ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈವ್‌ ವರದಿ ಮಾಡುವಾಗ ವರದಿಗಾರನ ಕಾಡಿದ ಹಂದಿ: ವೈರಲ್ ವಿಡಿಯೊ

Last Updated 29 ನವೆಂಬರ್ 2019, 9:50 IST
ಅಕ್ಷರ ಗಾತ್ರ

ಪ್ರವಾಹ ಪೀಡಿತ ಸ್ಥಳದಿಂದ ಸುದ್ದಿವಾಹಿನಿಗೆ ವರದಿ ಮಾಡುತ್ತಿದ್ದ ವರದಿಗಾರನ ಹಿಂದೆ ಹಿಂದೆಯೇ ಹೋದ ಹಂದಿ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇತ್ತೀಚೆಗೆ ಗ್ರೀಸ್‌ನಲ್ಲಿ ಪ್ರವಾಹ ಉಂಟಾಗಿದ್ದು, ಅಲ್ಲಿನ ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಲೈವ್‌ ಬಂದಿದ್ದ ಗ್ರೀಸ್ ಸುದ್ದಿವಾಹಿನಿಯೊಂದರ ವರದಿಗಾರನಿಗೆ ಅಲ್ಲೇ ಇದ್ದ ಹಂದಿಯೊಂದು ಅಟ್ಟಾಡಿಸಿ ಕಾಟ ನೀಡಿದೆ. ವಿಸ್ತೃತ ವರದಿಗಾಗಿ ಸ್ಟುಡಿಯೊದಲ್ಲಿ ಕಾಯುತ್ತಿದ್ದ ಆ್ಯಂಕರ್‌ಗಳನ್ನು ಇದನ್ನು ನೋಡಿ ಹೊಟ್ಟೆ ಹುಣ್ಣಾಗಿಸುವಷ್ಟು ನಕ್ಕಿದ್ದಾರೆ.

ಈ ವಿಡಿಯೊ ಶುರುವಿನಲ್ಲಿ ವರದಿಗಾರ ‘ಗುಡ್‌ ಮಾರ್ನಿಂಗ್‌ ಇಲ್ಲೊಂದು ಸಮಸ್ಯೆ ಇದೆ’ ಎಂದು ಹೇಳುತ್ತಿರುವಾಗಲೇ ಹಂದಿ ಗುಟುರು ಹಾಕುವ ಶಬ್ದ ಕೇಳುತ್ತದೆ. ಅದಾಗಲೇ ಹಂದಿ ಆತನ ಕಾಲುಗಳ ಬಳಿ ಬಂದು ಗುದ್ದಲು ಶುರುಮಾಡಿರುತ್ತದೆ. ಆತ ಎಲ್ಲೇ ಹೋದರೆ ಅವರ ಹಿಂದಿ ಹಿಂದೆಯೇ ಹೋಗಿ ಕಾಡಿಸುತ್ತದೆ.

ಆಗ ವರದಿಗಾರ ಸ್ಟುಡಿಯೊದಲ್ಲಿರುವ ಆ್ಯಂಕರ್‌ಗೆ ‘ನಾನು ಮಾತನಾಡುತ್ತಿರುವುದು ಕೇಳಿಸುತ್ತಿದ್ದೆಯೇ, ಇಲ್ಲೊಂದು ಹಂದಿ ಬೆಳಿಗ್ಗೆಯಿಂದ ನಮ್ಮ ಹಿಂದೆಯೇ ಬರುತ್ತಿದೆ. ನನಗೆ ನಿಂತು ವರದಿ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳುವಾಗ ಆ್ಯಂಕರ್‌ಗಳ ನಗುವಿನ ಕಟ್ಟೆಯೊಡೆದಿತ್ತು.

ಈ ವಿಡಿಯೊವನ್ನು ಗ್ರೀಕ್‌ ಸಿಟಿ ಟೈಮ್ಸ್‌ ಟ್ವೀಟ್‌ ಮಾಡಿದ್ದು, 1.37 ಲಕ್ಷ ಮಂದಿ ವೀಕ್ಷಿಸಿದ್ದಾರೆ. ಇದಕ್ಕೆ ಸಾಕಷ್ಟು ಮಂದಿ ಹಾಸ್ಯಭರಿತವಾಗಿ ಟ್ವೀಟ್‌ ಮಾಡಿದ್ದಾರೆ. ‘ಸಿಟ್ಟುಬರುತ್ತಿಲ್ಲ, ಖುಷಿಯಾಗುತ್ತಿದೆ’ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು ‘ಅದು ಕೂಡ ಬೆಳಕಿಗೆ ಬರಲು ಯತ್ನಿಸುತ್ತಿದೆ!’ ಎಂದು ಕಮೆಂಟ್‌ ಮಾಡಿದ್ದಾರೆ.

ಈ ವಿಡಿಯೊಗೆ ಮತ್ತೊಬ್ಬರು ಟ್ವೀಟ್‌ ಮಾಡಿ, ‘ನಾನು ಹಂದಿಗಳೊಂದಿಗೆ ಇದ್ದೇನೆ. ಇವು ಬಹಳ ಸೂಕ್ಷ್ಮ ಪ್ರಾಣಿಗಳು. ವರದಿಗಾರನೇ ಏನೋ ಮಾಡಿರಬೇಕು. ಅದಕ್ಕೆ ಅದು ಗುದ್ದುತ್ತಿದೆ’ ಎಂದು ಕುಟುಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT