ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರದ ಬಡರೈತನಿಗೆ ಟ್ರ್ಯಾಕ್ಟರ್‌ ಕೊಡಿಸಿದ ನಟ ಸೋನು ಸೂದ್

ಪುತ್ರಿಯರನ್ನು ನೊಗಕ್ಕೆ ಹೂಡಿದ್ದ ರೈತ | ಜನರ ಕಷ್ಟಕ್ಕೆ ಕರಗಿದ ನಟನ‌ ಹೃದಯ
Last Updated 27 ಜುಲೈ 2020, 9:44 IST
ಅಕ್ಷರ ಗಾತ್ರ

ಹೈದರಾಬಾದ್: ಕೊರೊನಾ ಲಾಕ್‌ಡೌನ್‌ನಲ್ಲಿ ತೊಂದರೆಗೆ ಸಿಲುಕಿದ್ದ ನೂರಾರು ವಲಸೆ ಕಾರ್ಮಿಕರು, ವಿದ್ಯಾರ್ಥಿಗಳ ನೆರವಿಗೆ ನಿಂತಿದ್ದ ಬಾಲಿವುಡ್‌ ನಟ ಸೋನು ಸೂದ್ ಇದೀಗ ಆಂಧ್ರ ಪ್ರದೇಶದ ಬಡ ರೈತ ಕುಟುಂಬವೊಂದರ ಆಪತ್ಬಾಂಧವರಾಗಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಚಿತ್ತೂರು ಜಿಲ್ಲೆಯ ಬಡ ರೈತ ವಿ. ನಾಗೇಶ್ವರ್‌ ರಾವ್‌ ಅವರಿಗೆ ಕೃಷಿ ಕೆಲಸ ಮಾಡಲು ಟ್ರ್ಯಾಕ್ಟರ್‌ ಕೊಡಿಸುವ ಮೂಲಕ ಮತ್ತೆ ಮಾನವೀಯತೆ ಮೆರೆದಿದ್ದಾರೆ.

ಚಿತ್ತೂರು ಜಿಲ್ಲೆಯ ಮಹಲ್ ರಾಜುಪಲ್ಲಿ ಗ್ರಾಮದ ನಾಗೇಶ್ವರ ರಾವ್‌ಎತ್ತುಗಳು ಇಲ್ಲದ ಕಾರಣ ತಮ್ಮ ಪುತ್ರಿಯರನ್ನು ಎತ್ತುಗಳಂತೆ ನೊಗಕ್ಕೆ ಕಟ್ಟಿ ಹೊಲದಲ್ಲಿ ಬಿತ್ತನೆ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.ಈ ದೃಶ್ಯವನ್ನು ಟ್ವಿಟರ್‌ನಲ್ಲಿ ಕಂಡ ಸೋನು ಸೂದ್‌ಮನಮಿಡಿಯಿತು.

ಜೀವನ ನಿರ್ವಹಣೆಗೆ ಮದನಪಲ್ಲಿ ಪಟ್ಟಣದಲ್ಲಿ ಟೀ ಅಂಗಡಿ ಇಟ್ಟುಕೊಂಡಿದ್ದ ರಾವ್‌ ಕುಟುಂಬ ಕೊರೊನಾ ಲಾಕ್‌ಡೌನ್‌ನಿಂದ ತೊಂದರೆಗೆ ಸಿಲುಕಿತ್ತು. ಟೀ ಅಂಗಡಿ ಬಾಗಿಲು ಮುಚ್ಚಿ ಗ್ರಾಮಕ್ಕೆ ಹಿಂದಿರುಗಿದ್ದ ಕುಟುಂಬ ತುಂಡು ಭೂಮಿಯಲ್ಲಿ ಕೃಷಿ ಕೆಲಸದಲ್ಲಿ ತೊಡಗಿತ್ತು.

ನಟ ಸೋನು ಸೂದ್

ಕಷ್ಟಕ್ಕೆ ಮಿಡಿದ ಸೂದ್‌ ಹೃದಯ

ಎತ್ತುಗಳನ್ನು ಬಾಡಿಗೆಗೆ ಪಡೆಯುವಷ್ಟು ಹಣವಿಲ್ಲದ ಕಾರಣ ರಾವ್ ಅವರ‌ ಪುತ್ರಿಯರಾದ ಚಂದನಾ ಮತ್ತು ವೆನ್ನೆಲಾ ಖುದ್ದು ನೊಗ ಹೊತ್ತರು. ರಾವ್‌ ಪತ್ನಿ ಬೀಜಗಳನ್ನು ಬಿತ್ತಿದರು. ಇಡೀ ಕುಟುಂಬ ಹೊಲದಲ್ಲಿ ಬಿತ್ತನೆ ಮಾಡುತ್ತಿದ್ದ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.

ಟ್ವಿಟರ್‌ನಲ್ಲಿ ಈ ವಿಡಿಯೊ ಕಂಡ ಕೂಡಲೇ ಸೋನು ಸೂದ್, ರಾವ್ ಕುಟುಂಬಕ್ಕೆ ಒಂದು ಜೊತೆ ಎತ್ತು ಕೊಡಿಸುವುದಾಗಿ ಟ್ವೀಟ್‌ ಮಾಡಿದರು. ತಾಸಿನ ಬಳಿಕ ಮನಸ್ಸು ಬದಲಿಸಿ,‘ಎತ್ತುಗಳು ಏಕೆ? ಟ್ರ್ಯಾಕ್ಟರ್‌ ಕೊಡಿಸುತ್ತೇನೆ. ಭಾನುವಾರ ಸಂಜೆಯ ವೇಳೆಗೆ ಅವರ ಹೊಲದಲ್ಲಿ ಟ್ರ್ಯಾಕ್ಟರ್‌ ಇರುತ್ತದೆ’ ಎಂದುವಾಗ್ದಾನ ಮಾಡಿದರು.

ಸೋನು ಮಾತು ನೀಡಿದಂತೆ ಒಂಬತ್ತು ಲಕ್ಷ ರೂಪಾಯಿ ಮೌಲ್ಯದ ಹೊಸ ಟ್ರ್ಯಾಕ್ಟರ್‌ ಮತ್ತು ಜೀವನ ನಿರ್ವಹಣೆಗೆ ಬೇಕಾದ ಹಣ ಭಾನುವಾರ ಸಂಜೆ ರಾವ್ ಅವರ‌ ಮನೆಗೆ ತಲುಪಿತ್ತು. ಅಷ್ಟೇ ಅಲ್ಲ, ಅರ್ಧಕ್ಕೆ ನಿಲ್ಲಿಸಿದ ವಿದ್ಯಾಭ್ಯಾಸ ಮುಂದುವರಿಸುವಂತೆ ಇಬ್ಬರೂ ಪುತ್ರಿಯರಿಗೆ ನಟ ಸಲಹೆ ನೀಡಿದರು.

ಸಹಾಯ ಹೇಗೆ ತೀರಿಸಲಿ?

‘ನಟ ಸೋನು ಸೂದ್‌ ಅವರ ಈ ಸಹಾಯವನ್ನು ನಾನು ಹೇಗೆ ತೀರಿಸಲಿ? ಅವರ ಮನದಾಸೆಯಂತೆ ನನ್ನ ಇಬ್ಬರೂ ಪುತ್ರಿಯರು ವಿದ್ಯಾಭ್ಯಾಸ ಮುಂದುವರಿಸುತ್ತಾರೆ’ ಎಂದು ನಾಗೇಶ್ವರ್‌ ರಾವ್‌ ಕಣ್ಣೀರಾಗಿದ್ದಾರೆ.

‘ನೀವು ತೆರೆಯ ಮೇಲೆ ಖಳ ನಾಯಕನಿರಬಹುದು. ಆದರೆ, ನಮ್ಮ ಪಾಲಿನ ನಿಜವಾದ ಹೀರೊ’ ಎಂದು ಅನೇಕರು ನಟನ ಕೆಲಸವನ್ನು ಕೊಂಡಾಡಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಲೇ ಆಂಧ್ರ ಪ್ರದೇಶದಗಣ್ಯರು, ಅನೇಕ ಸಂಘ, ಸಂಸ್ಥೆಗಳು ಈ‌ ಕುಟುಂಬದ ನೆರವಿಗೆ ಧಾವಿಸಿವೆ.

ನಾಗೇಶ್ವರ್‌ ರಾವ್ ಇಬ್ಬರೂ ಪುತ್ರಿಯರ ವಿದ್ಯಾಭ್ಯಾಸದ ಹೊಣೆಯನ್ನು ಹೊತ್ತುಕೊಳ್ಳುವುದಾಗಿತೆಲುಗು ದೇಶಂ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಭರವಸೆ ನೀಡಿದ್ದಾರೆ. ನಾಯ್ಡು ಕೂಡ ಚಿತ್ತೂರು ಜಿಲ್ಲೆಯವರು.

ನಟನಿಗೆ ನಾಯ್ಡು ಕೃತಜ್ಞತೆ

ದೂರವಾಣಿಯಲ್ಲಿ ಸೋನು ಜತೆ ಮಾತನಾಡಿ ಕೃತಜ್ಞತೆ ಸಲ್ಲಿಸಿದ ನಾಯ್ಡು, ‘ನಿಮ್ಮಜನಪರ ಕೆಲಸಗಳು ಎಲ್ಲರಿಗೂ ಮಾದರಿಯಾಗಲಿ’ ಎಂದು ಹಾರೈಸಿದ್ದಾರೆ.ಸೋನು ಸೂದ್‌ ವೃತ್ತಿ ಜೀವನಕ್ಕೆ ತಿರುವು ನೀಡಿದ್ದೇ ತೆಲುಗು ಚಿತ್ರರಂಗ. ಹಲವಾರು ತೆಲುಗು ಚಿತ್ರಗಳಲ್ಲಿ ಅವರು ಖಳ ನಾಯಕನಾಗಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT