ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ20 ಶೃಂಗಸಭೆ: ಆರ್ಥಿಕ ಅಪರಾಧಿಗಳ ವಿರುದ್ಧ ಕಠಿಣ ನಿಲುವು

ಜಿ20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದನೆ
Last Updated 29 ಜೂನ್ 2019, 20:01 IST
ಅಕ್ಷರ ಗಾತ್ರ

ಒಸಾಕಾ (ಜಪಾನ್‌): ‘ಆರ್ಥಿಕಅಪರಾಧ ಎಸಗಿ ದೇಶಬಿಟ್ಟು ಪರಾರಿಯಾಗುವವರ ವಿರುದ್ಧ ಕ್ರಮಕ್ಕೆ ಸಂಘಟಿತ ಪ್ರಯತ್ನ ನಡೆಸುವುದು ಅಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.

‘ಜಾಗತಿಕ ಸಮುದಾಯವಾಗಿ ನಾವು ಇಂಥ ಅಪರಾಧಗಳನ್ನು ಎಸಗುವವರ ವಿರುದ್ಧ ಸಂಘಟಿತರಾಗಿ ಹೋರಾಡಬೇಕು’ ಎಂದು ಮೋದಿ ಜಗತ್ತಿನ ಇತರ ರಾಷ್ಟ್ರಗಳನ್ನು ಒತ್ತಾಯಿಸಿದರು ಎಂದು ಸಮ್ಮೇಳನದ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸುರೇಶ್‌ ಪ್ರಭು ತಿಳಿಸಿದರು.

ಡಿಜಿಟಲ್‌ ಆರ್ಥಿಕತೆಯ ಬಗ್ಗೆ ಹೊರಡಿಸಲಾದ ಒಸಾಕಾ ಘೋಷಣೆಗೆ ಭಾರತ ಯಾಕೆ ಸಹಿ ಮಾಡಲಿಲ್ಲ ಎಂಬ ಪ್ರಶ್ನೆಗೆ, ‘ಕಾರಣವನ್ನು ಈಗಾಗಲೇ ನಾವು ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರಿಗೆ ತಿಳಿಸಿದ್ದೇವೆ. ಭಾರತಕ್ಕೆ ಡಿಜಿಟಲ್‌ ಆರ್ಥಿಕತೆಯ ಮೇಲೆ ನಂಬಿಕೆ ಇದೆ ಮತ್ತು ಆ ನಿಟ್ಟಿನಲ್ಲಿ ಈಗಾಗಲೇ ಮಹತ್ವದ ಹೆಜ್ಜೆಗಳನ್ನಿಟ್ಟಿದೆ’ ಎಂದರು.

‘ಡಿಜಿಟಲ್‌ ವಹಿವಾಟಿಗೆ ಸಂಬಂಧಿಸಿದಂತೆ ಭಾರತ ಬೃಹತ್‌ ಯೋಜನೆಯನ್ನು ರೂಪಿಸಬೇಕು. ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಬ್ಯಾಂಕ್‌ ಖಾತೆಗಳನ್ನು ತೆರೆಸಲಾಗಿದೆ. ಡಿಜಿಟಲ್‌ ಮಾಧ್ಯಮದಲ್ಲೇ ಅನೇಕ ವಹಿವಾಟುಗಳು ನಡೆಯುತ್ತಿವೆ’ ಎಂದರು.

ಸಹಕಾರ ಅಗತ್ಯ: ಯಾವುದೇ ವಿಪತ್ತಿನಿಂದ ಉಂಟಾಗುವ ಹಾನಿಯಿಂದ ಸುಧಾರಿಸಿಕೊಳ್ಳಲು ನೆರವಾಗುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಒಂದು ಸಹಕಾರ ವ್ಯವಸ್ಥೆಯನ್ನು ರೂಪಿಸುವ ಅಗತ್ಯದ ಬಗ್ಗೆ ಮೋದಿ ಅವರು ಜಿ20 ರಾಷ್ಟ್ರಗಳ ಗಮನಸೆಳೆದರು.

‘ಗುಣಮಟ್ಟದ ಮೂಲಸೌಲಭ್ಯ ಹೂಡಿಕೆ ಮತ್ತು ಅಭಿವೃದ್ಧಿ ಸಹಕಾರ’ ಕುರಿತ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ವಿಪತ್ತಿನ ಸಂದರ್ಭದಲ್ಲಿ ಸಹಕಾರ ನೀಡುವ ವ್ಯವಸ್ಥೆಯು ಅಭಿವೃದ್ಧಿಯ ದೃಷ್ಟಿಯಿಂದ ಮಾತ್ರವಲ್ಲ, ನೈಸರ್ಗಿಕ ವಿಪತ್ತುಗಳ ವಿರುದ್ಧ ಹೋರಾಡುವ ದೃಷ್ಟಿಯಿಂದಲೂ ಅಗತ್ಯವಾಗಿದೆ. ಇಂಥ ವ್ಯವಸ್ಥೆಯೊಂದರಲ್ಲಿ ಜಿ20 ಸಂಘಟನೆಯ ಎಲ್ಲಾ ರಾಷ್ಟ್ರಗಳು ಕೈಜೋಡಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಬೇಕು’ ಎಂದರು.

‘ನೈಸರ್ಗಿಕ ಇರಲಿ, ಮಾನವ ನಿರ್ಮಿತವೇ ಆಗಿರಲಿ, ವಿಪತ್ತಿನ ನಂತರ ದೊಡ್ಡ ಮಟ್ಟದ ಪರಿಹಾರ ಕಾರ್ಯಗಳನ್ನು ಕೈಗೊಳ್ಳುವ ಅಗತ್ಯ ಇರುತ್ತದೆ. ಇಂಥ ವಿಪತ್ತುಗಳು ಹೆಚ್ಚಾಗಿ ಬಡವರನ್ನು ಕಾಡುತ್ತವೆ. ಆದ್ದರಿಂದ ಭೂಮಿಯನ್ನು ಇನ್ನಷ್ಟು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವುದು ಅಗತ್ಯ’ ಎಂದರು.

ಶೃಂಗ ಸಭೆಯ ಮೂರನೇ ಸಮ್ಮೇಳನದಲ್ಲಿ ಮೋದಿ ತಮ್ಮ ಸರ್ಕಾರದ ಪ್ರಮುಖ ಯೋಜನೆ ಹಾಗೂ ವಿಶ್ವದ ಅತಿ ದೊಡ್ಡ ಆರೋಗ್ಯ ವಿಮಾ ಯೋಜನೆ ‘ಆಯುಷ್ಮಾನ್‌ ಭಾರತ’ದ ಬಗ್ಗೆ ಹಾಗೂ ‘ಯೋಗ’ದ ಮೂಲಕ ನಿರೋಗಿಯಾಗಿ ಜೀವನ ನಡೆಸುವ ಬಗ್ಗೆ ಮಾತನಾಡಿದರು. ಈ ವಿಚಾರಗಳಲ್ಲದೆ, ಹವಾಮಾನ ಬದಲಾವಣೆ, ಶುದ್ಧ ಇಂಧನ, ಪರಿಸರ ಸಂರಕ್ಷಣೆ, ಕೃಷಿ, ಪ್ರವಾಸೋದ್ಯಮ, ವಯೋವೃದ್ಧರಿಗೆ ಸಾಮಾಜಿಕ ಭದ್ರತೆ ಹಾಗೂ ಆರ್ಥಿಕ ಅನುಕೂಲಗಳನ್ನು ಕಲ್ಪಿಸುವುದೇ ಮುಂತಾದ ಅನೇಕ ಮಹತ್ವದ ವಿಚಾರಗಳನ್ನು ಜಿ20 ಶೃಂಗ ಸಭೆಯಲ್ಲಿ ಭಾರತ ಪ್ರಸ್ತಾಪಿಸಿದೆ ಎಂದು ಸುರೇಶ್‌ ಪ್ರಭು ತಿಳಿಸಿದರು.

ಶೃಂಗಸಭೆಯ ಜೊತೆಜೊತೆಯಲ್ಲೇ ಮೋದಿ ಅವರು ಅನೇಕ ರಾಷ್ಟ್ರಗಳ ಪ್ರತಿನಿಧಿಗಳ ಜೊತೆ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಮಾತುಕತೆಗಳನ್ನು ನಡೆಸಿದರು. ಇಂಡೊನೇಷ್ಯಾ, ಬ್ರೆಜಿಲ್‌, ಟರ್ಕಿ, ಆಸ್ಟ್ರೇಲಿಯಾ, ಸಿಂಗಪುರ ಹಾಗೂ ಚಿಲಿಯ ನಾಯಕರ ಜೊತೆ ಮೋದಿ ಶನಿವಾರ ಮಾತುಕತೆ ನಡೆಸಿದರು.

‘ಎಷ್ಟು ಒಳ್ಳೆಯವರು ಮೋದಿ...’

ಜಿ20 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌ ನಡುವೆ ನಡೆದ ಮಾತುಕತೆ ಹಾಗೂ ‘ಸೆಲ್ಫಿ ರಾಜತಾಂತ್ರಿಕತೆ’ ಚರ್ಚೆಗೆ ಗ್ರಾಸವಾಗಿದೆ.

ಮೋದಿ ಜೊತೆಗೆ ತೆಗೆದ ಸೆಲ್ಫಿಯನ್ನು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಾಕಿಕೊಂಡ ಮಾರಿಸನ್‌, ‘ಕಿತನಾ ಅಚ್ಛಾ ಹೈ ಮೋದಿ’ (ಎಷ್ಟು ಒಳ್ಳೆಯವರು ಮೋದಿ) ಎಂದು ಹಿಂದಿ ಭಾಷೆಯಲ್ಲಿ ಅಡಿಬರಹ ಕೊಟ್ಟರು. ಕೆಲವೇ ಕ್ಷಣಗಳಲ್ಲಿ ಈ ಟ್ವೀಟ್‌ ವೈರಲ್‌ ಆಯಿತು.

ಮಾರಿಸನ್‌ ಅವರಿಗೆ ಟ್ವೀಟ್‌ ಮೂಲಕವೇ ಉತ್ತರ ನೀಡಿದ ಮೋದಿ, ‘ಸ್ನೇಹಿತರೇ, ಭಾರತ– ಆಸ್ಟ್ರೇಲಿಯಾ ನಡುವಿನ ಸಂಬಂಧದ ಗಾಢತೆಯ ಬಗ್ಗೆ ನಾನು ಅಚ್ಚರಿಗೊಂಡಿದ್ದೇನೆ. ‘ಎಷ್ಟು ಒಳ್ಳೆಯವರು ಮೋದಿ’ ಎಂದು ಬರೆಯುವ ಮೂಲಕ ನೀವು ಟ್ವೀಟ್‌ ವೈರಲ್‌ ಆಗುವಂತೆ ಮಾಡಿದಿರಿ. ನಾನು ನಿಮಗೆ ಆಭಾರಿಯಾಗಿದ್ದೇನೆ’ ಎಂದರು.

ಹವಾಮಾನ ಬದಲಾವಣೆ ಕುರಿತ 2015ರ ಪ್ಯಾರಿಸ್‌ ಒಪ್ಪಂದಕ್ಕೆ ಬದ್ಧವಾಗಿರಲು ಅಮೆರಿಕದ ಅಧ್ಯಕ್ಷ ಟ್ರಂಪ್‌ ನಿರಾಕರಿಸಿದ್ದರಿಂದ ಹವಾಮಾನ ಬದಲಾವಣೆ ಕುರಿತ ವಿಚಾರದಲ್ಲಿ ಯಾವುದೇ ನಿರ್ಧಾರಕ್ಕೆ ಬರುವಲ್ಲಿ ಜಿ20 ಶೃಂಗಸಭೆ ವಿಫಲವಾಯಿತು.

‘ಅಮೆರಿಕವೊಂದನ್ನು ಬಿಟ್ಟು, ಪ್ಯಾರಿಸ್‌ ಒಪ್ಪಂದಕ್ಕೆ ಸಹಿಹಾಕಿರುವ ಇತರ 19 ಸದಸ್ಯರಾಷ್ಟ್ರಗಳು ಆ ಒಪ್ಪಂದಕ್ಕೆ ಬದ್ಧವಾಗಿವೆ’ ಎಂದು ಶೃಂಗಸಭೆಯ ಅಂತ್ಯದಲ್ಲಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಮ್ಮ ದೇಶದ ಕಾರ್ಮಿಕರು ಮತ್ತು ತೆರಿಗೆ ಪಾವತಿಸುವವರಿಗೆ ಈ ಒಪ್ಪಂದದಿಂದ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಅಮೆರಿಕವು ಈ ಒಪ್ಪಂದದಿಂದ ಹಿಂದೆ ಸರಿದಿತ್ತು. ಅಮೆರಿಕದ ಈ ತೀರ್ಮಾನದಿಂದಾಗಿ ಜಾಗತಿಕ ತಾಪಮಾನ ನಿಯಂತ್ರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ಸಾಧ್ಯವಾಗದಂತಾಗಿದೆ.

ಪ್ಲಾಸ್ಟಿಕ್‌ ಕಸ ಸಮುದ್ರ ಸೇರುವುದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಜಿ20 ಶೃಂಗಸಭೆ ಒಪ್ಪಿದೆ. 2050ರ ವೇಳೆಗೆ ಸಾಗರವನ್ನು ಪ್ಲಾಸ್ಟಿಕ್‌ ಮುಕ್ತಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ.

ಅಮೆರಿಕ–ಚೀನಾ ಮಾತುಕತೆ: ದ್ವಿಪಕ್ಷೀಯ ವ್ಯಾಪಾರದ ಬಗ್ಗೆ ಮಾತುಕತೆಯನ್ನು ಪುನರಾರಂಭಿಸಲು ಅಮೆರಿಕ ಮತ್ತು ಚೀನಾ ಶನಿವಾರ ಒಪ್ಪಿಕೊಂಡಿವೆ. ಕಳೆದ ಒಂದು ವರ್ಷದಿಂದ ಈ ಎರಡು ರಾಷ್ಟ್ರಗಳ ನಡುವೆ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಶೀತಲ ಸಮರ ನಡೆಯುತ್ತಿದೆ. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಜೊತೆ ಶನಿವಾರ ಸುಮಾರು 80 ನಿಮಿಷಗಳ ಕಾಲ ಮಾತುಕತೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳನ್ನು ಭೇಟಿಮಾಡಿದ ಅಮೆರಿಕದ ಅಧ್ಯಕ್ಷ ಟ್ರಂಪ್‌, ‘ನಾವು ಮತ್ತೆ ಮಾತುಕತೆಗೆ ಸಿದ್ಧವಾಗಿದ್ದೇವೆ. ಮುಂದೇನಾಗುತ್ತದೆ ಎಂದು ಕಾಯ್ದು ನೋಡೋಣ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT