ಜಿ20 ಸಭೆಯಲ್ಲಿ ‘ಹಾಂಗ್‌ಕಾಂಗ್’ ಪ್ರಸ್ತಾಪವಿಲ್ಲ: ಚೀನಾ

ಬೀಜಿಂಗ್: ಈ ತಿಂಗಳ 28 ಮತ್ತು 29ರಂದು ನಡೆಯುವ ಜಿ 20 ಶೃಂಗ ಸಭೆಯಲ್ಲಿ ಹಾಂಗ್‌ಕಾಂಗ್ ವಿಷಯ ಪ್ರಸ್ತಾಪಿಸಲು ಅಮೆರಿಕಗೆ ಅವಕಾಶ ನೀಡುವುದಿಲ್ಲ ಎಂದು ಚೀನಾ ಸೋಮವಾರ ಸ್ಪಷ್ಟಪಡಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಹಾಂಗ್‌ಕಾಂಗ್‌ನಲ್ಲಿ ನಡೆದ ಪ್ರತಿಭಟನೆಯ ವಿಚಾರವನ್ನು ಪ್ರಸ್ತಾಪಿಸಲು ಸಿದ್ಧತೆ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಚೀನಾದಿಂದ ಅಧಿಕೃತ ಹೇಳಿಕೆ ಹೊರಬಿದ್ದಿದೆ.
ಅರೆ ಸ್ವಾಯತ್ತ ನಗರ ಹಾಂಗ್‌ಕಾಂಗ್ ಅನ್ನು ಚೀನಾಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಸಂಬಂಧಿಸಿದ ಮಸೂದೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಈ ಬೃಹತ್ ಪ್ರತಿಭಟನೆ ನಡೆದಿತ್ತು.
‘ಜಪಾನ್‌ನ ಒಸಾಕಾ ನಗರದಲ್ಲಿ ನಡೆಯಲಿರುವ ಜಿ 20 ಶೃಂಗ ಸಭೆಯು ಜಾಗತಿಕ ಆರ್ಥಿಕ ವಿಷಯಗಳನ್ನು ಚರ್ಚಿಸಲು ಇರುವ ವೇದಿಕೆಯಾಗಿದ್ದು, ಹಾಂಗ್‌ಕಾಂಗ್ ವಿಷಯವನ್ನು ಚರ್ಚಿಸುವುದು ಸಾಧುವಲ್ಲ. ಅದು ಚೀನಾದ ಆಂತರಿಕ ವಿಷಯವಾಗಿದ್ದು, ವಿದೇಶವೊಂದರ ಹಸ್ತಕ್ಷೇಪಕ್ಕೆ ಅವಕಾಶ ನೀಡಲಾಗದು’ ಎಂದು ಚೀನಾದ ವಿದೇಶಾಂಗ ಸಚಿವ ಝಾಂಗ್ ಜುನ್ ಹೇಳಿದ್ದಾರೆ.
ಜಿ 20 ಶೃಂಗ ಸಭೆಯ ಸಂದರ್ಭದಲ್ಲಿ ಟ್ರಂಪ್ ಮತ್ತು ಷಿ ಅವರು ಚೀನಾ– ಅಮೆರಿಕ ನಡುವಿನ ವ್ಯಾಪಾರ ವಹಿವಾಟು ಕುರಿತು ಚರ್ಚೆ ನಡೆಸಲಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.