ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಟಲಿಯ ಬೀದಿಬೀದಿಗಳಲ್ಲಿ ಮರಣಮೃದಂಗ: ರಿಪೇರಿಯಾಗದಷ್ಟು ಕಂಗೆಟ್ಟಿದೆ ಜನರ ಬದುಕು

ದೇಶ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯಬೇಕು
Last Updated 3 ಏಪ್ರಿಲ್ 2020, 9:49 IST
ಅಕ್ಷರ ಗಾತ್ರ
ADVERTISEMENT
""
""
""
""
""
""
""
""
""

ನಿರಾಶ್ರಿತರ ವಲಸೆ, ಅಂತರ್ಯುದ್ಧ, ಭಯೋತ್ಪಾದಕರ ದಾಳಿ ಸೇರಿದಂತೆ ಹತ್ತಾರು ಮಾನವೀಯ ಬಿಕ್ಕಟ್ಟುಗಳನ್ನು ಹಲವು ವರ್ಷಗಳಿಂದ ವರದಿ ಮಾಡಿರುವ ಪತ್ರಕರ್ತೆಫ್ರಾನ್ಸೆಸ್ಕಾ ಮನೊಚ್ ಅವರು ಕೋವಿಡ್-19 ಪಿಡುಗು ಇಟಲಿಯನ್ನು ಹೇಗೆ ಬಾಧಿಸಿದೆ ಎಂಬ ಬಗ್ಗೆ ಬರೆದ ಸುದೀರ್ಘ ವರದಿಯ ಕನ್ನಡ ಅನುವಾದ ಇಲ್ಲಿದೆ. ಕೊರೊನಾ ವೈರಸ್ ಸೋಂಕು ಹೇಗೆ ಇಟಲಿಯ ಸಾಮಾಜಿಕ ವ್ಯವಸ್ಥೆಯನ್ನು ಬುಡಸಹಿತ ಅಲುಗಾಡಿಸುತ್ತಿದೆ ಎನ್ನುವ ಮಾನವೀಯ ಮಿಡಿತ ಈ ಬರಹದ ಪ್ರತಿ ಪದದಲ್ಲಿಯೂ ಅನುರಣಿಸಿದೆ.

---

ಸಿರಿಯಾ, ಯೆಮೆನ್ ಸೇರಿದಂತೆ ಹಲವು ದೇಶಗಳಲ್ಲಿ ನಾನುನಾಗರಿಕ ಸಂಘರ್ಷಗಳ ರಕ್ತದೋಕುಳಿ ಮತ್ತು ಯುದ್ಧಗಳನ್ನು ವರದಿ ಮಾಡಿದ್ದೇನೆ. ಆದರೆ ಇಟಲಿಯನ್ನು ಆವರಿಸುತ್ತಿರುವ ಕೋವಿಡ್-19 ಪಿಡುಗು ವರದಿ ಮಾಡಲು ಆ ಯಾವ ಅನುಭವವೂ ಉಪಯೋಗಕ್ಕೆ ಬರುತ್ತಿಲ್ಲ.

ಓರ್ವ ಪತ್ರಕರ್ತೆಯಾಗಿ ಹಲವು ವರ್ಷಗಳಿಂದ ಸಂಘರ್ಷ ವಲಯಗಳಲ್ಲಿ ಕೆಲಸ ಮಾಡಿದ್ದೇನೆ. ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕದ ಹಲವು ದೇಶಗಳಲ್ಲಿ ವರ್ಷಗಟ್ಟಲೆ ಇದ್ದೆ. ಅಪಾಯಕಾರಿ ರಸ್ತೆಗಳಲ್ಲಿ ವಾರಗಟ್ಟಲೆ ನಡೆದು ಬಂದ ನಿರಾಶ್ರಿತರೊಂದಿಗೆ ಹಲವು ದಿನಗಳನ್ನು ಕಳೆದಿದ್ದೇನೆ.ಎಷ್ಟೋ ಸಲ ಪ್ರಾಣಾಪಾಯದಿಂದ ಕೂದಲೆಳೆ ಅಂತರದಲ್ಲಿ ಅಂತಾರಲ್ಲ ಹಾಗೆ ಪಾರಾಗಿ ಬಂದಿದ್ದೇನೆ.

ಸಿರಿಯಾದ ಮೊಸುಲ್ ನಗರದ ಬೀದಿಗಳಲ್ಲಿ ಇಸ್ಲಾಮಿಕ್ ಸ್ಟೇಟ್ ಹೋರಾಟಗಾರರ ಡಜನ್‌ಗಟ್ಟಲೆ ಹೆಣಗಳನ್ನು ನೋಡಿದ್ದೇನೆ. ಕೈಗಳನ್ನು ಹಿಂದಕ್ಕೆ ಕಟ್ಟಿ, ತಲೆಗೆ ಒಂದೇ ಗುಂಡು ಹೊಡೆದು ಕೊಂದ ನಾಗರಿಕರ ಶವಗಳನ್ನು ಕಂಡಿದ್ದೇನೆ. ಕಟ್ಟಡ ಅವಶೇಷಗಳ ನಡುವೆ ಗೊಂಬೆಯನ್ನು ತಬ್ಬಿಕೊಂಡಿದ್ದ ಮಗುವಿನ ಶವ ಕಂಡ ನೆನಪು ಇಂದಿಗೂ ನನ್ನನ್ನು ಬಾಧಿಸುತ್ತಿದೆ. ತಮ್ಮ ಮಕ್ಕಳ ಹತ್ಯೆ ಕಂಡ ಅಪ್ಪ-ಅಮ್ಮಂದಿರ ಕಣ್ಣೀರಿಗೂ ನಾನು ಸಾಕ್ಷಿಯಾಗಿದ್ದೆ.

ಸಾವಿಗೆ ಹತ್ತಿರವಾಗಿ ಬದುಕುವುದು ನಾನು ಆರಿಸಿಕೊಂಡ ವೃತ್ತಿ. ನಾನು ನಿರ್ವಹಿಸಿದ ಕೆಲ ಅಸೈನ್‌ಮೆಂಟ್‌ಗಳಲ್ಲಿ ಲಿಬಿಯಾ ನಾಗರಿಕ ಯುದ್ಧಗಳು, ಇಸ್ಲಾಮಿಕ್ ಸ್ಟೇಟ್ ವಿರುದ್ಧದ ಯುದ್ಧ, ಕಾಬೂಲ್‌ನ ಕಾರ್‌ ಬಾಂಬಿಂಗ್, ಟ್ಯುನಿಶಿಯಾದಲ್ಲಿ ಭಯೋತ್ಪಾದಕರ ದಾಳಿ, ಈಜಿಪ್ಟ್‌ನಲ್ಲಿ ಸೇನಾಕ್ರಾಂತಿ, ಗಾಜಾದಲ್ಲಿ ಬಾಂಬ್‌ದಾಳಿಯೂ ಸೇರಿದೆ.

ನಾನೇನೋ ಘನಂದಾರಿ ಕೆಲಸ ಮಾಡಿಬಿಟ್ಟಿದ್ದೇನೆ ಎಂದು ಕೊಚ್ಚಿಕೊಳ್ಳಲು ಇಷ್ಟು ಹೇಳಿದ್ದಲ್ಲ. ಪ್ರತಿ ಬಾರಿ ಅಸೈನ್‌ಮೆಂಟ್ ಮುಗಿಸಿಮನೆಗೆ ಬಂದಾಗಲೂ ನನಗೆ ನೆಮ್ಮದಿಯ ಭಾವ ಮೂಡುತ್ತಿತ್ತು. ಜಗತ್ತಿನ ಅತಿ ಮುಖ್ಯ ವಿದ್ಯಮಾನಗಳಿಗೆ ಸಾಕ್ಷಿಯಾಗುವ ಅವಕಾಶ ಕೊಟ್ಟಿದ್ದ ವಿಧಿಯುಜಗತ್ತಿನಅತ್ಯಂತ ಸುರಕ್ಷಿತ ದೇಶದ ಪ್ರಜೆಯಾಗುವ ಅವಕಾಶವನ್ನೂ ದಯಪಾಲಿಸಿತ್ತು.ಇದನ್ನು ನನ್ನ ಅದೃಷ್ಟ ಎಂದೇ ಭಾವಿಸಿದ್ದೆ.

ಪ್ರತಿಸಲ ನಾನು ಮನೆಗೆ ಹಿಂದಿರುಗಿದಾಗಲೂ ನನಗೆ ಒಂದು ವಿಷಯ ಅಚ್ಚರಿ ಮೂಡಿಸುತ್ತಿತ್ತು. ಯುದ್ಧವನ್ನು ಎಂದಿಗೂ ನೋಡದವರು, ಬಾಂಬ್‌ ಸ್ಫೋಟ, ಹಸಿವಿನ ಭೀಕರತೆ ಅನುಭವಿಸದವರು, ಯಾರ ನೆನಪಿನ ಭಿತ್ತಿಯಲ್ಲಿ ಯುದ್ಧ ಎಂದಿಗೂ ದಾಖಲಾಗಿಲ್ಲವೋ ಅಂಥವರು ಯುದ್ಧ ಎಂಬ ಪದವನ್ನು ಹೇಗೆ ಪರಿಭಾವಿಸುತ್ತಾರೆ?

ಇದೇ ಕಾರಣಕ್ಕೆ ನಾನು ಭಾಷೆಯ ಮೇಲೆ ಕೆಲಸ ಮಾಡಲು ಅರಂಭಿಸಿದೆ. ನನ್ನ ಪ್ರಶ್ನೆಗಳಿಗೆ ಹೊಸ ಪದಗಳಲ್ಲಿ ಉತ್ತರ ಹುಡುಕಲು ಶುರು ಮಾಡಿದೆ. ಇಟಲಿಯಂಥ 'ಸುರಕ್ಷಿತ' ದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಭೀಕರ ಪರಿಸ್ಥಿತಿಯನ್ನು ಅರ್ಥ ಮಾಡಿಸಲು ಯತ್ನಿಸಿದೆ.

ಕೆಲವೊಮ್ಮೆ ನಾನು ಯಶಸ್ವಿಯಾದೆ, ಕೆಲವೊಮ್ಮೆ ವಿಫಲಳಾದೆ.

ಸೋಂಕು ಪರೀಕ್ಷೆಗೆ ಗಂಟಲು ದ್ರವ ಸಂಗ್ರಹಿಸುತ್ತಿರುವ ವೈದ್ಯಕೀಯ ಸಿಬ್ಬಂದಿ

ಆತಂಕದಲ್ಲಿದೆ ಸುರಕ್ಷಿತ ದೇಶದ ಬದುಕು

ನನ್ನ ಸ್ವಂತ ದೇಶದಲ್ಲಿ ನಮ್ಮ ಬದುಕು ಈಗ ಅಷ್ಟು ಸುರಕ್ಷಿತವಾಗಿ ಉಳಿದಿಲ್ಲ. ಕೊರೊನಾ ವೈರಸ್ ಹಬ್ಬುವುದು ಶುರುವಾದ ನಂತರ ಬದುಕು ಸಾಕಷ್ಟು ಬದಲಾಗಿದೆ. ಬದುಕಿನ ಹಲವು ಆಯಾಮಗಳು ಬದಲಾಗಿವೆ. ಕೆಲ ಮಾಧ್ಯಮಗಳು ಕೊರೊನಾ ವೈರಸ್ ಹರಡುವುದನ್ನು ತಡೆಯಲು ಸರ್ಕಾರ ತೆಗೆದುಕೊಂಡಿರುವ ಕ್ರಮಗಳನ್ನು "ಯುದ್ಧ" ಎಂದು ಬಣ್ಣಿಸಿದಾಗ ನನಗೆ ಭಯವಾಯಿತು.

ಯಾವುದೇ ಸಮಸ್ಯೆಯನ್ನು ಅಥವಾ ಅದನ್ನು ನಿವಾರಿಸಿಕೊಳ್ಳಲು ನಾವು ಮಾಡುವ ಪ್ರಯತ್ನವನ್ನು "ಯುದ್ಧ" ಎಂದುಕೊಳ್ಳುವುದು ಒಂದು ನೈಜ ಸಮಸ್ಯೆಯ ಮೇಲೆ ನಮ್ಮ ದೃಷ್ಟಿಯನ್ನು ಕೇಂದ್ರೀಕರಿಸಲು ಸಾಧ್ಯವಾಗದ ಪರಿಸ್ಥಿತಿಗೆ ಕಾರಣವಾಗುತ್ತದೆ. ನಮ್ಮ ದೇಶದ ಆರೋಗ್ಯ ವ್ಯವಸ್ಥೆಯ ಮಿತಿಗಳು ಮತ್ತು ಶಕ್ತಿಗಳನ್ನು ಸರಿಯಾಗಿ ಗ್ರಹಿಸಲು ಇದರಿಂದ ಕಷ್ಟವಾಗುತ್ತೆ. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ಅತ್ಯಂತ ಭಯಕ್ಕೆ ಕಾರಣವಾದ ಅಂಶವೊಂದನ್ನು ಮರೆ ಮಾಚುತ್ತೆ. ಆ ಅಂಶ ಯಾವುದು ಗೊತ್ತೇ?

ಅದು ಸಾವು.

ನಾನು ಕಳೆದ ಒಂದು ತಿಂಗಳವರೆಗೆ ಸಂಪೂರ್ಣ ನಿರ್ಲಕ್ಷಿಸಿದ್ದ ವಿದ್ಯಮಾನವೊಂದರ ಬಗ್ಗೆ ಈಗ ನಾನು ಮಾತನಾಡುತ್ತೇನೆ. ಅದು ನನ್ನ ಬದುಕನ್ನು ಇಡಿಯಾಗಿ ಬದಲಿಸಿತು. ನೇರವಾಗಿ ನನ್ನ ಕುಟುಂಬವನ್ನು ಬಾಧಿಸಿತು. ಇಟಲಿ ದೇಶದ ಪ್ರಜೆಯಾಗಿ ಮತ್ತು ಓರ್ವ ಪತ್ರಕರ್ತೆಯಾಗಿ ನನ್ನೆದುರು ಇರುವ ಖಾಲಿತನದ ಬಗ್ಗೆ, ಪ್ರಶ್ನೆಗಳ ಬಗ್ಗೆ ಇಲ್ಲಿಂದಾಚೆಗೆ ಸ್ಪಷ್ಟವಾಗಿ ಮಾತನಾಡಲು ಯತ್ನಿಸುತ್ತೇನೆ.

ಮತ್ತೊಮ್ಮೆ ಹೇಳುತ್ತೇನೆ ನೆನಪಿಡಿ, ಇದು ಯುದ್ಧವಲ್ಲ.

ಇಟಲಿಯ ಫ್ಲೊಕೊನಿಕಾ ನಗರದಲ್ಲಿ ಮನೆಯಲ್ಲಿ ಉಳಿದ ಮಹಿಳೆಗೆ ಆಹಾರ ಒದಗಿಸುತ್ತಿರುವ ಸರ್ಕಾರಿ ನೌಕರರು

ದೂರದ ಸುದ್ದಿಯೊಂದು ನಮ್ಮನೆ ಬಾಗಿಲು ಬಡಿದಾಗ

ಕೇವಲ ಒಂದು ತಿಂಗಳ ಹಿಂದೆ ಅಂದರೆ ಫೆಬ್ರುವರಿ ಮತ್ತು ಮಾರ್ಚ್‌ ಅವಧಿಯಲ್ಲಿ ನಾನು ಲಿಬಿಯಾ ರಾಜಧಾನಿ ಟ್ರಿಪೋಲಿಯಲ್ಲಿ ಯುದ್ಧವನ್ನು ವರದಿ ಮಾಡುತ್ತಿದ್ದೆ. ಗ್ರೀಕ್‌ ದ್ವೀಪಗಳಾದ ಲೆಸ್ಬೋಸ್ ಮತ್ತು ಸಮೋಸ್‌ನಲ್ಲಿ ಪೊಲೀಸರು ತಡೆದಿದ್ದ 44 ಸಾವಿರ ವಲಸಿಗರ ದುಸ್ತರ ಪರಿಸ್ಥಿತಿಯ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೆ. ಐರೋಪ್ಯ ರಾಷ್ಟ್ರಗಳು ಈ ನಿರಾಶ್ರಿತರಿಗೆ ಆಶ್ರಯ ಎಂದು ನೀಡುವುದೋ ಎಂದು ನಿರೀಕ್ಷಿಸುತ್ತಿದ್ದೆ.

ಅವರು ತಮ್ಮ ತಲೆಗಳ ಮೇಲೆ ಸೂರಿಲ್ಲದೆ ಬದುಕುತ್ತಿದ್ದರು. ಶೌಚಾಲಯವಂತೂ ದೂರದ ಮಾತು. ವಿದ್ಯುತ್ ಸೌಕರ್ಯವೂ ಇರಲಿಲ್ಲ. ಆಹಾರದ ತೀವ್ರಕೊರತೆ ಎದುರಿಸುತ್ತಿದ್ದ ಅವರಿಗೆ ವೈದ್ಯಕೀಯ ಸೌಲಭ್ಯಗಳಂತೂ ಮರೀಚಿಕೆಯೇ ಸರಿ. ಸಾಂಕ್ರಾಮಿಕ ರೋಗ ಆ ಗುಂಪಿನಲ್ಲಿ ಉಂಟು ಮಾಡಬಹುದಾದ ಅನಾಹುತ ನೆನೆದರೆ ಇಂದಿಗೂ ಆತಂಕವಾಗುತ್ತೆ. ಈ ನಡುವೆಯೇ ಕೊರೊನಾ ವೈರಸ್ ಸೋಂಕಿನ ಭೀತಿಯ ಸುದ್ದಿ ಜಗತ್ತನ್ನು ಅಪ್ಪಳಿಸಿತ್ತು.

ನಾನು ರೋಮ್‌ಗೆ ಬಂದಾಗ ಮಾರ್ಚ್‌ 9. ಫ್ಯುಮಿಸಿನೊ ವಿಮಾನ ನಿಲ್ದಾಣದ ಎಲ್ಲ ವಿಮಾನಗಳನ್ನೂ ರದ್ದುಪಡಿಸಿದ್ದರು. ಭದ್ರತಾ ವ್ಯವಸ್ಥೆಯನ್ನು ದುಪ್ಟಟ್ಟು ಮಾಡಲಾಗಿತ್ತು. ಎಲ್ಲೆಲ್ಲೂ ಮಾಸ್ಕ್‌ ಮತ್ತು ಕೈಗವಸುಗಳು ಕಂಡುಬರುತ್ತಿದ್ದವು. ಈ ಲೇಖನ ಬರೆಯುವ ಹೊತ್ತಿಗೆ ಇಟಲಿಯಲ್ಲಿ 105,792 ಲಕ್ಷ ಕೊರನಾ ಪ್ರಕರಣಗಳು ದೃಢಪಟ್ಟಿದ್ದವು. 12,428 ಮಂದಿ ಮೃತಪಟ್ಟಿದ್ದರು.

ಆರೋಗ್ಯ ಸಂಸ್ಥೆಯ ದತ್ತಾಂಶಗಳ ಪ್ರಕಾರ ಇಟಲಿಯ 4,824 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. ಇದು ಒಟ್ಟಾರೆ ಸೋಂಕಿತರ ಶೇ 9ರಷ್ಟಾಗುತ್ತೆ. ಚೀನಾದಲ್ಲಿ ವೈದ್ಯಕೀಯ ಸಿಬ್ಬಂದಿಗೆ ತಗುಲಿದ ಸೋಂಕಿನ ಸಂಖ್ಯೆಗೆ ಹೋಲಿಸಿದರೆ ಇದು ದುಪ್ಪಟ್ಟು.ಆದರೆ ಸಂಖ್ಯೆಗಳ ಬಗ್ಗೆಯೂ ಹಲವರು ತಕರಾರು ದಾಖಲಿಸಿದ್ದಾರೆ. ಗಿಂಬೆ ಪ್ರತಿಷ್ಠಾನವು ಈ ದತ್ತಾಂಶವನ್ನು ಸರಿಯಾಗಿ ಅಂದಾಜಿಸಿಲ್ಲ ಎಂದು ಹೇಳಿದೆ. ಎಲ್ಲ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೋಂಕು ತಪಾಸಣೆ ನಡೆಸಬೇಕು ಎಂದು ಪ್ರತಿಷ್ಠಾನವು ಆಗ್ರಹಿಸಿದೆ.

ಇಟಲಿಯ ವೈದ್ಯರು ಮತ್ತು ನರ್ಸ್‌ಗಳ ಸಹಾಯಕ್ಕೆ ಕ್ಯೂಬಾ 52 ವೈದ್ಯರನ್ನು ಕಳಿಸಿಕೊಟ್ಟಿದೆ. ಎಬೊಲಾ ಸೋಂಕು ವ್ಯಾಪಿಸಿದಾಗ ಅದನ್ನು ತಡೆಯಲು ಶ್ರಮಿಸಿದ ಅನುಭವ ಕ್ಯೂಬಾದ ಈ ವೈದ್ಯರಿಗೆ ಇದೆ.

ಮಾಸ್ಕ್ ಮತ್ತು ಕೈಗವಸು ಧರಿಸಿ ಸಂಸತ್ತಿನಲ್ಲಿ ಮಾತನಾಡಿದ ಇಟಲಿ ಪ್ರಧಾನಿ ಗಿಯಸೆಪ್ಪೆ ಕಾಂಟೆ

ಸೋಂಕು ತಡೆಯಲು ಪ್ರಧಾನಿ ಹೇಳಿದ ನಾಲ್ಕು ಸೂತ್ರ

ಕೊರೊನಾ ವೈರಸ್ ಸೋಂಕು ತಡೆಯಲು ಇಟಲಿ ಪ್ರಧಾನಿ ಗಿಯಸೆಪ್ಪೆ ಕಾಂಟೆ ನಾಲ್ಕು ಆದೇಶಗಳನ್ನು ನೀಡಿದ್ದಾರೆ.

1) ಓಡಾಟ ಕಡಿಮೆ ಮಾಡಿ
2) ವೈಯಕ್ತಿಕ ಸ್ವಚ್ಛತೆ ಕಾಪಾಡಿ
3)ಪ್ರದೇಶಗಳ ಮಟ್ಟದಲ್ಲಿ ಲಾಕ್‌ಡೌನ್‌ ಜಾರಿ ಮಾಡಿ
4)ಅತ್ಯಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದೆಲ್ಲ ಉತ್ಪನ್ನಗಳ ಉತ್ಪಾದನೆ ಸ್ಥಗಿತಗೊಳಿಸಿ

ಕಳೆದ ಬಾರಿ ನನ್ನ ಅಸೈನ್‌ಮೆಂಟ್ ಮುಗಿಸಿ ಇಟಲಿಗೆ ಬಂದಾಗಿನಿಂದ ನನ್ನ ಬದುಕು ಬದಲಾಗಿದೆ. ನನ್ನ ಮಗ ಶಾಲೆಗೆ ಹೋಗುವುದು ಬಿಟ್ಟಿದ್ದಾನೆ. ದಿನಸಿಗಾಗಿ ನಾವು ಅಂಗಡಿಗಳ ಮುಂದೆ ಕ್ಯೂ ನಿಲ್ಲುತ್ತಿದ್ದೇವೆ. ಹೀಗೆ ಕ್ಯೂ ನಿಲ್ಲುವಾಗಲೂ ನಾವು ಒಂದು ಮೀಟರ್‌ಗಿಂತಲೂ ಹೆಚ್ಚು ಅಂತರ ಕಾಪಾಡಿಕೊಳ್ಳುತ್ತಿದ್ದೇವೆ. ಮನೆಯಿಂದ ಹೊರಗೆ ಹೆಜ್ಜೆಯಿಟ್ಟರೆ, ಅಷ್ಟೇಕೆ ಅನೇಕ ಬಾರಿ ಮನೆಯಲ್ಲಿದ್ದಾಗಲೂ ಕೈಗವಸು ಮತ್ತು ಮಾಸ್ಕ್‌ಗಳನ್ನು ಹಾಕಿಕೊಂಡೇ ಇರುತ್ತೇವೆ. ದಿನಕ್ಕೆ ಅದೆಷ್ಟು ಬಾರಿ ಕೈ ತೊಳೆಯುತ್ತೇನೋ ಲೆಕ್ಕವೇ ಇಲ್ಲ. ನನ್ನೆಲ್ಲಾ ಗೆಳೆಯ/ಗೆಳತಿಯರು ಮತ್ತು ಬಂಧುಗಳನ್ನು ನೋಡುವುದನ್ನೇ ಬಿಟ್ಟುಬಿಟ್ಟಿದ್ದೇನೆ.

ಇಟಲಿ ಚರ್ಚ್‌ಗಳಲ್ಲಿ ಜನರು ಕಳಿಸುವ ಸೆಲ್ಫಿಗಳನ್ನು ಕುರ್ಚಿಗಳಿಗೆ ತೂಗುಹಾಕಿ ಪಾದ್ರಿ ಪೂಜಾ ಕಾರ್ಯಗಳನ್ನು ಮುಗಿಸುತ್ತಿದ್ದಾರೆ.

ಹತ್ತಿರದ ಬಂಧುವಿಗೆ ಕೋವಿಡ್-19

ಹೀಗೆ ನನ್ನ ಬದುಕು ನಿಧಾನವಾಗಿ ಕೋವಿಡ್-19ರ ಭೀತಿಯಲ್ಲಿ ಬದುಕುವುದನ್ನು ರೂಢಿಸಿಕೊಳ್ಳುವ ಹೊತ್ತಿಗೆ ನನ್ನ ಹತ್ತಿರದ ಬಂಧುವೊಬ್ಬರಿಗೆ ಕೋವಿಡ್-19 ಬಂದಿರುವುದು ಗೊತ್ತಾಯಿತು.

ಎಂಟು ದಿನಗಳಿಂದ ಅವರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಅವರಿಗೀಗ 70 ವರ್ಷ. ತಮ್ಮ ಹೆಂಡತಿ, ಅತ್ತೆಯೊಂದಿಗೆ ರೋಂ ನಗರದ ಹೊರವಲಯದಲ್ಲಿರುವ ಸಣ್ಣ ಹಳ್ಳಿಯೊಂದರಲ್ಲಿ ಅವರು ವಾಸವಿದ್ದರು. ಮಧ್ಯ ಇಟಲಿಯ ಇತರೆಲ್ಲಾ ಹಳ್ಳಿಗಳಂತೇ ಅದೂ ಇತ್ತು. ಸಣ್ಣ ಅಂಗಡಿಗಳು, ಕಾಫಿ ಶಾಪ್‌ಗಳು, ಹಳ್ಳಿಯಲ್ಲಿರುವ ಎಲ್ಲರೂ ಎಲ್ಲರಿಗೂ ಪರಿಚಿತರು, ಆಪ್ತರು. ಹಳ್ಳಿಯ ಡಾಕ್ಟರ್‌ಗಂತೂ ಅಲ್ಲಿರುವ ಎಲ್ಲರ ಹೆಸರು ಮತ್ತು ರೋಗವಿವರಗಳು ನಾಲಗೆಯ ತುದಿಯಲ್ಲಿದ್ದವು.

'ನಮ್ಮೂರಿಗೆ ಕೋವಿಡ್-19 ಎಂದಿಗೂ ಬರುವುದಿಲ್ಲ' ಎಂದು ಎಲ್ಲರೂ ಹೆಮ್ಮೆಯಿಂದ ಹೇಳುತ್ತಿದ್ದರು. ಇಂಥ ನಂಬಿಕೆಗಳ ಜೊತೆಗೆ ಪ್ರಧಾನಿ ಮತ್ತು ಮೇಯರ್ ವಿಧಿಸಿದ್ದ ನಿರ್ಬಂಧಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು.

ಆದರೂ ಅದು ಅಲ್ಲಿಗೆ ಬಂತು.

ನನ್ನ ಅಂಕಲ್‌ಗೆ ಕಳೆದ ಕೆಲ ದಿನಗಳಿಂದ ತೀವ್ರ ಜ್ವರ ಬಾಧಿಸುತ್ತಿತ್ತು. ಜ್ವರ ಬಂದ 5ನೇ ದಿನವೇ ತನ್ನ ರೋಗಿಯ ದೇಹಸ್ಥಿತಿಯಲ್ಲಿ ಏನೋ ಗಂಭೀರವಾದ್ದದ್ದು ಆಗಿದೆಎಂಬ ಭಾವ ವೈದ್ಯರಿಗೆ ಮನಸ್ಸಿಗೆ ತುಂಬಿತು. ತನ್ನ ಕೈಲಿ ಇನ್ನೇನು ಮಾಡಲು ಸಾಧ್ಯವಿಲ್ಲ ಎನಿಸಿದಾಗ ಅವರು ಕೋವಿಡ್-19 ಶಂಕಿತ ರೋಗಿಗಳ ಸೇವೆ ಮೀಸಲಿರುವ ಆಂಬುಲೆನ್ಸ್‌ ಕರೆಸಿ, ರೋಗಿಯನ್ನು ರೋಮ್‌ಗೆ ಕಳಿಸಿಕೊಟ್ಟರು.

ವೈದ್ಯಕೀಯ ಸಿಬ್ಬಂದಿ ಹಳ್ಳಿಗೆ ತಲುಪಿದಾಗ ಮಧ್ಯರಾತ್ರಿಯಾಗಿತ್ತು. ವೈದ್ಯರು ಮತ್ತು ನರ್ಸ್‌ಗಳು ಸೋಂಕು ನಿರೋಧಕ ಉಡುಗೆಗಳೊಂದಿಗೆ ಹಳ್ಳಿಗೆ ಬಂದಿದ್ದರು.

ಸ್ಟ್ರೆಚರ್ ಮೇಲೆ ಮಲಗಿದ್ದ ನನ್ನ ಮಾವ, ಸತತ ಕೆಮ್ಮಿನ ನಡುವೆಯೂ, 'ಎಲ್ಲಾ ಸರಿಯಾಗುತ್ತೆ, ಏನೂ ಯೋಚನೆ ಮಾಡಬೇಡ, ನಾನು ಹುಷಾರಾಗಿ ವಾಪಸ್ ಬಂದು ಬಿಡ್ತೀನಿ, ನೀನು ಹೊತ್ತೊತ್ತಿಗೆ ಊಟ ತಿಂಡಿ ಮಾಡಿಕೊ' ಎಂದು ಅತ್ತೆಗೆ ಪಿಸುಗುಟ್ಟಿ ಆಂಬುಲೆನ್ಸ್‌ ಒಳಗೆ ಸೇರಿಕೊಂಡರು.

ಇಷ್ಟೆಲ್ಲಾ ಆಗುವಾಗ ಗಂಟೆ ರಾತ್ರಿ 10.30 ದಾಟಿತ್ತು. ಬೆಳಿಗ್ಗೆ 5 ಗಂಟೆಯ ಹೊತ್ತಿಗೆ ನನ್ನ ಮಾವನನ್ನು ಕೋವಿಡ್-19 ರೋಗಿಗಳನ್ನು ದಾಖಲಿಸುವ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಸೇರಿಸಿದ್ದರು. ಕೆಲವೇ ಗಂಟೆಗಳಲ್ಲಿ ಅವರ ರಕ್ತ ಪರೀಕ್ಷೆಯ ವರದಿ ಬಂತು. ಅವರಲ್ಲಿ ಕೊರೊನಾ ವೈರಸ್ ಸೋಂಕು ಪಾಸಿಟಿವ್ ಇರುವುದು ದೃಢಪಟ್ಟಿತ್ತು. ತೀವ್ರತರವಾದ ನ್ಯುಮೊನಿಯಾದಿಂದ ಬಳಲುತ್ತಿದ್ದ ಅವರ ಶ್ವಾಸಕೋಶಗಳು ಶಕ್ತಿ ಕಳೆದುಕೊಂಡಿತ್ತು. ಮೈಗೆಲ್ಲಾ ಪೈಪುಗಳನ್ನು ಚುಚ್ಚಿ ಅವರನ್ನು ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಸಿದರು.

ಇಟಲಿಯ ನೇಪಲ್ಸ್‌ ನಿವಾಸಿಗಳು ಅನಿವಾರ್ಯ ಏಕಾಂತದಿಂದ ಖಿನ್ನರಾಗಿದ್ದಾರೆ.

ಎಲ್ಲೆಡೆ ರೋಗ ಮತ್ತು ಸಾವಿನ ಭೀತಿ

ಕೊರೊನಾ ವೈರಸ್‌ ಸೋಂಕಿನ ಭೀತಿ ಇದೇ ಮೊದಲ ಬಾರಿಗೆ ಇಟಲಿ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೇಲೆ ಪ್ರಭಾವ ಬೀರಿದೆ. ದೊಡ್ಡ ಮಟ್ಟದಲ್ಲಿ ಹರಡಿದೆ. ರೋಗ ಮತ್ತು ಸಾವಿನ ಭೀತಿಯಿಂದ ಇಡೀ ದೇಶ ಕುಸಿದಿದೆ. ನಮ್ಮ ತೀರಾ ಹತ್ತಿರದವರಿಗೆ ರೋಗ ಬಂದು, ಕಂಗಾಲಾಗಿದ್ದಾರೆ ಎಂದು ತಿಳಿದ ನಂತರವೂ ಅವರನ್ನು ನಾವು ಕಾಳಜಿ ಮಾಡಲು ಆಗುತ್ತಿಲ್ಲ ಎಂಬ ಕಟು ವಾಸ್ತವ ನಮ್ಮನ್ನು ಬಾಧಿಸುತ್ತಿದೆ.

ಆಸ್ಪತ್ರೆಗೆ ಸೇರಿರುವ ಸಂಬಂಧಿಕರನ್ನು ಅವರ ಹತ್ತಿರದವರು ಮುಟ್ಟುವಂತಿಲ್ಲ ಎಂಬುದೇ ನಮ್ಮ ಮನಸ್ಸುಗಳಿಗೆ ಬಹುದೊಡ್ಡ ಆಘಾತ ಉಂಟು ಮಾಡಿರುವ ಸಂಗತಿ.ಸೋಂಕಿನಿಂದ ನರಳುತ್ತಿರುವವರ ಕೈಹಿಡಿದು, 'ಎಲ್ಲವೂ ಸರಿಯಾಗುತ್ತೆ, ಐ ಲವ್ ಯು' ಎಂದು ಹೇಳಬೇಕೆಂಬ ಮನಸ್ಸಿನ ಮಾತನ್ನು ಎಷ್ಟೋ ಜನರಿಗೆ ಆಡಲು ಆಗುತ್ತಿಲ್ಲ.

ಅಂದು ರಾತ್ರಿ ನನ್ನ ಮಾವನನ್ನು ಆರೋಗ್ಯ ಇಲಾಖೆ ಕಾರ್ಯಕರ್ತರು ಕರೆದೊಯ್ದ ನಂತರ ನನ್ನ ಸೋದರ ಸಂಬಂಧಿ ಮತ್ತು ಇತರ ಕುಟುಂಬದ ಸದಸ್ಯರನ್ನು ಪ್ರತ್ಯೇಕವಾಸಕ್ಕೆ ಕಳಿಸಲಾಯಿತು. ಅವರನ್ನು ಎರಡು ಪ್ರತ್ಯೇಕ ಮನೆಗಳಲ್ಲಿ ಇರಿಸಲಾಗಿದೆ. ನನಗೆ ಇದೆಲ್ಲಾ ಗೊತ್ತಿದ್ದರೂ, ಅವರು ನನಗೆ ಅಷ್ಟು ಆಪ್ತರು ಎಂದು ತಿಳಿದಿದ್ದರೂ ನನ್ನಿಂದ ಏನೂ ಮಾಡಲು ಆಗುತ್ತಿಲ್ಲ. ಮಾವನ ಪರಿಸ್ಥಿತಿ ಹೇಗಿದೆ ಎಂಬುದು ಅವರಿಗೂ ಸರಿಯಾಗಿ ತಿಳಿಯುತ್ತಿಲ್ಲ.

ಇಟಲಿಯ ಲೊಂಬಾರ್ಡಿ ನಗರದಲ್ಲಿ ತುರ್ತು ನಿಗಾ ಘಟಕದಿಂದ ಕೆಲಸ ಮುಗಿಸಿ ಹೊರಗೆ ಬರುತ್ತಿರುವ ವೈದ್ಯ

ವೈದ್ಯರ ಮಾತೆಂಬ ದೇವವಾಣಿ

ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್-19 ರೋಗಿಗಳ ಸಂಬಂಧಿಕರ ಜೊತೆಗೆ ಅವರಿಗೆ ಚಿಕಿತ್ಸೆ ಕೊಡುತ್ತಿರುವ ವೈದ್ಯರು ದಿನಕ್ಕೊಮ್ಮೆ ಮಾತ್ರ ಫೋನ್ ಮಾಡಿ ಮಾತನಾಡುತ್ತಾರೆ. ಆ ಫೋನ್ ಕಾಲ್‌ಗಾಗಿ ನಾವೆಲ್ಲರೂ ಕಾತರದಿಂದ ಕಾಯುತ್ತಿರುತ್ತೇವೆ. ಕಳೆದ 8 ದಿನಗಳಿಂದ ಒಂದೇ ಸಮಯಕ್ಕೆ ನಮಗೆ ಫೋನ್ ಕಾಲ್ ಬರುತ್ತಿದೆ. ಆ ಕಡೆಯಿಂದ ಮಾತನಾಡುವವರು ಒಂದೇ ದನಿಯಲ್ಲಿ ಎರಡೇ ವಾಕ್ಯ ಹೇಳುತ್ತಿದ್ದಾರೆ, 'ರೋಗಿಯು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಆದರೆ ಗುಣಮುಖರಾಗುತ್ತಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ ಆದರೆ ಗಂಭೀರವಾಗಿದೆ.'

ನಾವು ಎಷ್ಟೋ ದಿನಗಳಲ್ಲಿ ಇಂಥ ಕರೆಗಳಿಂದ ಕೇವಲ "ಆರೋಗ್ಯ ಸ್ಥಿರವಾಗಿದೆ" ಎನ್ನುವ ಎರಡು ಪದಗಳನ್ನು ಕೇಳಿಸಿಕೊಳ್ಳಲು ಹೆಚ್ಚು ಲಕ್ಷ್ಯ ವಹಿಸಿರುತ್ತೇವೆ. ಉಳಿದ ಪದಗಳನ್ನು ನಾವು ಅಷ್ಟಾಗಿ ಗಮನದಲ್ಲಿ ಇರಿಸಿಕೊಳ್ಳುವುದಿಲ್ಲ. ಆದರೆ ವೈದ್ಯರೊಂದಿಗೆ ಸಂಭಾಷಣೆ ಮುಗಿದ ನಂತರ"ಆರೋಗ್ಯ ಸ್ಥಿತಿ ಗಂಭೀರವಾಗಿದೆ" ಎಂಬುದನ್ನು ಮಾತ್ರ ನಮ್ಮ ಮನಸ್ಸು ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ. ಅತ್ತ ಕಡೆ ಕಾಯಿಲೆ ಇರುವ ವ್ಯಕ್ತಿಯು ನೋವು ಅನುಭವಿಸುತ್ತಿದ್ದಾನೆ. ಅವನನ್ನು ಉಳಿಸಬೇಕೆಂದು ವೈದ್ಯಕೀಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಆದರೆ ನಮಗೆ ಏನೂ ಮಾಡಲು ಆಗುತ್ತಿಲ್ಲ. ಈ ಅಸಹಾಯಕತೆಯ ನೋವು ನಮ್ಮನ್ನು ಅತಿಯಾಗಿ ಬಾಧಿಸುತ್ತದೆ.

ಇಟಲಿಯ ಲೊಂಬಾರ್ಡಿ ನಗರದಲ್ಲಿ ಸಂಸ್ಕಾರಕ್ಕಾಗಿ ಕಾಯುತ್ತಿರುವ ಶವಪೆಟ್ಟಿಗೆಗಳು

ತುಂಬಿ ಹೋಗಿದೆ ಸ್ಮಶಾನ

ನನ್ನ ಸೋದರಮಾವ ಆಸ್ಪತ್ರೆಗೆ ಸೇರಿದರೆಂದು ತಿಳಿಯುವ ಹೊತ್ತಿಗೆ ಪಿಯಾಸೆಂಜಾದಿಂದ ಬಂದ ಟೀವಿ ಸುದ್ದಿ ಮತ್ತೊಂದು ಕೆಟ್ಟ ವಿಷಯ ಹೇಳಿತು. ಪಟ್ಟಣದ ಸ್ಮಶಾನ ತುಂಬಿಹೋಗಿದೆ. ನೂರಾರು ಶವಪೆಟ್ಟಿಗೆಗಳು ಸಂಸ್ಕಾರಕ್ಕಾಗಿ ಪಾಳಿಯಲ್ಲಿವೆ. ಶೋಕಾಚರಣೆಯ ಕೊಠಡಿಯಲ್ಲಿಯೇ ಆ ಶವಪೆಟ್ಟಿಗೆಗಳು ತಮ್ಮ ಪಾಳಿಗಾಗಿ ಕಾಯುತ್ತಿವೆ ಎಂಬ ವಿಷಯ ತಿಳಿದು ಆಘಾತವಾಯಿತು.

ಪಿಯಾಸೆಂಜಾದಲ್ಲಿ ಕೊರೊನಾ ವೈರಸ್‌ ಸೋಂಕು ಹರಡಲು ಆರಂಭವಾದ ದಿನದಿಂದ ಈವರೆಗೆ ಒಟ್ಟು 314 ಮಂದಿ ಮೃತಪಟ್ಟಿದ್ದಾರೆ. ಊರಿನ ಸ್ಮಶಾನದಲ್ಲಿ ಒಂದು ದಿನಕ್ಕೆ 12-13 ಶವಸಂಸ್ಕಾರ ಮಾಡಬಹುದು. ಆದರೆ ಈಗ ಅಲ್ಲಿಗೆ ಒಂದೇ ದಿನ20-25 ಶವಗಳು ಬರುತ್ತಿವೆ.

ನನ್ನ ಮಾವನನ್ನು ಆಸ್ಪತ್ರೆಗೆ ಸೇರಿಸಿದ ದಿನದಿಂದಲೂ ಅವರ ಕುಟುಂಬವನ್ನು ಪ್ರತ್ಯೇಕಗೊಳಿಸಿಲಾಗಿದೆ. ಯಾರೋ ಅವರ ಮನೆಯ ಮುಂದೆ ದಿನಸಿ ಇರಿಸಿ ಬರುತ್ತಾರೆ. ಇನ್ಯಾರೋ ಅವರ ಮನೆಯ ಕಸವನ್ನು ಹೊರಗೆ ಹಾಕುತ್ತಾರೆ. ಅವರು ಮಾತ್ರ ಸುದೀರ್ಘ ಫೋನ್‌ ಕಾಲ್‌ಗಳಲ್ಲಿ ದಿನ ಕಳೆಯುತ್ತಿದ್ದಾರೆ.

'ನೀವು ಹೇಗಿದ್ದೀರಿ? ನಿಮಗೆ ಏನಾದರೂ ರೋಗ ಲಕ್ಷಣಗಳು ಕಾಣಿಸಿವೆಯೇ?' ನಾನು ನನ್ನ ಅತ್ತೆಯನ್ನು ಮತ್ತು ಸೋದರ ಸಂಬಂಧಿಯನ್ನು ಕೇಳಿದೆ.

ಕೊರೊನಾ ಸೋಂಕು ಪಾಸಿಟಿವ್ ಬಂದವರ ಕುಟುಂಬವನ್ನು ಆತಂಕಕಾರಿ ಎಂದು ಪರಿಗಣಿಸಿ ಪ್ರತ್ಯೇಕ ವಾಸದಲ್ಲಿ ಇರಿಸುತ್ತಾರೆ. ಆದರೆ ಅವರಲ್ಲಿ ರೋಗ ಲಕ್ಷಣಗಳು ಕಂಡುಬರುವವರಗೆ ಅವರ ತಪಾಸಣೆ ನಡೆಸುವುದಿಲ್ಲ. ಅತ್ತ ಆಸ್ಪತ್ರೆಯಲ್ಲಿ ಕೋವಿಡ್-19ರಿಂದ ವ್ಯಕ್ತಿಯೊಬ್ಬ ಮರಣದ ಹಾದಿ ಹಿಡಿದಿದ್ದರೆ ಇತ್ತ ಮನೆಯಲ್ಲಿ ಅವರ ಸಂಬಂಧಿಕರಲ್ಲಿ ದಿನದಿಂದ ದಿನಕ್ಕೆ ಅದೇ ಸೋಂಕು ಪ್ರಬಲವಾಗುತ್ತಿರುತ್ತದೆ. ಇಟಲಿಯಲ್ಲಿರುವ ಬಹುತೇಕ ಜನರ ಪರಿಸ್ಥಿತಿ ಇದು. ಅವರಲ್ಲಿ ಕೊರೊನಾ ವೈರಸ್‌ ಸೋಂಕು ಇದೆಯೋ ಇಲ್ಲವೋ ಗೊತ್ತಿಲ್ಲ. ಯಾವಾಗ ಏನಾಗುತ್ತೋ ಎಂಬ ಆತಂಕದಲ್ಲಿಯೇ ಅವರು ದಿನದೂಡುತ್ತಿದ್ದಾರೆ.

'ನನ್ನಲ್ಲಿ ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡಿಲ್ಲ' ಎಂದು ನನ್ನ ಸೋದರ ಸಂಬಂಧಿ ಪ್ರತಿದಿನ ಉತ್ತರಿಸುತ್ತಾರೆ.

ಇಟಲಿಯಲ್ಲಿ ಮಹಿಳಾ ಉಡುಗೆ ತಯಾರಿಸುವ ಕಂಪನಿಯೊಂದರ ಪರಿಸ್ಥಿತಿ

ಆಪ್ತರ ಜೊತೆಗೆ ಕೆಲಸವನ್ನೂ ಕಳೆದುಕೊಳ್ಳುವ ಭೀತಿ

ನನ್ನ ಸೋದರ ಸಂಬಂಧಿ ಒಂದು ಶಾಲೆಯಲ್ಲಿ, ಆಕೆಯ ಗಂಡ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಾರೆ. ಆಸ್ಪತ್ರೆಯಿಂದ ಮಾವನ ಸುದ್ದಿ ನಿರೀಕ್ಷಿಸುತ್ತಿರುವ ಅವರಲ್ಲಿ,'ಈ ಕೊರೊನಾ ವೈರಸ್‌ ಸೋಂಕು ನಮ್ಮ ಬದುಕಿನ ಆಧಾರವಾದ ಕೆಲಸವನ್ನೇ ಕಿತ್ತುಕೊಳ್ಳುತ್ತದೆಯೆ' ಎಂಬ ಚಿಂತೆಯೂ ತುಂಬಿಕೊಂಡಿದೆ.ಆಸ್ಪತ್ರೆಯಲ್ಲಿ ಸತ್ತವರ ಮುಂದಿನ ಕರ್ಮಗಳನ್ನು ನಿರ್ವಹಿಸುವುದೋ ಅಥವಾ ಆರ್ಥಿಕ ಸಮಸ್ಯೆಗಳಿಂದ ಕೆಲಸ ಕಳೆದುಕೊಳ್ಳುತ್ತಿರುವವರಿಗೆ ಸಾಂತ್ವನ ಹೇಳುವುದೋ ಎಂಬ ಗೊಂದಲದಲ್ಲಿ ಅವರೆಲ್ಲರೂ ನರಳುತ್ತಿದ್ದಾರೆ.

ಹೋಂ ಕ್ವಾರಂಟೈನ್‌ನಲ್ಲಿರುವವವರಿಗೆ ಫೋನ್ ಮಾಡಿದಾಗ ನಾನು ಕೇಳುವ ಎರಡನೇ ಪ್ರಶ್ನೆ, 'ನಿಮ್ಮ ಮೂಡ್ ಈಗ ಹೇಗಿದೆ?'. ಇದಕ್ಕೆ ಬರುವ ಉತ್ತರ, 'ನನ್ನ ಮೂಡ್ ಬಲು ಕೆಟ್ಟದಾಗಿದೆ, ಅಪ್ಪ ಅಲ್ಲೆಲ್ಲೋ ಸಾಯುತ್ತಿದ್ದಾರೆ. ನಾವು ಅವರ ಜೊತೆಗಿಲ್ಲ ಎಂಬ ಭಾವನೆಯೇ ನಮಗೆ ನೋವು ತುಂಬುತ್ತದೆ. ಅದನ್ನು ಯೋಚಿಸಲೂ ನನಗೆ ಆಗುತ್ತಿಲ್ಲ' ಎಂದು ಅತ್ತ ಕಡೆಯಿಂದ ಅಳುವ ದನಿ ಕೇಳಿಸುತ್ತದೆ.

ಇಟಲಿಯ ತಪಾಸಣೆ ಕ್ರಮಗಳನ್ನು ಹೆಚ್ಚಿಸಲಾಗಿದೆ.

ಜನರ ವರ್ತನೆಯೇ ಬದಲಾಗಿದೆ

ಈಗ ನಾನು ಮತ್ತೊಮ್ಮೆ ಯುದ್ಧದ ವಿಚಾರಕ್ಕೆ ಹಿಂದಿರುಗುತ್ತೇನೆ. ಪ್ರತಿಸಲವೂಯುದ್ಧಪೀಡಿತ ದೇಶಗಳಿಂದಲೇ ನಾನು ಇಟಲಿಯ ನೆಮ್ಮದಿಯ ಬದುಕಿಗೆ ಹಿಂದಿರುಗುತ್ತಿದ್ದೆ. ನಾನು ಕಂಡಂತೆ ಯಾವುದೇ ಯುದ್ಧಭೂಮಿಯಲ್ಲೂ ಇಂಥ ವಾತಾವರಣವಿಲ್ಲ. ಇದೇ ಕಾರಣಕ್ಕೆ ನಾನು ಹೇಳುವುದು ಇದು ಯುದ್ಧವಲ್ಲ. ಯಾಕೆಂದರೆ ಇಲ್ಲಿ ಇಬ್ಬರು ಶತ್ರುಗಳು ಪರಸ್ಪರ ಹೋರಾಡುತ್ತಿಲ್ಲ.

ಈಗ ನಾವು ಎದುರಿಸುತ್ತಿರುವ ತುರ್ತು ಪರಿಸ್ಥಿತಿಯು ನಮ್ಮ ಆರೋಗ್ಯ ವ್ಯವಸ್ಥೆಯ ಬಗ್ಗೆ ಮರುಚಿಂತನೆ ನಡೆಸಬೇಕಾದ ಒತ್ತಡವನ್ನು ನಮ್ಮೆದುರು ತಂದಿಟ್ಟಿದೆ. ಈ ಒತ್ತಡಕ್ಕೆ ರಾಜ್ಯ ಮತ್ತು ದೇಶಗಳ ಗಡಿಯೂ ಇಲ್ಲ ಎನ್ನುವುದು ವಾಸ್ತವ. ನಮ್ಮ ಕೆಲಸದ ರೀತಿಯನ್ನು ನಾವು ಮತ್ತೊಮ್ಮೆ ಪರಿಶೀಲಿಸಬೇಕಿದೆ. ನಾವು ಒಬ್ಬರಿಗೊಬ್ಬರು ಹೇಗೆ ಬೆಸೆದುಕೊಂಡಿದ್ದೇವೆ ಎಂಬುದನ್ನೂ ಯೋಚಿಸಬೇಕಿದೆ.

ಸಂಕಷ್ಟ ಅನುಭವಿಸಲು ಆರಂಭಿಸಿದ ಕುಟುಂಬಗಳು ಕೇವಲಒಂದು ತಿಂಗಳ ಒಳಗೆ ಸಮುದಾಯದ ಸ್ಥೈರ್ಯ ಕುಗ್ಗಿಸುತ್ತಿವೆ. ಸಂಬಂಧಗಳನ್ನು ಮತ್ತೆ ಬೆಸೆದುಕೊಳ್ಳುವ ಪ್ರಯತ್ನಗಳು ಸಾಮಾಜಿಕ ಆಕ್ರೋಶ ಮತ್ತು ಭ್ರಮೆಗಳಾಗಿ ಮಾರ್ಪಾಡಾಗುತ್ತಿವೆ. ಜನರ ವರ್ತನೆಯೇ ಬದಲಾಗಿದೆ.

ಬಾಲ್ಕನಿಯಲ್ಲಿ ನಿಂತ ಯಾರೋ ಒಬ್ಬರು ಬೀದಿಯಲ್ಲಿ ಹೋಗುತ್ತಿರುವವನತ್ತ ಅನವಶ್ಯಕವಾಗಿ ಜೋರಾಗಿ ಕಿರುಚುತ್ತಾನೆ. ಬೀದಿಯಲ್ಲಿ ನಿಂತವನು ಯಾರು ಬಾಲ್ಕನಿಯಲ್ಲಿ ಹೆಚ್ಚುಹೊತ್ತು ನಿಲ್ಲುತ್ತಿದ್ದಾನೆ, ಯಾರು ಅನಗತ್ಯವಾಗಿ ಬೀದಿಗಳಲ್ಲಿ ತಿರುಗುತ್ತಿದ್ದಾನೆ ಎಂದು ಗೂಢಚರ್ಯೆ ಮಾಡುತ್ತಿದ್ದಾನೆ. ಜನರು ಪರಸ್ಪರ ಮಾತನಾಡುವಾಗ ಬೀದಿಯಲ್ಲಿ ಓಡಾಡುವವರೆಲ್ಲರನ್ನೂ ಸೋಂಕು ಹರಡುವ ಕೊಲೆಗಾರರು ಎಂದು ಬೈಯ್ಯುತ್ತಾರೆ. ಸೋಂಕು ತಗುಲಿಸುವವರನ್ನು ಎಲ್ಲರೂ ಹುಡುಕುತ್ತಾರೆ. ವೈರಸ್‌ ಬಗ್ಗೆ ಬೈದಾಡುತ್ತಾರೆ. ಒಂಥರಾ ಹೆದರಿಕೆ, ಅಸ್ಪಷ್ಟ ಭವಿಷ್ಯದ ಆತಂಕದಲ್ಲಿ ಎಲ್ಲರೂ ಕುಗ್ಗಿಹೋಗಿದ್ದಾರೆ.

ಅಧಿಕಾರಿಗಳು ಮತ್ತು ರಾಜಕಾರಿಣಿಗಳೊಂದಿಗಿನ ನಮ್ಮಂಥ ಜನಸಾಮಾನ್ಯರ ಸಂಬಂಧವೂ ಸಂಪೂರ್ಣ ಬದಲಾಗಿದೆ. ಬಹುಶಃ ಅದು ಹಿಂದಿನಂತೆ ವಿಶ್ವಾಸ ಪಡೆದುಕೊಳ್ಳುವುದು ಸದ್ಯಕ್ಕೆ ಸಾಧ್ಯವೇ ಇಲ್ಲ.

ಈ ಏಕಾಂತವಾಸ, ಸಾಮಾಜಿಕಅಂತರ ನಮ್ಮ ದೇಶವಾಸಿಗಳನ್ನು ಉಳಿಸಿಕೊಳ್ಳಲು ಅನಿವಾರ್ಯ. ನಮ್ಮ ದೇಶದ ಆರೋಗ್ಯ ವ್ಯವಸ್ಥೆ ಕುಸಿಯದಂತೆ ತಡೆಯಲು, ವಿಜ್ಞಾನಿಗಳು ಲಸಿಕೆಯೊಂದನ್ನು ತಯಾರಿಸುವವರೆಗೆಇಂಥ ಕ್ರಮಗಳು ಅನಿವಾರ್ಯವಾಗಿತ್ತು. ನಾವು ಇದನ್ನು ಶಿರಸಾವಹಿಸಿ ಅನುಸರಿಸುತ್ತಿದ್ದೇವೆ. ಇದು ನಾವೆಲ್ಲರೂ ಸೇರಿ ಗೆಲ್ಲಬೇಕಾದ ಸವಾಲು.

ಈ ಸವಾಲನ್ನು ಯುದ್ಧಕ್ಕೆ ಹೋಲಿಸುವುದರಲ್ಲಿ ಹಲವು ಅಪಾಯಗಳಿವೆ. ಯುದ್ಧದ ನಿಜವಾದ ಸಮಸ್ಯೆಯಿಂದ ನಮ್ಮ ಮನಸ್ಸುಗಳನ್ನು ಬೇರೆಡೆಗೆ ತಿರುಗಿಸುತ್ತವೆ. ನಮ್ಮ ಕುಟುಂಬಗಳಿಂದ ಮತ್ತು ಆಪ್ತರಿಂದ ಈ ಪಿಡುಗು ನಮ್ಮನ್ನು ದೂರ ಮಾಡಿದೆ ಎನ್ನುವುದೇ ದೊಡ್ಡ ಸಮಸ್ಯೆ. ಮನೆಯಲ್ಲಿ ಒಬ್ಬರೇ ಉಳಿದು, ದೂರದ ಆಸ್ಪತ್ರೆಗಳಲ್ಲಿ ಬಂಧುಗಳನ್ನು ಕಳೆದುಕೊಳ್ಳುತ್ತಿರುವವರು ತಮ್ಮ ಅನುಭವಗಳನ್ನು ಖಂಡಿತ ಮುಂದಿನ ತಲೆಮಾರಿಗೆ ದಾಟಿಸುತ್ತಾರೆ. ಈ ಸಾಮಾಜಿಕ ವಿಘಟನೆ ಬಹುಕಾಲ ನಮ್ಮ ಸಮಾಜವನ್ನು ಬಾಧಿಸುತ್ತದೆ.

ಮಾರಕ ಸೋಂಕು ಎದುರಿಸಲು ಏಕಾಂತವಾಸ ಅನಿವಾರ್ಯ ಎಂಬ ವಾಸ್ತವವನ್ನು ಅರಗಿಸಿಕೊಳ್ಳಲು ಈವರೆಗೂ ನಮಗೆ ಸಾಧ್ಯವಾಗುತ್ತಿಲ್ಲ. ನೋವಿನಲ್ಲಿ ಮುಳುಗಿರುವವರಿಗೆ ತಮ್ಮ ಸ್ವಂತದ ಅಸ್ತಿತ್ವ ಏನೆಂಬುದೂ ಅರ್ಥವಾಗುತ್ತಿಲ್ಲ.

ಈಗ ನಾವು ಅನುಭವಿಸುತ್ತಿರುವಅಂಥ ನೋವು ಬಹುಕಾಲ ನಮ್ಮನ್ನು ಬಾಧಿಸುತ್ತದೆ.

(ಈ ಬರಹವು 'ದಿ ವೀಕ್' ನಿಯತಕಾಲಿಕೆಯ ಏಪ್ರಿಲ್ 5 ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು.Courtesy:The Week magazine)

ಅನುವಾದ: ಡಿ.ಎಂ.ಘನಶ್ಯಾಮ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT