ಭಾನುವಾರ, ಜುಲೈ 25, 2021
25 °C

ಅಬ್ಬಾ, ಅಮೆರಿಕ ಎಷ್ಟೊಂದು ಬದಲಾಗಿದೆ!

ಮಹಾದೇವ ಭಟ್ಟ Updated:

ಅಕ್ಷರ ಗಾತ್ರ : | |

Prajavani

ಮಹಾದೇವ ಭಟ್ಟ ಅವರು ಶಿರಸಿಯ ಮೂಲದವರಾಗಿದ್ದು, ಧಾರವಾಡ ಕೃಷಿ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಕಳೆದ 25 ವರ್ಷಗಳಿಂದ ಅಮೆರಿಕಾದ ಫ್ಲೋರಿಡಾ ಇಂಟರ್‌ನ್ಯಾಷನಲ್‌ ಯೂನಿವರ್ಸಿಟಿಯಲ್ಲಿ ನಿಸರ್ಗ ಅರ್ಥಶಾಸ್ತ್ರದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ಸೋಂಕು ಅಮೆರಿಕದಲ್ಲಿ ವ್ಯಾಪಕವಾಗಿ ಹರಡಿದ ಬಳಿಕ ಆ ದೇಶದಲ್ಲಿ ಆಗಿರುವ ಬದಲಾವಣೆಗಳು ಹಾಗೂ ಅಲ್ಲಿನ ಕನ್ನಡಿಗರ ಸಮುದಾಯ ಎದುರಿಸಿದ ನೋವಿನ ಕುರಿತು ಅವರು ‘ಪ್ರಜಾವಾಣಿ’ ಓದುಗರಿಗಾಗಿ ಬರೆದ ಬರಹ ಇಲ್ಲಿದೆ....

ಕೊರೊನಾ ಸೋಂಕು ಅಮೆರಿಕಾದ ಅತಿದೊಡ್ಡ ನಗರವಾದ ನ್ಯೂಯಾರ್ಕ್‌ಗೆ ತಗಲುವರೆಗೂ ಇಲ್ಲಿನ ಜನರಿಗೆ ಅದರ ತೀವ್ರತೆ ಎಂಥದ್ದು ಎನ್ನುವುದು ಗೊತ್ತಾಗಿರಲಿಲ್ಲ. ಚೀನಾ, ಕೊರಿಯಾ, ಯುರೋಪ್‌ನಲ್ಲಿ ವ್ಯಾಪಿಸಿದ ಸೋಂಕು ಅಮೆರಿಕಾದಲ್ಲಿ ಹರಡುವ ಸಾಧ್ಯತೆ ಇದೆಯೆಂದು ಆರೋಗ್ಯತಜ್ಞರು, ಸರ್ಕಾರದ ಪ್ರತಿನಿಧಿಗಳು ಹೇಳಿದಾಗ ಜನ ಕೂಡಲೇ ಎಚ್ಚೆತ್ತುಗೊಂಡರು.

ಮಾರ್ಚ್‌ ತಿಂಗಳು ಎಂದರೆ ಕಾಲೇಜು ಮತ್ತು ವೃತ್ತಿಪರ ಬಾಸ್ಕೆಟ್‌ಬಾಲ್ ಟೂರ್ನಿಗಳು ಬಿರುಸಿನಲ್ಲಿ ನಡೆಯುವ ಸಮಯ. ಒಂದೊಂದು ಸ್ಟೇಡಿಯಂನಲ್ಲಿ 25 ಸಾವಿರದಿಂದ 30 ಸಾವಿರ ಜನ ಸೇರುವ ಕ್ರೀಡೆ. ಒಂದು ಬಾಸ್ಕೆಟ್‌ಬಾಲ್ ತಂಡದ ಒಬ್ಬ ಆಟಗಾರನಿಗೆ ಕೊರೊನಾ ಸೋಂಕು ತಾಗಿದೆ ಎಂದು ಗೊತ್ತಾದಾಗ, ಆ ತಂಡದವರು ಈ ಸೀಸನ್ನಿನ ಆಟವನ್ನೇ ನಿಲ್ಲಿಸಿದರು. ಅದನ್ನು ನೋಡಿ ದೇಶದಾದ್ಯಂತ ಡೊಮಿನೊ ಎಫೆಕ್ಟ್‌ನಂತೆ ಒಂದಾದಾಗಿ ಒಂದು ವಾರದಲ್ಲಿ ಎಲ್ಲ ವೃತ್ತಿಪರ ಕ್ರೀಡೆಗಳು ನಿಂತು ಹೋದವು.

ವಿಮಾನು, ಬಸ್ಸು ಪ್ರಯಾಣಗಳು ಸಹ ನಿಲ್ಲುತ್ತಾ ಬಂದವು. ಶಾಲಾ ಕಾಲೇಜುಗಳು, ಸಿನೆಮಾ ಮಂದಿರಗಳು, ದೊಡ್ಡ ಥೀಮ್ ಪಾರ್ಕ್‌ಗಳು, ಧಾರ್ಮಿಕ ಪೂಜಾ ಸ್ಥಳಗಳ ಬಾಗಿಲುಗಳನ್ನೂ ಮುಚ್ಚಲಾಗಿತ್ತು. ಉಳಿದಿದ್ದು ಅಂಗಡಿ, ಹೋಟೆಲ್, ರೆಸ್ಟೊರೆಂಟ್‌ಗಳು ಮಾತ್ರ. ಈ ನಡುವೆ ಸೋಂಕಿನಿಂದ ಬಾಧೆಗೊಂಡ ಜನರ ಸಂಖ್ಯೆಯು ಜಾಸ್ತಿ ಆಗುತ್ತಲೇ ಇತ್ತು. ಆರಂಭದಲ್ಲಿ ಟೆಸ್ಟಿಂಗ್ ವ್ಯವಸ್ಥೆಯ ಕೊರತೆ ಇದ್ದುದರಿಂದ ರೋಗದ ನಿಯಂತ್ರಣಕ್ಕೆ ಸ್ವಾಭಾವಿಕವಾಗಿ ಕಷ್ಟ ಆಗಿತ್ತು. ಒಂದೊಂದೇ ರಾಜ್ಯ ಸರ್ಕಾರ ‘ಶೆಲ್ಟರ್ ಇನ್ ಪ್ಲೇಸ್’ ಅಂದರೆ ‘ಲಾಕ್‌ಡೌನ್’ ಕ್ರಮವನ್ನು ಜಾರಿಗೆ ತಂದರು. ಹತ್ತಕ್ಕಿಂತ ಜಾಸ್ತಿ ಜನ ಸೇರುವಂತಿಲ್ಲ. ಅವಶ್ಯಕ ಜನ ಮಾತ್ರ ತಮ್ಮ ಕೆಲಸಗಳ ಮೇಲೆ ಹೊರಗೆ ಓಡಾಡಬಹುದಾಗಿತ್ತು. ಜನ ಹೆಚ್ಚಾಗಿ ನಿಯಮವನ್ನು ಪಾಲಿಸಿದರು.

ಲಾಕ್‌ಡೌನ್ ಪರಿಣಾಮವಾಗಿ ಎಲ್ಲ ಕಂಪನಿ, ಹೋಟೆಲ್, ರೆಸ್ಟೊರೆಂಟ್‌ಗಳು, ಬೀಚ್, ಪಾರ್ಕ್‌ಗಳು ಮುಚ್ಚಬೇಕಾಯಿತು. ಮೂರು ತಿಂಗಳಿನಲ್ಲಿ ದೇಶದಾದ್ಯಂತ ಸುಮಾರು ಎರಡೂವರೆ ಕೋಟಿ ಜನ ಉದ್ಯೋಗವನ್ನು ಕಳೆದುಕೊಂಡರು. ಸದ್ಯದ ನಿರುದ್ಯೋಗದ ಪ್ರಮಾಣ ಶೇ 15ರಷ್ಟಿದೆ. 1930ರ ಗ್ರೇಟ್ ಡಿಪ್ರೆಶನ್ ನಂತರ ಇದೆ ದೊಡ್ಡ ಪ್ರಮಾಣದ ನಿರುದ್ಯೋಗದ ಮಟ್ಟ ಅನ್ನಬಹುದು.

ಪ್ರಾಥಮಿಕ ಶಾಲೆ, ಹೈಸ್ಕೂಲ್, ಕಾಲೇಜು ಯೂನಿವರ್ಸಿಟಿಗಳು ದೂರಶಿಕ್ಷಣವನ್ನು ಆರಂಭಿಸಿದವು. ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿಯೇ ಇರಬೇಕಾಗಿದ್ದು, ಕೆಲಸಕ್ಕೆ ಹೋಗಬೇಕಾಗಿದ್ದ ಎಷ್ಟೋ ಪಾಲಕರಿಗೆ ಒಂದೊಂದು ಅನನುಕೂಲವೇ. ಮೊದಮೊದಲು ಈ ಸೋಂಕು ವಯಸ್ಸಾದವರಿಗೆ ಮಾತ್ರ ಹರಡುವುದು ಎಂಬ ನಂಬಿಕೆ ಇತ್ತು. ಕ್ರಮೇಣ ಆ ನಂಬಿಕೆ ಸುಳ್ಳಾಗಿದ್ದರಿಂದ ಎಲ್ಲ ವಯಸ್ಸಿನ ಜನ ರೋಗ ನಿರ್ಬಂಧದ ಕಡೆಗೆ ಗಮನ ಕೊಡಲು ಆರಂಭಿಸಿದ್ದುಂಟು.

ಅನಾರೋಗ್ಯ, ನಿರುದ್ಯೋಗ ಮತ್ತು ಸಾಮಾಜಿಕ ಸಂಪರ್ಕಗಳ ಮೇಲಿನ ಕಡಿವಾಣದ ಹೊರತಾಗಿ ಮತ್ತೊಂದು ದೊಡ್ಡ ಸಮಸ್ಯೆಯಾದ ವಿಭಾಗವೆಂದರೆ ಆಹಾರ ಮತ್ತು ಅವಶ್ಯ ಗೃಹೋಪಯೋಗಿ ವಸ್ತುಗಳ ಕೊರತೆ. ಲಾಕ್‌ಡೌನ್ ಜಾರಿ ಆಗುತ್ತಿದ್ದಂತೆ ಜನರ ಅವಶ್ಯಕತೆಗಿಂತ ಹೆಚ್ಚು ಅಕ್ಕಿ-ಗೋಧಿ, ಕ್ಲೀನಿಂಗ್ ವಸ್ತುಗಳು, ಟಾಯ್ಲೆಟ್ ಪೇಪರ್ ಇತರೆ ಸಾಮಾನುಗಳನ್ನು ಜನ ಖರೀದಿಸಿದ್ದರಿಂದ ಇವುಗಳ ಕೊರತೆಯಾಗಿತ್ತು. ಕೆಲವು ಕಡೆ ದರಗಳು ಏರುತ್ತಿದ್ದವು. ಅದರಲ್ಲೂ ಹಸಿ ತರಕಾರಿ, ಹಣ್ಣುಗಳ ಕೊರತೆ ಆರಂಭವಾಯಿತು.

ಅಮೆರಿಕದ ಕೃಷಿಯು ಹೊರದೇಶದಿಂದ (ಹೆಚ್ಚಾಗಿ ಮೆಕ್ಸಿಕೊ ದೇಶ) ಬಂದ ಕೂಲಿ ಜನರನ್ನು ಅವಲಂಬಿಸಿದೆ. ಅವರಿಗೆ ಅತಿಥಿ ಕೆಲಸಗಾರರು (ಗೆಸ್ಟ್ ವರ್ಕರ್ಸ್) ಎಂದು ಕರೆಯುವದುಂಟು. ಎಷ್ಟೋ ಕೃಷಿ ಕೆಲಸಗಾರರಿಗೆ ಕೋವಿಡ್-19 ತಗಲಿದ್ದರಿಂದ ಬೆಲೆ ಕಟಾವು ಮತ್ತು ಸಾಗಾಟಕ್ಕೆ ತೀವ್ರವಾದ ಸಮಸ್ಯೆ ಆದ ಘಟನೆಗಳು ಎಷ್ಟೋ ಇವೆ. ಟೆನ್ನೆಸ್ಸಿ ರಾಜ್ಯದ ಒಂದು ಫಾರ್ಮ್‌ನಲ್ಲಿ ಎಲ್ಲ ಇನ್ನೂರು ಕೃಷಿ ಕಾರ್ಮಿಕರಿಗೆ ಕೋವಿಡ್ ಕಾಯಿಲೆಪೀಡಿತರಾಗಿದ್ದರು. ಕೆಲವು ಮೀಟ್ ಕಾರ್ಖಾನೆಗಳನ್ನು ಬಂದು ಮಾಡಬೇಕಾಯಿತು.

ಕಟಾವಾದ ಬೆಳೆಗಳು ಮಾರಾಟವಾಗದೆ ಕೊಳೆತು ಹೋದದ್ದು ಎಷ್ಟೋ. ಈ ಸಂದರ್ಭದಲ್ಲಿ ಕೆಲವು ರೈತರು ಚಾರಿಟೇಬಲ್ ಸಂಸ್ಥೆಗಳಿಗೆ ತಮ್ಮ ಬೆಳೆಯನ್ನು ಪುಕ್ಕಟೆ ಕೊಟ್ಟಿದ್ದುಂಟು. ಈ ಸಂಸ್ಥೆಗಳು ತರಕಾರಿ ಹಣ್ಣು ಹಂಪಲಗಳನ್ನು ದಾನವಾಗಿ ಜನರಿಗೆ ‘ಅಡಾಪ್ಟ್ ಈ ಬಾಕ್ಸ್’ ಎಂಬ ಕಾರ್ಯಕ್ರಮದ ಮುಖಾಂತರ ಹಂಚುತ್ತಿರುವ ಘಟನೆಗಳು ಬಹಳ ಇವೆ.

ಕೋವಿಡ್ ಸಮಯದಲ್ಲಿ ಅಮೆರಿಕಾದ ಭಾರತೀಯರು ಅದರಲ್ಲೂ ಕನ್ನಡಿಗರು ಬಹಳ ಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎನ್ನುವದರಲ್ಲಿ ಸಂದೇಹವಿಲ್ಲ. ಆರೋಗ್ಯದ ವಿಷಯದಲ್ಲಿ, ಅಂತರ ಕಾಯ್ದುಕೊಳ್ಳುವ ವಿಷಯದಲ್ಲಿ ಬಹಳ ಎಚ್ಚರವಾಗಿ ವರ್ತಿಸುತ್ತಿದ್ದಾರೆ. ಧಾರ್ಮಿಕ, ಸಾಮಾಜಿಕ, ಕ್ರೀಡಾ ಸಮಾವೇಶಗಳನ್ನು ಬಹುಶಃ ಸಂಪೂರ್ಣ ನಿಲ್ಲಿಸಿದ್ದಾರೆ ಅನ್ನಬಹುದು. ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ದಿನೇ ದಿನೆ ಏರುತ್ತಿರುವ ಕೋವಿಡ್ ಸಮಸ್ಯೆ ಬಗ್ಗೆ ಕನ್ನಡಿಗರಿಗೆ ತುಂಬಾ ಕಳಕಳಿಯಿದೆ. ಇಲ್ಲಿನ ಸಾಮಾಜಿಕ ತಾಣಗಳಲ್ಲಿ ಅದರ ಚರ್ಚೆ ಆಗುತ್ತಲೇ ಇದೆ. ಕರ್ನಾಟಕ ಸರ್ಕಾರ ಹಮ್ಮಿಕೊಂಡ ಕೆಲವು ಕೊರೊನಾ ಸಂಬಂಧ ಅರೋಗ್ಯ ಕಾರ್ಯಕ್ರಮಗಳಿಗೆ ಹಣಕಾಸಿನ ಸಹಾಯಕ್ಕಾಗಿ ಎಷ್ಟೋ ಕನ್ನಡಿಗರು ತಮ್ಮ ಕೈಜೋಡಿಸಿದ್ದಾರೆ; ಹಣಕಾಸಿನ ಸಹಾಯವನ್ನು ಮಾಡಿದ್ದಾರೆ. ಪ್ರಮುಖವಾಗಿ ಹೇಳಬಹುದಾದರೆ ಕರ್ನಾಟಕದ ಕೆಲವು ಆಸ್ಪತ್ರೆಗಳಿಗೆ ಪಿಪಿಐ ಕಿಟ್‌ಗಳನ್ನು ನೀಡಲು ಹಾಗೂ ಮೈಸೂರು ಪ್ರಾಣಿ ಸಂಗ್ರಹಾಲಯಕ್ಕಾಗಿ ಹಣ ಸಂಗ್ರಹ ಮಾಡಿದ್ದಾರೆ.

ಅಮೆರಿಕ ಕನ್ನಡ ಸಂಘದವರು ಕಳೆದ ಎರಡು ತಿಂಗಳಿಂದ ಕರ್ನಾಟಕದ ಎಷ್ಟೋ ಆಧ್ಯಾತ್ಮಿಕ ಮತ್ತು ಧಾರ್ಮಿಕ ಗುರುಗಳು, ಕಲಾವಿದರು, ಕವಿಗಳು, ಸಿನಿಮಾ ನಟರು, ಹರಟೆ ಕಲಾವಿದರಿಂದ ಝೂಮ್ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಇದರಿಂದ ಅಮೆರಿಕ ಕನ್ನಡಿಗರಿಗೆ ಮನರಂಜನೆ ದೊರೆತಿದೆ.

ಹಲವು ಕನ್ನಡ ಡಾಕ್ಟರ್‌ಗಳು, ನರ್ಸ್‌ಗಳು ಕೋವಿಡ್ ವಿರುದ್ಧ ಹೋರಾಟದಲ್ಲಿ ನೇರವಾಗಿ ಪಾಲ್ಗೊಂಡಿದ್ದಾರೆ. ಹಲವಾರು ಮಹಿಳೆಯರು ಅರೋಗ್ಯ ಸಂಸ್ಥೆಗಳಿಗೆ ಮಾಸ್ಕ್‌ ಮಾಡಿ ಕೊಡುತ್ತಿದ್ದಾರೆ.

ಕೋವಿಡ್‌ನಿಂದಾದ ನಿರ್ಬಂಧ ಕಟ್ಟಳೆಯಿಂದ ಯಾವಾಗ ಹೊರಗೆ ಬರುತ್ತೇವೆಂದು ಜನರೆಲ್ಲ ಕಾಯುತ್ತಿದ್ದಾರೆ. ಆದರೆ, ಕೋವಿಡ್ ಒಂದು ಮುಖ್ಯ ಪಾಠವನ್ನು ಕಲಿಸಿದೆ ಎಂದರೆ ತಪ್ಪಾಗಲಾರದು. ಮಾನವರಿಗೆ ನೈಸರ್ಗಿಕವಾಗಿ ಇತಿಮಿತಿಗಳು ಇದೆ ಎಂಬ ವಿಚಾರ ಸಂಪೂರ್ಣ ಅರ್ಥವಾದಂತಿದೆ. ಈ ರೀತಿಯ ನೈಸರ್ಗಿಕ ಪಿಡುಗು ನಮ್ಮ ಜನಾಂಗವನ್ನು ಬಾಧಿಸಿದಾಗ, ಸಮಸ್ಯೆಯ ಜೊತೆಯಲ್ಲಿ ಹೊಸ ಹೊಸ ವಿಚಾರಗಳು, ತಾಂತ್ರಿಕ ಜ್ಞಾನ, ಜೀವನದ ರೀತಿಗಳು ಕೂಡ ಹುಟ್ಟಿಕೊಳ್ಳುತ್ತವೆ. ಒಬ್ಬರಿಂದ ಒಬ್ಬರು ದೂರವಿದ್ದಷ್ಟೂ (social distancing), ಜನರು ಹೆಚ್ಚೆಚ್ಚು ಹತ್ತಿರವಾದಂತೆ, ಒಬ್ಬರ ಮೇಲೆ ಇನ್ನೊಬ್ಬರಿಗೆ ಕಾಳಜಿ ಪ್ರೀತಿ ಹೆಚ್ಚಾಗಿದೆ ಎನ್ನಬಹುದು. ಸೋಶಿಯಲ್ ಮೀಡಿಯಾದಿಂದ ಮಾಹಿತಿ ವಿತರಣೆ, ಸಲಹೆಗಳಿಗೇನು ಕೊರತೆಯಿಲ್ಲ.
****
ಮಹಾದೇವ ಭಟ್ಟರು ಕೊರೊನಾ ಸೋಂಕಿನ ಅಟ್ಟಹಾಸದ ಕುರಿತು ಬರೆದ ಕವನ

ನೂರು ಸಾವಿರ ಜೀವ

ಕರುಣೆಯಿಲ್ಲದ ಕೊರೊನಾ ಕುರುಚಲು ಆಕಾರದವನ
ಕಣ್ಣಿಗೆ ಕಾಣದ ಜೀವಾಣು ಅಣುಶಕ್ತಿಯ ವೈರಾಣು

ಹಾಕಿ ಕಾಳ ರಾತ್ರಿಲಿ ಕೇಕೆ ಜೀವ ಜಾಲಾಡಿಸಿತು ಏಕೆ?
ಕಟ್ಟಳೆಯಿಲ್ಲದ ಅಟ್ಟಹಾಸ ಹುಟ್ಟಡಗಿಸುವ ದುಃಸ್ಸಾಹಸ

ನೂರು ಸಾವಿರ ಜೀವ ಅಪ್ಪಿದರು ನೋವಿನ ಸಾವ
ಅಳಿದೊಂದಂದು ಜೀವದ ಹಿಂದು ನೊಂದವರು ಜನ ನೂರೊಂದು

ಕೊನೆಯುಸಿರು ನಿಂತಾಗ ನರನರಳಿ ಅಸುನೀಗಿದಾಗ
ಬಂಧು ಬಾಂಧವರಿಲ್ಲ ಬಂದು ನೋಡುವರಿಲ್ಲ

ಇದೇ ಜೀವನ ವೈಪರೀತ್ಯ ಹರಸಾಹಸ ಮಾಡಿದ ವೈದ್ಯ,
'ಹರ ಹರಾ' ಜೀವ ಎಂದಾಗ, ತಲೆತಗ್ಗಿಸಿ ತಲೆಬಗ್ಗಿಸಿ ನಿಂತಾಗ

ಚರಮ ಗೀತೆಯ ಹಾಡಲೇ? ಹಾಡಲು ಒಂದೇ ಎರಡೇ?
ಶವಗಳ ಶರವೇಗದ ಸಾಲೇ ವೈದ್ಯ ವಿಜ್ಞಾನಕೆ ಸವಾಲೇ

ಜನರಲತಿ ಭಯ ಭೀತಿ ಬಾಳೆ ಶೂನ್ಯವೆನಿಸುವ ರೀತಿ
ಕುಸಿದಿದೆ ಆರ್ಥಿಕ ಅಡಿಪಾಯ ಹುಸಿಯಾಗಿದೆ ಸರ್ವೋಪಾಯ

ಮಾಸ್ಕು! ಮಾಸ್ಕು! ಮಾಸ್ಕು! ಎಲ್ಲರ ಮುಖಕು ಮುಸುಕು
ಮುಸುಕಲ್ಲೇ ತುಸು ಮಾತು ಮಾಸಮೂರು ಮುಗಿದೋಯಿತು

ದೇಶವನೆ ಮುತ್ತಿದ ಈ ಮುಸುಕು ತೆರೆಯಲೇ ಬೇಕು ದಿನ ದಿನಕು
ದಿನಕರನ ಹೊಸಕಿರಣ ಬೆಳಗಲಿ ನಮ್ಮನ್, "Respond, recover, re-imagine"*

ಅಳಿದವರ ನೆನಪು ಅಳಿಯದಿರಲಿ ಅಳಿದವರ ಆತ್ಮಕ್ಕೆ ಶಾಂತಿ ಸಿಗಲಿ
ಉಳಿದಿರುವ ನಮಗೆ ಇರಲಿ ಅರಿವು ಶಾಂತಿ ಪ್ರೀತಿ ಪರಿಸರವೇ ನಮ್ಮಿರುವು

*ಮೈಕ್ರೊಸಾಫ್ಟ್‌ನ ಸಿಇಒ ಸತ್ಯ ನಾದೆಲ್ಲ ಹೇಳಿರುವ ಮಾತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು