ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ವೈದ್ಯಕೀಯ ಸಿಬ್ಬಂದಿಗೆ ಸ್ಯಾನಿಟರಿ ನ್ಯಾಪ್ಕಿನ್‌ ಕೊರತೆ

ಕೋವಿಡ್‌ – 19: ತಾರತಮ್ಯದ ವಿರುದ್ಧ ಆಕ್ರೋಶ
Last Updated 7 ಮಾರ್ಚ್ 2020, 20:00 IST
ಅಕ್ಷರ ಗಾತ್ರ

ಬೀಜಿಂಗ್‌: ಜಗತ್ತಿನಾದ್ಯಂತ ಹಬ್ಬಿರುವ ಕೋವಿಡ್‌–19 ಒಂದೆಡೆ ಜನರನ್ನು ಹೈರಾಣು ಮಾಡುತ್ತಿದ್ದರೆ. ಮತ್ತೊಂದೆಡೆ ಜನರಿಗೆ ಚಿಕಿತ್ಸೆ ನೀಡುತ್ತಿರುವ ಮಹಿಳಾ ವೈದ್ಯಕೀಯ ಸಿಬ್ಬಂದಿ, ತಮಗೆ ಬೇಕಾಗಿರುವ ವೈಯಕ್ತಿಕ ಅಗತ್ಯಗಳು ದೊರಕದೇ ಇರುವುದರಿಂದ ಪರದಾಡುತ್ತಿದ್ದಾರೆ. ತಮ್ಮನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಿರುವುದಕ್ಕೆ ಅವರು ಸಿಟ್ಟಿಗೆದ್ದಿದ್ದಾರೆ.

ಮಹಿಳೆಯರಿಗೆ ಅಗತ್ಯವಾಗಿ ಬೇಕಾಗಿರುವ ಸ್ಯಾನಿಟರಿ ನ್ಯಾಪ್ಕಿನ್‌ಗೂ ಕೊರತೆಯಾಗಿದೆ. ಅಲ್ಲದೆ ಇವರಿಗೆ ಉತ್ತಮ ಚಿಕಿತ್ಸಾ ಸಾಧನಗಳನ್ನು ನೀಡುತ್ತಿಲ್ಲ. ತಮ್ಮ ತಲೆಗೂದಲನ್ನೂ ತೆಗೆಸಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇಷ್ಟೇ ಅಲ್ಲದೆ, ಮಹಿಳಾ ಸಿಬ್ಬಂದಿಗೆ ಮುಟ್ಟನ್ನು ಮುಂದೂಡುವ ಮಾತ್ರೆಗಳನ್ನೂ ನೀಡಲಾಗುತ್ತಿದೆ ಎಂಬ ವರದಿಗಳು ಬರುತ್ತಿವೆ.

‘ಚಿಕಿತ್ಸೆ ನೀಡುತ್ತಿರುವವರಲ್ಲಿ ಬಹುಪಾಲು ಮಹಿಳಾ ಸಿಬ್ಬಂದಿಯೇ ಇದ್ದಾರೆ’ ಎಂದು ಚೀನಾದ ಮಹಿಳಾ ಒಕ್ಕೂಟ ಹೇಳಿದೆ. ತಮಗೆ ಸೌಲಭ್ಯಗಳನ್ನು ನೀಡುವಲ್ಲಿ ತಾರತಮ್ಯ ಮಾಡುತ್ತಿರುವುದರ ಕುರಿತು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿ, ರ್‍ಯಾಲಿಗಳನ್ನೂ ಮಾಡುತ್ತಿದ್ದಾರೆ. ಜತೆಗೆ, ಸಾಮಾಜಿಕ ಜಾಲತಾಣದಲ್ಲಿ ಕೆಲವರು ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ, ಮಹಿಳೆಯರನ್ನು ಟ್ರೋಲ್‌ ಮಾಡಲಾಗುತ್ತಿದೆ. ಇಂಥ ಸಂಕಷ್ಟದ ಕಾಲದಲ್ಲಿ ಮಹಿಳಾ ಸಿಬ್ಬಂದಿ ತಮ್ಮ ಮುಟ್ಟನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎನ್ನುವ ಕುತೂಹಲದೊಂದಿಗೆ ಶಾಂಘೈ ನಿವಾಸಿ ಜಿಯಾಂಗ್‌ ತಮ್ಮ ವೀಬೊ ಖಾತೆಯಲ್ಲಿ (ಚೀನಾದಲ್ಲಿರುವ ಟ್ವಿಟ್ಟರ್‌ನಂಥಹ ಮಾಧ್ಯಮ) ಈ ವಿಷಯ ಪ್ರಸ್ತಾಪಿಸಿದ್ದಾರೆ.

ಇದಕ್ಕೆ ಹಲವು ಮಹಿಳಾ ವೈದ್ಯಕೀಯ ಸಿಬ್ಬಂದಿ ಪ್ರತಿಕ್ರಿಯಿಸಿದ್ದು, ’ನಮ್ಮ ಸುರಕ್ಷಾ ಸೂಟುಗಳನ್ನು ಬಹುದಿನಗಳವರೆಗೆ ಕಾಪಾಡಿಕೊಳ್ಳಲು ನಾವು ಶೌಚಾಲಯಕ್ಕೆ ಹೋಗುವುದನ್ನು ಸಾಧ್ಯವಾದಷ್ಟು ತಡೆಹಿಡಿಯುತ್ತಿದ್ದೇವೆ. ಮುಟ್ಟಿನಿಂದಾಗಿ ನಾವು ಹೈರಾಣಾಗಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ವೈರಸ್‌ನಿಂದ ಹೆಚ್ಚು ಹಾನಿಗೊಳಗಾಗಿರುವ ಹ್ಯೂಬೆ ನಗರದ ಮಹಿಳೆಯರು ಇದಕ್ಕೆ ಪ್ರತಿಕ್ರಿಯಿಸಿ, ‘ಸ್ಯಾನಿಟರಿ ನ್ಯಾಪ್ಕಿನ್‌ನ ಜರೂರು ಇದೆ. ಇದನ್ನು ಪೂರೈಸಬೇಕು’ ಎಂದು ಕೋರಿದ್ದಾರೆ.

ಇದಕ್ಕಾಗಿ ಜಿಯಾಂಗ್‌ ಅವರು ಅಭಿಯಾನ ಪ್ರಾರಂಭಿಸಿದ್ದಾರೆ. ಇದರಿಂದ ಸುಮಾರು 6 ಲಕ್ಷ ಸ್ಯಾನಿಟರಿ ನ್ಯಾಪ್ಕಿನ್‌ಗಳು ಹಾಗೂ ಮುಟ್ಟಿನ ಸಮಯದಲ್ಲಿ ಬಳಸುವ ಒಳಉಡುಪುಗಳನ್ನು ಒಗ್ಗೂಡಿಸಲು ಸಾಧ್ಯವಾಗಿದೆ. ‘ಜನರ ಜೀವವನ್ನೇ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಈ ಸಮಯದಲ್ಲಿ ನಿಮಗೆ ಮುಟ್ಟಿನ ಚಿಂತೆ ಯಾಕೆ’ ಎಂದು ಸಾರ್ವಜನಿಕರೊಬ್ಬರು ಈ ಅಭಿಯಾನಕ್ಕೆ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT