ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರತ್ವ (ತಿದ್ದುಪಡಿ) ಮಸೂದೆ: ಪ್ರಾದೇಶಿಕ ಪಕ್ಷಗಳ ನಿಲುವು ಬದಲು

ಬೆಂಬಲದ ಹಿಂದೆ ರಾಜಕೀಯ ಲೆಕ್ಕಾಚಾರಗಳೇ ಮುಂದೆ
Last Updated 11 ಡಿಸೆಂಬರ್ 2019, 1:45 IST
ಅಕ್ಷರ ಗಾತ್ರ

ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಭಾರತದ ಪೌರತ್ವ ನೀಡುವ ‘ಪೌರತ್ವ ತಿದ್ದುಪಡಿ ಮಸೂದೆ’ ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಎನ್‌ಡಿಎಯ ಮಿತ್ರಪಕ್ಷಗಳು ಮಸೂದೆ ಪರ ಮತಹಾಕಿದ್ದರೂ, ಮಸೂದೆಗೆ ಆಕ್ಷೇಪ ವ್ಯಕ್ತಪಡಿಸಿವೆ. ಪ್ರಾದೇಶಿಕ ಪಕ್ಷಗಳು ಈ ಮಸೂದೆಯನ್ನು ತಮ್ಮ–ತಮ್ಮ ರಾಜ್ಯಗಳಲ್ಲಿ, ತಮ್ಮ ಅಸ್ತಿತ್ವದ ಪ್ರಶ್ನೆಯಾಗಿ ನೋಡುತ್ತಿವೆ. ರಾಜ್ಯಸಭೆಯಲ್ಲಿ ಮಸೂದೆ ಇನ್ನಷ್ಟೇ ಮಂಡನೆ ಆಗಬೇಕಿದೆ. ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿದ್ದ ಕೆಲವು ಪಕ್ಷಗಳು, ರಾಜ್ಯಸಭೆಯಲ್ಲಿ ವಿರೋಧಿಸುವ ಸುಳಿವು ನೀಡಿವೆ. ಇದು ಎನ್‌ಡಿಎಯಲ್ಲಿನ ಒಡಕನ್ನೂ ತೋರಿಸುತ್ತಿದೆ ಎಂಬುದು ತಜ್ಞರ ಅಭಿಮತ

ಟಿಆರ್‌ಎಸ್‌ಗೆ ಪೈಪೋಟಿಯ ಕಳವಳ

ಲೋಕಸಭೆಯಲ್ಲಿ ಮಸೂದೆಗೆ ವಿರುದ್ಧವಾಗಿ ಟಿಆರ್‌ಎಸ್‌ ಮತ ಚಲಾಯಿಸಿತು. ಪಕ್ಷವು ರಾಜ್ಯಸಭೆಯಲ್ಲೂ ಮಸೂದೆಯನ್ನು ವಿರೋಧಿಸುವ ಸಾಧ್ಯತೆ ಇದೆ. ‘ತೆಲಂಗಾಣದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಗಣನೀಯವಾಗಿದೆ. ಮಸೂದೆ ಬೆಂಬಲಿಸಿದರೆ, ಈ ಮತಗಳನ್ನು ಕಳೆದುಕೊಳ್ಳುವ ಅಪಾಯವಿದೆ. ಹೀಗಾಗಿ ಮಸೂದೆಯನ್ನು ವಿರೋಧಿ ಸಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಬಿಜಪಿಯು ಟಿಆರ್‌ಎಸ್‌ಗೆ ಪೈಪೋಟಿ ಒಡ್ಡುವ ಸಾಧ್ಯತೆ ಇದೆ. ಹೀಗಾಗಿ ಬಿಜೆಪಿಯ ನಿಲುವುಗಳಿಗೆ ವಿರುದ್ಧವಾದ ನಿಲುವನ್ನು ಗಟ್ಟಿಮಾಡಿಕೊಳ್ಳುವುದು ಪಕ್ಷಕ್ಕೆ ಅನಿವಾರ್ಯವಾಗಿದೆ’ ಎಂದು ಮೂಲಗಳು ಹೇಳಿವೆ.

ಚುನಾವಣೆಗಾಗಿ ನಿಲುವು ಬದಲು

ಲೋಕಸಭೆಯಲ್ಲಿ ಜೆಡಿಯು ಮಸೂದೆಯನ್ನು ಬೆಂಬಲಿಸಿದೆ. ಆದರೆ, ಪಕ್ಷದ ಈ ನಿರ್ಧಾರದ ಬಗ್ಗೆ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಶಾಂತ್ ಕಿಶೋರ್, ‘ತನ್ನ ಸಂವಿಧಾನದ ಮೊದಲ ಪುಟದಲ್ಲಿ ಮೂರು ಸಲ ‘ಜಾತ್ಯತೀತ’ ಎಂಬ ಪದ ಹೊಂದಿರುವ ಮತ್ತು ಗಾಂಧಿ ಮಾರ್ಗದಲ್ಲಿ ರೂಪುತಳೆದ ಪಕ್ಷವು ಇದನ್ನು ಬೆಂಬಲಿಸಿದೆ. ಇದರಿಂದ ತೀವ್ರ ಬೇಸರವಾಗಿದೆ’ ಎಂದು ಟ್ವೀಟ್ ಮಾಡಿದ್ದರು. ಇನ್ನು 10 ತಿಂಗಳಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆ ಹತ್ತಿರದಲ್ಲಿರುವಾಗ ಮಿತ್ರಪಕ್ಷ ಬಿಜೆಪಿ ಜತೆ ವೈಮನಸ್ಸು ಒಳ್ಳೆಯದಲ್ಲ ಎಂಬ ಉದ್ದೇಶದಿಂದ ನಿತೀಶ್‌ ಕುಮಾರ್ ಈ ತೀರ್ಮಾನಕ್ಕೆ ಬಂದಿರಬಹುದು ಎಂದು ಮೂಲಗಳು ಹೇಳಿವೆ.

‘ಬಿಜೆಪಿಯ ಋಣ ತೀರಿಸಿದ ಬಿಜೆಡಿ’

ಇತ್ತೀಚಿನವರೆಗೂ ಬಿಜೆಡಿ ಈ ಮಸೂದೆಯನ್ನು ವಿರೋಧಿಸುತ್ತಿತ್ತು. ಆದರೆ, ಲೋಕಸಭೆಯಲ್ಲಿ ಮಸೂದೆ ಪರ ಮತ ಚಲಾಯಿಸಿದೆ. ರಾಜ್ಯಸಭೆಯಲ್ಲೂ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದೆ. ಭುವನೇಶ್ವರ ಏಮ್ಸ್‌ ಮಂಡಳಿ ಚುನಾವಣೆಗೆ ಬಿಜೆಡಿ ಮತ್ತು ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕಳೆದ ಗುರುವಾರವಷ್ಟೇ ಬಿಜೆಪಿ ಅಭ್ಯರ್ಥಿ ತಮ್ಮ ನಾಮಪತ್ರವನ್ನು ಹಿಂಪಡೆದರು. ಇದರಿಂದ ಬಿಜೆಡಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾದರು. ಮಸೂದೆ ಪರ ಬಿಜೆಡಿ ಮತ ಚಲಾಯಿಸುವಂತೆ ಮನವೊಲಿಸುವ ಸಲುವಾಗಿಯೇ ಬಿಜೆಪಿ ತನ್ನ ಅಭ್ಯರ್ಥಿಯ ಉಮೇದುವಾರಿಕೆಯನ್ನು ವಾಪಸ್ ಪಡೆಯಿತು. ಮಸೂದೆಯನ್ನು ಬೆಂಬಲಿಸುವ ಮೂಲಕ ಬಿಜೆಡಿಯು ಈ ಋಣವನ್ನು ತೀರಿಸಿದೆ ಎಂದು ಹೇಳಲಾಗುತ್ತಿದೆ.

ಅಕಾಲಿ ದಳದ ಬೇಸರ

ಬಿಜೆಪಿಯ ದೀರ್ಘಕಾಲದ ಮಿತ್ರಪಕ್ಷ ಶಿರೋಮಣಿ ಅಕಾಲಿ ದಳ ಲೋಕಸಭೆಯಲ್ಲಿ ಮಸೂದೆಯನ್ನು ಬೆಂಬಲಿಸಿದೆ. ಆದರೆ, ಮುಸ್ಲಿಮರನ್ನು ಮಸೂದೆಯಿಂದ ಕೈಬಿಟ್ಟಿರುವುದಕ್ಕೆ ಲೋಕಸಭೆಯಲ್ಲೇ ಆಕ್ಷೇಪ ವ್ಯಕ್ತಪಡಿಸಿದೆ. ಇದು ಎರಡೂ ಪಕ್ಷಗಳ ನಡುವಣ ಸಂಬಂಧದಲ್ಲಿ ಏನೋ ಏರುಪೇರು ಉಂಟಾಗಿದೆ ಎಂಬುದನ್ನು ಸೂಚಿಸಿದೆ.

ಶಿವಸೇನಾ ಅತ್ತ–ಇತ್ತ

ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಶಿವಸೇನಾ ಈ ಮಸೂದೆಯನ್ನು ಲೋಕಸಭೆಯಲ್ಲಿ ಬೆಂಬಲಿಸಿದೆ. ಸೇನಾದ ಹೊಸ ಮಿತ್ರಪಕ್ಷ ಕಾಂಗ್ರೆಸ್‌ ಈ ಬಗ್ಗೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಇದರ ಬೆನ್ನಲ್ಲೇ ಸೇನಾ ತನ್ನ ನಿಲುವನ್ನು ಬದಲಿಸುವ ಸೂಚನೆ ನೀಡಿದೆ. ‘ಮಸೂದೆ ಬಗ್ಗೆ ನಾವು ಎತ್ತಿದ್ದ ಪ್ರಶ್ನೆಗೆ ಸರ್ಕಾರವು ವಿವರಣೆ ನೀಡಿಲ್ಲ. ಹೀಗಾಗಿ ರಾಜ್ಯಸಭೆಯಲ್ಲಿ ನಮ್ಮ ಮತ ಬದಲಾಗುವ ಸಾಧ್ಯತೆ ಇದೆ’ ಎಂದು ಪಕ್ಷದ ಮುಖ್ಯಸ್ಥ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಂಗಳವಾರ ಹೇಳಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT