ಮಂಗಳವಾರ, ಸೆಪ್ಟೆಂಬರ್ 22, 2020
26 °C

ಸಿಎಎ: ಭಾರತದಲ್ಲಿನ ಪ್ರಸ್ತುತ ಬೆಳವಣಿಗೆ ವಿಷಾದಕರ; ಮೈಕ್ರೋಸಾಫ್ಟ್‌ನ ನಾದೆಲ್ಲಾ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಮೈಕ್ರೊಸಾಫ್ಟ್‌ ಸಿಇಒ ಸತ್ಯ ನಾದೆಲ್ಲಾ

ನ್ಯೂಯಾರ್ಕ್‌: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮೈಕ್ರೊಸಾಫ್ಟ್‌ನ ಭಾರತೀಯ ಮೂಲದ ಸಿಇಒ ಸತ್ಯ ನಾದೆಲ್ಲಾ (52) ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆ ವಿಷಾದಕರವಾದುದು, 'ಬಾಂಗ್ಲಾದೇಶದ ವಲಸಿಗ ಭಾರತದಲ್ಲಿ ಮಲ್ಟಿನ್ಯಾಷನಲ್‌ ಕಂಪನಿ ಮುನ್ನಡೆಸುವುದನ್ನು ಕಾಣಲು ಬಯಸುತ್ತೇನೆ. ಅದು ಅಲ್ಲಿನ ಆರ್ಥಿಕತೆಗೂ ಅನುಕೂಲಕರವಾಗುತ್ತದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ. 

ಹೈದರಾಬಾದ್‌ ಮೂಲದ ನಾದೆಲ್ಲಾ ಅವರು ರಾಷ್ಟ್ರೀಯ ಭದ್ರತೆ ವಿಚಾರವನ್ನೂ ಪ್ರಸ್ತಾಪಿಸಿದ್ದು, ಪ್ರತಿ ದೇಶವೂ ತನ್ನ ಗಡಿಯನ್ನು ಗುರುತಿಸಿಕೊಳ್ಳುತ್ತದೆ ಹಾಗೂ ಗುರುಸಿಕೊಳ್ಳಬೇಕಾಗುತ್ತದೆ. ರಾಷ್ಟ್ರೀಯ ಭದ್ರತೆಗೆ ಅನುಗುಣವಾಗಿ ವಲಸೆಗೆ ಸಂಬಂಧಿತ ನಿಯಮಾವಳಿಗಳನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. 

ಪ್ರಜಾಪ್ರಭುತ್ವದಲ್ಲಿ ಜನರು ಮತ್ತು ಅವರ ಸರ್ಕಾರ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಶನಿವಾರ ನಾದೆಲ್ಲಾ ಹೇಳಿರುವುದು ವರದಿಯಾಗಿದೆ. ಮೈಕ್ರೊಸಾಫ್ಟ್‌ನ ಕಾರ್ಯಕ್ರಮದಲ್ಲಿ ನ್ಯೂಯಾರ್ಕ್‌ ಮೂಲದ ಸುದ್ದಿ ಸಂಸ್ಥೆ ಬಝ್‌ಫೀಡ್‌ ನಾದೆಲ್ಲಾ ಅವರನ್ನು ಸಿಎಎ ಕುರಿತು ಅಭಿಪ್ರಾಯ ಕೇಳಿದೆ. 

ಭಾರತದ ಪರಂಪರೆಯಿಂದ ನಾನು ರೂಪುಗೊಂಡಿದ್ದೇನೆ, ಭಾರತದ ವೈವಿಧ್ಯಮಯ ಸಂಸ್ಕೃತಿಯಲ್ಲಿ ಬೆಳೆದು ಅಮೆರಿಕದಲ್ಲಿ ವಲಸಿಗನಾಗಿ ಅನುಭವ ಹೊಂದಿದ್ದೇನೆ. ಭಾರತದಲ್ಲಿ ಅತ್ಯುತ್ತಮವಾದ ಸ್ಟಾರ್ಟ್‌–ಅಪ್‌ ಪ್ರಾರಂಭಿಸುವ ಮಹತ್ವಾಕಾಂಕ್ಷೆ ವಲಸಿಗನಲ್ಲಿರಬಹುದು ಅಥವಾ ಬಹುರಾಷ್ಟ್ರೀಯ ಕಾರ್ಪೊರೇಷನ್ ಮುನ್ನಡೆಸಬಹುದು; ಇದರಿಂದ ಭಾರತದ ಸಮಾಜಕ್ಕೆ ಹಾಗೂ ಆರ್ಥಿಕತೆಗೆ ಲಾಭಕರವೇ ಆಗುತ್ತದೆ ಎಂದು ನಾದೆಲ್ಲ ಅಭಿಪ್ರಾಯ ಪಟ್ಟಿದ್ದಾರೆ. 

ಪೌರತ್ವ ತಿದ್ದುಪಡಿ ಕಾಯ್ದೆ ಪ್ರಕಾರ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಫ್ಘನಿಸ್ತಾನದಿಂದ 2014ರ ಡಿಸೆಂಬರ್‌ 31ರೊಳಗೆ ವಲಸೆ ಬಂದಿರುವ ಹಿಂದೂ, ಸಿಖ್‌, ಬೌದ್ಧರು, ಜೈನರು, ಪಾರ್ಸಿ ಹಾಗೂ ಕ್ರೈಸ್ತ ಸಮುದಾಯಕ್ಕೆ ಸೇರಿದವರಿಗೆ ಭಾರತದ ಪೌರತ್ವ ಸಿಗಲಿದೆ. 2020ರ ಜನವರಿ 10ರಿಂದ ಸಿಎಎ ಅನುಷ್ಠಾನಗೊಂಡಿರುವುದಾಗಿ ಕೇಂದ್ರ ಸರ್ಕಾರ ಕಳೆದ ವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ. 

2019ರ ಡಿಸೆಂಬರ್‌ 11ರಂದು ಸಂಸತ್ತಿನಲ್ಲಿ ಸಿಎಎ ಅನುಮೋದನೆ ಪಡೆಯಿತು. ಆ ನಂತರದಲ್ಲಿ ದೇಶದ ಹಲವು ಭಾಗಗಳಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಉಂಟಾದ ಘರ್ಷಣೆಯಲ್ಲಿ ಇಬ್ಬರು ಹಾಗೂ ಉತ್ತರ ಪ್ರದೇಶದಲ್ಲಿ 19 ಮಂದಿ ಸಾವಿಗೀಡಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು