ಮಂಗಳವಾರ, ಅಕ್ಟೋಬರ್ 15, 2019
22 °C
ಡಿಸೆಂಬರ್‌ 10ರಂದು ಸ್ಟಾಕ್‌ಹೋಂನಲ್ಲಿ ಪ್ರಶಸ್ತಿ ‍ಪ್ರದಾನ

ಭೌತವಿಜ್ಞಾನ: ಮೂವರಿಗೆ ನೊಬೆಲ್‌

Published:
Updated:
prajavani

ಸ್ಟಾಕ್‌ಹೋಂ: ಪ್ರಸಕ್ತ ಸಾಲಿನಲ್ಲಿ ವೈದ್ಯಕೀಯ ಮತ್ತು ಭೌತವಿಜ್ಞಾನ ವಿಭಾಗದಲ್ಲಿ ನೊಬೆಲ್‌ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಸಾಹಿತ್ಯ, ಅರ್ಥಶಾಸ್ತ್ರ, ರಸಾಯನವಿಜ್ಞಾನ, ಶಾಂತಿ ನೊಬೆಲ್‌ ಪ್ರಶಸ್ತಿಗೆ ಪಾತ್ರರಾದವರ ಹೆಸರು ಇದೇ ವಾರ ಪ್ರಕಟವಾಗಲಿದೆ.

ಕೆನಡಾ–ಅಮೆರಿಕದ ಭೂಗೋಳ ಶಾಸ್ತ್ರಜ್ಞ ಜೇಮ್ಸ್‌ ಪೀಬಲ್ಸ್ ಮತ್ತು ಸ್ವೀಡನ್‌ನ ಖಗೋಳಶಾಸ್ತ್ರಜ್ಞರಾದ ಮೈಖೆಲ್‌ ಮೇಯರ್ ಮತ್ತು ಡಿಡಿಯೆರ್ ಕ್ವೆಲಾಜ್‌ ಅವರು ಜಂಟಿಯಾಗಿ ಭೌತವಿಜ್ಞಾನ ವಿಭಾಗದ ನೊಬೆಲ್‌ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

‘ಜಗತ್ತಿನಲ್ಲಿ ನಮ್ಮ ಸ್ಥಳವನ್ನು ಇನ್ನಷ್ಟು ಹೆಚ್ಚು ಅರಿತುಕೊಳ್ಳಲು ತಮ್ಮ ಸಂಶೋಧನೆಯಿಂದ ನೆರವಾಗಿರುವ ಸಾಧನೆಗಾಗಿ ಈ ಪುರಸ್ಕಾರ ಲಭಿಸಿದೆ’ ಎಂದು ತೀರ್ಪುಗಾರರು ತಿಳಿಸಿದ್ದಾರೆ.

ಜಗತ್ತು ರಚನೆಯಾದ ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಪ್ರಾಯೋಗಿಕ ಅನ್ವೇಷಣೆಗಳಿಗಾಗಿ ಪೀಬಲ್ಸ್‌ ಅವರಿಗೆ ಬಹುಮಾನದ ಅರ್ಧದಷ್ಟು ಮೊತ್ತ ಲಭಿಸಲಿದೆ ಎಂದು ರಾಯಲ್‌ ಸ್ವೀಡಿಶ್‌ ಅಕಾಡೆಮಿ ಆಫ್‌ ಸೈನ್ಸ್‌ನ ಪ್ರಧಾನ ಕಾರ್ಯದರ್ಶಿ, ಪ್ರೊ.ಗೊರಾನ್‌ ಹಾನ್ಸನ್‌ ತಿಳಿಸಿದರು.

‘ಉಳಿದರ್ಧ ಮೊತ್ತವು ಮೇಯರ್ ಮತ್ತು ಕ್ವೆಲಾಜ್‌ ನಡುವೆ ಹಂಚಿಕೆಯಾಗಲಿದೆ. ಇವರು ಕೈಗೊಂಡ ಅನ್ವೇಷಣೆ ಭೂಗೋಳ ರಚನೆ ಕುರಿತು ಇದ್ದ ಗ್ರಹಿಕೆಯನ್ನೇ ಬದಲಿಸಿದೆ’ ಎಂದರು.

ಪೀಬಲ್ಸ್‌ ಅವರು ಅಮೆರಿಕದ ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದರೆ, ಮೇಯರ್ ಮತ್ತು ಕ್ವೆಲಾಜ್‌ ಅವರು ಜಿನಿವಾ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿದ್ದಾರೆ.

ಬಹುಮಾನವು ಚಿನ್ನದ ಪದಕ, ಸ್ಮರಣಿಕೆ ಮತ್ತು ಒಂಬತ್ತು ದಶಲಕ್ಷ ಸ್ವೀಡಿಶ್‌ ಕ್ರೊನಾರ್ (ಸುಮಾರು ₹6.5 ಕೋಟಿ ) ಅನ್ನು ಒಳಗೊಂಡಿದೆ. ಸ್ಟಾಕ್‌ಹೋಂನಲ್ಲಿ ಡಿಸೆಂಬರ್‌ 10ರಂದು ನಡೆಯಲಿರುವ ಸಮಾರಂಭದಲ್ಲಿ ಸ್ವೀಡನ್‌ನ ರಾಜ ಗುಸ್ತಾಫ್‌ ಅವರಿಂದ ಬಹುಮಾನ ಸ್ವೀಕರಿಸುವರು.

ವೈದ್ಯಕೀಯದಲ್ಲೂ ಮೂವರಿಗೆ ನೊಬೆಲ್‌

ಕಣಗಳ ಸಂವೇದನೆ ಮತ್ತು ಲಭ್ಯ ಆಮ್ಲಜನಕದ ಬಳಕೆ ಕುರಿತ ವೈದ್ಯಕೀಯ ಕ್ಷೇತ್ರದಲ್ಲಿನ ಸಂಶೋಧನೆಗಾಗಿ ಮೂವರಿಗೆ 2019ನೇ ಸಾಲಿನ ನೊಬೆಲ್‌ ಪುರಸ್ಕಾರ ಲಭಿಸಿದೆ.

ಅಮೆರಿಕದ ಸಂಶೋಧಕ ವಿಲಿಯಂ ಕೇಲಿನ್‌, ಗ್ರೆಗ್‌ ಸಮೀನ್ಜಾ ಮತ್ತು ಬ್ರಿಟನ್‌ನ ಪೀಟರ್‌ ರ‍್ಯಾಟ್‌ಕ್ಲಿಫೆ ನೊಬೆಲ್‌ ಪುರಸ್ಕಾರಕ್ಕೆ ಪಾತ್ರರಾದ ಮೂವರು.

ಆಮ್ಲಜನಕದ ಲಭ್ಯದ ಕೋಶಗಳ ಕಾರ್ಯನಿರ್ವಹಣೆ ಮತ್ತು ಮಾನಸಿಕ ಸ್ಥಿತಿಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದರ ಕುರಿತ ಸಂಶೋಧನೆಗೆ ಈ ಗೌರವ ಲಭಿಸಿದೆ. ಇವರು ಕೈಗೊಂಡ ಸಂಶೋಧನೆ ರಕ್ತಹೀನತೆ, ಕ್ಯಾನ್ಸರ್‌ ಮತ್ತು ಇನ್ನೂ ಅನೇಕ ರೋಗಗಳ ಚಿಕಿತ್ಸೆ ದೃಷ್ಟಿಯಿಂದ ಹೊಸ ಭರವಸೆ ಮೂಡಿಸಿದೆ ಎಂದು ತೀರ್ಪುಗಾರರು ಹೇಳಿದರು. 

ಆಮ್ಲಜನಕದ ವಿವಿಧ ಹಂತಗಳನ್ನು ಆಧರಿಸಿ ದೇಹದಲ್ಲಿನ ಅನುವಂಶಿಕ ಧಾತುಗಳನ್ನು ನಿಯಂತ್ರಿಸುವ ಪ್ರಕ್ರಿಯೆಯನ್ನು ಗುರುತಿಸಿದ್ದಾರೆ. ಇದು, ವಿವಿಧ ರೋಗಗಳ ಕೇಂದ್ರ ಸ್ಥಾನವೂ ಆಗಿದೆ ಎಂದು ತೀರ್ಪುಗಾರರು ಅಭಿಪ್ರಾಯಪಟ್ಟರು.‌

ಕೆಲಿನ್‌ ಅವರು ಹಾವರ್ಡ್‌ ಹ್ಯೂಜ್ ವೈದ್ಯ ವಿಜ್ಞಾನ ಸಂಸ್ಥೆಯಲ್ಲಿ ಇದ್ದರೆ, ಸಮೀನ್ಜಾ ಅವರು ಜಾನ್‌ ಹಾಪ್‌ಕಿನ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಾರೆ. ರ‍್ಯಾಟ್‌ಕ್ಲಿಫೆ ಅವರು ಲಂಡನ್‌ನ ಫ್ರಾನ್ಸಿಸ್‌ ಕ್ರಿಕ್‌ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರು. ಬಹುಮಾನದ ಮೊತ್ತ 6.5 ಕೋಟಿ ರೂಪಾಯಿ ಆಗಿದ್ದು, ಮೂವರ ನಡುವೆ ಸಮಾನವಾಗಿ ಹಂಚಿಕೆಯಾಗಲಿದೆ.

Post Comments (+)