ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಗ್‌ಕಾಂಗ್‌ ಗಡಿಯಲ್ಲಿ ಚೀನಾ ಯೋಧರು

ಪ್ರಜಾಪ್ರಭುತ್ವ ಪರ ಹೋರಾಟ ಹತ್ತಿಕ್ಕುವ ಹುನ್ನಾರ: ಅಭಿಮತ
Last Updated 15 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಶೆಂಝೆನ್‌ : ಹಾಂಗ್‌ಕಾಂಗ್‌ ಗಡಿ ಬಳಿ ಶೆಂಝೆನ್‌ ನಗರದ ಕ್ರೀಡಾಂಗಣದಲ್ಲಿ ಚೀನಾದ ಸಹಸ್ರಾರು ಯೋಧರು ಗುರುವಾರ ಜಮಾವಣೆಗೊಂಡು ಪಥಸಂಚಲನ ನಡೆಸಿದ್ದಾರೆ.

ಚೀನಾದ ಈ ನಗರ ಹಾಂಗ್‌ಕಾಂಗ್‌ನಿಂದ 7 ಕಿ.ಮೀ. ದೂರದಲ್ಲಿದ್ದು, ಕೆಂಪು ಬಾವುಟಗಳನ್ನು ಹಿಡಿದಿದ್ದ ಯೋಧರು, ಪಥಸಂಚಲನವನ್ನೂ ನಡೆಸಿದರು.ಶಸ್ತ್ರಾಸ್ತ್ರ ಹೊತ್ತ ಮಿಲಿಟರಿ ವಾಹನಗಳು ಸಹ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿವೆ. ಇದಕ್ಕೆ ಸಂಬಂಧಿಸಿದ ವಿಡಿಯೊ ತುಣುಕುಗಳನ್ನು ಸರ್ಕಾರಿ ಒಡೆತನದ ದೈನಿಕಗಳಾದ ‘ದಿ ಪೀಪಲ್ಸ್‌ ಡೈಲಿ’ ಹಾಗೂ ‘ಗ್ಲೋಬಲ್‌ ಟೈಮ್ಸ್‌’ ಪ್ರಸಾರ ಮಾಡಿವೆ.

‘ನಗರದ ಕ್ರೀಡಾಂಗಣದಲ್ಲಿ ಯೋಧರ ಜಮಾವಣೆ, ನಿರಂತರ ಪ್ರತಿಭಟನೆಗಳಿಂದ ಉದ್ವಿಗ್ನಗೊಂಡಿರುವ ಹಾಂಗ್‌ಕಾಂಗ್‌ನ ಆಡಳಿತದಲ್ಲಿ ಮಧ್ಯಪ್ರವೇಶಿಸಲು ಚೀನಾ ಸಿದ್ಧತೆ ನಡೆಸುತ್ತಿರುವುದರ ಸೂಚನೆ ಇದು’ ಎಂದು ‘ದಿ ಗ್ಲೋಬಲ್‌ ಟೈಮ್ಸ್‌’ನ ಪ್ರಧಾನ ಸಂಪಾದಕ ಹು ಷಿಜಿನ್‌ ಅಭಿಪ್ರಾಯಪಟ್ಟಿದ್ದಾರೆ.

‘ಯೋಧರನ್ನು ನಿಯೋಜನೆ ಮಾಡುವ ನಿರ್ಧಾರ ಹಾಂಗ್‌ಕಾಂಗ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವಂತೆ ಮಾಡುತ್ತದೆ. ಪ್ರತಿಭಟನಕಾರರಲ್ಲಿ ಮನೆ ಮಾಡಿರುವ ಚೀನಾ ವಿರೋಧಿ ನಿಲುವು ಮತ್ತಷ್ಟು ಗಟ್ಟಿಯಾಗಲಿದೆ’ ಎಂದು ಸಿಂಗಪುರದ ನನ್ಯಾಂಗ್‌ ಟೆಕ್ನಲಾಜಿಕಲ್‌ ಯೂನಿವರ್ಸಿಟಿಯ ಪ್ರಾಧ್ಯಾಪಕ, ಮಿಲಿಟರಿಗೆ ಸಂಬಂಧಿಸಿದ ವಿಷಯಗಳ ತಜ್ಞ ಜೇಮ್ಸ್‌ ಚಾರ್‌ ಆತಂಕ ವ್ಯಕ್ತಪಡಿಸುತ್ತಾರೆ. ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿದ್ದ ಹಾಂಗ್‌ಕಾಂಗ್‌ 1997ರಲ್ಲಿ ಚೀನಾಕ್ಕೆ ಹಸ್ತಾಂತರಗೊಂಡಿತು. ನಂತರ ಈ ವಾಣಿಜ್ಯನಗರಿಗೆ ಅರೆ ಸ್ವಾಯತ್ತತೆಯನ್ನು ನೀಡಲಾಗಿದೆ.

ಭಯೋತ್ಪಾದಕರ ರೀತಿ ವರ್ತನೆ: ಚೀನಾ

ಬೀಜಿಂಗ್‌ ವರದಿ: ಹಾಂಗ್‌ಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟ ನಡೆಸುವವರು ಭಯೋತ್ಪಾದಕರಂತೆ ವರ್ತಿಸುತ್ತಿದ್ದಾರೆ ಎಂದು ಚೀನಾ ಬುಧವಾರ ಆರೋಪಿಸಿತ್ತು.

ಹಾಂಗ್‌ಕಾಂಗ್‌ ವಿಮಾನ ನಿಲ್ದಾಣದಲ್ಲಿ ಪ್ರತಿಭಟನಕಾರರು ಚೀನಾದ ಸರ್ಕಾರಿ ಸ್ವಾಮ್ಯದ ಗ್ಲೋಬಲ್‌ ಟೈಮ್ಸ್‌ ಪತ್ರಿಕೆಯ ವೆಬ್‌ ಆವೃತ್ತಿಯ ವರದಿಗಾರ ಹಾಗೂ ಇನ್ನೊಬ್ಬ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದನ್ನು ಉಲ್ಲೇಖಿಸಿ ಚೀನಾ ಈ ಹೇಳಿಕೆ ನೀಡಿತ್ತು. ಶಂಕಿತ ಅಪರಾಧಿಗಳನ್ನು ವಿಚಾರಣೆಗಾಗಿ ಚೀನಾ ಮೇನ್‌ಲ್ಯಾಂಡ್‌ಗೆ ಹಸ್ತಾಂತರಿಸುವ ವಿವಾದಾತ್ಮಕ ಮಸೂದೆಯನ್ನು ವಿರೋಧಿಸಿ ಹಾಂಗ್‌ಕಾಂಗ್‌ನಲ್ಲಿ ಆರಂಭವಾದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT