ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾದಿಂದ ಜನರನ್ನು ಜರ್ಮನಿ ಕಾಪಾಡಿದ್ದು ಹೀಗೆ: ಮಾದರಿಯಾದೀತೆ ಅವರಿಟ್ಟ ಹೆಜ್ಜೆ?

ವ್ಯಾಪಕ ತಪಾಸಣೆ, ಹಿರಿಯರ ರಕ್ಷಣೆಯೇ ಕೋವಿಡ್-19 ನಿಯಂತ್ರಣದ ಮಂತ್ರ
Last Updated 30 ಮಾರ್ಚ್ 2020, 15:03 IST
ಅಕ್ಷರ ಗಾತ್ರ
ADVERTISEMENT
""
""
""
""

ಸೋಂಕು ಸಾಂಕ್ರಾಮಿಕವಾಗಿ ಸಮುದಾಯಕ್ಕೆ ಹರಡುವುದನ್ನು ಜರ್ಮನಿಸರ್ಕಾರ ಯಶಸ್ವಿಯಾಗಿ ತಡೆದಿದೆ. ಸೋಂಕು ತಗುಲದವರನ್ನು ರಕ್ಷಿಸಲು ಉಕ್ಕಿನ ಸರಪಳಿಯಂಥ ನಿಯಮಗಳನ್ನು ಹೇರಿದೆ.ಜರ್ಮನಿಯಲ್ಲಿ ಏನಾಗುತ್ತಿದೆ?ವಿಶ್ವಕ್ಕೇನು ಪಾಠವಿದೆ?

---

ಜರ್ಮನಿಯ ವಾಣಿಜ್ಯ ಚಟುವಟಿಕೆಗಳ ಕೇಂದ್ರ ಸ್ಥಾನವೆನಿಸಿದ ಫ್ರಾಂಕ್‌ಫರ್ಟ್‌ನಲ್ಲಿ ನಿನ್ನೆಯಷ್ಟೇ (ಮಾರ್ಚ್‌ 29)ಅಲ್ಲಿನ ಹೆಸ್ಸೆ ರಾಜ್ಯದ ಹಣಕಾಸು ಸಚಿವ ಥಾಮಸ್ ಶೇಫೆರ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು ನಿಮಗೆ ಈಗಾಗಲೇ ತಿಳಿದಿರುತ್ತೆ. ಕೊರೊನಾ ವೈರಸ್ ಹಾವಳಿಯಿಂದ ಕಣ್ಣೆದುರು ಹಳಿ ತಪ್ಪುತ್ತಿರುವ ಆರ್ಥಿಕತೆಯನ್ನು ಸರಿಪಡಿಸಲು ಆಗುವುದಿಲ್ಲ ಎನ್ನುವ ಅಸಹಾಯಕತೆಯಿಂದ ಸೂಕ್ಷ್ಮ ಮನಸ್ಸಿನ ಶೇಫೆರ್ ಆತ್ಮಹತ್ಯೆ ಮಾಡಿಕೊಂಡರು.

ಕೋವಿಡ್-19 ಹಾವಳಿಯಿಂದ ಇಡೀ ಜಗತ್ತಿನ ಆರ್ಥಿಕ ಸ್ಥಿತಿಗತಿ ಲಯ ತಪ್ಪುತ್ತಿದೆ. ಜರ್ಮನಿಯೂ ಅದಕ್ಕೆ ಹೊರತಲ್ಲ. ಆದರೆ ತನ್ನ ನಾಗರಿಕರ ಸ್ವಾಸ್ಥ್ಯ ಕಾಪಾಡಲು ಜರ್ಮನ್ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಇತರ ದೇಶಗಳಿಗೆ ಮಾದರಿ. ಪಕ್ಕದ ಇಟಲಿ ಮತ್ತು ಸ್ಪೇನ್‌ ದೇಶಗಳಲ್ಲಿ ಕಂಡುಬರುತ್ತಿರುವ ಸಾವಿನ ರುದ್ರನರ್ತನ ಜರ್ಮನಿಯಲ್ಲಿ ಕಾಣಿಸುತ್ತಿಲ್ಲ. ಕೋವಿಡ್-19ರಿಂದ ಒಂದಿಷ್ಟು ಮಂದಿ ಸತ್ತಿದ್ದಾರಾದರೂ ಅದು ತೀರಾ ಕನಿಷ್ಠಮಟ್ಟದ್ದು.

ಯೂರೋಪ್‌ ಈಗ ಬಹುದೊಡ್ಡ ಮಟ್ಟದಆರ್ಥಿಕ ಮತ್ತುಸಾಮಾಜಿಕ ಬಿಕ್ಕಟ್ಟು ಎದುರಿಸುತ್ತಿದೆ.ಇದರ ಬಗ್ಗೆ ಯಾರಿಗೂ ಅನುಮಾನವಿಲ್ಲ. ಯೂರೋಪ್ ಖಂಡದ ಎಲ್ಲ ದೇಶಗಳಲ್ಲೂ ಲಾಕ್‌ಡೌನ್ ಘೋಷಿಸಲಾಗಿದೆ. ಗಡಿಗಳನ್ನು ಮುಚ್ಚಲಾಗಿದೆ. ವೈದ್ಯಕೀಯ ಸೇವಾ ಸಿಬ್ಬಂದಿ ಸಾಮರ್ಥ್ಯ ಮೀರಿ ಶ್ರಮಿಸುತ್ತಿದ್ದಾರೆ. ಆರ್ಥಿಕತೆ ಕುಸಿಯುತ್ತಿದೆ. ಆತಂಕ ಹುಟ್ಟಿಸುವಷ್ಟು ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದಾರೆ.

ಜರ್ಮನಿಯ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಈವರೆಗೆಜರ್ಮನಿಯಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿಲ್ಲ. ಶಾಲೆಗಳು, ಅಂಗಡಿಗಳು, ರೆಸ್ಟೊರೆಂಟ್‌ಗಳು ಮತ್ತು ಥಿಯೇಟರ್‌ಗಳನ್ನು ಮುಚ್ಚಲಾಗಿದೆ. ಇಬ್ಬರಿಗಿಂತ ಹೆಚ್ಚು ಜನರು ಒಂದೆಡೆ ಸೇರುವುದನ್ನು ನಿಷೇಧಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ಮತ್ತಷ್ಟುಕುಸಿಯುತ್ತೆ ಮತ್ತು ನಿರುದ್ಯೋಗ ತಾಂಡವವಾಡುತ್ತೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ತಮ್ಮ ವೈದ್ಯರಿಗೆ ಕೋವಿಡ್‌-19 ಪಾಸಿಟಿವ್‌ ಎಂಬ ವರದಿ ಪ್ರಕಟವಾದ ನಂತರ ಜರ್ಮನಿಯ ಚಾನ್ಸಲರ್ ಏಂಜೆಲಾ ಮಾರ್ಕೆಲ್ ಸ್ವಯಂ ಕ್ವಾರಂಟೈನ್‌ಗೆ ಒಳಪಟ್ಟರು. ನಂತರದ ದಿನಗಳಲ್ಲಿ ಏಂಜೆಲಾರ ಪರೀಕ್ಷಾ ವರದಿ ನೆಗೆಟಿವ್ ಬಂತು. ಜಾಗತಿಕ ಪಿಡುಗಾಗಿರುವ ಕೋವಿಡ್-19ರ ಮಾರಕ ಹೊಡೆತಕ್ಕೆ ಜರ್ಮನಿಯಷ್ಟೇ ಅಲ್ಲ, ಯಾವ ದೇಶವೂಹೊರತಲ್ಲ ಎನ್ನುವುದು ಈಗಾಗಲೇ ಹಲವು ಬಾರಿ, ಹತ್ತಾರೂ ರೀತಿಗಳಲ್ಲಿಸಾಬೀತಾಗಿದೆ.

ಜರ್ಮನಿಯ ಹೆದ್ದಾರಿಗಳಲ್ಲಿ ಕೊರೊನಾ ವೈರಸ್ ಸೋಂಕು ತಪಾಸಣೆ ಕಟ್ಟುನಿಟ್ಟು

ಇತರ ರಾಷ್ಟ್ರಗಳಿಗಿಂತ ಭಿನ್ನ

ಆದರೂ ಒಂದು ವಿಚಾರದಲ್ಲಿ ಜರ್ಮನಿ ಇತರೆಲ್ಲಾ ರಾಷ್ಟ್ರಗಳಿಗಿಂತಲೂ ಭಿನ್ನ. ಅಕ್ಕಪಕ್ಕದ ದೇಶಗಳಿಗೆ ಹೋಲಿಸಿದರೆ ಜರ್ಮನಿಯಲ್ಲಿ ಸಾಯುತ್ತಿರುವವರ ಸಂಖ್ಯೆ ಕಡಿಮೆ. ಕಳೆದ ಶನಿವಾರದವರೆಗೂ ಜರ್ಮನಿಯಲ್ಲಿ ಒಟ್ಟು 56,202 ಮಂದಿಯಲ್ಲಿ ಕೊರೊನಾ ವೈರಸ್‌ ಸೋಂಕು ಖಾತ್ರಿಯಾಗಿದೆ. ಕೇವಲ 403 ಮಂದಿ ಮೃತಪಟ್ಟಿದ್ದಾರೆ. ಈ ಹಿಂದಿನ ವಾಕ್ಯದಲ್ಲಿ “ಕೇವಲ” ಎನ್ನುವ ಪದವನ್ನು ಅತ್ಯಂತ ಪ್ರಜ್ಞಾಪೂರ್ವಕವಾಗಿ ಬಳಸಿದ್ದೇನೆ. ಒಂದು ಜೀವದ ನಷ್ಟವೂ ಎಂದೂ ವಾಪಸ್‌ ಬರಲಾರದ ನಷ್ಟ ಎಂಬ ಅರಿವು ನನಗಿದೆ. ಜರ್ಮನಿಯಲ್ಲಿ ಸೋಂಕಿತರು ಸಾವನ್ನಪ್ಪುವ ಸಾಧ್ಯತೆ, ಈವರೆಗಿನ ಲೆಕ್ಕಾಚಾರದಂತೆ 0.72 ಮಾತ್ರ.

ನಾನು “ಕೇವಲ” ಎಂಬ ಪದವನ್ನು ಏಕೆ ಬಳಸಿದೆ ಎಂದು ಅರ್ಥವಾಗಬೇಕಾದರೆ ಜರ್ಮನಿಯ ಅಕ್ಕಪಕ್ಕದ ದೇಶಗಳನ್ನು ಗಮನಿಸಬೇಕು. ಇಟಲಿಯಲ್ಲಿ ಈವರೆಗೆ 10,000 ಮಂದಿ ಸತ್ತಿದ್ದಾರೆ. ಅಲ್ಲಿ ಸೋಂಕಿತರು ಸಾವನ್ನಪ್ಪುವ ಸಾಧ್ಯತೆ ಶೇ 10.8. ಸ್ಪೇನ್‌ನಲ್ಲಿ ಈವರೆಗೆ 7340 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲಿ ಸೋಂಕಿತರು ಸಾವನ್ನಪ್ಪುವ ಸಾಧ್ಯತೆ ಶೇ 8. ಬ್ರಿಟನ್‌ನಲ್ಲಿ ಈವರೆಗೆ ಜರ್ಮನಿಯಲ್ಲಿ ಸಾವನ್ನಪ್ಪಿರುವವರಿಗಿಂತ ಎರಡೂ ಪಟ್ಟು ಹೆಚ್ಚಿನ ಜನರು (1228)ಸತ್ತಿದ್ದಾರೆ. ಆದರೆ ಅಲ್ಲಿ ಸೋಂಕಿತರ ಸಂಖ್ಯೆ ಜರ್ಮನಿಗಿಂತ ಮೂರುಪಟ್ಟು ಕಡಿಮೆಯಿದೆ. ಬ್ರಿಟನ್‌ನ ಒಟ್ಟು ಸೋಂಕಿತರ ಸಂಖ್ಯೆ 19,522. ಜರ್ಮನಿಯ ಸೋಂಕಿತರ ಸಂಖ್ಯೆ ಸುಮಾರು 57 ಸಾವಿರ.

ಹೀಗೆಂದು ಜರ್ಮನಿಯ ಆಡಳಿತಾಧಿಕಾರಿಗಳು ತಮ್ಮ ಬೆನ್ನು ತಾವು ತಟ್ಟಿಕೊಳ್ಳುವ ಸ್ಥಿತಿಯಲ್ಲಿಲ್ಲ.ಅಲ್ಲಿಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸೋಂಕಿತರ ಸಂಖ್ಯೆ ಹಲವರಲ್ಲಿ ಆತಂಕ ಮೂಡಿಸಿದೆ. ಈ ಆತಂಕದನಡುವೆಯೂ ಸೋಂಕು ಮತ್ತು ಸಾವಿನ ನಿಯಂತ್ರಣಕ್ಕೆ ಅಲ್ಲಿನ ಆಡಳಿತ ತೆಗೆದುಕೊಳ್ಳುತ್ತಿರುವ ನಿರ್ಧಾರಗಳನ್ನು ಹಲವಾರು ಮಂದಿ ಶ್ಲಾಘಿಸುತ್ತಿದ್ದಾರೆ.

ಜರ್ಮನಿಯಲ್ಲಿ ಸೋಂಕು ಸಾಂಕ್ರಾಮಿಕವಾಗಿ ಸಮುದಾಯಕ್ಕೆ ಹರಡುವುದನ್ನು ಅಲ್ಲಿನ ಸರ್ಕಾರ ಯಶಸ್ವಿಯಾಗಿ ತಡೆದಿದೆ. ಸೋಂಕು ತಗುಲದವರನ್ನು ರಕ್ಷಿಸಲು ಉಕ್ಕಿನ ಸರಪಳಿಯಂಥ ನಿಯಮಗಳನ್ನು ಹೇರಿ ಜನರನ್ನು ಹಿಡಿದಿಟ್ಟುಕೊಂಡಿದೆ.ಜರ್ಮನಿಯಲ್ಲಿ ಏನಾಗುತ್ತಿದೆ?ವಿಶ್ವಕ್ಕೇನು ಪಾಠವಿದೆ?

ಜರ್ಮನಿಯ ಗಡಿಯಲ್ಲಿ ತಪಾಸಣೆ

ವ್ಯಾಪಕ ತಪಾಸಣೆ

ಮೊದಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜನರನ್ನು ವ್ಯಾಪಕವಾಗಿ ತಪಾಸಣೆಗೆ ಒಳಪಡಿಸಲಾಯಿತು. ಸೋಂಕು ಪತ್ತೆಯಾದವರನ್ನು ಪ್ರತ್ಯೇಕವಾಗಿ ಇರಿಸಿದ್ದಲ್ಲದೆ ಅವರ ಜೊತೆಗೆ ಸಂಪರ್ಕಕ್ಕೆ ಬಂದವರನ್ನು ನಿಖರವಾಗಿ ಟ್ರ್ಯಾಕ್‌ (ಪತ್ತೆ) ಮಾಡಲಾಯಿತು.

ಜರ್ಮನಿಯಲ್ಲಿ ವರದಿಯಾದ ಮೊದಲ ಕೊರೊನಾ ಪಾಸಿಟಿವ್ ಪ್ರಕರಣವನ್ನೇ ತೆಗೆದುಕೊಳ್ಳಿ. ಜನವರಿ 28ರಂದು ಬೊವಾರಿಯಾದ ವ್ಯಕ್ತಿಯೊಬ್ಬರಲ್ಲಿ ಸೋಂಕು ಪತ್ತೆಯಾಯಿತು. ಅವರು ಕೆಲಸ ಮಾಡುತ್ತಿದ್ದ ಕಾರ್ ಕಂಪನಿಗೆ ಚೀನಾದವುಹಾನ್‌ ನಗರದಲ್ಲಿ ಎರಡು ಘಟಕಗಳಿದ್ದವು. ಸೋಂಕು ದೃಢಪಟ್ಟ ಎರಡೇ ದಿನಗಳಲ್ಲಿ ಅಧಿಕಾರಿಗಳು ತಮ್ಮ ದೇಶದ ವ್ಯಕ್ತಿಗೆ ಸೋಂಕು ಹಬ್ಬಿಸಿದಾತನನ್ನು ಪತ್ತೆಹಚ್ಚಿದರು. ಆತ ಯಾವೆಲ್ಲಾ ಜರ್ಮನ್ನರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದನೋ ಗುರುತಿಸಿ, ಎಲ್ಲರನ್ನೂ ಕ್ವಾರಂಟೈನ್‌ನಲ್ಲಿಟ್ಟರು.

ಕಂಪನಿಯ ಪ್ರತಿನಿಧಿಗಳಿಗೆ ಚೀನಾಗೆ ತೆರಳದಂತೆ ಸ್ಪಷ್ಟ ನಿರ್ದೇಶನ ನೀಡಲಾಯಿತು. ಬವಾರಿಯಾದಲ್ಲಿದ್ದ ಘಟಕವನ್ನು ಜರ್ಮನಿಯ ಆಟೊಮೊಬೈಲ್ ಕಂಪನಿ ಮುಚ್ಚಿತು. ಈ ಹೊತ್ತಿಗೆ ಆ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಇತರ ಕೆಲ ವ್ಯಕ್ತಿಗಳಲ್ಲೂ ಸೋಂಕು ಪತ್ತೆಯಾಯಿತು. ಇಷ್ಟಾಗುವ ಹೊತ್ತಿಗೆ ಎಚ್ಚೆತ್ತ ಜರ್ಮನ್ ಆಡಳಿತ ದೇಶವ್ಯಾಪಿ ತಪಾಸಣೆಗಳನ್ನು ಚುರುಕುಗೊಳಿಸಿತು. ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಕೇಂದ್ರ ಸರ್ಕಾರದ ಇಲಾಖೆಗಳು ಹೆಗಲಿಗೆಹೆಗಲು ಕೊಟ್ಟು ಕೆಲಸ ಮಾಡಿದವು. ಸೋಕಿತರೊಂದಿಗೆ ಒಡನಾಟ ಇಟ್ಟುಕೊಂಡಿದ್ದವರನ್ನು ಹುಡುಕಿ, ಪರೀಕ್ಷೆಗಳನ್ನು ನಡೆಸಿ, ಕಟ್ಟುನಿಟ್ಟಿನ ಕ್ವಾರಂಟೈನ್‌ ಆದೇಶ ಜಾರಿ ಮಾಡಲಾಯಿತು.

ಜರ್ಮನಿಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ

ಹಿರಿಯರ ರಕ್ಷಣೆಗೆ ಆದ್ಯತೆ

ಕೋವಿಡ್-19 ಪಿಡುಗು ಅತಿಯಾಗಿ ಬಾಧಿಸುವ ಹಿರಿಯ ನಾಗರಿಕರನ್ನು ರಕ್ಷಿಸಲು ಜರ್ಮನಿ ಆದ್ಯತೆ ಕೊಟ್ಟಿದೆ. ಹಿರಿಯರು ಮನೆಯಿಂದ ಹೊರಗೆ ಬರುವುದನ್ನು ಜರ್ಮನಿಯ ರಾಜ್ಯ ಸರ್ಕಾರಗಳು ನಿರ್ಬಂಧಿಸಿವೆ. ಹೊರಗೆ ಹೆಚ್ಚು ಓಡಾಡುವ ಇತರರು, ಮನೆಗಳಲ್ಲಿಯೇ ಇರುವಹಿರಿಯರನ್ನು ಭೇಟಿಯಾಗಬಾರದೆಂದು ಮನಗಾಣಿಸಲಾಗಿದೆ. ಸರ್ಕಾರದ ಮಾತಿಗೆ ಕಿವಿಗೊಟ್ಟಿರುವಹಲವು ಹಿರಿಯರು ಸ್ವಯಂ ಪ್ರೇರಿತರಾಗಿ ಕ್ವಾರಂಟೈನ್‌ಗೆ ಒಳಪಟ್ಟಿದ್ದಾರೆ. ಈಗ ಇದರ ಫಲಿತಾಂಶಗಳು ನಿಚ್ಚಳವಾಗಿ ಅರಿವಿಗೆ ಬರುತ್ತಿವೆ.

ದೇಶದ ಒಟ್ಟು ಸೋಂಕಿತರ ಪೈಕಿ 80 ವರ್ಷಕ್ಕಿಂತ ಹೆಚ್ಚು ವಯಸ್ಸಾದವರ ಸಂಖ್ಯೆ ಶೇ 3ರಷ್ಟು ಇದೆ. ಅವರು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ 7ರಷ್ಟಿದ್ದಾರೆ. ಜರ್ಮನಿಯಲ್ಲಿ ಸೋಂಕಿತರ ಸರಾಸರಿ ವಯಸ್ಸು 46 ವರ್ಷ. ಇಟಲಿಯಲ್ಲಿ ಇದು 63 ವರ್ಷ.

ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಜರ್ಮನಿಯಲ್ಲಿ ಸೋಂಕಿತರಾದವರ ಪೈಕಿ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಕಾರಣ ದೇಶದ ಆಡಳಿತ ನಡೆಸಿದ ವ್ಯಾಪಕ ತಪಾಸಣೆ. ಜರ್ಮನ್ ಯುವನರು ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರಾಗಲು ಅವರ ಸಂಸ್ಕೃತಿಯೂ ಕಾರಣ. ಜರ್ಮನಿಯ ಜನರಿಗೆ ಸ್ಕೇಯಿಂದ ಎಂದರೆ ಇಷ್ಟ. ಅಲ್ಲಿನ ಸುಮಾರು 1.45 ಕೋಟಿ ಜನರು ಸ್ಕೇಯಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಇದಕ್ಕಾಗಿಆಸ್ಟಿಯಾಮತ್ತು ಉತ್ತರ ಇಟಲಿಯ ಆಲ್ಪ್ಸ್‌ ಪರ್ವತಗಳಿಗೆ ಭೇಟಿ ನೀಡುವುದು ಜರ್ಮನಿಯಲ್ಲಿ ಜನಪ್ರಿಯ ರಿವಾಜು.

ಈ ವರ್ಷವೂ ಅಷ್ಟೇ. ರಜೆ ಘೋಷಣೆಯಾದ ನಂತರ ಜರ್ಮನ್ನರು ಯೋರೋಪಿನಲ್ಲಿ ಕೋರೊನಾ ವೈರಸ್ ಮೊದಲ ಬಾರಿಗೆ ವರದಿಯಾದ ಟೈರೋಲ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದರು. ಅವರೇ ಜರ್ಮನಿಗೆ ವೈರಸ್‌ ಸೋಂಕನ್ನು ಹೆಚ್ಚಿನ ಪ್ರಮಾಣದಲ್ಲಿ ತಂದಿರಬಹುದು ಎಂದು ಶಂಕಿಸಲಾಗಿದೆ.

ಜರ್ಮನಿಯಲ್ಲಿ ನಿರ್ಬಂಧಗಳಿವೆ. ಆದರೆ ಲಾಕ್‌ಡೌನ್‌ ಇಲ್ಲ.

ಜಾತ್ರೆಗಳಿಂದ ಹಬ್ಬಿತು ಸೋಂಕು

ಇನ್ನು ಸ್ವದೇಶದಲ್ಲಿ ನಡೆಯುವ ಕಾರ್ನಿವಾಲ್‌ಗಳಲ್ಲೂ (ಜಾತ್ರೆಯಂಥ ಆಚರಣೆ) ಜರ್ಮನ್ನರು ಉತ್ಸಾಹದಿಂದ ಪಾಲ್ಗೊಳ್ಳುವ ಪ್ರವೃತ್ತಿ ಹೊಂದಿದ್ದಾರೆ. ಆರಂಭದ ದಿನಗಳಲ್ಲಿ ಕೋವಿಡ್-19 ಸೋಂಕು ದೊಡ್ಡಮಟ್ಟದಲ್ಲಿ ಹಬ್ಬಿದ ನಗರವೊಂದು ಇಂಥ ಕಾರ್ನಿವಾಲ್‌ಗಳಿಗೆ ಹೆಸರುವಾಸಿ ಎಂಬುದು ಕೇವಲ ಕಾಕತಾಳೀಯವಾಗಿರಲಾರದು. ಕಾರ್ನಿವಾಲ್‌ಗಳಲ್ಲಿ ಔತಣಕೂಟಗಳು, ಮೆರವಣಿಗೆಗಳು, ರಾತ್ರಿ ಪಾರ್ಟಿಗಳು ಸಾಮಾನ್ಯ ಸಂಗತಿ. ಯುವಜನರಿಗೆ ಇವು ಅಚ್ಚುಮೆಚ್ಚು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ?

ಲಾಂಗ್‌ಬ್ರೊರಿಕ್‌ನಲ್ಲಿ ನಡೆದ ಕಾರ್ನಿವಾಲ್‌ನಲ್ಲಿ ಪಾಲ್ಗೊಂಡಿದ್ದ ನೂರಾರು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ‘ಸ್ಕೇಯಿಂದ ಮತ್ತು ಕಾರ್ನಿವಾಲ್‌ ಸಂಸ್ಕೃತಿಯಿಂದ ನಮ್ಮ ದೇಶದ ಯುವಜನರಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿರಬಹುದು’ ಎನ್ನುವುದು ಜರ್ಮನಿಯ ಬುಂದೆಸ್ಟಾಗ್ (ಸಂಸತ್) ಪ್ರತಿನಿಧಿಯೂ ಆಗಿರುವ ವೈದ್ಯ ಕಾರ್ಲ್ ಲೌಟೆರ್‌ಬಚ್ ಅವರ ಅಭಿಪ್ರಾಯ.

ಜರ್ಮನಿಯಲ್ಲಿ ವೈರಸ್ ಸೋಂಕು ಹಬ್ಬುತ್ತಿರುವ ವೇಗ ಮತ್ತು ಸರ್ಕಾರ ನಡೆಸುತ್ತಿರುವ ವ್ಯಾಪಕ ತಪಾಸಣೆಗಳು ಹೆಚ್ಚುಕಡಿಮೆ ಜೊತೆಜೊತೆಗೆ ಸಾಗುತ್ತಿವೆ. ಹೀಗಾಗಿಯೇ ಯುವಜನರಲ್ಲಿ ರೋಗ ಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಸೋಂಕು ಪತ್ತೆ ಸಾಧ್ಯವಾಗಿದೆ. ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳ ಕಾರಣ ಜರ್ಮನಿಯಲ್ಲಿಕೊರೊನಾ ವೈರಸ್ ಸೋಂಕಿನಿಂದ ಸಾಯುವವರ ಸಂಖ್ಯೆಯೂ ಕಡಿಮೆಯಾಗಿದೆ.

‘ನಾವು ಎಷ್ಟು ಜನರನ್ನು ಮತ್ತು ಎಂಥವರನ್ನು ಪರೀಕ್ಷೆಗೆ ಒಳಪಡಿಸುತ್ತೇವೆ ಎನ್ನುವುದು ನಮ್ಮ ಕಾರ್ಯತಂತ್ರವನ್ನು ಆಧರಿಸಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ನಮ್ಮ ಮುಂದಿನ ನಡೆಯ ಮೇಲೆ ಇದು ಪರಿಣಾಮ ಬೀರುತ್ತದೆ’ ಎನ್ನುವುದು ವೈರಾಲಜಿಸ್ಟ್ ಮಾರ್ಟಿನ್ ಸ್ಟ್ರಮರ್ ಅವರ ಅಭಿಪ್ರಾಯ. ಫ್ರಾಂಕ್‌ಫರ್ಟ್‌ ನಗರದಲ್ಲಿ ಕೊರೊನಾ ವೈರಸ್‌ ಸೋಂಕು ಪತ್ತೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪ್ರಯೋಗಾಲಯವೊಂದರ ನಿರ್ದೇಶಕರಾಗಿಯೂ ಅವರು ಕೆಲಸ ಮಾಡುತ್ತಾರೆ.

‘ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ತಪಾಸಣೆ ಸಾಮರ್ಥ್ಯವಿಲ್ಲದ ದೇಶಗಳು ಈಗಾಗಲೇ ಅಸ್ವಸ್ಥರಾಗಿರುವವರನ್ನು ತಪಾಸಣೆಗೆ ಒಳಪಡಿಸಿಲು ತಮ್ಮ ಶಕ್ತಿಯನ್ನು ಮೀಸಲಿಟ್ಟುಕೊಂಡಿರುತ್ತವೆ. ಇದಕ್ಕೆ ಇಟಲಿ ಉತ್ತಮ ಉದಾಹರಣೆ. ಇದೇ ಕಾರಣಕ್ಕೆ ಅಲ್ಲಿ ಸಾಯುವವರ ಸಂಖ್ಯೆಯೂ ಹೆಚ್ಚು’ ಎನ್ನುವುದು ಅವರ ವಿಶ್ಲೇಷಣೆ.

---

(ಮಾಹಿತಿ: ನ್ಯೂಯಾರ್ಕ್‌ ಟೈಮ್ಸ್‌, ದಿ ಗಾರ್ಡಿಯನ್ ಮತ್ತು ವರ್ಲ್ಡ್‌ ಮೀಟರ್ಸ್‌ ಇನ್‌ಫೋ. ಬರಹ: ಡಿ.ಎಂ.ಘನಶ್ಯಾಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT