ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಮ್ಮನ ನಾಡಿನಲ್ಲಿ ತ್ರಿಕೋನ ಸ್ಪರ್ಧೆ

ಐದು ಬಾರಿ ಕ್ಷೇತ್ರ ಪ್ರತಿನಿಧಿಸಿರುವ ಡಿ.ಬಿ. ಇನಾಮದಾರ ಮತ್ತೊಮ್ಮೆ ಸ್ಪರ್ಧೆ
ಅಕ್ಷರ ಗಾತ್ರ

ಬೆಳಗಾವಿ: ಈ ಕ್ಷೇತ್ರದ ಎಲ್ಲ ಪಕ್ಷಗಳಲ್ಲಿ ಬಂಡಾಯ ಕಾಣಿಸಿಕೊಂಡಿದ್ದು, ಚುನಾವಣಾ ಕಣ ರಂಗೇರಿದೆ. ಮೇಲ್ನೋಟಕ್ಕೆ ಕಾಂಗ್ರೆಸ್‌ನ ಡಿ.ಬಿ. ಇನಾಮದಾರ, ಬಿಜೆಪಿಯ ಮಹಾಂತೇಶ ದೊಡ್ಡಗೌಡರ ಹಾಗೂ ಜೆಡಿಎಸ್‌ನ ಸುರೇಶ ಮಾರಿಹಾಳ ನಡುವೆ ತ್ರಿಕೋನ ಸ್ಪರ್ಧೆ ಕಂಡುಬಂದಿದೆ. ಇವರ ನಡುವೆ ಪಕ್ಷೇತರರಾಗಿ ಸ್ಪರ್ಧಿಸಿರುವ ಬಾಬಾಸಾಹೇಬ ಪಾಟೀಲ ಅವರು ಯಾರ ಮತಗಳನ್ನು ಕಸಿಯಲಿದ್ದಾರೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಐದು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿರುವ ಡಿ.ಬಿ. ಇನಾಮದಾರ ಮತ್ತೊಮ್ಮೆ ಸ್ಪರ್ಧೆಗೆ ಇಳಿದಿದ್ದಾರೆ. ಒಂದು ಸಲ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದಾರೆ. ಇದು ಜಿಲ್ಲೆಯ ಕೆಲವು ನಾಯಕರಿಗೆ ಪಥ್ಯೆಯಾಗುತ್ತಿಲ್ಲ. ಅದಕ್ಕಾಗಿ ಟಿಕೆಟ್‌ ತಪ್ಪಿಸಲು ಕೂಡ ಪ್ರಯತ್ನಿಸಿದ್ದರು ಎಂದು ಹೇಳಲಾಗುತ್ತಿದೆ. ಕೊನೆಗೆ ಅವರು ಬೆಂಗಳೂರಿಗೆ ಹೋಗಿ ಟಿಕೆಟ್‌ ಪಡೆದುಕೊಂಡು ಬಂದು ನಾಮಪತ್ರ ಸಲ್ಲಿಸಿದ್ದರು.

ನೇಸರಗಿ, ಸಂಪಗಾಂವ, ಕಿತ್ತೂರು ಹಾಗೂ ಅಂಬಡಗಟ್ಟಿ ಜಿಲ್ಲಾ ಪಂಚಾಯ್ತಿ ಕ್ಷೇತ್ರಗಳಲ್ಲಿ ಇವರು ಪ್ರಭಾವ ಹೊಂದಿದ್ದಾರೆ. ವೈಯಕ್ತಿಕ ಕೆಲಸಗಳನ್ನು ಮಾಡಿಸಿಕೊಡುತ್ತಾರೆ ಎಂದು ಜನರು ಮೆಚ್ಚುಗೆ ಸೂಚಿಸುತ್ತಾರೆ. ಇದರ ಜೊತೆಗೆ, ಸಾರ್ವಜನಿಕ ಕೆಲಸಗಳನ್ನು ನಿರ್ಲಕ್ಷಿಸುತ್ತಾರೆ ಎನ್ನುವ ಅಸಮಾಧಾನವೂ ಇದೆ.

ಬಿಜೆಪಿಯಿಂದ ಕಣಕ್ಕಿಳಿದಿರುವ ಮಹಾಂತೇಶ ದೊಡ್ಡಗೌಡರು ಡಿಸಿಸಿ ಬ್ಯಾಂಕ್‌ ನಿರ್ದೇಶಕರಾಗಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಪಕ್ಷದ ಸಂಘಟನೆ ಇವರ ಬೆನ್ನಿಗಿದೆ. ಅಲ್ಲದೇ, ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಈ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿದ್ದು, ಆಗಾಗ ಬಂದು ಯುವಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇದು ದೊಡ್ಡಗೌಡರಿಗೆ ಸಹಕಾರಿಯಾಗಬಹುದು.

ನೇಸರಗಿ, ನಾಗನೂರ, ಕಾದ್ರೊಳ್ಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರದಲ್ಲಿ ಪಕ್ಷ ಪ್ರಾಬಲ್ಯ ಹೊಂದಿದೆ. ಇವರಿಗೆ ಅಥಣಿಯ ಬಿಜೆಪಿ ನಾಯಕರ ಬೆಂಬಲವಿದ್ದು, ಡಿಸಿಸಿ ಬ್ಯಾಂಕ್‌ ರಾಜಕಾರಣ ಇದರ ಹಿಂದಿದೆ ಎಂದು ಹೇಳಲಾಗುತ್ತಿದೆ.

ಎರಡು ಸಲ ಬಿಜೆಪಿಯಿಂದ ಶಾಸಕರಾಗಿದ್ದ ಸುರೇಶ ಮಾರಿಹಾಳ ಅವರಿಗೆ ಈ ಸಲ ಪಕ್ಷವು ಟಿಕೆಟ್‌ ನೀಡಲಿಲ್ಲ. ಅದಕ್ಕೆ ಅವರು ಬಂಡಾಯವೆದ್ದು, ‘ಭತ್ತದ ತೆನೆಯನ್ನು’ ಹೊತ್ತಿದ್ದಾರೆ. ಇದರ ಹಿಂದೆ ಹುಕ್ಕೇರಿಯ ಬಿಜೆಪಿ ನಾಯಕರ ಬೆಂಬಲವಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಜೆಡಿಎಸ್‌ನ ಸಂಪ್ರದಾಯ ಮತಗಳ ಜೊತೆ ವೈಯಕ್ತಿಕ ವರ್ಚಸ್ಸಿನ ಆಧಾರದ ಮೇಲೆ ಬಿಜೆಪಿಯ ಮತಗಳನ್ನು ಸೆಳೆಯಲು ಪ್ರಯತ್ನ ನಡೆಸಿದ್ದಾರೆ.

ಡಿ.ಬಿ. ಇನಾಮದಾರ ಅವರ ದೂರದ ಸಂಬಂಧಿ ಬಾಬಾಸಾಹೇಬ ಪಾಟೀಲ ಅವರು ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನಿಸಿದ್ದರು. ಟಿಕೆಟ್‌ ಸಿಗದಿದ್ದರಿಂದ ಬಿಜೆಪಿ ಬಾಗಿಲು ಬಡಿದರು. ಬಿಜೆಪಿಯ ಸ್ಥಳೀಯ ಎಲ್ಲ ನಾಯಕರು ವಿರೋಧ ವ್ಯಕ್ತಪಡಿಸಿ, ಟಿಕೆಟ್‌ ಸಿಗದಂತೆ ಮಾಡಿದ್ದರು. ನಂತರ ಜೆಡಿಎಸ್‌ ಟಿಕೆಟ್‌ಗೂ ಪ್ರಯತ್ನಿಸಿ ವಿಫಲರಾದರು. ಕೊನೆಗೆ ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಇವರಿಗೆ ರೈತ ನಾಯಕ ಬಾಬಾಗೌಡ ಪಾಟೀಲ ಸಾಥ್‌ ನೀಡಿದ್ದಾರೆ. 1980ರ ದಶಕದಲ್ಲಿ ಇದ್ದ ರೈತ ಚಳವಳಿಯ ಪ್ರಭಾವ ಈಗ ಉಳಿದಿಲ್ಲ. ಆದಾಗ್ಯೂ, ಕೆಲ ಹಳ್ಳಿಗಳಲ್ಲಿ ಬಾಬಾಗೌಡರ ಕಟ್ಟಾ ಹಿಂಬಾಲಕರು ಇದ್ದಾರೆ. ಇದಲ್ಲದೇ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿಯಂತ್ರಣ ಅವರ ಕೈಯಲ್ಲಿದ್ದು, ಇದು ಬಾಬಾಸಾಹೇಬ ಅವರಿಗೆ ಒಂದಿಷ್ಟು ಮತಗಳನ್ನು ತಂದುಕೊಡಬಹುದು.ಹಲವು ವರ್ಷಗಳ ಕಾಲ ಇನಾಮದಾರ ಜೊತೆ ಓಡಾಡಿದ್ದ ಬಾಬಾಸಾಹೇಬ ಅವರು ಯಾರ ಮತಗಳನ್ನು ಕಸಿಯಲಿದ್ದಾರೆ ಎನ್ನುವುದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಮತದಾರರ ಸಂಖ್ಯೆ:
ಪುರುಷರು: 93,699
ಮಹಿಳೆಯರು: 91,303
ಒಟ್ಟು: 1.85,002

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT