ಸೋಮವಾರ, ಜನವರಿ 20, 2020
27 °C
ಇಸ್ಲಾಮಿಕ್ ಸ್ಟೇಟ್ ಉಗ್ರರ ಜತೆ ನಂಟು ಹೊಂದಿರುವ ಬಂಡುಕೋರರು

ಕಾಂಗೊ ಬಂಡುಕೋರರ ಪೈಶಾಚಿಕ ಕೃತ್ಯ: ಮನೆಮನೆಗೆ ನುಗ್ಗಿ ಗುಂಡಿಕ್ಕಿ 43 ಜನರ ಹತ್ಯೆ

ಎಪಿ Updated:

ಅಕ್ಷರ ಗಾತ್ರ : | |

ಕಿನ್ಶಾಸ (ಕಾಂಗೊ): ಇಸ್ಲಾಮಿಕ್ ಸ್ಟೇಟ್ ಉಗ್ರರ ಜತೆ ನಂಟು ಹೊಂದಿರುವ ಬಂಡುಕೋರರು ಪೂರ್ವ ಕಾಂಗೊದಲ್ಲಿ ಕಳೆದ ವಾರಾಂತ್ಯದಲ್ಲಿ 43 ಜನರ ಹತ್ಯೆ ಮಾಡಿದ್ದಾರೆ.

ಅಲೈಡ್ ಡೆಮಾಕ್ರಟಿಕ್ ಫೋರ್ಸಸ್ (ಎಡಿಎಫ್) ಬಂಡುಕೋರರು ಮನೆಮನೆಗೆ ನುಗ್ಗಿ ಜನರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಕಾಂಗೊದ ಮಾನವ ಹಕ್ಕು ಸಂಘಟನೆ ತಿಳಿಸಿದೆ. ಸೇನಾ ಕಾರ್ಯಾಚರಣೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ ಎನ್ನಲಾಗಿದೆ.

ಜನರನ್ನು ಸೇನೆಯ ವಿರುದ್ಧ ಎತ್ತಿಕಟ್ಟಲು ಬಂಡುಕೋರರು ಯತ್ನಿಸುತ್ತಿದ್ದಾರೆ. ಹೀಗಾಗಿ ಸೇನಾ ಕಾರ್ಯಾಚರಣೆ ನಿಲ್ಲಿಸುವಂತೆ ಜನರು ಆಗ್ರಹಿಸುತ್ತಿದ್ದಾರೆ ಎಂದು ಮಾನವ ಹಕ್ಕು ಸಂಘಟನೆಯ ಅಧ್ಯಕ್ಷ ಒಮರ್ ಕವೊಥಾ ಹೇಳಿದ್ದಾರೆ. ಈ ಪ್ರದೇಶದಲ್ಲಿನ ಅಭದ್ರತೆಯು ಜನರನ್ನು ಹಿಂಸಾತ್ಮ ಪ್ರತಿಭಟನೆಗೆ ಪ್ರಚೋದಿಸುತ್ತಿದೆ ಎಂದೂ ಅವರು ಹೇಳಿದ್ದಾರೆ.

ಕಳೆದ ಶುಕ್ರವಾರ ಬೇನಿ ನಗರದ ಮನೆಗಳಿಗೆ ನುಗ್ಗಿದ್ದ ಬಂಡುಕೋರರು ಆರು ಮಂದಿಯನ್ನು ಹತ್ಯೆ ಮಾಡಿದ್ದರು. ಭಾನುವಾರ ಕಮಂಗೊದಲ್ಲಿಯೂ ಇದೇ ಕೃತ್ಯ ಎಸಗಿದ್ದರು ಎಂದು ಮಾನವ ಹಕ್ಕು ಸಂಘಟನೆ ಹೇಳಿದೆ.

ಪೂರ್ವ ಕಾಂಗೊದಲ್ಲಿ ಅಪಾಯಕಾರಿ ಎಬೊಲಾ ಸೋಂಕು ತಗುಲಿ 2018ರ ಆಗಸ್ಟ್‌ನಿಂದ ಈವರೆಗೆ 2,200ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಇದೀಗ ಬಂಡುಕೋರರ ದಾಳಿಯಿಂದಾಗಿ ಎಬೊಲಾ ನಿಯಂತ್ರಣಕ್ಕಾಗಿ ಕಾರ್ಯಾಚರಿಸುವ ತಂಡಗಳಿಗೂ ಹಿನ್ನಡೆಯಾಗಿದೆ ಎಂದು ಪೂರ್ವ ಕಾಂಗೊದ ಬೇನಿ ನಗರ ಪ್ರದೇಶದಲ್ಲಿ ಎಬೊಲಾ ನಿಯಂತ್ರಣ ತಂಡಗಳ ಸಂಚಾಲಕ ಡಾ. ಪಿಯರೆ ಸೆಲೆಸ್ಟಿನ್ ಅದಿಕಿ ತಿಳಿಸಿದ್ದಾರೆ.

ಅಭದ್ರತೆಯ ಪರಿಸ್ಥಿತಿಯ ಲಾಭ ಬಳಸಿಕೊಂಡು ಮೈ ಮಾಯ್ ಬಂಡುಕೋರರೂ ದಾಳಿ ನಡೆಸುತ್ತಿದ್ದಾರೆ ಎಂದೂ ಅವರು ಹೇಳಿದ್ದಾರೆ.

ಪೂರ್ವ ಕಾಂಗೊದಾದ್ಯಂತ ಸಶಸ್ತ್ರ ಪಡೆಗಳು ನಿಯೋಜನೆಯಾಗಿರುವುದರಿಂದ ಇತಿಹಾಸದಲ್ಲೇ ಅತ್ಯಂತ ಮಾರಕ ಎಬೊಲಾ ವೈರಸ್‌ ನಿಯಂತ್ರಿಸುವ ವೈದ್ಯಕೀಯ ಪ್ರಯತ್ನಗಳಿಗೂ ಅಡಚಣೆಯಾಗುತ್ತಿದೆ.

ಉಗಾಂಡ ಮೂಲದ ಎಡಿಎಫ್‌ ಈಗ ಪೂರ್ವ ಕಾಂಗೊದಲ್ಲಿ ಸಮಸ್ಯೆಗೆ ಕಾರಣವಾಗಿದೆ. ಇತ್ತೀಚೆಗೆ ಎಡಿಎಫ್‌ ಬಂಡುಕೋರರು ನಡೆಸಿದ್ದ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆ ಹೊತ್ತುಕೊಂಡಿತ್ತು. ಇದರಿಂದ ಇಸ್ಲಾಮಿಕ್ ಸ್ಟೇಟ್ ಜತೆಗೆ ಎಡಿಎಫ್‌ ನಂಟು ಹೊಂದಿರುವುದು ಬಯಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು