ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಕಾರ್ಮಿಕರ ಸಮಸ್ಯೆ; ಮಾಹಿತಿ ಕೋರಿದ ಸುಪ್ರೀಂ

Last Updated 31 ಜುಲೈ 2020, 21:31 IST
ಅಕ್ಷರ ಗಾತ್ರ

ನವದೆಹಲಿ: ಲಾಕ್‌ಡೌನ್‌ ಅವಧಿಯಲ್ಲಿ ಸ್ವಗ್ರಾಮಗಳಿಗೆ ಹಿಂದಿರುಗಿದ ವಲಸೆ ಕಾರ್ಮಿಕರಿಗೆ ಯಾವ ರೀತಿಯ ಉದ್ಯೋಗ ನೀಡಲಾಗಿದೆ ಎಂಬ ಬಗ್ಗೆ ಮೂರು ವಾರಗಳ ಒಳಗಾಗಿ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ತಾಕೀತು ಮಾಡಿದೆ.

ಕೋವಿಡ್‌–19 ತಡೆಗಾಗಿ ಹೇರಿದ್ದ ಲಾಕ್‌ಡೌನ್‌ನಿಂದಾಗಿ ಸಾವಿರಾರು ಸಂಖ್ಯೆಯ ವಲಸೆ ಕಾರ್ಮಿಕರು ಮುಂಬೈ, ದೆಹಲಿ ಮತ್ತು ಇತರ ಮಹಾನಗರಗಳನ್ನು ತೊರೆದು ಏಪ್ರಿಲ್‌–ಮೇ ತಿಂಗಳಲ್ಲಿ ಸ್ವಗ್ರಾಮಗಳಿಗೆ ಮರಳಿದ್ದರು.

ಇಂಥ ವಲಸೆ ಕಾರ್ಮಿಕರ ನೋಂದಣಿ ಮಾಡಿಕೊಳ್ಳಲು ಮತ್ತು ಅವರ ಕೌಶಲವನ್ನು ಸ್ಥಳೀಯವಾಗಿ ಬಳಸಿಕೊಳ್ಳುವ ಬಗ್ಗೆ ಏನಾದರೂ ನಿರ್ದಿಷ್ಟ ಯೋಜನೆ ರೂಪಿಸಲಾಗಿದೆಯೇ ಎಂದು ನ್ಯಾಯಮೂರ್ತಿ ಅಶೋಕ್‌ ಭೂಷಣ್‌ ನೇತೃತ್ವದ ಮೂವರು ನ್ಯಾಯಮೂರ್ತಿಗಳ ನ್ಯಾಯಪೀಠ ಪ್ರಶ್ನಿಸಿದೆ.

ವಲಸೆ ಕಾರ್ಮಿಕರ ಬಗ್ಗೆ ಸಮಗ್ರ ಮಾಹಿತಿ ಸಲ್ಲಿಸುವಂತೆ ಜೂನ್‌ 9ರಂದು ನಿರ್ದೇಶನ ನೀಡಲಾಗಿತ್ತು. ಆದರೆ,ಈ ಬಗ್ಗೆ ಇದುವರೆಗೂ ಯಾವೊಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ನ್ಯಾಯಾಲಯಕ್ಕೆ ಮಾಹಿತಿ ಸಲ್ಲಿಸಿಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ವಲಸೆ ಕಾರ್ಮಿಕರ ಸಂಕಷ್ಟ ಮತ್ತು ಸಮಸ್ಯೆಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣ ಕೈಗೆತ್ತಿಕೊಂಡಿತ್ತು.

ಗ್ರಾಮಗಳಿಗೆ ಹಿಂದಿರುಗಿದ ಕಾರ್ಮಿಕರ ಕೌಶಲ ಮತ್ತು ಅನುಭವಕ್ಕೆ ಅನುಸಾರವಾಗಿ ಯಾವ ಉದ್ಯೋಗ ನೀಡಲಾಗಿದೆ ಎಂಬ ಮಾಹಿತಿಯನ್ನು ದಾಖಲೆ ಸಮೇತ ಸಲ್ಲಿಸುವಂತೆ ಸೂಚಿಸಿದೆ.

ಮಹಾರಾಷ್ಟ್ರ ಮತ್ತು ಬಿಹಾರ ಸರ್ಕಾರಗಳುಇದೇ ವೇಳೆ, ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಅಡಿ ಕಾರ್ಮಿಕರಿಗೆ ಒದಗಿಸಿದ ಉದ್ಯೋಗ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿದವು.

ಕಾರ್ಮಿಕರ ಆಹಾರ ಭದ್ರತೆ, ಆರೋಗ್ಯ ವಿಮೆ ಹಾಗೂ ನೋಂದಣಿಗೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳ ಬಗ್ಗೆ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಕೋರ್ಟ್‌ ಗಮನ ಸೆಳೆದರು. ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಿದ ನಂತರವಷ್ಟೇ (ನಾಲ್ಕು ವಾರದ ನಂತರ)ಈ ಎಲ್ಲ ಸಮಸ್ಯೆಗಳನ್ನು ಆಲಿಸುವುದಾಗಿ ಪೀಠವು ಸಿಂಘ್ವಿ ಅವರಿಗೆ ತಿಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT