ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ 'ಪ್ಲೇಗ್‌' ಎಂದ ಟ್ರಂಪ್‌: ಅಮೆರಿಕದಲ್ಲಿ ಒಂದೇ ದಿನ 865 ಮಂದಿ ಸಾವು 

Last Updated 1 ಏಪ್ರಿಲ್ 2020, 2:50 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅತ್ಯುತ್ತಮ ವ್ಯವಸ್ಥೆಗಳನ್ನು ಹೊಂದಿರುವ ಅಮೆರಿಕ ಕೊರನಾ ವೈರಸ್‌ ಸೋಂಕು ಹರಡುವಿಕೆಯಿಂದ ತತ್ತರಿಸಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ, ಸಾವಿಗೀಡಾದವರ ಸಂಖ್ಯೆ ದಾಖಲೆಯತ್ತ ಸಾಗಿದೆ. ಮಂಗಳವಾರ ಒಂದೇ ದಿನ ಅಮೆರಿಕದಲ್ಲಿ ಕೋವಿಡ್‌–19ಗೆ 865 ಮಂದಿ ಬಲಿಯಾಗಿದ್ದಾರೆ.

ಅಮೆರಿಕ ಕಾಲಮಾನದ ಪ್ರಕಾರ ಮಂಗಳವಾರ ರಾತ್ರಿ 8:30ರ ವರೆಗೂ ಸಾವಿಗೀಡಾದವರ ಒಟ್ಟು ಸಂಖ್ಯೆ 3,873 ಮುಟ್ಟಿದೆ. ಇಟಲಿ, ಸ್ಪೇನ್‌, ಚೀನಾ ಎಲ್ಲ ರಾಷ್ಟ್ರಗಳಿಗಿಂತಲೂ ಅತ್ಯಧಿಕ ಕೊರೊನಾ ಸೋಂಕು ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿದೆ. ಒಟ್ಟು ಪ್ರಕರಣಗಳು 1,88,172 ತಲುಪಿದೆ.

ಮುಂದಿನ ಎರಡು ವಾರಗಳು ತೀವ್ರ ನೋವಿನ ದಿನಗಳಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಮಂಗಳವಾರ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಕೊರೊನಾ ವೈರಸ್‌ ವಿರುದ್ಧದ ಈ ಹೋರಾಟದಲ್ಲಿ 2,40,000 ಅಮೆರಿಕನ್ನರು ಬಲಿಯಾದಬಹುದೆಂದು ಶ್ವೇತ ಭವನ ಅಂದಾಜಿಸಿದೆ.

ಸಾಂಕ್ರಾಮಿಕವಾಗಿರುವ ಕೊರೊನಾ ವೈರಸ್‌ ಸೋಂಕನ್ನು ಡೊನಾಲ್ಡ್ ಟ್ರಂಪ್‌ 'ಪ್ಲೇಗ್‌'ಗೆ ಹೋಲಿಸಿದ್ದಾರೆ. 'ಅಮೆರಿಕನ್ನರು ಮುಂಬರಲಿರುವ ಕಠಿಣ ಸಂದರ್ಭಗಳಿಗೆ ಸಿದ್ಧರಾಗಿರಬೇಕೆಂದು ಕೇಳಿಕೊಳ್ಳುತ್ತೇನೆ' ಎಂದು ಟ್ರಂಪ್‌ ಮಹಾ ಆಘಾತದ ಮುನ್ಸೂಚನೆ ನೀಡಿದ್ದಾರೆ.

ಕೊರೊನಾ ಬಿಕ್ಕಟ್ಟು ಒಂದಲ್ಲ ಒಂದು ರೀತಿ ಆರ್ಥಿಕತೆಗೆ ಲಾಕ್‌ಡೌನ್‌ ಪರಿಸ್ಥಿತಿಯನ್ನೇ ಸೃಷ್ಟಿಸಲಿದೆ. ಆದರೆ, ವೈರಸ್‌ ಹರಡುವಿಕೆಯನ್ನು ತಪ್ಪಿಸಬೇಕಾದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಗತ್ಯ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

'ಕೊರೊನಾ ವೈರಸ್‌ ಸೋಂಕು ತಡೆಗೆ ಯಾವುದೇ ಮಾಂತ್ರಿಕ ಔಷಧಿ ಅಥವಾ ಚಿಕಿತ್ಸೆ ಇಲ್ಲ. ಎಲ್ಲವೂ ನೀವು ನಡೆದುಕೊಳ್ಳುವ ರೀತಿಯ ಮೇಲೆ ಅವಲಂಬಿತವಾಗಿದೆ. ಪ್ರತಿಯೊಬ್ಬರ ನಡವಳಿಕೆಯೂ ಮುಂದಿನ 30 ದಿನಗಳ ವರೆಗೂ ಸಾಂಕ್ರಾಮಿಕ ವೈರಸ್‌ನ ವ್ಯಾಪಿಸುವಿಕೆಯನ್ನು ಬದಲಿಸುತ್ತದೆ' ಎಂದು ಶ್ವೇತ ಭವನದ ಪ್ರಕಟಣೆ ತಿಳಿಸಿದೆ.

ಕೊರೊನಾ ಪ್ರಭಾವವನ್ನು ನಿಯಂತ್ರಿಸಲು ಆಡಳಿತ ಎಲ್ಲ ರೀತಿಯ ಪ್ರಯತ್ನದಲ್ಲಿದೆ. ಆದರೆ, ಸೋಂಕು ವ್ಯಾಪಿಸುವುದು ಇದೇ ರೀತಿ ಮುಂದುವರಿದರೆ, 1,00,000 ದಿಂದ 2,40,000 ಜನರು ಸಾವಿಗೀಡಾಗುತ್ತಾರೆ ಎಂದು ವಿಜ್ಞಾನಿ ಆಂಥೊನಿ ಫೌಸಿ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT