ಭಾನುವಾರ, ಮೇ 31, 2020
27 °C

ಕರಾಚಿಯಲ್ಲಿ ವಿಮಾನ ಪತನ: 57 ಸಾವು

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

Karachi air crash

ಕರಾಚಿ : ಪಾಕಿಸ್ತಾನ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ಗೆ (ಪಿಐಎ) ಸೇರಿದ ವಿಮಾನ ಶುಕ್ರವಾರ ಮಧ್ಯಾಹ್ನ ಕರಾಚಿಯ ಜನದಟ್ಟಣೆಯಿಂದ ಕೂಡಿದ ವಸತಿ ಪ್ರದೇಶದಲ್ಲಿ ಪತನಗೊಂಡಿದೆ.

ವಿಮಾನದಲ್ಲಿ 107 ಜನರಿದ್ದರು. ಕರಾಚಿಯ ಜಿನ್ನಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವ ಕೆಲವೇ ನಿಮಿಷಗಳ ಮುನ್ನ ವಿಮಾನ ಅಪಘಾತಕ್ಕೀಡಾಗಿದೆ. ಪವಾಡಸದೃಶ ರೀತಿಯಲ್ಲಿ ಮೂವರು ಪ್ರಯಾಣಿಕರು ಬದುಕುಳಿದಿದ್ದಾರೆ. ಇವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇವರಲ್ಲಿ ಬ್ಯಾಂಕ್‌ ಆಫ್‌ ಪಂಜಾಬ್‌ನ ಅಧ್ಯಕ್ಷ ಜಫರ್‌ ಮಸೂದ್‌ ಒಬ್ಬರು. 57 ಮೃತದೇಹಗಳನ್ನು ಪತನ ಸ್ಥಳದಿಂದ ಹೊರಕ್ಕೆ ತೆಗೆಯಲಾಗಿದೆ. 

‘ಲಾಹೋರ್‌ನಿಂದ ಬರುತ್ತಿದ್ದ ‘ಪಿಕೆ–8303’ ವಿಮಾನದಲ್ಲಿ 99 ಪ್ರಯಾಣಿಕರು ಮತ್ತು ಎಂಟು ಸಿಬ್ಬಂದಿ ಇದ್ದರು. ಕರಾಚಿ ವಿಮಾನ ನಿಲ್ದಾಣ ಸಮೀಪದ ಮಾಡೆಲ್‌ ಕಾಲೋನಿಯಲ್ಲಿ ವಿಮಾನ ಪತನಗೊಂಡಿತು’ ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್‌ ತಿಳಿಸಿದ್ದಾರೆ.

‘ವಿಮಾನ ಇಳಿಸುವಾಗ ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದು ಪೈಲಟ್‌‌ ಮಾಹಿತಿ ನೀಡಿದ್ದರು. ಕರಾಚಿ ವಿಮಾನ ನಿಲ್ದಾಣದ ಜತೆ ವಿಮಾನವು ಮಧ್ಯಾಹ್ನ 2.37ರ ಸುಮಾರಿಗೆ ಸಂಪರ್ಕ ಕಳೆದುಕೊಂಡಿತು’ ಎಂದು ಅವರು ಹೇಳಿದ್ದಾರೆ.

ಮನೆಗಳ ಮೇಲೆಯೇ ವಿಮಾನ ಪತನಗೊಂಡಿದ್ದು, ಕೆಲ ಕ್ಷಣಗಳಲ್ಲಿಯೇ ಇಡೀ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಆವರಿಸಿಕೊಂಡಿತು. ಈ ಘಟನೆಯಲ್ಲಿ ಹಲವು ಮನೆಗಳು ಮತ್ತು ವಾಹನಗಳು ಜಖಂಗೊಂಡಿವೆ. ಈ ಪ್ರದೇಶದಲ್ಲಿನ ಸುಮಾರು 30 ಮಂದಿ ತೀವ್ರ ಗಾಯಗೊಂಡಿದ್ದಾರೆ.

ಈ ದುರಂತದ ಬಗ್ಗೆ ತನಿಖೆ ನಡೆಸುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಆದೇಶ ನೀಡಿದ್ದಾರೆ.

ಇದನ್ನೂ ಓದಿ: 

 

ವಿಮಾನದ ಲ್ಯಾಂಡಿಂಗ್‌ ಗೇರ್‌ ಕಾರ್ಯನಿರ್ವಹಿಸದ ಕಾರಣ ಅಪಘಾತ ಸಂಭವಿಸಿದೆ
-ಗುಲಾಂ ಸರ್ವಾರ್‌ 
ಪಾಕ್‌ ವಿಮಾನಯಾನ ಸಚಿವ

 

ಪೈಲಟ್‌ ಕೊನೆಯ ಮಾತುಗಳು

ಪ್ಯಾರಿಸ್‌(ರಾಯಿಟರ್ಸ್‌): ‘ನಾವು ಹಿಂತಿರುಗುತ್ತಿದ್ದೇವೆ ಸರ್‌. ಎರಡು ಎಂಜಿನ್‌ಗಳು ನಿಯಂತ್ರಣದಲ್ಲಿ ಇಲ್ಲ...’ಅಪಘಾತಕ್ಕೀಡಾಗುವ ಮುನ್ನ ಪೈಲಟ್‌ ನುಡಿದ ಮಾತುಗಳಿವು.

12 ಸೆಕೆಂಡ್‌ಗಳ ಬಳಿಕ ಮತ್ತೆ ಮಾತನಾಡಿದ ಪೈಲಟ್‌, ‘ಮೇಡೆ, ಮೇಡೆ, ಮೇಡೆ’ ಎಂದು ತೀವ್ರ ಸಂಕಷ್ಟದ ಸಂದರ್ಭದಲ್ಲಿ ತಿಳಿಸುವ ಸಂದೇಶವನ್ನು ನೀಡಿದ್ದಾರೆ. ಬಳಿಕ ಯಾವುದೇ ಸಂದೇಶಗಳು ವಿಮಾನದಿಂದ ಬಂದಿಲ್ಲ.

liveatc.net ವೆಬ್‌ಸೈಟ್‌ನಲ್ಲಿ ಪೈಲಟ್‌ ಮಾತುಗಳು ದಾಖಲಾಗಿರುವುದನ್ನು ಪ್ರಕಟಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು