ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update| ವಿದೇಶದಿಂದ ಬಂದವರಿಂದ ಸೋಂಕು ಹೆಚ್ಚಳ: ನೇಪಾಳ ಆರೋಪ

Last Updated 21 ಜೂನ್ 2020, 17:57 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ ಪ್ರತಿದಿನ 1 ದಶಲಕ್ಷದಷ್ಟು ಜನರನ್ನು ಸೋಂಕು ತಪಾಸಣೆಗೊಳಪಡಿಸಲಾಗುತ್ತಿದೆ. ಕಳೆದ ವಾರದಿಂದ ಇಲ್ಲಿಯವರೆಗೆ ಸುಮಾರು 20 ದಶಲಕ್ಷ ಜನರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.ಎಂದು ರಾಯಿಟರ್ಸ್ ವರದಿ ಮಾಡಿದೆ. ಭಾನುವಾರ 32 ಹೊಸ ಪ್ರಕರಣಗಳು ಇಲ್ಲಿ ಪತ್ತೆಯಾಗಿವೆ.

ನೇಪಾಳದಲ್ಲಿ 421 ಹೊಸ ಪ್ರಕರಣಗಳು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 9,026ಕ್ಕೇರಿದೆ, 77 ಜಿಲ್ಲೆಗಳಲ್ಲಿ ಈ ಸೋಂಕು ಹರಡಿದ್ದು ತಾಯ್ನಾಡಿಗೆ ಮರಳಿ ಬಂದಿರುವ ವಲಸೆ ಕಾರ್ಮಿಕರಿಂದಾಗಿ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿದೆ. ಶೇ.90 ರಷ್ಟು ಪ್ರಕರಣಗಳು ವಿದೇಶದಿಂದ ಬಂದವರಾಗಿದ್ದಾರೆ.ಭಾರತದಿಂದ ಬಂದಿರುವ ಜನರಲ್ಲೇ ಹೆಚ್ಚು ಸೋಂಕು ಪತ್ತೆಯಾಗಿದೆ ನೇಪಾಳ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇರಾನ್‌ನಲ್ಲಿ ಭಾನುವಾರ 100ಕ್ಕಿಂತಲೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, ಪ್ರಕರಣಗಳ ಸಂಖ್ಯೆ 9,623ಕ್ಕೇರಿದೆ.

ಜಾನ್ಸ್ ಹಾಪ್ಕಿನ್ಸ್ ಕೊರೊನಾವೈರಸ್ ರಿಸೋರ್ಸ್ ಸೆಂಟರ್ ಪ್ರಕಾರ ಜಗತ್ತಿನಾದ್ಯಂತ 465284 ಮಂದಿ ಕೋವಿಡ್ ರೋಗದಿಂದ ಸಾವಿಗೀಡಾಗಿದ್ದಾರೆ, ಅಮೆರಿಕದಲ್ಲಿ 119796, ಬ್ರೆಜಿಲ್ -49,976 ಮತ್ತು ಬ್ರಿಟನ್‌ನಲ್ಲಿ 42,717 ಮಂದಿ ಸಾವಿಗೀಡಾಗಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 8845095 ಆಗಿದ್ದು ಅಮೆರಿದಲ್ಲಿ 2264168, ಬ್ರೆಜಿಲ್ -1032913, ರಷ್ಯಾ-583879 ಮಂದಿ ಸೋಂಕಿತರಿದ್ದಾರೆ.

ಲ್ಯಾಟಿನ್ ಅಮೆರಿಕ ರಾಷ್ಟ್ರ ಬ್ರೆಜಿಲ್‌ನಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ ಶುಕ್ರವಾರ 10 ಲಕ್ಷ ಗಡಿ ದಾಟಿದೆ. ಈ ಬಗ್ಗೆ ಬ್ರೆಜಿಲ್‌ ಸರ್ಕಾರವೇ ಅಧಿಕೃತ ಘೋಷಣೆ ಮಾಡಿದೆ.

ಅಮೆರಿಕ ನಂತರ ಹತ್ತು ಲಕ್ಷ ದಾಟಿದ ವಿಶ್ವದ ಎರಡನೇ ರಾಷ್ಟ್ರ ಬ್ರೆಜಿಲ್‌. ಹಾಗೆಯೇ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಬ್ರೆಜಿಲ್‌ ಈಗಾಗಲೇ ಎರಡನೇ ಸ್ಥಾನದಲ್ಲಿದೆ. ಅಲ್ಲಿ ಸೋಂಕಿತರ ಸಂಖ್ಯೆ 10,32,913 ಆಗಿದ್ದರೆ, ಸಾವಿನ ಸಂಖ್ಯೆ 48,954 ಆಗಿದೆ.

ಆದರೆ, ಸರ್ಕಾರ ಅಧಿಕೃತವಾಗಿ ನೀಡುತ್ತಿರುವ ಸಂಖ್ಯೆಗಳಿಗಿಂತಲೂ ಏಳುಪಟ್ಟು ಅಧಿಕ ಸೋಂಕಿತರು ದೇಶದಲ್ಲಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಬ್ರೆಜಿಲ್‌ನಲ್ಲಿ ಸೋಂಕು ಪತ್ತೆ ಪರೀಕ್ಷೆ ಅತ್ಯಂತ ನಿಧಾನವಾಗಿ ನಡೆಯುತ್ತಿದೆ. ಈ ವರೆಗೆ ದೇಶದ ಜನಸಂಖ್ಯೆಯ ಪ್ರತಿ ಹತ್ತು ಲಕ್ಷ ಮಂದಿಯಲ್ಲಿ ಸರಾಸರಿ ಕೇವಲ 14 ಮಂದಿಗೆ ಮಾತ್ರ ಪರೀಕ್ಷೆ ನಡೆಸಲಾಗಿದೆ. ಇದು ಕೊರೊನಾ ವೈರಸ್‌ ಅನ್ನು ನಿಯಂತ್ರಿಸಲು ಅಗತ್ಯವಿರುವ ವೇಗಕ್ಕಿಂತಲೂ 20 ಪಟ್ಟು ಕಡಿಮೆ ಎಂದು ತಜ್ಞರು, ವೈದ್ಯರು ಹೇಳಿದ್ದಾರೆ.

ಅಮೆರಿಕದಲ್ಲಿ ಒಂದೇ ದಿನ 705 ಸಾವು

ವಿಶ್ವದಲ್ಲೇ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ಶುಕ್ರವಾರ ಒಂದೇ ದಿನ ಸೋಂಕಿಗೆ 705 ಮಂದಿ ಜೀವ ತೆತ್ತಿದ್ದಾರೆ. ಹೀಗಾಗಿ ಅಲ್ಲಿ ಸಾವಿನ ಸಂಖ್ಯೆ 1,19,086ಗೆ ಏರಿದೆ. ಇನ್ನು ಸೋಂಕಿತರ ಸಂಖ್ಯೆ 22,19,119 ಆಗಿದೆ.

ಅಮೆರಿಕದ 20 ರಾಜ್ಯಗಳಲ್ಲಿ ಕೋವಿಡ್‌ ಮತ್ತೆ ಉಲ್ಬಣವಾಗುತ್ತಿದೆ. ಆರಂಭದಲ್ಲಿ ನ್ಯೂಯಾರ್ಕ್‌ನಲ್ಲಿ ಹೆಚ್ಚು ಸಂಖ್ಯೆಯ ಸೋಂಕಿತರು ಪತ್ತೆಯಾಗುತ್ತಿದ್ದರು. ಈಗ ಅದು ಬೇರೆ ರಾಜ್ಯಗಳಲ್ಲೂ ಸೋಂಕಿತರ ಸಂಖ್ಯೆ ಏರುತ್ತಿದೆ. ಫ್ಲೋರಿಡಾದಲ್ಲಿ ಒಂದರಲ್ಲೇ ಶುಕ್ರವಾರ 3,822 ಮಂದಿಗೆ ಸೋಂಕು ತಗುಲಿದೆ.

ಆರೋಗ್ಯ ಸಚಿವರನ್ನು ಬದಲಿಸಿದ ಗ್ವಾಟೆಮಾಲಾ

ಕೊರೊನಾ ವೈರಸ್‌ ಸೋಂಕು ಉಲ್ಬಣವಾಗುತ್ತಿರುವ ನಡುವೆಯೇ ಗ್ವಾಟೆಮಾಲಾ ತನ್ನ ಆರೋಗ್ಯ ಸಚಿವರನ್ನು ಬದಲಿಸಿದೆ. ಅಧ್ಯಕ್ಷ ಅಲೆಜಾಂಡ್ರೊ ಜಿಯಾಮಾಟ್ಟೆ ಅವರು ಆರೋಗ್ಯ ಸಚಿವ ಹ್ಯೂಗೋ ಮನ್ರಾಯ್ ಅವರನ್ನು ಸಂಪುಟದಿಂದ ಹೊರ ಹಾಕಿದ್ದಾರೆ. ಅವರ ಬದಲಿಗೆ ಹಿಂದಿನ ಸರ್ಕಾರದಲ್ಲಿ ಆರೋಗ್ಯ ಖಾತೆಯ ಉಪ ಮಂತ್ರಿಯಾಗಿದ್ದ ಅಮೆಲಿಯಾ ಫ್ಲೋರ್ಸ್ ಅವರನ್ನು ನೇಮಿಸಿದ್ದಾರೆ.

ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ವಿಶ್ವದ 5 ರಾಷ್ಟ್ರಗಳು
(ಆವರಣದಲ್ಲಿರುವುದು ಸಾವಿನ ಸಂಖ್ಯೆ)

ಅಮೆರಿಕ–2,219,675 ( 1,19,097)
ಬ್ರೆಜಿಲ್‌–1,032,913 (48,954)
ರಷ್ಯಾ–568,292 (7,831)
ಭಾರತ– 380,532 (12,573)
ಬ್ರಿಟನ್‌–303,283 (42,546)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT