ಗುರುವಾರ , ಡಿಸೆಂಬರ್ 3, 2020
23 °C

ಅಫ್ಗಾನಿಸ್ತಾನ ದಾಳಿ: 20 ಜನರ ಸಾವು

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್: ಅಫ್ಗಾನಿಸ್ತಾನದಲ್ಲಿ ಅಧ್ಯಕ್ಷೀಯ ಚುನಾವಣೆ ಗರಿಗೆದರುತ್ತಿದ್ದಂತೆಯೇ ಹಿಂಸಾಚಾರ ಮತ್ತೆ ಪ್ರಾರಂಭವಾಗಿದೆ. 

ಭಾನುವಾರ ಅಫ್ಗಾನಿಸ್ತಾನ ಅಧ್ಯಕ್ಷ ಅಶ್ರಫ್‌ ಘನಿ ಪ್ರತಿಸ್ಪರ್ಧಿ ಅಮರುಲ್ಲಾ ಸಾಲ್ಹೆ ಅವರ ಕಾಬೂಲ್‌ನಲ್ಲಿರುವ ಕಚೇರಿಯನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆದಿದ್ದು, ಇದರಲ್ಲಿ 20 ಮಂದಿ ಮೃತಪಟ್ಟು 50ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. 

ಭಾನುವಾರ ಸಂಜೆ 4.40ರ ವೇಳೆಗೆ ಆತ್ಮಾಹುತಿ ದಾಳಿಕೋರ ಸ್ಫೋಟಕ ತುಂಬಿದ್ದ ಕಾರನ್ನು ಕಚೇರಿಯ ದ್ವಾರದಲ್ಲೇ ಸ್ಫೋಟಿಸಿದ್ದಾನೆ. ನಂತರ ಮೂರು ದಾಳಿಕೋರರು ಕಚೇರಿಯ ಒಳಗೆ ಪ್ರವೇಶಿಸಿದ್ದಾರೆ ಎಂದು ಒಳಾಡಳಿತ ಇಲಾಖೆ ತಿಳಿಸಿದೆ. ಆರು ಗಂಟೆ ಕಾರ್ಯಾಚರಣೆ ಬಳಿಕ ದಾಳಿಕೋರರೆಲ್ಲರನ್ನೂ ಹತ್ಯೆಗೈದು, ಕಟ್ಟಡದೊಳಗಿದ್ದ 150 ಜನರನ್ನು ರಕ್ಷಿಸಲಾಗಿದೆ. ಸಾಲ್ಹೆ ಅಪಾಯದಿಂದ ಪಾರಾಗಿದ್ದಾರೆ ಎಂದು ಅವರ ಕಚೇರಿ ತಿಳಿಸಿದೆ. 

ಯಾವ ಸಂಘಟನೆಯೂ ಇಲ್ಲಿಯವರೆಗೂ ದಾಳಿಯ ಹೊಣೆ ಹೊತ್ತಿಲ್ಲ. ಎರಡು ಬಾರಿ ಮುಂದೂಡಲ್ಪಟ್ಟಿದ್ದ ಅಧ್ಯಕ್ಷೀಯ ಚುನಾವಣೆ ಸೆಪ್ಟೆಂಬರ್‌ 28ರಂದು ನಡೆಯಲಿದೆ. 17 ಪ್ರತಿಸ್ಪರ್ಧಿಗಳನ್ನು ಸೋಲಿಸಿ ಎರಡನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ‘ಶಾಂತಿ ನೆಲೆಸಲಿದೆ’ (ಪೀಸ್‌ ಈಸ್‌ ಕಮಿಂಗ್‌) ಎಂಬ ಘೋಷವಾಕ್ಯದೊಂದಿಗೆ ಭಾನುವಾರವಷ್ಟೇ ಅಶ್ರಫ್‌ ಘನಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ್ದರು. 

ತಾಲಿಬಾನ್‌ ಜತೆ ಮಾತುಕತೆ: ಇನ್ನೆರಡು ವಾರದೊಳಗಾಗಿ ತಾಲಿಬಾನ್‌ ಉಗ್ರ ಸಂಘಟನೆ ಜತೆ ನೇರ ಮಾತುಕತೆ ನಡೆಸಲಾಗುವುದು ಎಂದು ಶನಿವಾರ ಶಾಂತಿ ಸಚಿವ ಅಬ್ದುಲ್‌ ಸಲಾಮ್‌ ರಹೀಮಿ ತಿಳಿಸಿದ್ದರು. ಅಫ್ಗಾನಿಸ್ತಾನದ ಅರ್ಧದಷ್ಟು ಪ್ರದೇಶ ತಾಲಿಬಾನ್‌ ಹಿಡಿತದಲ್ಲಿದೆ. ಹೀಗಾಗಿ ಈ ಮಾತುಕತೆ ಹೆಚ್ಚಿನ ಮಹತ್ವ ಪಡೆದಿದೆ. 

ಯುದ್ಧ ಹೊರತುಪಡಿಸಿ ರಾಷ್ಟ್ರದಲ್ಲಿ ಅಪರಾಧ ಚಟುವಟಿಕೆಗಳ ಹೆಚ್ಚಳ, ಕುಸಿಯುತ್ತಿರುವ ಆರ್ಥಿಕತೆ, ನಿರುದ್ಯೋಗ ಸಮಸ್ಯೆ, ಮೂಲಸೌಕರ್ಯ ಕೊರತೆ ಮುಂತಾದ ಸಮಸ್ಯೆಗಳು ಉಲ್ಬಣಿಸುತ್ತಿವೆ. ನ್ಯಾಯಯುತ ಚುನಾವಣೆಯನ್ನು ಎದುರು ನೋಡುತ್ತಿರುವ ಮತದಾರರು, ಈ ಹಿಂದೆ ಚುನಾವಣೆ ಸಂದರ್ಭದಲ್ಲಿ, ಮತದಾನ ಕೇಂದ್ರಗಳ ಮೇಲೆ  ತಾಲಿಬಾನ್‌ ನಡೆಸಿದ್ದ ದಾಳಿಯನ್ನು ನೆನಪಿಸಿಕೊಳ್ಳುತ್ತಿದ್ದಾರೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು