧಾರ್ಮಿಕವಾಗಿಯೂ ಭಾರತೀಯರಿಗೆ ಉರಗಕ್ಕೆ ಮಹತ್ವ ಇದೆ. ಇನ್ನು, ಇಲಿ ಹಾಗೂ ಇತರ ಹುಳುಗಳ ನಿಯಂತ್ರಣದಲ್ಲಿಯೂ ನೆರವಾಗುತ್ತದೆ’ ಎಂದು ಮದ್ರಾಸ್‌ ಕ್ರೊಕೊಡೈಲ್‌ ಬ್ಯಾಂಕ್‌ನ ಸೆಂಟರ್‌ ಫಾರ್‌ ಹರ್ಪೆಟಾಲಜಿನ ರೋಮಲಸ್‌ ವಿಟೇಕರ್‌ ಹೇಳುತ್ತಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.