ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್-19ರ ನಂತರ ಭಾರತಕ್ಕಿದೆ 'ಸುವರ್ಣಾವಕಾಶ': ಅಮೆರಿಕ ರಾಜತಂತ್ರಜ್ಞೆ

Last Updated 21 ಮೇ 2020, 4:39 IST
ಅಕ್ಷರ ಗಾತ್ರ
ADVERTISEMENT
""

ವಾಷಿಂಗ್‌ಟನ್: ಕೊರೊನ್ ವೈರಸ್ ಸಂಕಷ್ಟವು ಭಾರತಕ್ಕೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿದೆ. ಕ್ಷಿಪ್ರಗತಿಯಲ್ಲಿ ಆರ್ಥಿಕ ಸುಧಾರಣೆಗಳಿಗೆ ಚಾಲನೆ ನೀಡಿದರೆ ಮಾತ್ರ ಈ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯ ಎಂದು ಅಮೆರಿಕದ ಹಿರಿಯ ರಾಜತಾಂತ್ರಿಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾ ವಿದ್ಯಮಾನಗಳ ಉಸ್ತುವಾರಿ ಹೊತ್ತಿದ್ದ, ಇನ್ನೇನು ನಿವೃತ್ತರಾಗಲಿರುವ ಪ್ರಧಾನ ಕಾರ್ಯದರ್ಶಿ ಅಲಿಸ್ ವೆಲ್ಸ್ 'ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಅಮೆರಿಕಕ್ಕೆ ಆಸಕ್ತಿಯಿದೆ. ಆದರೆ ಈವರೆಗೂ ಅದು ಸಾಧ್ಯವಾಗಿಲ್ಲ' ಎಂದು ಮಾಧ್ಯಮ ಪ್ರತಿನಿಧಿಗಳಿಗೆವಿವರಿಸಿದರು.

'ಈವರೆಗೆ ಚೀನಾದಲ್ಲಿ ಕೇಂದ್ರೀಕೃತವಾಗಿದ್ದ ಪೂರೈಕೆ ಜಾಲವನ್ನು ಇತರ ದೇಶಗಳಿಗೆ ವಿಸ್ತರಿಸಲು ಹಲವು ದೇಶಗಳು ಯೋಚಿಸುತ್ತಿವೆ. ಇದು ಭಾರತಕ್ಕೆ ನಿಜವಾಗಿಯೂ ಸುವರ್ಣಾವಕಾಶವನ್ನು ಕಲ್ಪಿಸಿಕೊಟ್ಟಿದೆ. ದೇಶೀಯ ಉತ್ಪನ್ನಗಳು ಮತ್ತು ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು ಹೆಚ್ಚು ಒತ್ತುಕೊಡುವ ದೃಷ್ಟಿಕೋನದಿಂದ ಆಚೆಗೆ ಯೋಚಿಸುವ ಮೂಲಕ ಭಾರತವು ಈ ಬೆಳವಣಿಗೆಗೆ ಪ್ರತಿಕ್ರಿಯಿಸಬೇಕು. ಉದ್ಯಮ ಸ್ನೇಹಿ ವಾತಾವರಣ ರೂಪಿಸಲು ಯತ್ನಿಸಬೇಕು. ವ್ಯಾಪಾರದ ವಾತಾವರಣ ಉತ್ತಮಪಡಿಸಲು ಭಾರತದೊಂದಿಗೆ ಕೆಲಸ ಮಾಡಲು ಅಮೆರಿಕ ಸಿದ್ಧವಿದೆ' ಎಂದು ಅವರು ತಿಳಿಸಿದರು.

'ನಮ್ಮದುವ್ಯಾಪಾರ ಒಪ್ಪಂದಗಳಿಗೆ ಒತ್ತುಕೊಡುವ ದೇಶ. ಆದರೆ ನಮ್ಮೊಂದಿಗೆ ಗಟ್ಟಿಯಾದ ಒಪ್ಪಂದ ಮಾಡಿಕೊಳ್ಳಲು ಭಾರತಕ್ಕೆ ಈವರೆಗೆ ಸಾಧ್ಯವಾಗಿಲ್ಲ.ಭಾರತಕ್ಕೆ ಕೇವಲ ಅಮೆರಿಕದೊಂದಿಗೆ ಮಾತ್ರವಲ್ಲ, ಐರೋಪ್ಯ ಒಕ್ಕೂಟ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳೊಂದಿಗೂ ಗಟ್ಟಿಯಾದ ಒಪ್ಪಂದಗಳನ್ನು ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ನನ್ನ ಮಾತು ತುಸು ಒರಟು ಎನಿಸಬಹುದು. ಆದರೂ ಇದು ಸತ್ಯ' ಎಂದು ವಿವರಿಸಿದರು.

ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಪ್ರಧಾನ ಕಾರ್ಯದರ್ಶಿ ಅಲಿಸ್ ವೆಲ್ಸ್

'ಕೋವಿಡ್-19ರ ನಂತರದ ಜಗತ್ತು ಹಿಂದಿಗಿಂತ ಭಿನ್ನ. ಚೀನಾ ಅಪಾಯವನ್ನು ನೀಗಿಸಿಕೊಳ್ಳಲು ಹಲವು ದೇಶಗಳು ಯೋಚಿಸುತ್ತಿವೆ. ಇದು ಭಾರತಕ್ಕೆ ನಿಜಕ್ಕೂ ಸುವರ್ಣಾವಕಾಶ ಕಲ್ಪಿಸಿದೆ.ಇಂಥ ಸಂದರ್ಭದಲ್ಲಿಮೂಲ ಸೌಕರ್ಯ ಅಭಿವೃದ್ಧಿಗೆ ಬದ್ಧತೆ, ಸೂಕ್ತ ನೀತಿಗಳ ಜಾರಿಯ ಮೂಲಕ ಭಾರತ ಪ್ರತಿಕ್ರಿಯಿಸಬೇಕು' ಎಂದು ಅವರು ಸಲಹೆ ಮಾಡಿದರು.

'ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ನಾವು ಎರಡು ವರ್ಷಗಳಿಂದ ರೂಪಿಸುತ್ತಿದ್ದೇವೆ. ಈ ಒಪ್ಪಂದಕ್ಕೆ ಶೀಘ್ರ ಎರಡೂ ದೇಶಗಳು ಸಹಿ ಹಾಕಲಿವೆ ಎಂದುಕಳೆದ ಸೆಪ್ಟೆಂಬರ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಘೋಷಿಸಿದ್ದರು. ಕಳೆದ ಫೆಬ್ರುವರಿಯಲ್ಲಿ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭ ಈ ಕುರಿತು ಚರ್ಚೆಗಳು ನಡೆಯಬಹುದು ಎಂದುಕೊಂಡಿದ್ದೆವು. ಆದರೆ ಎರಡೂ ದೇಶಗಳ ನಡುವೆ ತೀವ್ರ ಭಿನ್ನಾಭಿಪ್ರಾಯಗಳು ಶಮನವಾಗಲಿಲ್ಲ' ಎಂದು ಅವರು ನೆನಪಿಸಿಕೊಂಡರು.

'ಅಮೆರಿಕದ ಉತ್ಪನ್ನಗಳಿಗೆ ಭಾರತದಲ್ಲಿ ತೆರಿಗೆ ಭಾರ ಇಲ್ಲದಂತೆ ಮಾಡಬೇಕು ಎನ್ನುವುದು ಟ್ರಂಪ್ ಅವರ ನಿಲುವು. ಆದರೆ ಭಾರತ ಇದಕ್ಕೆ ಒಪ್ಪುತ್ತಿಲ್ಲ. ಯಾವುದೇ ಒಪ್ಪಂದದಲ್ಲಿ ಕೆಲ ಅಡೆತಡೆಗಳು ಇರುತ್ತವೆ. ಅವನ್ನು ಪರಿಹರಿಸಲು ನಾವು ಕಳೆದ ಮೂರ್ನಾಲ್ಕು ವರ್ಷಗಳಿಂದ ಯತ್ನಿಸುತ್ತಿದ್ದೇವೆ' ಎಂದರು.

'ಕೋವಿಡ್-19ಕ್ಕೆ ಲಸಿಕೆ ಅಭಿವೃದ್ಧಿಪಡಿಸುವ ವಿಚಾರದಲ್ಲಿ ಭಾರತವು ಅಮೆರಿಕದ ಸಹವರ್ತಿ ಎಂದು ಅಧ್ಯಕ್ಷ ಟ್ರಂಪ್ ಘೋಷಿಸಿದ್ದಾರೆ. ಅಮೆರಿಕದ ಪಾಲುದಾರರೊಂದಿಗೆ ಸಿರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಈಗಾಗಲೇ ಕೆಲಸ ಮಾಡುತ್ತಿದೆ. ವೆಂಟಿಲೇಟರ್‌ ಸರಬರಾಜು ವಿಚಾರದಲ್ಲಿಯೂ ಭಾರತ ವಿಶ್ವದ ಪೂರೈಕೆ ಜಾಲದಲ್ಲಿ ಮಹತ್ವದ ರಾಷ್ಟ್ರ ಎನಿಸಿಕೊಂಡಿದೆ' ಎಂದರು.

'ಕೊರೊನಾ ಪಿಡುಗಿನ ನಂತರ ಎಲ್ಲ ದೇಶಗಳೂ ಅತ್ಯಗತ್ಯ ವಸ್ತುಗಳ ಉತ್ಪಾದನಾ ಘಟಕಗಳು ತಮ್ಮ ದೇಶದಲ್ಲಿಯೇ ಇರಬೇಕು ಎಂಬ ನಿಲುವಿಗೆ ಬರುತ್ತಿವೆ. ಪೂರೈಕೆ ಜಾಲವೂ ಒಂದು ದೇಶಕ್ಕೆ ಸೀಮಿತವಾಗಿರಬಾರದು ಎಂಬ ನಿಲುವನ್ನೂ ಹಲವು ದೇಶಗಳು ವ್ಯಕ್ತಪಡಿಸಿವೆ. ಈ ಬೆಳವಣಿಗೆಯನ್ನು ಭಾರತದ ನಾಯಕರು ಅರ್ಥ ಮಾಡಿಕೊಳ್ಳಬೇಕು' ಎಂದು ಅವರು ಸಲಹೆ ಮಾಡಿದರು.

'ಮುಕ್ತ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಗೆ ಪೂರಕ ವಾತಾವರಣ ನಿರ್ಮಿಸಿ, ತೆರಿಗೆ ರಿಯಾಯ್ತಿ ಘೋಷಿಸಿದರೆಇದು ಭಾರತಕ್ಕೆ ಅತ್ಯುತ್ತಮ ಅವಕಾಶವಾಗಿ ಪರಿವರ್ತನೆಯಾಗಲಿದೆ. ವಿಶ್ವದ ಪೂರೈಕೆ ಜಾಲದ ಭಾಗವಾಗಿರುವ ಹಲವು ಘಟಕಗಳು ಭಾರತಕ್ಕೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ' ಎಂದು ಅವರು ಭವಿಷ್ಯ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT