ಶನಿವಾರ, ಜುಲೈ 24, 2021
27 °C

ಗಡಿ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳುತ್ತೇವೆ: ಚೀನಾ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಭಾರತ ಮತ್ತು ಚೀನಾದ ನಡುವೆ ಗಡಿಯಲ್ಲಿ ಸೃಷ್ಟಿಯಾಗಿರುವ ಸಂಘರ್ಷಮಯ ವಾತಾವರಣದ ನಿವಾರಣೆಗಾಗಿ ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿಗಳ ನಡುವೆ ಶನಿವಾರ ಸಮಾಲೋಚನಾ ಸಭೆ ನಿಗದಿಯಾಗಿರುವ ಬೆನ್ನಿಗೇ ಚೀನಾ, ‘ಗಡಿ ಸಂಬಂಧಿತ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ,’ ಎಂದು ಹೇಳಿದೆ. 

ಎರಡೂ ಸೈನ್ಯಗಳ ಲೆಫ್ಟಿನೆಂಟ್ ಜನರಲ್‌ಗಳ ನೇತೃತ್ವದಲ್ಲಿ ಶನಿವಾರ ಭಾರತ ಮತ್ತು ಚೀನಾದ ಮಿಲಿಟರಿ ನಡುವೆ ಮೊದಲ ವಿಸ್ತೃತ ಮಾತುಕತೆ ನಡೆಯುತ್ತಿದೆ. ಪೂರ್ವ ಲಡಾಖ್‌ನಲ್ಲಿ ಒಂದು ತಿಂಗಳಿಂದ ಎದುರಾಗಿರುವ ಸಂಘರ್ಷಮಯ ಸನ್ನಿವೇಶವನ್ನು ಕೊನೆಗೊಳಿಸುವ ನಿರ್ದಿಷ್ಟ ಪ್ರಸ್ತಾಪಗಳ ಬಗ್ಗೆ ಎರಡೂ ಕಡೆಯವರು ಈ ಸಭೆಯಲ್ಲಿ ಚರ್ಚಿಸುವ ನಿರೀಕ್ಷೆಗಳಿವೆ. 

ಬೀಜಿಂಗ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ 'ಚೀನಾ ಮತ್ತು ಭಾರತದ ನಡುವಿನ ಗಡಿ ಪ್ರದೇಶದ ಪರಿಸ್ಥಿತಿ ಒಟ್ಟಾರೆ ಸ್ಥಿರವಾಗಿದೆ ಮತ್ತು ನಿಯಂತ್ರಣದಲ್ಲಿದೆ,’ ಎಂದು ಹೇಳಿದ್ದಾರೆ. 

ಭಾರತ ಮತ್ತು ಚೀನಾ ನಡುವೆ ಶನಿವಾರ ನಡೆಯುತ್ತಿರುವ ಮಿಲಿಟರಿ ಅಧಿಕಾರಿ ಮಟ್ಟದ ಸಭೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶುವಾಂಗ್‌, ‘ಗಡಿಗೆ ಸಂಬಂಧಿಸಿದಂತೆ ನಾವು ಪೂರ್ಣ ಪ್ರಮಾಣದ ಕಾರ್ಯವಿಧಾನಗಳನ್ನು ಹೊಂದಿದ್ದೇವೆ. ಮಿಲಿಟರಿ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ನಾವು ಸಂವಹನ ನಡೆಸುತ್ತೇವೆ’ ಎಂದು ಹೇಳಿದ್ದಾರೆ. 

‘ಗಡಿ ಸಂಬಂಧಿತ ಸಮಸ್ಯೆಯನ್ನು ಸೂಕ್ತ ರೀತಿಯಲ್ಲಿ ಬಗೆಹರಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ,’ ಎಂದೂ ಅವರು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು