ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ20 ಶೃಂಗಸಭೆ: ವ್ಯಾಪಾರ ಸಮರ ಅಂತ್ಯಕ್ಕೆ ನಿರ್ಧಾರ

ಬಿಕ್ಕಟ್ಟು ಶಮನಕ್ಕೆ ಭಾರತ – ಅಮೆರಿಕ ವಾಣಿಜ್ಯ ಸಚಿವರ ಸಭೆ
Last Updated 28 ಜೂನ್ 2019, 19:15 IST
ಅಕ್ಷರ ಗಾತ್ರ

ಒಸಾಕಾ: ಭಾರತ ಮತ್ತು ಅಮೆರಿಕದ ನಡುವೆ ವ್ಯಾಪಾರಕ್ಕೆ ಸಂಬಂಧಿಸಿ ಇತ್ತೀಚೆಗೆ ಉಂಟಾಗಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿರ್ಧರಿಸಿದ್ದಾರೆ.

ಬಿಕ್ಕಟ್ಟಿಗೆ ಇಬ್ಬರೂ ನಾಯಕರು ಕಳವಳ ವ್ಯಕ್ತಪಡಿಸಿದ್ದಾರೆ. ಎರಡೂ ದೇಶಗಳ ವಾಣಿಜ್ಯ ಸಚಿವರ ಸಭೆಯನ್ನು ಶೀಘ್ರವೇ ನಡೆಸಿ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿದ್ದಾರೆ. ಜಿ20 ಶೃಂಗಸಭೆಯ ಸಂದರ್ಭದಲ್ಲಿ ನಡೆದ ಮಾತುಕತೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.

ಭಾರತಕ್ಕೆ ನೀಡಲಾಗಿದ್ದ ಆದ್ಯತೆಯ ವ್ಯಾಪಾರ ಅನುಕೂಲ ಒಪ್ಪಂದವನ್ನು ಜೂನ್‌ 5ರಂದು ಅಮೆರಿಕ ರದ್ದು ಮಾಡುವುದರೊಂದಿಗೆ ಬಿಕ್ಕಟ್ಟು ಶುರುವಾಗಿತ್ತು. ಅಮೆರಿಕದ 28 ಸರಕುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಮೂಲಕ ಭಾರತವು ತಿರುಗೇಟು ನೀಡಿತ್ತು. ಇದು ಎರಡೂ ದೇಶಗಳ ನಡುವೆ ವ್ಯಾಪಾರಕ್ಕೆ ಸಂಬಂಧಿಸಿ ಆರೋಪ‍–ಪ್ರತ್ಯಾರೋಪಕ್ಕೆ ಕಾರಣವಾಗಿತ್ತು.

ಅಮೆರಿಕದ ಸರಕುಗಳ ಮೇಲೆ ಭಾರತವು ಅತಿಯಾದ ಸುಂಕ ಹೇರುತ್ತಿದೆ ಎಂದು ಟ್ರಂಪ್‌ ಅವರು ಗುರುವಾರ ಆಕ್ರೋಶ ವ್ಯಕ್ತಪಡಿಸಿದ್ದರು. ಅದರ ಬೆನ್ನಿಗೇ ಸಮಸ್ಯೆಯ ಪರಿಹಾರಕ್ಕೆ ಇಬ್ಬರು ನಾಯಕರು ಮುಂದಾಗಿದ್ದಾರೆ.

ಎರಡೂ ದೇಶಗಳ ನಡುವೆ ಬಲಗೊಳ್ಳುತ್ತಲೇ ಇರುವ ದ್ವಿಪಕ್ಷೀಯ ಸಂಬಂಧದಲ್ಲಿ ವ್ಯಾಪಾರವು ಬಹಳ ಮುಖ್ಯವಾದ ಕ್ಷೇತ್ರ. ಹಾಗಿದ್ದರೂ ಮಾರುಕಟ್ಟೆ ಪ್ರವೇಶದ ಅವಕಾಶ ಮತ್ತು ಸುಂಕದ ವಿಚಾರ ಇತ್ತೀಚಿನ ದಿನಗಳಲ್ಲಿ ಬಿಕ್ಕಟ್ಟಿಗೆ ಕಾರಣವಾಗಿದೆ. ದಿನದಿಂದ ದಿನಕ್ಕೆ ಈ ಬಿಕ್ಕಟ್ಟು ಉಲ್ಬಣವಾಗುತ್ತಲೇ ಸಾಗಿದೆ.

‘ಅಮೆರಿಕದ ಅಧ್ಯಕ್ಷರ ಜತೆಗೆ ವ್ಯಾಪಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದೇನೆ. ತಂತ್ರಜ್ಞಾನದ ಶಕ್ತಿಯ‍ಪ್ರಯೋಜನ ಪಡೆದುಕೊಳ್ಳುವುದು, ರಕ್ಷಣಾ ಸಹಭಾಗಿತ್ವ ವಿಸ್ತರಣೆ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಿದ್ದೇನೆ’ ಎಂದು ಮೋದಿ ಅವರು ಮಾತುಕತೆಯ ಬಳಿಕ ಟ್ವೀಟ್‌ ಮಾಡಿದ್ದಾರೆ.

ಎರಡೂ ದೇಶಗಳ ನಾಯಕರ ಮಾತುಕತೆಯ ವಿವರಗಳನ್ನು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಭಾರತಕ್ಕೆ ನೀಡಲಾಗಿದ್ದ ‘ಆದ್ಯತೆಯ ದೇಶ’ ಎಂಬ ಮಾನ್ಯತೆಯನ್ನು ಅಮೆರಿಕ ಹಿಂದಕ್ಕೆ ಪಡೆದ ಬಳಿಕ ನಾವು ಒಂದಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಅವೆಲ್ಲವೂ ಘಟಿಸಿ ಆಗಿದೆ. ಉಂಟಾಗಿರುವ ಸಮಸ್ಯೆಯನ್ನು ಪರಿಹರಿಸಲು ಏನು ಮಾಡಬೇಕು ಎಂಬುದರತ್ತ ಗಮನ ಹರಿಸಬೇಕು’ ಎಂದು ಪ್ರಧಾನಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಗೋಖಲೆ ತಿಳಿಸಿದ್ದಾರೆ.

ಈ ವಿಚಾರಕ್ಕೆ ಟ್ರಂಪ್‌ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ಈ ವಿಚಾರದ ಚರ್ಚೆ ನಡೆಯುವಾಗ ಅಮೆರಿಕದ ವ್ಯಾಪಾರ ಪ್ರತಿನಿಧಿ ರಾಬರ್ಟ್‌ ಲೈಟ್‌ಹೈಜರ್‌ ಮತ್ತು ಹಣಕಾಸು ಕಾರ್ಯದರ್ಶಿ ಸ್ಟೀವನ್‌ ಮನೂಚಿನ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT