ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮನ್ನು ಸುಮ್ಮನೆ ಬಿಡ್ತೀವಿ ಅಂದ್ಕೋಬೇಡಿ: ಐಎಸ್‌ ಉಗ್ರರಿಗೆ ಟ್ರಂಪ್ ಧಮಕಿ

Last Updated 2 ನವೆಂಬರ್ 2019, 4:40 IST
ಅಕ್ಷರ ಗಾತ್ರ

ವಾಷಿಂಗ್ಟನ್: ‘ನಿಮ್ಮ ಹೊಸ ನಾಯಕ ಯಾರು ಅಂತ ನನಗೆ ಗೊತ್ತಿದೆ. ಬಾಗ್ದಾದಿ ಸಾವಿನೊಂದಿಗೆ ಎಲ್ಲವೂ ಮುಗೀತು ಅಂದ್ಕೊಬೇಡಿ. ನಿಮ್ಮ ಸಂಘಟನೆಯನ್ನು ಮುರಿದು ಹಾಕುವವರೆಗೆ ಅಮೆರಿಕ ವಿಶ್ರಮಿಸದು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಶುಕ್ರವಾರ ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

‘ಐಎಸ್‌ಗೆ ಹೊಸ ನಾಯಕ ಬಂದಿದ್ದಾನೆ ಅಂತ ಗೊತ್ತಾಗಿದೆ. ಆತ ಯಾರು, ಆತನ ಹಿನ್ನೆಲೆಏನು ಎನ್ನುವ ಬಗ್ಗೆಯೂ ಖಚಿತ ಮಾಹಿತಿ’ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಇಸ್ಲಾಮಿಕ್ ಸ್ಟೇಟ್‌ ಉಗ್ರರು ಗುರುವಾರವಷ್ಟೇ ಇಸ್ಲಾಮಿಕ್ ಸ್ಟೇಟ್‌ ಘೋಷಿಸಿದ್ದ ‘ಖಿಲಾಫತ್‌’ನಸ್ವಯಂ ಘೋಷಿತಖಲೀಫ ಅಬುಬಕರ್ ಅಲ್ ಬಾಗ್ದಾದಿ ಸತ್ತಿದ್ದಾನೆ ಎಂದು ಒಪ್ಪಿಕೊಂಡಿತ್ತು. ಅಬು ಇಬ್ರಾಹಿಂ ಅಲ್‌–ಹಶಿಮಿ ಅಲ್‌–ಖುರೇಷಿಯನ್ನು ಮುಂದಿನ ನಾಯಕ ಎಂದು ಘೋಷಿಸಿತ್ತು.

‘ಬಾಗ್ದಾದಿಯನ್ನು ಕೊಂದು ಏನೋ ಘನಂದಾರಿ ಸಾಧನೆ ಮಾಡಿದೆ ಎಂದು ಬೀಗಬೇಡ ಅಮೆರಿಕ. ಇಸ್ಲಾಮಿಕ್ ಸ್ಟೇಟ್ ಇಂದು ಯೂರೋಪ್, ಮಧ್ಯ ಆಫ್ರಿಕಾದ ಬಾಗಿಲಿಗೆ ಬಂದಿದೆ. ನಮ್ಮ ಪ್ರಭಾವ ದೃಢವಾಗಿ ವಿಸ್ತರಿಸುತ್ತಿದೆ’ ಎಂದು ಗುರುವಾರ ಬಿಡುಗಡೆ ಮಾಡಿದ್ದಆಡಿಯೊ ಕ್ಲಿಪಿಂಗ್‌ನಲ್ಲಿ ಐಎಸ್ ವಕ್ತಾರ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದ.

'ಜಗತ್ತಿನಲ್ಲಿ ಅಮೆರಿಕ ಈಗ ಹಾಸ್ಯದ ವಸ್ತುವಾಗಿದೆ. ನಿಮ್ಮ ಅಧ್ಯಕ್ಷರು ರಾತ್ರಿ ಮಲಗುವಾಗ ತೆಗೆದುಕೊಂಡ ನಿರ್ಧಾರವನ್ನು ಬೆಳೆಗ್ಗೆ ಏಳುವ ಹೊತ್ತಿಗೆ ಬದಲಿಸಿರುತ್ತಾರೆ' ಎಂದು ಡೊನಾಲ್ಡ್ ಟ್ರಂಪ್ ಅವರನ್ನು ಲೇವಡಿ ಮಾಡಿದ್ದ.

ಐಎಸ್‌ ಪ್ರಕಟಿಸಿದ್ದ ಲೇವಡಿ ಆಡಿಯೊ ಬೆನ್ನಿಗೇ ಅಮೆರಿಕ ಅಧ್ಯಕ್ಷ ಟ್ರಂಪ್‌ ಕಟುನುಡಿಗಳ ಎಚ್ಚರಿಕೆ ನೀಡುವ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಸಿರಿಯಾದಿಂದ ಒಂದು ಹೆಜ್ಜೆ ಹೊರಗಿಟ್ಟಿರುವ ಅಮೆರಿಕದ ಮುಂದಿನ ನಡೆಯನ್ನು ಈ ಹಿನ್ನೆಲೆಯಲ್ಲಿ ಜಗತ್ತು ಕುತೂಹಲದಿಂದ ಗಮನಿಸುತ್ತಿದೆ.

ಯಾರಾದರೆ ನಮಗೇನು

ಇಸ್ಲಾಮಿಕ್ ಸ್ಟೇಟ್‌ನ ಹೊಸ ನಾಯಕ ಅಬು ಇಬ್ರಾಹಿಂ ಅಲ್‌–ಹಶಿಮಿ ಅಲ್‌–ಖುರೇಷಿ ಬಗ್ಗೆ ಹೊರಜಗತ್ತಿಗೆ ಅಷ್ಟೇನೂ ಮಾಹಿತಿ ಇಲ್ಲ. ಆದರೆ ಈ ಹಿಂದೆ ಬಾಗ್ದಾದಿ ಮೃತಪಟ್ಟಿದ್ದ ಎಂದು ಹಲವು ಬಾರಿ ವರದಿಯಾದಾಗ ಖುರೇಷಿ ಮುಂದಿನ ನಾಯಕ ಆಗಬಹುದು ಎಂಬ ಮಾತುಗಳು ಕೇಳಿ ಬಂದಿತ್ತು.

‘ಅವನು ಯಾರು?ಅವನ ಹಿನ್ನೆಲೆ ಏನು? ಎಲ್ಲಿಂದ ಬಂದಿದ್ದಾನೆ? ಇತ್ಯಾದಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ. ಯಾರು ನಾಯಕನಾದರೆ ನಮಗೇನು? ಇಸ್ಲಾಮಿಕ್‌ ಸ್ಟೇಟ್ ಸಂಘಟನೆಯನ್ನು ಅಮೆರಿಕ ಛಿದ್ರ ಮಾಡುವುದು ಖಚಿತ’ ಎಂದು ಅಮೆರಿಕದ ಭಯೋತ್ಪಾದನಾ ನಿಗ್ರಹ ದಳದ ಸಂಯೋಜಕ ನಥಾನ್ ಸೇಲ್ಸ್‌ ಪ್ರತಿಕ್ರಿಯಿಸಿದ್ದಾರೆ.

ಪ್ರತೀಕಾರದ ಆತಂಕ

ಬಾಗ್ದಾದಿ ಸಾವನ್ನು ಇಸ್ಲಾಮಿಕ್ ಸ್ಟೇಟ್ ಉಗ್ರರ ಸಂಘಟನೆಗೆ ದೊಡ್ಡ ಹಿನ್ನಡೆ ಎಂದೇ ವ್ಯಾಖ್ಯಾನಿಸಲಾಗಿದೆ. ಬ್ರಿಟನ್ ದೇಶದಷ್ಟು ದೊಡ್ಡ ಭೂಪ್ರದೇಶ ಆಕ್ರಮಿಸಿಕೊಂಡಿದ್ದ ಐಎಸ್ ಉಗ್ರರು ಖಿಲಾಫತ್ ಸ್ಥಾಪಿಸಿದ್ದೇವೆ ಎಂದು ಘೋಷಿಸಿ, ಮಧ್ಯಯುಗ ಕಾಲದ ಕಟ್ಟರ್ ಇಸ್ಲಾಮಿಕ್ ಆಚರಣೆಗಳನ್ನು ಅತ್ಯಂತ ಕ್ರೂರವಾಗಿ ಜಾರಿ ಮಾಡಿದ್ದರು. ಬಾಗ್ದಾದಿ ಹತ್ಯೆಯ ನಂತರ ಸಂಘಟನೆ ಸೇಡು ತೀರಿಸಿಕೊಳ್ಳಬಹುದು ಎಂಬ ಆತಂಕ ಜಗತ್ತಿನಲ್ಲಿ ವ್ಯಕ್ತವಾಗಿದೆ.

‘ಐಎಸ್‌ ಸ್ಥಾಪಕ ಅಬುಬಕರ್‌ ಅಲ್‌–ಬಗ್ದಾದಿಯನ್ನು ಹತ್ಯೆ ಮಾಡಿದ್ದರಿಂದ ಅದು ಸಂಪೂರ್ಣ ನಾಶವಾಗಿದೆ ಎನ್ನುವ ಭ್ರಮೆಯಲ್ಲಿ ನಾವು ಇಲ್ಲ.ನಾಯಕತ್ವದ ಹಂತಕ್ಕೆ ಧಕ್ಕೆಯಾಗಿರಬಹುದು. ಆದರೂ, ಈ ಸಂಘಟನೆ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತದೆ. ಕೆಲ ಸಮಯದ ಬಳಿಕ ಮತ್ತೆ ಕ್ರಿಯಾಶೀಲವಾಗಬಹುದು’ ಎಂದು ಅಮೆರಿಕದ ಕೇಂದ್ರೀಯ ಕಮಾಂಡ್‌ನ ಜನರಲ್‌ ಕೆನ್ನೆಥ್‌ ಮ್ಯಾಕೆಂಝಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT