ಭಾನುವಾರ, ಜುಲೈ 25, 2021
22 °C
ಗೋಮೂತ್ರ ಸೇವನೆಯಿಂದ ಸೋಂಕು ನಿವಾರಕ ಇಂಜೆಕ್ಷನ್‌ವರೆಗೆ

ಕೊರೊನಾ ನಿಯಂತ್ರಣಕ್ಕೆ ರಾಜಕಾರಣಿಗಳು ಕೊಟ್ಟಿದ್ದ ವಿಚಿತ್ರ ಸಲಹೆಗಳು

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಕೊರೊನಾ ವೈರಸ್‌ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ದಿನಕ್ಕೊಂದು ಹೊಸ ದಾಖಲೆ ಸೃಷ್ಟಿಸುತ್ತಿರುವ ಸೋಂಕಿನ ನಿಯಂತ್ರಣಕ್ಕಾಗಿ ಲಸಿಕೆ ಅಭಿವೃದ್ಧಿಪಡಿಸುವ ಕೆಲಸವೂ ವೇಗವಾಗಿ ಸಾಗಿದೆ. ವಿಷಯ ಇಷ್ಟು ಗಂಭೀರವಾಗಿದ್ದರೂ ದಿನಕ್ಕೊಬ್ಬ ನಾಯಕರು ಚಿತ್ರವಿಚಿತ್ರ ಹೇಳಿಕೆಗಳನ್ನು ನೀಡುತ್ತಾ ಜನರ ನಡುವೆ ನಗೆಪಾಟಲಿಗೀಡಾಗುವುದು ಮಾತ್ರ ನಿಂತಿಲ್ಲ.

ವಿಶ್ವದಲ್ಲಿ ಸೋಂಕಿತರ ಸಂಖ್ಯೆ 1.4 ಕೋಟಿ ದಾಟಿದೆ. ಸೋಂಕಿನ ಪ್ರಮಾಣ ಹೆಚ್ಚಾಗಲು ಪ್ರಭಾವಿಗಳು ನೀಡುವ ಅರೆಬೆಂದ ಹೇಳಿಕೆಗಳೂ ಕಾರಣವಾಗಬಹುದು ಎಂದು ಅರಿತುಕೊಂಡ ವಿಶ್ವ ಆರೋಗ್ಯ ಸಂಸ್ಥೆ 'ಸ್ಟಾಪ್ ದಿ ಸ್ಪ್ರೆಡ್' (ಹರಡುವುದಕ್ಕೆ ತಡೆ) ಹೆಸರಿನ ಪ್ರಚಾರ ಆಂದೋಲನವನ್ನು ರೂಪಿಸಿತು. ಇಂಥ ಕಪೋಲಕಲ್ಪಿತ ಹೇಳಿಕೆಗಳ ಸತ್ಯಾಸತ್ಯತೆ ಪರಿಶೀಲಿಸಿ, ಭ್ರಮೆಗಳನ್ನು ತೊಡೆದುಹಾಕುವುದು ಈ ಆಂದೋಲನದ ಉದ್ದೇಶ.

ವಿಶ್ವದ ವಿವಿಧ ಮಾಧ್ಯಮಗಳಲ್ಲಿ ಈವರೆಗೆ ಪ್ರಕಟವಾದ ಇಂಥ ಹಾಸ್ಯಾಸ್ಪದ ಹೇಳಿಕೆಗಳ ಮೆಲುಕು ಇಲ್ಲಿದೆ...

ಸೋಂಕು ನಿವಾರಕದ ಇಂಜೆಕ್ಷನ್ ಕೊಡಿ: ಡೊನಾಲ್ಡ್‌ ಟ್ರಂಪ್

'ಕೊರೊನಾ ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಸೋಂಕು ನಿವಾರಕಗಳನ್ನೇ (ಸ್ಯಾನಿಟೈಸರ್?) ರೋಗಿಗಳಿಗೆ ಇಂಜೆಕ್ಟ್ ಮಾಡಬಹುದು. ಸೋಂಕಿತರ ಮೇಲೆ ನೇರಳಾತೀತ (ಅಲ್ಟ್ರಾ ವಯಲೆಟ್) ಕಿರಣಗಳನ್ನು ಹಾಯಿಸಬೇಕು' ಎಂದೆಲ್ಲಾ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಸಲಹೆ ಮಾಡಿದ್ದರು.

'ಸೋಂಕಿತರ ಮೇಲೆ ನೇರಳಾತೀತ ಕಿರಣಗಳನ್ನು ಹಾಯಿಸಿದರೆ ಅಥವಾ ಅವರ ದೇಹವನ್ನು ಶಕ್ತಿಶಾಲಿ ಬೆಳಕಿಗೆ ಒಡ್ಡಿದರೆ ಒಳ್ಳೆಯದಲ್ಲವೇ? ಸೋಂಕಿತರ ದೇಹಕ್ಕೆ ಸೋಂಕುನಿವಾರಕಗಳನ್ನು ಇಂಜೆಕ್ಟ್‌ ಮಾಡಿ, ಸೋಂಕನ್ನು ತೊಳೆದುಹಾಕಲು ಸಾಧ್ಯವಿಲ್ಲವೇ?' ಎಂದು ಟ್ರಂಪ್ ಪ್ರಶ್ನಿಸಿದ್ದರು.

ಅಧ್ಯಕ್ಷರು ಹಂಚಿಕೊಂಡಿದ್ದ ಎರಡೂ ಐಡಿಯಾಗಳನ್ನು ಅಮೆರಿಕದ ತಜ್ಞ ವೈದ್ಯರು ಸಾರಾಸಗಟಾಗಿ ತಿರಸ್ಕರಿಸಿದ್ದರು.

ಟ್ರ್ಯಾಕ್ಟರ್ ಓಡಿಸಿದ್ರೆ ಕೊರೊನಾ ಬರಲ್ಲ: ಅಲೆಕ್ಸಾಂಡರ್ ಲುಕಶೆಂಕೊ

ದೇಹಕ್ಕೆ ಸೋಂಕು ನಿವಾರಕಗಳನ್ನು ಇಂಜೆಕ್ಟ್‌ ಮಾಡುವ ಅಮೆರಿಕ ಅಧ್ಯಕ್ಷರ ಭೀಕರ ಸಲಹೆಯ ನಂತರ ಸುದ್ದಿ ಮಾಡಿದ್ದು ಬೆಲಾರುಸ್ ದೇಶದ ಅಧ್ಯಕ್ಷ ಅಲೆಕ್ಸಾಂಡರ್ ಲುಕಸೆಂಕೊ ಅವರ ಸಲಹೆಗಳು. 'ಟ್ರ್ಯಾಕ್ಟರ್ ಓಡಿಸಿದರೆ ಕೊರೊನಾ ಬರಲ್ಲ, ಕೋವಿಡ್-19ಕ್ಕೆ ವೊಡ್ಕಾ ದಿವ್ಯ ಔಷಧಿ' ಎಂಬ ಲುಕಶೆಂಕೊ ಸಲಹೆಗಳನ್ನು ಕೇಳಿ ಬೆಲಾರುಸ್ ದೇಶದ ಜನರು ತಮ್ಮ ಅಧ್ಯಕ್ಷರ ಬುದ್ಧಿಮತ್ತೆ ತಿಳಿದು ಹಣೆಹಣೆ ಚಚ್ಚಿಕೊಂಡಿದ್ದರು. 

'ಹೊಲಗದ್ದೆಗಳಲ್ಲಿ ಟ್ರ್ಯಾಕ್ಟರ್‌ ಓಡಿಸುತ್ತಾ ಮೈಮುರಿದು ಕೆಲಸ ಮಾಡುವವರಿಗೆ ಕೊರೊನಾ ಬರುವುದಿಲ್ಲ. ಅಷ್ಟಕ್ಕೂ ಮೀರಿ ಭಯವಿದ್ದರೆ ವೋಡ್ಕಾ ಕುಡಿಯಿರಿ. ಜಮೀನುಗಳಲ್ಲಿ ಕೆಲಸ ಮಾಡುವ ರೈತರಿಗೆ ಕೊರೊನಾ ಭೀತಿ ಬೇಡವೇ ಬೇಡ' ಎಂದೆಲ್ಲಾ ಲುಕಶೆಂಕೊ ಅಣಿಮುತ್ತು ಉದುರಿಸಿದ್ದರು.

ಇದೊಂದು ಸಾಮಾನ್ಯ ಜ್ವರ: ಇಮ್ರಾನ್ ಖಾನ್

'ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು 'ಜನರ ಬೇಜವಾಬ್ದಾರಿತನವೇ ಕಾರಣ. ಅವರು ಕೋವಿಡ್-19 ಅಂದ್ರೆ ಒಂದು ಸಾಮಾನ್ಯ ಜ್ವರ ಅಂದುಕೊಂಡುಬಿಟ್ಟಿದ್ದಾರೆ' ಎಂದೆಲ್ಲಾ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈಚೆಗೆ ಸಿಟ್ಟಿನಿಂದ ಪ್ರತಿಕ್ರಿಯಿಸಿದ್ದು ನಿಮಗೆ ನೆನಪಿರಬಹುದು.

ಜನರಲ್ಲಿ ಇಂಥದ್ದೊಂದು ಭ್ರಮೆ ಹುಟ್ಟಿಸಿದ್ದು ತಮ್ಮದೇ ಹೇಳಿಕೆ ಎಂಬುದು ಮಾತ್ರ ಇಮ್ರಾನ್ ಸಾಹೇಬರಿಗೆ ಮರೆತುಹೋಗಿರುವುದು ವಿಪರ್ಯಾಸ. ಕೆಲ ತಿಂಗಳ ಹಿಂದೆಯಷ್ಟೇ 'ಕೋವಿಡ್-19 ಎಂಬುದು ಒಂದು ಸಾಮಾನ್ಯ ಜ್ವರ. ಶೇ 90ರಷ್ಟು ಸೋಂಕಿತರನ್ನು ಕೆಲವೇ ದಿನಗಳಲ್ಲಿ ಸಾಮಾನ್ಯ ಚಿಕಿತ್ಸೆಯಿಂದ ಗುಣಪಡಿಸಬಹುದು' ಎಂದು ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.

ಇಷ್ಟೇ ಅಲ್ಲ, 'ಜನರು ಮನೆಗಳನ್ನು ಬಿಟ್ಟು ಯಾವುದೇ ಕಾರಣಕ್ಕೂ ಹೊರಬರಬಾರದು. ಒಂದು ವೇಳೆ ಸೋಂಕು ತಗುಲಿದ ಅನುಮಾನ ಬಂದರೆ ಆಸ್ಪತ್ರೆಗಳಿಗೆ ಹೋಗುವ ಬದಲು ತಮ್ಮಷ್ಟಕ್ಕೆ ತಾವೇ ಲಕ್ಷಣಗಳನ್ನು ಗಮನಿಸಿಕೊಳ್ಳಬೇಕು' ಎಂದೂ ಇಮ್ರಾನ್ ಸಲಹೆ ನೀಡಿದ್ದರು.

ಯಾವಾಗ ಪರಿಸ್ಥಿತಿ ಬಿಗಡಾಯಿಸಿ ಸೋಂಕು ಪ್ರಕರಣಗಳು 2 ಲಕ್ಷ ದಾಟಿ, ಸಾವಿನ ಸಂಖ್ಯೆ 5568 ಮೀರಿತೋ, ಇಮ್ರಾನ್ ಸಾಹೇಬರು ಉಲ್ಟಾಹೊಡೆದರು. 'ಪರಿಸ್ಥಿತಿಯ ಗಾಂಭೀರ್ಯವನ್ನೇ ಜನರು ಅರ್ಥ ಮಾಡಿಕೊಳ್ತಿಲ್ಲ. ವೈರಸ್‌ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಲ್ಲ. ಅವರು ಇದನ್ನೊಂದು ಸಾಮಾನ್ಯ ಜ್ವರ ಅಂದುಕೊಂಡುಬಿಟ್ಟಿದ್ದಾರೆ' ಎಂದು ಇಮ್ರಾನ್ ಸಾಹೇಬರು ಜನರ ಅಜ್ಞಾನವನ್ನು ಎತ್ತಿ ಆಡಿದ್ದರು.

ಕೋವಿಡ್ ಅಂದ್ರೆ ದುಷ್ಟಶಕ್ತಿ: ಪಾಂಬೆ ಮಗುಫುಲಿ

'ಜನರು ಭಕ್ತಿಯಿಂದ ದೇವರಲ್ಲಿ ಪ್ರಾರ್ಥನೆ ಮಾಡಿದ ಕಾರಣ ದೇಶವು ಕೋವಿಡ್-19 ಮುಕ್ತವಾಗಿದೆ' ಎಂದು ಜೂನ್ ತಿಂಗಳಲ್ಲಿ ಧೈರ್ಯವಾಗಿ ಘೋಷಿಸಿಕೊಂಡವರು ತಾಂಜೇನಿಯಾದ ಅಧ್ಯಕ್ಷ ಪಾಂಬೆ ಮಗುಫುಲಿ. ಕೊರೊನಾ ಪಿಡುವ ವ್ಯಾಪಿಸುತ್ತಿದ್ದಾಗಲೂ ಮಗುಫುಲಿ ಪ್ರಾರ್ಥನಾ ಸ್ಥಳಗಳನ್ನು ಮುಚ್ಚಲು ಆದೇಶಿಸಿರಲಿಲ್ಲ. 'ದೇವರ ಪ್ರಭಾವವಿರುವ ಸ್ಥಳದಲ್ಲಿ ಕೊರೊನಾದಂಥ ಸೇಟನ್ (ದುಷ್ಟ) ಶಕ್ತಿಗೆ ಅವಕಾಶ ಇರುವುದಿಲ್ಲ' ಎಂಬುದು ಅವರ ವಿಶ್ವಾಸವಾಗಿತ್ತು.

'ದೇಶದಲ್ಲಿ ಕೊರೊನಾ ಕಾಣಿಸಿಕೊಂಡಿದ್ದು ಒಂದು ಥರ ಒಳ್ಳೇದೇ ಆಯ್ತು. ಜನರು ಚರ್ಚ್ ಮತ್ತು ಮಸೀದಿಗಳಲ್ಲಿ ಮತ್ತೆ ನಂಬಿಕೆ ಇಡುತ್ತಿದ್ದಾರೆ. ಪ್ರಾರ್ಥನೆಯು ಈ ವೈರಸ್‌ ಪಿಡುಗನ್ನು ಹೊಡೆದೋಡಿಸಬಲ್ಲದು' ಎಂದು ಮಗುಫುಲಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯ ಬೆನ್ನಿಗೇ ವಿಶ್ವ ಆರೋಗ್ಯ ಸಂಸ್ಥೆಯು ತಾಂಜೇನಿಯಾದ ಕೊರೊನಾ ನಿರ್ವಹಣೆಯ ಲೋಪಗಳನ್ನು ಎತ್ತಿತೋರಿಸಿತ್ತು.

ಕೊರೊನಾಗೆ ಯೋಗ ಪರಿಹಾರ: ಯೋಗಿ ಆದಿತ್ಯನಾಥ್

ಹೃಷೀಕೇಶದಲ್ಲಿ ಈಚೆಗೆ ನಡೆದಿದ್ದ ಅಂತರರಾಷ್ಟ್ರೀಯ ಯೋಗ ಉತ್ಸವ ಉದ್ಘಾಟಿಸಿದ್ದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, 'ಯೋಗದ ನಿಯಮಿತ ಅಭ್ಯಾಸದಿಂದ ಕೊರೊನಾವೈರಸ್ ಸೋಂಕು ಸೇರಿದಂತೆ ಹಲವು ಕಾಯಿಲೆಗಳನ್ನು ದೂರ ಇಡಬಹುದು' ಎಂದು ಅಭಿಪ್ರಾಯಪಟ್ಟಿದ್ದರು.

'ಇಂದು ಜಗತ್ತು ದೈಹಿಕ ಮತ್ತು ಮಾನಸಿಕ ಕಾಯಿಲೆಗಳ ವಿರುದ್ಧ ಹೋರಾಡುತ್ತಿದೆ. ಯೋಗದ ಮೂಲಕ ರಕ್ತದ ಒತ್ತಡ, ಹೃದಯಸ್ತಂಭನ, ಕಿಡ್ನಿ ವೈಫಲ್ಯ, ಪಿತ್ತಜನಕಾಂಗದ ಸಮಸ್ಯೆಗಳು ಅಷ್ಟೇಕೆ, ಕೊರೊನಾ ವೈರಸ್‌ ಸಮಸ್ಯೆಯನ್ನೂ ನಿರ್ವಹಿಸಬಹುದು' ಎಂದು ಆದಿತ್ಯನಾಥ್ ಹೇಳಿಕೆ ನೀಡಿದ್ದರು.

ಬಡವರಿಗೆ ಕೊರೊನಾ ಬರಲ್ಲ: ಬರ್ಬೊಸಾ ಹ್ಯುರ್ಟಾ

'ಬಡವರಿಗೆ ಕೊರೊನಾ ಬರಲ್ಲ' ಎಂದು ಮೆಕ್ಸಿಕೊದ ಪ್ಯುಬ್ಲಾ ಪ್ರಾಂತ್ಯದ ರಾಜ್ಯಪಾಲ ಲ್ಯುಯಿಸ್ ಮಿಗ್ಯುಲ್ ಬರ್ಬೊಸಾ ಹ್ಯುರ್ಟಾ ಹೇಳಿದ್ದು ಸಹ ಒಮ್ಮೆ ಸುದ್ದಿಯಾಗಿತ್ತು. 'ನೀವು ಶ್ರೀಮಂತರಾಗಿದ್ದರೆ ನಿಮಗೆ ಅಪಾಯ ಹೆಚ್ಚು, ನೀವು ಬಡವರಾಗಿದ್ದರೆ ಸಮಸ್ಯೆಯೇ ಇಲ್ಲ. ಬಡವರಿಗೆ ಕೊರೊನಾ ಬರಲ್ಲ' ಎಂದು ಬರ್ಬೊಸಾ ಹೇಳಿದ್ದರು. ಇನ್ನೊಂದು ಸಂದರ್ಭದಲ್ಲಿ 'ಟರ್ಕಿ ಕೋಳಿಯ ಮಾಂಸ ಕೊರೊನಾ ಸೋಂಕಿಗೆ ದಿವ್ಯೌಷಧಿ' ಎಂದೂ ಅಪ್ಪಣೆ ಕೊಡಿಸಿದ್ದರು.

ಸೆಗಣಿ, ಗಂಜಲವೇ ಮದ್ದು: ಸುಮನ್ ಹರಿಪ್ರಿಯ

'ಸೆಗಣಿ ಮತ್ತು ಗಂಜಲದಿಂದ ಕೊರೊನಾ ವೈರಸ್ ಸೋಂಕು ಗುಣವಾಗುತ್ತದೆ' ಎಂದು ಅಸ್ಸಾಂನ ಬಿಜೆಪಿ ಶಾಸಕಿ ಸುಮನ್ ಹರಿಪ್ರಿಯಾ ಹೇಳಿಕೆ ನೀಡಿದ್ದರು. 'ಸೆಗಣಿ ಮತ್ತು ಗಂಜಲಗಳಿಗೆ ಕ್ಯಾನ್ಸರ್‌ ಕಾಯಿಲೆಯನ್ನೂ ಗುಣಪಡಿಸುವ ಸಾಮರ್ಥ್ಯವಿದೆ' ಎಂದು ಅವರು ಹೇಳಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು