ಮಂಗಳವಾರ, ಏಪ್ರಿಲ್ 20, 2021
29 °C

ಎಚ್‌–1ಬಿ ವೀಸಾ ಅರ್ಜಿ: ಸಾಕ್ಷ್ಯಾಧಾರ ಕೋರಿಕೆಗೆ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌ : ವಿದೇಶಿಯರು ಸಲ್ಲಿಸುವ ಎಚ್‌–1ಬಿ ವೀಸಾ ಅರ್ಜಿಗಳ ಜತೆ ಹೆಚ್ಚಿನ ಮಾಹಿತಿ ಅಥವಾ ಸಾಕ್ಷ್ಯಾಧಾರಗಳನ್ನು ಕೋರುತ್ತಿರುವ ಬಗ್ಗೆ ಅಮೆರಿಕದ ಹಲವು ಸಂಸದರು ಮತ್ತು ತಜ್ಞರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಎಚ್‌–1ಬಿ ವೀಸಾ ಭಾರತೀಯ ವೃತ್ತಿಪರರಿಗೆ ಹೆಚ್ಚು ಸಂಬಂಧಿಸಿದ್ದಾಗಿದೆ. ಹೀಗಾಗಿ, ಈ ರೀತಿ ಅನಗತ್ಯ ಮಾಹಿತಿ ಕೋರುವುದರಿಂದ ಬೇರೆ ರೀತಿಯ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವಿಶ್ಲೇಷಿಸಲಾಗಿದೆ.

ಪೌರತ್ವ ಮತ್ತು ವಲಸೆ ನೀತಿ ಬದಲಾವಣೆಗಳು ಹಾಗೂ ವಿಳಂಬ ಪ್ರಕ್ರಿಯೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಸಂಸದೆ ಸುಸಾನ್‌ ಎಲ್ಲೆನ್‌ ಲೊಫ್‌ಗ್ರೆನ್‌, ’ಸಿಲಿಕಾನ್‌ ವ್ಯಾಲಿ ಮತ್ತು ವಾಷಿಂಗ್ಟನ್‌ಗಿಂತಲೂ ಟೊರೊಂಟೊದಲ್ಲಿ ತಂತ್ರಜ್ಞಾನದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದೆ. ನಮ್ಮ ವಲಸೆ ನೀತಿಗಳೇ ಇದಕ್ಕೆ ಕಾರಣ ಎನ್ನುವ ಅಭಿಪ್ರಾಯ ಮೂಡಿದೆ‘ ಎಂದು ಹೇಳಿದರು.

2019ರ ಮೊದಲ ತ್ರೈಮಾಸಿಕದಲ್ಲಿ ಅಮೆರಿಕದ ಪೌರತ್ವ ಮತ್ತು ವಲಸೆ ಸೇವೆ ಇಲಾಖೆಯು ಶೇಕಡ 60ರಷ್ಟು ಎಚ್‌–1ಬಿ ವೀಸಾ ಅರ್ಜಿಗಳಿಗೆ ಸಾಕ್ಷ್ಯಗಳನ್ನು ಒದಗಿಸುವಂತೆ ಕೋರಿತ್ತು. ಇದು 2016ರಲ್ಲಿ ಕೋರಿದ್ದ ಸಾಕ್ಷ್ಯಗಳಿಗಿಂತ ಶೇಕಡ 20.8ರಷ್ಟು ಹೆಚ್ಚು.

‘ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ಕೋರುವುದು ಬಹುತೇಕ ಅಪ್ರಸ್ತುತವಾಗಿರುತ್ತವೆ. ಮುಂಚಿತವಾಗಿಯೇ ಮಾಹಿತಿಗಳನ್ನು ಸಲ್ಲಿಸಿದ್ದರೂ ಇಂತಹ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ’ ಎಂದು ಅಮೆರಿಕದ ವಲಸೆ ವಕೀಲರ ಸಂಘಟನೆಯ ಅಧ್ಯಕ್ಷ ಮರ್ಕೆಟಾ ಲಿಂಡ್ಟ್‌ ಅಭಿಪ್ರಾಯ ಪಟ್ಟಿದ್ದಾರೆ.

ವಲಸೆ ನೀತಿಯಲ್ಲಿ ಬದಲಾವಣೆಗಳನ್ನು ಮಾಡಿರುವುದರಿಂದ ಈ ರೀತಿ ಮಾಹಿತಿ ಕೋರುವುದು ಅಗತ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು