ಶನಿವಾರ, ಏಪ್ರಿಲ್ 4, 2020
19 °C

ಇಟಲಿಯಲ್ಲಿ ಕೋವಿಡ್-19 ರೋಗಿಗಳ ಶುಶ್ರೂಷೆ ಮಾಡುತ್ತಿದ್ದಾರೆ ಕನ್ನಡಿಗ ಮಧು ಹೇಮೇಗೌಡ

ಅನಿರ್ಬನ್‌ ಭೌಮಿಕ್‌ Updated:

ಅಕ್ಷರ ಗಾತ್ರ : | |

Madhu

ರೋಮ್:  ಉತ್ತರ ಇಟಲಿಯ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ ತುಮಕೂರು ಮೂಲದ ಮಧು ಹೇಮೇಗೌಡ. ಆಸ್ಪತ್ರೆಯ ಕೋವಿಡ್ -19 ರೋಗಿಗಳ ವಾರ್ಡ್‌ನಲ್ಲಿ 12 ಗಂಟೆಗಳ ಕೆಲಸ. ಕಳೆದ ಪಾಳಿಯಲ್ಲಿ ಸೇವಾ ನಿರತರಾಗಿದ್ದಾಗ ಒಂದು ಗಂಟೆಯ ಅವಧಿಯಲ್ಲಿ  ಮೂವರು ಹಿರಿಯ ವ್ಯಕ್ತಿಗಳು ಕೊನೆಯುಸಿರೆಳೆದುದನ್ನು ನೋಡಿದ್ದಾರೆ ಇವರು. ದಿನದ ಕರ್ತವ್ಯ ಮುಗಿಸಿ ಹೊರಗೆ ಬರುವ ಹೊತ್ತಲ್ಲಿ ಅಲ್ಲಿದ್ದ 30 ರೋಗಿಗಳ ಪೈಕಿ ಎರಡು ಅಥವಾ ಮೂರು ರೋಗಿಗಳು ಸಾವಗೀಡಾಗಿರುತ್ತಾರೆ. ಪ್ರತಿದಿನ ನಾವು ಎರಡು ಮೂರು ಸಾವು ನೋಡುತ್ತಿದ್ದೇವೆ. ಸಾವು ಸಾಮಾನ್ಯ ಎಂಬಂತಾಗಿ ಬಿಟ್ಟಿದೆ ಅಂತಾರೆ ಇವರು.

ಮೂಲತಃ ಚಿಕ್ಕಮಗಳೂರಿನವರಾದ 34ರ ಹರೆಯದ ಮಧು ಅವರ ಕುಟುಂಬ ಆಗ ತುಮಕೂರಿನಲ್ಲಿ ನೆಲೆಸಿದೆ. 2007ರಲ್ಲಿ ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ನರ್ಸಿಂಗ್ ಪದವಿ ಪೂರೈಸಿದ ಇವರು ಕಳೆದ 10 ವರ್ಷಗಳಿಂದ ಇಟಲಿಯಲ್ಲಿ ನೆಲೆಸಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲಿ ಯುರೋಪ್ ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಾಗ ಮಿಲಾನ್‌ನಿಂದ ಇವರನ್ನು ಟ್ಯೂರಿನ್‌ನಲ್ಲಿರುವ ರಿವೋಲಿ ಪಬ್ಲಿಕ್  ಆಸ್ಪತ್ರೆಗೆ ಕಳುಹಿಸಿಕೊಡಲಾಗಿತ್ತು. ಕಳೆದ ಕೆಲವು ವಾರಗಳಿಂದ ಐಸೋಲೇಷನ್ ವಾರ್ಡ್‌ನ ಸ್ಥಿತಿ ಹೇಗಿದೆ ಎಂಬುದು ಹೇಳಲು ಆಗುತ್ತಿಲ್ಲ. ಅಲ್ಲಿರುವ 30 ಹಾಸಿಗೆಗಳಿಗೆ ನಿರಂತರವಾಗಿ ರೋಗಿಗಳು ಬರುತ್ತಲೇ ಇರುತ್ತಾರೆ. ಹಾಸಿಗೆ ಖಾಲಿ ಆಯಿತು ಎಂದರೆ ಅಲ್ಲಿ ರೋಗಿ ಡಿಸ್‌ಚಾರ್ಜ್ ಆಗಿ ಹೋಗಿದ್ದಾನೆ ಎನ್ನುವುದಕ್ಕಿಂತ ಸಾವಿಗೀಡಾಗಿದ್ದಾನೆ ಎಂದೇ ಊಹಿಸಬೇಕಿದೆ. ಒಂದೆರಡು ಗಂಟೆಗಳಲ್ಲಿ ಎಲ್ಲ ಹಾಸಿಗೆಗಳು ಭರ್ತಿಯಾಗುತ್ತವೆ ಎಂದು ಟ್ಯೂರಿನ್‌ನಿಂದ 'ಪ್ರಜಾವಾಣಿ' ಜತೆ ಮಾತನಾಡಿದ ಮಧು ಹೇಳಿದ್ದಾರೆ.

ಭಾನುವಾರದ  ಅಂಕಿ ಅಂಶಗಳ ಪ್ರಕಾರ 53,570ಕ್ಕಿಂತ ಹೆಚ್ಚು ಜನರಿಗ ಇಟಲಿಯಲ್ಲಿ ಸೋಂಕು ತಗಲಿದೆ. ಚೀನಾ ಹೊರತು ಪಡಿಸಿದರೆ ಅತೀ ಹೆಚ್ಚು ಸೋಂಕಿತರು ಇರುವ ದೇಶವಾಗಿದೆ ಇಟಲಿ.

ದುಃಖಿಸುವುದಕ್ಕೂ ಸಮಯ ಇಲ್ಲ
ಸುತ್ತಲೂ ಸಾವು ನರ್ತನ ಮಾಡುತ್ತಿದ್ದರೂ ಮಧು ಹೇಮೇಗೌಡಗೆ ದುಃಖಿಸಲೂ ಸಮಯವಿಲ್ಲ. ಯಾರನ್ನಾದರೂ ಬದುಕಿಸಲು ಸಾಧ್ಯವಾಗದೇ ಇದ್ದಾಗ ಅಳುವುದಕ್ಕೂ ಸಮಯ ಸಿಗುವುದಿಲ್ಲ. ಮಾನಿಟರ್‌ನಲ್ಲಿ ಹೃದಯ ಬಡಿತದ ಗೆರೆ ನೇರವಾಗುವ ಹೊತ್ತಲ್ಲಿ ಅಲ್ಲಿದ್ದ ರೋಗಿಯನ್ನು ಬೇರೆಡೆಗೆ ಮಲಗಿಸಿ ಇನ್ನೊಬ್ಬರನ್ನು ವೆಂಟಿಲೇಟರ್‌ನಲ್ಲಿರಿಸಿ ಅವರ ಜೀವ ಕಾಪಾಡಲು ಪ್ರಯತ್ನಿಸಬೇಕು.
ಕೆಲವು ದಿನಗಳ ಹಿಂದೆಯಷ್ಟೇ ಕೋವಿಡ್ 19 ಸೋಂಕು ತಗುಲಿರುವ 82ರ ಹರೆಯದ ಮಹಿಳೆಯನ್ನು ವಾರ್ಡ್‌ನಲ್ಲಿ ದಾಖಲಿಸಲಾಗಿತ್ತು. ಅಮೆರಿಕದಲ್ಲಿರುವ ಅವರ ಮಗ ಮತ್ತು ಮಗಳು ನನಗೆ ಕರೆ ಮಾಡಿ ಅವರಮ್ಮನ ಆರೋಗ್ಯವನ್ನು ವಿಚಾರಿಸುತ್ತಲೇ ಇದ್ದರು. ಪ್ರಯಾಣಕ್ಕೆ ನಿರ್ಬಂಧ ಇರುವುದರಿಂದ ಅವರಿಗೆ ಬರಲಾಗಲಿಲ್ಲ. ಕೊನೆಗೊಂದು ದಿನ ಆ ಮಹಿಳೆ ಕೊನೆಯುಸಿರೆಳೆದರು. ನಮಗೆ ನಿಮ್ಮ ಅಮ್ಮನನ್ನು ಬದುಕುಳಿಸಲು ಸಾಧ್ಯವಾಗಲಿಲ್ಲ ಎಂದು ನಾನು ಅವರಿಗೆ ಹೇಳಿದೆ. ಅಮೆರಿಕದಲ್ಲಿದ್ದ ಮಕ್ಕಳಿಗೆ ಇಲ್ಲಿ ಬರಲು ಸಾಧ್ಯವಾಗುವುದಿಲ್ಲ. ಅಮ್ಮನ ಅಂತ್ಯ ಸಂಸ್ಕಾರ ಮಾಡಲು ಏಜೆನ್ಸಿಯೊಂದಕ್ಕೆ ಕರೆ ಮಾಡಿ ಆ ಕೆಲಸವನ್ನು ಅವರಿಗೊಪ್ಪಿಸುವುದಷ್ಟೇ ಅವರಿಗೆ ಸಾಧ್ಯವಾಗಿದ್ದು.

ಇಟಲಿಯ ಆರೋಗ್ಯ ವ್ಯವಸ್ಥೆ ಮೇಲೆ ಕೋವಿಡ್-19 ದೊಡ್ಡ ಪರಿಣಾಮ ಬೀರಿದ್ದು, ಚಿಂತಾಜನಕ ರೀತಿಯಲ್ಲಿರುವ ರೋಗಿಗಳಿಗೆ ಮಾತ್ರ ಇಲ್ಲಿನ ಆಸ್ಪತ್ರೆಗಳು ಚಿಕಿತ್ಸೆ ಒದಗಿಸುತ್ತಿವೆ. ಕಡಿಮೆ ರೋಗ ಲಕ್ಷಣಗಳು ಕಂಡು ಬಂದವರನ್ನು ಪ್ರತ್ಯೇಕವಾಗಿರಿಸಿ ಮನೆಯಲ್ಲಿಯೇ ಚಿಕಿತ್ಸೆ  ನೀಡಲಾಗುತ್ತದೆ. ಆದರೂ ರೋಗಿಗಳ ದಂಡೇ ಹರಿದುಬರುತ್ತಿದೆ ಅಂತಾರೆ ಮಧು.

ಸಿಕ್ಕಿಂ ಮಣಿಪಾಲ್ ವಿಶ್ವ ವಿದ್ಯಾಲಯದಿಂದ ಕ್ಲಿನಿಕಲ್ ರೀಸರ್ಚ್ ಸ್ನಾತಕೋತ್ತರ ಪದವಿ ಪಡೆದ ಇವರು ಕೆಲವು ವರ್ಷಗಳ ಹಿಂದೆ ಇಟಲಿ ಕನ್ನಡ ಸಂಘಟನೆ ಸ್ಥಾಪಿಸಿದ್ದು ಈಗ ಅದರ ಅಧ್ಯಕ್ಷರಾಗಿದ್ದಾರೆ. ಇವರು ಮತ್ತು ಅಲ್ಲಿನ ಇತರ ಸಂಘಟನೆಗಳ ಮುಖಂಡರು ಭಾರತದ ರಾಯಭಾರಿ ಕಚೇರಿಗೆ ಸಹಕರಿಸಿ ಮಿಲಾನ್, ಟ್ಯೂರಿನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಏರ್ ಇಂಡಿಯಾ  ಮೂಲಕ ಭಾರತಕ್ಕೆ ಕಳುಹಿಸಿದ್ದರು. ಆದರೆ ಕೋವಿಡ್-19 ಸೋಂಕಿನ ಭೀತಿ ನಡುವೆಯೂ ಮಧು ಇಟಲಿಯಲ್ಲೇ ಇರಲು ನಿರ್ಧರಿಸಿದ್ದರು.
ವೈರಸ್ ಸೋಂಕು ತಗುಲದಂತೆ  ಹಲವಾರು ಆರೋಗ್ಯ ಕಾರ್ಯಕರ್ತರು ರಜೆ ತೆಗೆದುಕೊಂಡಿದ್ದಾರೆ. ನಾನು ರಜೆ ತೆಗೆದುಕೊಂಡಿಲ್ಲ. ಏನೇ ಬರಲಿ, ಅದರ ವಿರುದ್ಧ ಹೋರಾಡಲು ಜನರಿಗೆ ಸಹಾಯ ಮಾಡೋಣ. ನಾನು ಕಲಿತಿದ್ದು ಕೂಡಾ ಅದನ್ನೇ ಅಲ್ಲವೇ ಅಂತಾರೆ ಮಧು. ಮೈಕ್ರೋಬಯಾಲಜಿಸ್ಟ್ ಆಗಿರುವ ಇವರ ಪತ್ನಿ ಸಂಜನಾ ಕೂಡಾ ಅಲ್ಲೇ ಇದ್ದಾರೆ.

ಆದರೆ ತುಮಕೂರಿನ ಎಂ.ಎನ್ ಕೋಟೆಯ ಕಮ್ಯೂನಿಟಿ  ಹೆಲ್ತ್ ಸೆಂಟರ್‌ನ ಸುಪರಿಟೆಂಡೆಂಟ್ ಆಗಿರುವ ಅಮ್ಮ ಭದ್ರಮ್ಮ ಎಂ.ವಿ ಅವರ ಬಗ್ಗೆ ಮಧು ಚಿಂತಿತರಾಗಿದ್ದಾರೆ. ಇವರ ಅವಳಿ ಸಹೋದರ ಹೇಮಂತ್ ಕುಮಾರ್ ಆರ್ ಅವರು ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸಿಟ್ಯೂಟ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದಾರೆ. ಕರ್ನಾಟಕ ಮತ್ತು ಭಾರತದ ಇತರೆಡೆ ಕೋವಿಡ್ 19 ಸೋಂಕು ಹರಡುವಿಕೆ ಬಗ್ಗೆ ಇವರು ನಿಗಾ ವಹಿಸುತ್ತಲೇ ಇದ್ದಾರೆ. ಅಮ್ಮನೂ ತಮ್ಮನೂ ಆರೋಗ್ಯ ಕಾರ್ಯಕರ್ತರಾಗಿರುವುದು ಒಂದು ಸಂಗತಿಯಾದರೆ ಭಾರತದಲ್ಲಿ  ಕೋವಿಡ್-19 ಸೋಂಕು ಹರಡುವಿಕೆ ಇಟಲಿಯಲ್ಲಿ ಹರಡಿದಂತೆ ಆದರೆ ಏನು ಮಾಡುವುದು ಎಂಬುದರ ಬಗ್ಗೆ ಇವರಿಗೆ ಚಿಂತೆಯಾಗಿದೆ.

ಇಟಲಿಯಲ್ಲಿ ಇದು ಮೊದಲು ಹರಡಿದಾಗ ಜನರು ತಲೆಕೆಡಿಸಿಕೊಂಡಿರಲಿಲ್ಲ. ಫೆಬ್ರುವರಿ 21ಕ್ಕೆ ಸೋಂಕು ಇರುವ ಹಲವಾರು ಪ್ರಕರಣಗಳು ದೃಢಪಟ್ಟರೂ ಜನರು ಹೊರಗೆ  ಸುತ್ತಾಡಿ  ಪಾರ್ಟಿ ಮಾಡುತ್ತಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಅವರು ಯೋಚಿಸಲೇ ಇಲ್ಲ. ಸೋಂಕು ಹರಡದಂತೆ ತಡೆಯಲು ಇದು ಮುಖ್ಯ. ಇಟಲಿಯನ್ನು ಸಂಪೂರ್ಣ ಲಾಕ್‌ಡೌನ್ ಮಾಡಲು ಆದೇಶ ನೀಡುವ ಹೊತ್ತಿನಲ್ಲಿ  ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಿತ್ತು. ನನ್ನ ದೇಶದ ಜನರು ಇದೇ ರೀತಿಯ ತಪ್ಪನ್ನು ಮಾಡುವುದು ಬೇಡ ಎಂದು ಮಧು ಹೇಳಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು