ಶುಕ್ರವಾರ, ಜುಲೈ 1, 2022
25 °C

2019ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಆಫ್ರಿಕಾದ ಪೀಟರ್ ತಬೀಚಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ದುಬೈ: ತಮ್ಮ ತಿಂಗಳ ದುಡಿಮೆಯ ಶೇ 80ರಷ್ಟನ್ನು ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ವಿನಿಯೋಗಿಸುವ ಕೀನ್ಯಾ ದೇಶದ ಮಾಧ್ಯಮಿಕ ಶಾಲೆಯ ಶಿಕ್ಷಕ ಪೀಟರ್ ತಬೀಚಿ ಅವರಿಗೆ 2019ನೇ ಸಾಲಿನ ಜಾಗತಿಕ ಶಿಕ್ಷಕ ಪ್ರಶಸ್ತಿ ಬಂದಿದೆ.

ಇದು ₹10 ಲಕ್ಷ ನಗದನ್ನು ಒಳಗೊಂಡಿದೆ. ಪ್ರಪಂಚದಲ್ಲಿ ಆಯ್ಕೆಯಾದ 9 ಶಿಕ್ಷಕರ ಪೈಕಿ ಆಫ್ರಿಕಾದ ಪೀಟರ್ ತಬೀಚಿ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ. 

ದುಬೈ ಮೂಲದ ವರ್ಕಿ ಫೌಂಡೇಶನ್ ಪ್ರಶಸ್ತಿ ನೀಡಿ ಗೌರವಿಸಿದ್ದು, ತಬೀಚಿ ಅವರ ಸಮರ್ಪಣಾ ಭಾವ, ಶ್ರಮ, ವಿದ್ಯಾರ್ಥಿಗಳ ಪ್ರತಿಭೆಯ ಮೇಲಿನ ಅಪಾರ ನಂಬಿಕೆ..ಈ ಎಲ್ಲವನ್ನು ಆಧರಿಸಿ ಪ್ರಶಸ್ತಿ ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ

ಈ ವೇಳೆ ಮಾತನಾಡಿದ ಶಿಕ್ಷಕ ತಬೀಚಿ, ‘ಈ ಪ್ರಶಸ್ತಿಯು ಪ್ರಪಂಚಕ್ಕೆ ಮತ್ತಷ್ಟು ಕೊಡುಗೆ ನೀಡುವ ಜವಾಬ್ದಾರಿಯನ್ನು ನನ್ನ ಮುಂದಿಟ್ಟಿದೆ. ನಾನು ಪ್ರತಿದಿನ ಆಫ್ರಿಕಾ ಎಂಬ ಖಂಡದ ಹೊಸ ಪುಟ, ಹೊಸ ಅಧ್ಯಾಯಗಳನ್ನು ತಿರುವಿ ಹಾಕುತ್ತಲೇ ಇರುತ್ತೇನೆ. ಇದು ನನಗೆ ಸಂದ ಗೌರವಕ್ಕಿಂತಲೂ ಈ ಖಂಡದ ಯುವಜನತೆಯ ಗುರುತಿಸಿದೆ ಎನ್ನುವುದೇ ಹೆಮ್ಮೆಯ ವಿಚಾರ. ಅಲ್ಲದೇ ನನ್ನ ವಿದ್ಯಾರ್ಥಿಗಳ ಸಾಧನೆ ನನ್ನನ್ನು ಇಲ್ಲಿಗೆ ತಂದು ನಿಲ್ಲಿಸಿದೆ’ ಎಂದು ವಿನಮ್ರವಾಗಿ ನುಡಿಯುತ್ತಾರೆ. 

ಪೀಟರ್ ತಬೀಚಿ ಬಗ್ಗೆ?
36ನೇ ವಯಸ್ಸಿನ ಪೀಟರ್ ತಬೀಚಿ ಕೀನ್ಯಾದ ಪ್ವಾನಿ ಎಂಬ ಗ್ರಾಮದ ಕೆರಿಕೊ ಮಿಕ್ಸ್‌ಡ್ ಡೇ ಶಾಲೆಯ ಗಣಿತ ಮತ್ತು ಭೌತವಿಜ್ಞಾನ ಶಿಕ್ಷಕ. ಬರ ಹಾಗೂ ಆಹಾರಾಭಾವ ಎದುರಿಸುತ್ತಿರುವ ಈ ಹಳ್ಳಿಯಲ್ಲಿ ವಿದ್ಯಾಭ್ಯಾಸದ ಕನಸು ಹೊತ್ತು ಬರುವ ಶೇ 95 ರಷ್ಟು ಬಡ, ಅನಾಥ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. 

ಹಳ್ಳಿಯ ಪರಿಸ್ಥಿತಿ
ಇಲ್ಲಿ ಬಾಲ್ಯವಿವಾಹ, ಆತ್ಮಹತ್ಯೆ, ಶಾಲೆ ತೊರೆಯುವುದು, ಕೆಟ್ಟ ಚಟಗಳಿಗೆ ಬಲಿಯಾಗುವುದು... ಇವು ಇಲ್ಲಿ ಕಾಡುತ್ತಿರುವ ಸಮಸ್ಯೆಗಳು. ಕೆಲವು ಮಕ್ಕಳು ಆರೇಳು ಕಿ.ಮೀ ನಡೆದೇ ಶಾಲೆ ತಲುಪಬೇಕು. ಮಳೆಗಾಲದಲ್ಲಿ ವಿದ್ಯಾರ್ಥಿಗಳ ಪರದಾಟ ಹೇಳತೀರದು. 

ಕೀನ್ಯಾದ ಅಧ್ಯಕ್ಷ ಉಹುರು ಕೀನ್ಯಾಟ್ಟ ಅವರು ವಿಡಿಯೊ ಸಂದೇಶದ ಮೂಲಕ ಪೀಟರ್ ಅವರಿಗೆ ಅಭಿನಂದನೆ ಸಲ್ಲಿಸಿದ್ದು, ನಿಮ್ಮ ಕಥೆ ಇಡೀ ಆಫ್ರಿಕಾದ ಕಥೆ. ಒಬ್ಬ ಯುವಕ ತಮ್ಮ ಪ್ರತಿಭೆ ಮೂಲಕ ಇಡೀ ಪ್ರಪಂಚ ಆಫ್ರಿಕಾ ಖಂಡದತ್ತ ತಿರುಗುವಂತೆ ಮಾಡಿರುವುದು ಶ್ಲಾಘನೀಯ ಎಂದು ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು