ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಷಿಂಗ್ಟನ್‌ನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ವಿರೂಪಗೊಳಿಸಿದ ದುಷ್ಕರ್ಮಿಗಳು

Last Updated 4 ಜೂನ್ 2020, 6:17 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ವಾಷಿಂಗ್ಟನ್‌ ಡಿಸಿಯಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೊರಗಿನ ಮಹಾತ್ಮ ಗಾಂಧಿ ಪ್ರತಿಮೆಯನ್ನು ವಿರೂಪಗೊಳಿಸಲಾಗಿದೆ. ಜನಾಂಗೀಯ ದ್ವೇಷದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ ನಿರತರಾಗಿರುವ ಕೆಲವರು ಪ್ರತಿಮೆ ವಿರೂಪಗೊಳಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆಫ್ರಿಕನ್‌–ಅಮೆರಿಕನ್ ಜಾರ್ಜ್ ಫ್ಲಾಯ್ಡ್‌ ಅವರು ಪೊಲೀಸರ ವಶದಲ್ಲಿದ್ದಾಗ ಸಾವೀಗೀಡಾಗಿರುವುದನ್ನು ವಿರೋಧಿಸಿ ಅಮೆರಿಕದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದೇ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವವರಿಂದ ಮಹಾತ್ಮ ಗಾಂಧಿ ಪ್ರತಿಮೆಗೆ ಹಾನಿಯಾಗಿದೆ ಎನ್ನಲಾಗುತ್ತಿದೆ. ಯುನೈಟೆಡ್‌ ಸ್ಟೇಟ್ಸ್‌ ಪಾರ್ಕ್‌ ಪೊಲೀಸರು ತನಿಖೆ ಕೈಗೊಂಡಿದ್ದು, ಪ್ರಕರಣದ ಕುರಿತು ವಿವರ ನಿರೀಕ್ಷಿಸಲಾಗಿದೆ ಎಂದು ಎಎನ್‌ಐ ಗುರುವಾರ ವರದಿ ಮಾಡಿದೆ.

ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಕೆನ್‌ ಜಸ್ಟರ್‌ ಘಟನೆಯ ಕುರಿತು ಕ್ಷಮೆಯಾಚಿಸಿದ್ದಾರೆ. 'ವಾಷ್ಟಿಂಗ್ಟನ್‌ ಡಿಸಿಯಲ್ಲಿ ಗಾಂಧಿ ಪ್ರತಿಮೆ ವಿರೂಪಗೊಂಡಿರುವುದನ್ನು ಕಾಣಲು ತುಂಬ ಕಷ್ಟವಾಗುತ್ತಿದೆ. ನಮ್ಮ ಪ್ರಾಮಾಣಿಕ ಕ್ಷಮಾಪಣೆಯನ್ನು ದಯಮಾಡಿ ಸ್ವೀಕರಿಸಿ' ಎಂದು ಕೆನ್‌ ಜಸ್ಟರ್‌ ಹೇಳಿದ್ದಾರೆ.

ಜಾರ್ಜ್ ಫ್ಲಾಯ್ಡ್‌ ಅವರು ಭೀಕರ ಸಾವು, ಹಿಂಸಾಚಾರ ಹಾಗೂ ವಿಧ್ವಂಸಕ ಕೃತ್ಯದ ಕುರಿತು ಕೆನ್‌ ಜಸ್ಟರ್‌ ಆಘಾತ ವ್ಯಕ್ತ ಪಡಿಸಿದ್ದಾರೆ. ಯಾವುದೇ ರೀತಿಯ ಪೂರ್ವಾಗ್ರಹ ಮತ್ತು ಪಕ್ಷಪಾತವನ್ನು ನಾವು ವಿರೋಧಿಸುತ್ತೇವೆ ಎಂದಿದ್ದಾರೆ.

ಮೇ 25ರಂದು ಫ್ಲಾಯ್ಡ್‌ ಹತ್ಯೆಯಾದ ನಂತರದಲ್ಲಿ ಅಮೆರಿಕ ಹಲವು ಭಾಗಗಳಲ್ಲಿ ಸಾರ್ವಜನಿಕರು ತೀವ್ರ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಹಾಸ್ಟನ್‌ನಲ್ಲಿ ವಾಸಿಸುತ್ತಿದ್ದ 46 ವರ್ಷ ವಯಸ್ಸಿನ ಜಾರ್ಜ್‌ ಫ್ಲಾಯ್ಡ್‌ ಅವರನ್ನ ಪೊಲೀಸ್‌ ಅಧಿಕಾರಿಯೊಬ್ಬರು ಕೈಕೋಳ ಹಾಕಿ, ಮುಖ ನೆಲಕ್ಕೆ ಮಾಡಿ ಉರುಳಿಸಿ ಕುತ್ತಿಗೆಯ ಮೇಲೆ ಮಂಡಿಯೂರಿದ್ದರು. ಉಸಿರು ಹಿಡಿದಂತಾಗಿ ಫ್ಲಾಯ್ಡ್‌ ಸಾವಿಗೀಡಾದರು. ಕಪ್ಪು ವರ್ಣಿಯನಾದ ಫ್ಲಾಯ್ಡ್‌ರನ್ನ ಬಿಳಿ ಚರ್ಮದ ಪೊಲೀಸ್‌ ಅಧಿಕಾರಿ ಹಿಂಸಿರುವುದು ಜನಾಂಗೀಯ ದ್ವೇಷದ ವಿರುದ್ಧದ ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT