ಮಂಗಳವಾರ, ಫೆಬ್ರವರಿ 18, 2020
16 °C

ಕಾಶ್ಮೀರ ಮಧ್ಯಸ್ಥಿಕೆಗೆ ಉತ್ಸುಕ: ಡೊನಾಲ್ಡ್‌ ಟ್ರಂಪ್‌ ಪುನರುಚ್ಚಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವೋಸ್‌: ಜಮ್ಮು–ಕಾಶ್ಮೀರ ವಿವಾದ ಬಗೆಹರಿಸುವ ಸಂಬಂಧ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಲ್ಲಿ ಮಂಗಳವಾರ ಹೇಳಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ ಜತೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ವಿದ್ಯಮಾನಗಳನ್ನು ಅಮೆರಿಕ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಖಂಡಿತ ನೆರವು ನೀಡಲು ಸಿದ್ಧರಿದ್ದೇವೆ’ ಎಂದು ಪುನರುಚ್ಚರಿಸಿದರು.

ಕಾಶ್ಮೀರ ವಿಷಯದಲ್ಲಿ ಅನ್ಯ ದೇಶಗಳ ಮಧ್ಯಸ್ಥಿಕೆ ಅಗತ್ಯ ಇಲ್ಲ ಎಂಬುದಾಗಿ ಭಾರತ ಈಗಾಗಲೇ ಹಲವಾರು ಬಾರಿ ಸ್ಪಷ್ಟಪಡಿಸಿದೆ. ಆದರೂ, ಟ್ರಂಪ್‌ ಈ ರೀತಿ ಹೇಳುತ್ತಿರುವುದು ನಾಲ್ಕನೇ ಬಾರಿ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಶೀಘ್ರ ಮಾತುಕತೆ: ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಂಬಂಧ ಸಂಘರ್ಷಮಯವಾಗಿರುವ ಸಂದರ್ಭದಲ್ಲಿಯೇ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರೊಂದಿಗೆ ಶೀಘ್ರವೇ ಎರಡನೇ ಹಂತದ ಮಾತುಕತೆ ನಡೆಸಲಾಗುವುದು ಎಂದೂ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ವಿಶೇಷ ಭಾಷಣ ಮಾಡಿದ ಅವರು, ‘ಎರಡು ವರ್ಷಗಳ ಹಿಂದೆ ದಾವೋಸ್‌ನಲ್ಲಿ ನಡೆದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ್ದೆ. ಅಂದಿನ ಸಮಾವೇಶದಲ್ಲಿ ಹೇಳಿದ್ದಂತೆ, ಅಮೆರಿಕ ಮತ್ತೆ ತನ್ನ ಮುಂಚೂಣಿ ಸ್ಥಾನವನ್ನು ಉಳಿಸಿಕೊಂಡು ಮುನ್ನುಗ್ಗುತ್ತಿದೆ’ ಎಂದರು.

‘ಟ್ರಂಪ್‌ ಹತ್ಯೆಗೆ ₹21 ಕೋಟಿ ಬಹುಮಾನ’

ಟೆಹರಾನ್‌ (ಎಎಫ್‌ಪಿ): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹತ್ಯೆ ಮಾಡಿದವರಿಗೆ ₹21 ಕೋಟಿ (3 ದಶಲಕ್ಷ ಡಾಲರ್‌) ಬಹುಮಾನ ನೀಡುವುದಾಗಿ ಇರಾನ್‌ನ ಸಂಸದರೊಬ್ಬರು ಮಂಗಳವಾರ ಘೋಷಿಸಿದ್ದಾರೆ.

ಜನರಲ್‌ ಖಾಸಿಂ ಸುಲೇಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್‌ ಹೇಳಿತ್ತು. ಈಗ, ಸುಲೇಮಾನಿ ಸ್ವಂತ ಊರಾದ ಕರ್ಮನ್‌ ಪಟ್ಟಣದವರಾದ, ಸಂಸದ ಅಹ್ಮದ್‌ ಹಮ್ಝೆ ಈ ಬಹುಮಾನ ಘೋಷಿಸಿದ್ದಾರೆ.

ಈ ಬಹುಮಾನದ ಮೊತ್ತವನ್ನು ಯಾರು ಕೊಡುತ್ತಾರೆ ಎಂಬುದನ್ನು ಅವರು ಬಹಿರಂಗಪಡಿಸಿಲ್ಲ. ಮುಂದಿನ ತಿಂಗಳು ಇರಾನ್‌ ಸಂಸತ್‌ಗೆ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು