ಮಂಗಳವಾರ, ಮೇ 26, 2020
27 °C

ತಾಲಿಬಾನ್‌ ಮೇಲೆ ವಾಯು ದಾಳಿ ಮಾಡಿದ ಅಮೆರಿಕ: ಶಾಂತಿ ಒಪ್ಪಂದದ ಮಧ್ಯೆಯೇ ಘರ್ಷಣೆ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಕಾಬೂಲ್‌: ಅಮೆರಿಕ ಮತ್ತು ತಾಲಿಬಾನ್‌ ನಡುವಿನ ದೀರ್ಘಕಾಲದ ಕದನ ಐತಿಹಾಸಿಕ ಶಾಂತಿ ಒಪ್ಪಂದದ ಮೂಲಕ  ಕೊನೆಯಾಗಬಹುದು ಎಂಬ ಲೆಕ್ಕಚಾರ ಹುಸಿಯಾಗುವ ಲಕ್ಷಣಗಳು ಕಾಣುತ್ತಿವೆ. 

ಅಮೆರಿಕ ಹಾಗೂ ತಾಲಿಬಾನ್‌ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ತಾಲಿಬಾನ್‌ ಬಂಡುಕೋರರು ಅಫ್ಗಾನ್‌ ಸೇನೆಯ ನೆಲೆಗಳ ಮೇಲೆ ಮಂಗಳವಾರ ರಾತ್ರಿ ಸರಣಿ ದಾಳಿ ಮಾಡಿದ್ದಾರೆ. ದೇಶದಲ್ಲಿರುವ ಸೇನೆಯ 34 ನೆಲೆಗಳ ಪೈಕಿ 14ರ ಮೇಲೆ ತಾಲಿಬಾನ್‌ ದಾಳಿ ಮಾಡಿದೆ. ಇದಕ್ಕೆ ಉತ್ತರ ಎಂಬಂತೆ ಅಮೆರಿಕ ಕೂಡ ತಾಲಿಬಾನ್‌ ನೆಲೆಗಳ ಮೇಲೆ ವಾಯುದಾಳಿ ಮಾಡಿದೆ. 

‘ತಾಲಿಬಾನ್‌ ಜೊತೆಗಿನ ಒಪ್ಪಂದ ಷರತ್ತು ಬದ್ಧವಾದದ್ದು, ಈ ಒಪ್ಪಂದ ತಾಲಿಬಾನ್‌ ನಡವಳಿಕೆ ಮೇಲೆ ನಿರ್ಧಾರವಾಗಲಿದೆ’ ಎಂದು ಅಮೆರಿಕ ಒಪ್ಪಂದದ ವೇಳೆ ಹೇಳಿತ್ತು. ಇದರಂತೆ ಅಫ್ಗಾನ್‌ ಸೇನೆಯ ಮೇಲೆ ತಾಲಿಬಾನ್‌ ದಾಳಿ ಮಾಡಿದ್ದೇ ತಡ ಅಮೆರಿಕ ಇದಕ್ಕೆ ಪ್ರತಿಯಾಗಿ ತಾಲಿಬಾನ್‌ ಮೇಲೆ ವಾಯುದಾಳಿ ನಡೆಸಿದೆ.

‘ತಾಲಿಬಾನ್‌ನಿಂದ ಅಫ್ಗಾನ್‌ ಸೇನೆಯನ್ನು ರಕ್ಷಿಸುವ ಸಲುವಾಗಿ ಈ ದಾಳಿ ನಡೆದಿದೆ. ತಾಲಿಬಾನ್‌ನಿಂದಾಗಿ ಅಫ್ಗಾನಿಸ್ತಾನದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ’ ಎಂದು ‌ಸೇನೆಯ ವಕ್ತಾರರು ಹೇಳಿದ್ದಾರೆ. 

ತಾಲಿಬಾನ್‌ ಶಾಂತಿ ಒಪ್ಪಂದಕ್ಕೆ ಬದ್ಧವಾಗಿರಬೇಕು. ವಿನಾ ಕಾರಣ ಈ ರೀತಿ ದಾಳಿ ನಡೆಸಬಾರದು. ಅವಶ್ಯಕತೆ ಬಿದ್ದಲ್ಲಿ ನಮ್ಮ ಸ್ನೇಹಿತರ ಪರವಾಗಿ ನಾವು ನಿಲ್ಲುತ್ತೇವೆ. ಇದಕ್ಕೆ ಈ ವಾಯುದಾಳಿಯೇ ಮಾದರಿ. ತಾಲಿಬಾನ್‌ ಬಂಡುಕೋರರು 43 ಚೆಕ್‌ಪೋಸ್ಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ. ಅದರಲ್ಲಿ 20 ಮಂದಿ ಅಫ್ಗಾನ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆಯ ವಕ್ತಾರರು ಟ್ವೀಟ್‌ ಮಾಡಿದ್ದಾರೆ. 

ಒಪ್ಪಂದದಲ್ಲಿ ಏನಿದೆ?: 14 ತಿಂಗಳೊಳಗೆ ಅಫ್ಗಾನಿಸ್ತಾನದಿಂದ ಅಮೆರಿಕ ತನ್ನ ಸೇನೆಯನ್ನು ಹಿಂಪಡೆಯಬೇಕು. ಅಫ್ಗಾನಿಸ್ತಾನದ ವಿವಿಧ ಜೈಲುಗಳಲ್ಲಿರುವ 5000 ತಾಲಿಬಾನ್‌ ಉಗ್ರರು ಮತ್ತು ತಾಲಿಬಾನ್‌ ಬಂಧನದಲ್ಲಿರುವ 1,000 ಮಂದಿ ಅಫ್ಗಾನ್‌ ಸೈನಿಕರನ್ನು ಬಿಡುಗಡೆ ಮಾಡುವುದು. ಅಫ್ಗಾನ್‌ನಲ್ಲಿರುವ ಸಂಘರ್ಷಕ್ಕೆ ಅಂತ್ಯ ಹೇಳಿ, ಶಾಂತಿ ಸ್ಥಾಪನೆ ಸೇರಿ ಇತರ ಪ್ರಮುಖ ವಿಷಯಗಳು ಒಪ್ಪಂದದಲ್ಲಿವೆ.  

ಮಾತುಕತೆ ನಡೆಸಿದ ಟ್ರಂಪ್‌
ದಾಳಿಗೂ ಮೊದಲು ತಾಲಿಬಾನ್‌ ರಾಜಕೀಯ ಮುಖ್ಯಸ್ಥನ ಜೊತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ‘ಮಾತುಕತೆ ಪರಸ್ಪರ ಸಕಾರಾತ್ಮಕವಾಗಿತ್ತು ಎಂದು ಟ್ರಂಪ್‌ ಹೇಳಿದ್ದರು. ಆದರೆ, ಟ್ರಂಪ್‌  ಕರೆಯ ಬಳಿಕ ಅಫ್ಗಾನ್‌ ಸೇನೆಯ ಮೇಲೆ ತಾಲಿಬಾನ್‌ ಬಂಡುಕೋರರು ದಾಳಿ ನಡೆಸಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು