ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕು | ಸಾವು 10 ಸಾವಿರ: ಜಗವೇ ತತ್ತರ

ಬ್ರಿಟನ್‌ನಲ್ಲಿರುವ ಅತಂತ್ರ ಭಾರತೀಯರಿಗೆ ನೆರವು l ಇಟಲಿಯಲ್ಲಿ ಒಂದೇ ದಿನ 627 ಮಂದಿ ಸಾವು
Last Updated 20 ಮಾರ್ಚ್ 2020, 20:30 IST
ಅಕ್ಷರ ಗಾತ್ರ
ADVERTISEMENT
""
""

ಲಂಡನ್‌/ರೋಮ್‌: ಕೊರೊನಾ ಸೋಂಕು ಜಾಗತಿಕವಾಗಿ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ವಿಶ್ವದಾದ್ಯಂತ ‘ಕೋವಿಡ್‌–19’ಗೆ ಬಲಿಯಾದವರ ಸಂಖ್ಯೆ ಶುಕ್ರವಾರ 11,113ಕ್ಕೆ ಏರಿದೆ. 2,63,071 ಜನರು ಸೋಂಕುಪೀಡಿತರಾಗಿದ್ದಾರೆ.

ಇಟಲಿಯಲ್ಲಿ ಶುಕ್ರವಾರ 627 ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ 4,032ಕ್ಕೆ ಏರಿಕೆಯಾಗಿದೆ. ಸೋಂಕಿತರ ಸಂಖ್ಯೆ 47,021 ಕ್ಕೇರಿದೆ.

ಸೋಂಕು ಮೊದಲು ಪತ್ತೆಯಾದ ಚೀನಾಕ್ಕಿಂತಲೂಮೃತರ ಸಂಖ್ಯೆ ಇಟಲಿಯಲ್ಲಿ ಹೆಚ್ಚಾಗಿದೆ. ಇರಾನ್‌, ಇಟಲಿ, ಸ್ಪೇನ್‌ನಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಚೀನಾದಲ್ಲಿ 3,133 ಜನರು ಸತ್ತಿದ್ದರೆ, ಇಟಲಿಯಲ್ಲಿ 4,032 ಜನರು ಪ್ರಾಣ ತೆತ್ತಿದ್ದಾರೆ.

ಭಾರತೀಯರಿಗೆ ನೆರವು: ಅಂತರರಾಷ್ಟ್ರೀಯ ವಿಮಾನಯಾನದ ಮೇಲೆ ವಿಧಿಸಲಾಗಿರುವ ನಿರ್ಬಂಧದ ಪರಿಣಾಮ ಬ್ರಿಟನ್‌ನಲ್ಲಿ ಸಿಲುಕಿರುವ ಭಾರತೀಯರಿಗೆ ಅಲ್ಲಿನ ರಾಯಭಾರ ಕಚೇರಿಯು ವಸತಿ ಸೇರಿದಂತೆ ಅಗತ್ಯವಿರುವ ನೆರವು ಕಲ್ಪಿಸಲಾಗಿದೆ.

ಬ್ರಿಟನ್‌ ಮತ್ತು ಯುರೋಪ್ ರಾಷ್ಟ್ರಗಳಿಂದ ಬರುವವರಿಗೆ ಭಾರತ ಮಾರ್ಚ್‌ 31ರವರೆಗೆ ನಿಷೇಧ ವಿಧಿಸಿರುವುದರಿಂದ ಹಲವು ಭಾರತೀಯರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ. ರಾಯಭಾರ ಕಚೇರಿಯು ಭಾರತದ ಪಾಸ್‌ಪೋರ್ಟ್‌ವುಳ್ಳರಿಗೆ ಇ-ಮೇಲ್‌ ಮೂಲಕ ಬೆಳವಣಿಗೆಗಳ ಬಗ್ಗೆನಿರಂತರವಾಗಿ ಮಾಹಿತಿ ಒದಗಿಸುತ್ತಿದೆ.

ಸದ್ಯ ಭಾರತಕ್ಕೆ ತೆರಳಲು ಸಾಧ್ಯವಿಲ್ಲದ ಕಾರಣ ವೀಸಾ ಅವಧಿ ಮುಕ್ತಾಯವಾಗಿರುವವರಿಗೆ ಬ್ರಿಟನ್‌ನಲ್ಲಿ ಇರಲು ಅವಕಾಶ ಕಲ್ಪಿಸುವಂತೆ ಸ್ಥಳೀಯ ಅಧಿಕಾರಿಗಳ ಜತೆಗೂ ಭಾರತೀಯ ರಾಯಭಾರ ಕಚೇರಿ ಮಾತುಕತೆ ನಡೆಸುತ್ತಿದೆ.

‘ಭಾರತಕ್ಕೆ ಹಿಂತಿರುಗಲು ಸಿದ್ಧನಾಗಿದ್ದೆ. ಆದರೆ, ಬುಧವಾರದಿಂದ ನಿಷೇಧ ಹೇರಲಾಯಿತು. ಉದ್ಯೋಗ ಇಲ್ಲದೆ ಇಲ್ಲಿ ನಾವು ಹೇಗೆ ಬದುಕುವುದು’ ಎಂದು ಗ್ರಾಫಿಕ್‌ ವಿನ್ಯಾಸಕರೊಬ್ಬರು ಪ್ರಶ್ನಿಸಿದರು. ‘ಇದು ಸಂಕಷ್ಟದ ಪರಿಸ್ಥಿತಿ ಎನ್ನುವುದು ನಮಗೂ ಗೊತ್ತು. ಚೀನಾದವರಿಗೆ ಸಹಜವಾಗಿಯೇ ವೀಸಾ ವಿಸ್ತರಣೆ ದೊರೆಯಿತು. ಆದರೆ, ನಮಗೆ ದೊರೆತಿಲ್ಲ’ ಎಂದು ಉದ್ಯಮದ ವಿಶ್ಲೇಷಕರೊಬ್ಬರು ಹೇಳಿದರು.

ಮಾರ್ಚ್‌ 31ರ ನಂತರ ಭಾರತಕ್ಕೆ ತೆರಳಲು ಅವಕಾಶ ದೊರೆಯಲಿಯದೆಯೇ ಎನ್ನುವುದು ಇನ್ನೂ ಖಚಿತವಾಗಿಲ್ಲ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ನಿಷೇಧ ವಿಸ್ತರಣೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡಲು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿಗಳ ಸಂಘಟನೆ (ಐಎನ್‌ಎಸ್‌ಎ) ಮುಂದಾಗಿದೆ. ಆರೋಗ್ಯ, ವಸತಿ ಮತ್ತು ಪ್ರವಾಸದ ಬಗ್ಗೆ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ ಎಂದು ಸಂಘಟನೆ ತಿಳಿಸಿದೆ.

ಸ್ವಚ್ಛತೆ ಜಾಗೃತಿಗೆ ಗೂಗಲ್ ಡೂಡಲ್

ಕೊರೊನಾ ಸೋಂಕು ತಡೆ ನಿಟ್ಟಿನಲ್ಲಿ ಕೈಗಳನ್ನು ಸ್ವಚ್ಛವಾಗಿ ಇಡುವ ಕುರಿತು ಜಾಗೃತಿ ಮೂಡಿಸಲು ಗೂಗಲ್‌ ಜಾಲತಾಣ ವಿಭಿನ್ನವಾಗಿ ಡೂಡಲ್‌ ರೂಪಿಸಿದೆ.

ಪ್ರಸವ ಸಂದರ್ಭದಲ್ಲಿ ತಾಯಿ ಸಾವಿನ ಪ್ರಮಾಣ ಕುಗ್ಗಿಸಲು ಕೈಗಳನ್ನು ಶುಚಿಯಾಗಿಡುವುದು ಅಗತ್ಯ ಎಂಬುದನ್ನು ಮೊದಲಿಗೆ ತಿಳಿಸಿದ ಜರ್ಮನ್‌–ಹಂಗರಿಯ ದೈಹಿಕ ಆರೋಗ್ಯ ತಜ್ಞ ಇಗ್ನಾಜ್‌ ಸೆಮೆಲ್‌ವೀಸ್‌ ಅವರನ್ನು ಸ್ಮರಿಸಿದೆ.

ಕೈಗಳನ್ನು ಶುಚಿಯಾಗಿಡುವ ಅನುಕೂಲಗಳನ್ನು ಅವರು ಮೊದಲಿಗೆ ಪ್ರತಿಪಾದಿಸಿದ್ದರು. ಅವರ ನೆನಪಿನಲ್ಲಿ, ಕೊರೊನಾ ಜಾಗೃತಿಗೆ ಪೂರಕವಾಗಿ ಕೈತೊಳೆಯುವ ಕ್ರಮದ 6 ಹಂತಗಳ ಅನಿಮೇಷನ್ ಆಧರಿತ ಡೂಡಲ್‌ ಪರಿಚಯಿಸಿದೆ.

ವೈದ್ಯ ಇಗ್ನಾಜ್‌ ಸೆಮೆಲ್‌ವೀಸ್‌ ಅವರು 1818ರ ಜುಲೈ1ರಂದು ಜನಿಸಿದ್ದು, 1865ರ ಆ.13ರಂದು ನಿಧನರಾದರು ವೈದ್ಯಕೀಯ ಕ್ಷೇತ್ರದಲ್ಲಿ ಇವರನ್ನು ‘ಸೋಂಕು ನಿಯಂತ್ರಣ ಪಿತಾಮಹ’ ಎಂದೂ ಗುರುತಿಸಲಾಗುತ್ತದೆ. ಆದರೆ, ಅವರ ಕಾಲಾನಂತರವಷ್ಟೇ, ರೋಗ ಸಾಂಕ್ರಾಮಿಕವಾಗಲು ಸೂಕ್ಷ್ಮಾಣುಜೀವಿಗಳು ಕಾರಣ ಎಂಬುದು ಹೆಚ್ಚು ಮನದಟ್ಟಾಯಿತು.

ದಿನದ ಬೆಳವಣಿಗೆ

*ಇರಾನ್‌ನಲ್ಲಿ ಮತ್ತೆ 149 ಸಾವು, ಮೃತರ ಸಂಖ್ಯೆ 1,433ಕ್ಕೆ ಏರಿಕೆ

*ಹಬ್ಬಿದ ವೈರಸ್ ಭೀತಿ: ಶ್ರೀಲಂಕಾದಲ್ಲಿ ಶುಕ್ರವಾರ ಸಂಜೆ 6 ಗಂಟೆಯಿಂದ ಸೋಮವಾರ ಬೆಳಿಗ್ಗೆ 6ಗಂಟೆವರೆಗೆ ಕರ್ಫ್ಯೂ ಜಾರಿ. ಏ.25ರಂದು ನಡೆಯಬೇಕಿದ್ದ ಸಂಸತ್‌ ಚುನಾವಣೆಯನ್ನು ಮುಂದೂಡಲಾಗಿದೆ

*ಕ್ಯಾಲಿಫೋರ್ನಿಯಾದಲ್ಲಿ ಸಂಪೂರ್ಣ ನಿರ್ಬಂಧ. ಫ್ರಾನ್ಸ್‌ ಮತ್ತು ಅರ್ಜೆಂಟೀನಾದಲ್ಲೂ ಮಾರ್ಚ್‌ 31ರವರೆಗೆ ನಿರ್ಬಂಧ

*ಆಸ್ಟ್ರೇಲಿಯಾದಲ್ಲಿ 81 ವರ್ಷದ ಮಹಿಳೆ ಸಾವು, ಗಡಿಗಳನ್ನು ಮುಚ್ಚಲು ಆದೇಶಿಸಿದ ಪ್ರಧಾನಿ ಸ್ಕಾಟ್‌ ಮಾರಿಸನ್‌

*ಅಮೆರಿಕದಲ್ಲಿ ಜೂನ್‌ನಲ್ಲಿ ನಡೆಯಬೇಕಿದ್ದ ಜಿ7 ಶೃಂಗಸಭೆ ರದ್ದು. ವಿಡಿಯೊ ಕಾನ್ಫರೆನ್ಸ್‌ ಚರ್ಚೆಗೆ ಡೊನಾಲ್ಡ್‌ ಟ್ರಂಪ್‌ ನಿರ್ಧಾರ

*ವಿದೇಶಿ ಹಡಗುಗಳಿಗೆ ಬಂದರುಗಳನ್ನು ಏಪ್ರಿಲ್‌ 3ರವರೆಗೆ ಮುಚ್ಚಿದ ಇಟಲಿ

*ಸಿಂಗಪುರದಲ್ಲಿ 40 ಹೊಸ ಪ್ರಕರಣ, ಪೀಡಿತರ ಸಂಖ್ಯೆ 385ಕ್ಕೆ ಏರಿಕೆ

*ಪಾಕಿಸ್ತಾನದಲ್ಲಿ ಮತ್ತೊಂದು ಸಾವು, ಮೃತರ ಸಂಖ್ಯೆ 3ಕ್ಕೆ ಏರಿಕೆ. 464 ಜನರಿಗೆ ಸೋಂಕು

* ಬೆಲ್ಜಿಯಂನಲ್ಲಿ 2,257 ಜನರಿಗೆ ಸೋಂಕು. ಮೃತರ ಸಂಖ್ಯೆ 32ಕ್ಕೆ ಏರಿಕೆ. ಶುಕ್ರವಾರವೇ 462 ಪ್ರಕರಣ ದೃಢ

ಚೀನಾಗೆ ತೆರಳುವವರಿಗೆ ಸಲಹೆ

ಚೀನಾಗೆ ಬರುವವರು ಕಡ್ಡಾಯವಾಗಿ ಆರೋಗ್ಯ ಕಾರ್ಡ್‌ ಹೊಂದಿರಬೇಕು ಮತ್ತು ಎಲ್ಲ ರೀತಿಯ ತಪಾಸಣೆಗೆ ಒಳಗಾಗಬೇಕು ಎಂದು ಬೀಜಿಂಗ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಚೀನಾಗೆ ಅಗತ್ಯವಿದ್ದರೆ ಮಾತ್ರ ಪ್ರವಾಸ ಕೈಗೊಳ್ಳಬೇಕು. ಸ್ಥಳೀಯ ಅಧಿಕಾರಿಗಳು ಸೂಚಿಸಿದಂತೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಹೊಂದಿರಬೇಕು ಎಂದು ತಿಳಿಸಿದೆ.

ಅಮೆರಿಕ–ಚೀನಾ ವಾಗ್ವಾದ

ಬೀಜಿಂಗ್‌: ಕೊರೊನಾ ಸೋಂಕು ಬಗ್ಗೆ ಅಮೆರಿಕ ಮತ್ತು ಚೀನಾ ನಡುವೆ ವಾಗ್ವಾದ ಮುಂದುವರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಪಾರದರ್ಶಕತೆ ಕಾಯ್ದುಕೊಳ್ಳದ ಚೀನಾದ ವೈಫಲ್ಯಕ್ಕೆ ಜಗತ್ತು ಬೆಲೆ ತೆರುತ್ತಿದೆ’ ಎಂದು ಟೀಕಿಸಿದ್ದರು. ಪ್ರತಿಯಾಗಿ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಜೆಂಗ್‌ ಶುಅಂಗ್‌ ಅವರು, ‘ಸೋಂಕು ವಿರುದ್ಧದ ಚೀನಾ ಹೋರಾಟವನ್ನು ಟೀಕಿಸುವ ಮೂಲಕ ಅಮೆರಿಕದ ಕೆಲವರು ಚೀನಾ ಮೇಲೆ ಆರೋಪ ಹೊರಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT